ನೇಪಾಳ ದೇಗುಲ ಬಿಟ್ಟ ಕನ್ನಡಿಗ ಅರ್ಚಕ

ಬೆಂಗಳೂರು/ಕಠ್ಮಂಡು: ನೇಪಾಳದ 5ನೇ ಶತಮಾನದಷ್ಟು ಹಳೆಯ ಪಶುಪತಿನಾಥ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಕನ್ನಡಿಗ ಮಹಾಬಲೇಶ್ವರ ಭಟ್ಟ ಅವರು ಶನಿವಾರ ರಾಜಿನಾಮೆ ಸಲ್ಲಿಸಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾದ ಮಹಾಬಲೇಶ್ವರ ಭಟ್ಟ ಅವರು ಕಳೆದ 21 ವರ್ಷಗಳಿಂದ ಪಶುಪತಿನಾಥ ದೇಗುಲದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಅವರ ತಂದೆ, ತಾಯಿ ವಯೋವೃದ್ಧರಾಗಿರುವುದರಿಂದ ಅವರ ಆರೈಕೆಗಾಗಿ ರಾಜಿನಾಮೆ ನೀಡುತ್ತಿರುವುದಾಗಿ ಪಶುಪತಿ ಪ್ರದೇಶಾಭಿವೃದ್ಧಿ ಟ್ರಸ್ಟ್ಗೆ 2012, ನವೆಂಬರ್ನಲ್ಲಿ ಸಲ್ಲಿಸಿದ ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಟ್ರಸ್ಟ್ ಈಗ ಅವರ ರಾಜಿನಾಮೆ ಅಂಗೀಕರಿಸಿದ್ದು ಶೀಘ್ರವೇ ಅರ್ಚಕ ಸೇವೆಯಿಂದ ಮುಕ್ತರಾಗಲಿದ್ದಾರೆ.
ಈ ಕುರಿತು 'ಕನ್ನಡಪ್ರಭ'ದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮಹಾಬಲೇಶ್ವರ ಭಟ್, ಪಶುಪತಿ ದೇವಾಲಯದಲ್ಲಿ ಈಗಾಗಲೇ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಕರ್ನಾಟಕದಲ್ಲಿ ವಾಸಿಸುತ್ತಿರುವ ನನ್ನ ಹೆತ್ತವರಿಗೆ ವಯಸ್ಸಾಗಿದೆ. ಹಾಗಾಗಿ ಅವರ ಆರೈಕೆಗಾಗಿ ತೆರಳಬೇಕಾಗಿದೆ. 20 ವರ್ಷ ಸೇವೆ ಸಲ್ಲಿಸಿದ ಬಳಿಕ ಇಲ್ಲಿನ ಕಾನೂನಿನ ಪ್ರಕಾರ ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಅವಕಾಶವಿದೆ. ಈಗ ಆ ಅವಧಿ ಪೂರ್ಣಗೊಂಡಿರುವುದರಿಂದ ರಾಜಿನಾಮೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ರಾಜಿನಾಮೆ ನೀಡಿದ ಮರುಕ್ಷಣವೇ ಇಲ್ಲಿಂದ ಹೊರಡಲು ಆಗುವುದಿಲ್ಲ. ಮುಂದೆ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುವವರಿಗೆ ದೀಕ್ಷೆ ಕೊಟ್ಟು ಅವರಿಗೆ ಪೂಜಾ ಕೈಂಕರ್ಯದ ಅಧಿಕಾರ ಹಸ್ತಾಂತರಿಸಬೇಕು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು ಎರಡು ತಿಂಗಳಾದರೂ ಬೇಕಾಗುತ್ತದೆ. ಅದೆಲ್ಲವೂ ಮುಗಿದ ಬಳಿಕ ಕರ್ನಾಟಕಕ್ಕೆ ಮರಳುತ್ತೇನೆ ಎಂದರು.
2008ರಲ್ಲೂ ರಾಜಿನಾಮೆ ನೀಡಿದ್ದರು: ಈ ಹಿಂದೆ ಅಂದರೆ 2008ರಲ್ಲೂ ಮಹಾಬಲೇಶ್ವರ ಭಟ್ಟ ಅವರು ರಾಜಿನಾಮೆ ಸಲ್ಲಿಸಿದ್ದರು. ಆಗ ಮಾವೋವಾದಿ ನೇತೃತ್ವದ ಸರ್ಕಾರ ಅಧಿಕಾರಕ್ಕೇರಿತ್ತು. ದೇಗುಲದಲ್ಲಿದ್ದ ಭಾರತೀಯ ಅರ್ಚಕರನ್ನು ತೆಗೆದು ಹಾಕಿ ನೇಪಾಳಿ ಅರ್ಚಕರನ್ನು ನೇಮಕ ಮಾಡಲು ಆಗಿನ ಪ್ರಧಾನಿ ಪ್ರಚಂಡ ಅವರು ನಿರ್ಧರಿಸಿದ್ದರು. ಈ ವೇಳೆ ಭಟ್ಟ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ ಸರ್ಕಾರದ ನಿರ್ಧಾರ ವಿರೋಧಿಸಿ ಹಿಂದೂಗಳು ಭಾರಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ತನ್ನ ನಿರ್ಧಾರ ವಾಪಸ್ ಪಡೆದ ಸರ್ಕಾರ, ಮತ್ತೆ ಭಟ್ಟ ಅವರನ್ನು ಅರ್ಚಕ ಸ್ಥಾನಕ್ಕೇರಿಸಿತ್ತು.
ಭಾರತೀಯರೇ ಅರ್ಚಕರು: ಪಶುಪತಿನಾಥ ದೇವಾಲಯಕ್ಕೆ ಭಾರತೀಯರನ್ನೇ ಅರ್ಚಕರನ್ನಾಗಿ ನೇಮಿಸುವುದು ಶತಮಾನಗಳಿಂದಲೂ ಆಚರಿಸಿಕೊಂಡು ಬಂದಿರುವ ಪದ್ಧತಿಯಾಗಿದೆ. ಈಗ ಮಹಾಬಲೇಶ್ವರ ಭಟ್ಟ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಪಶುಪತಿನಾಥ ದೇಗುಲದಲ್ಲಿರುವ ಇತರೆ ನಾಲ್ವರು ಭಾರತೀಯ ಅರ್ಚಕರ ಪೈಕಿ ಒಬ್ಬರನ್ನು ಸದ್ಯದಲ್ಲೇ ಪ್ರಧಾನ ಅರ್ಚಕರನ್ನಾಗಿ ನೇಮಕ ಮಾಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.
21 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ವೃದ್ಧಾಪ್ಯದಲ್ಲಿರುವ ತಂದೆ, ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಇರುವುದರಿಂದ ರಾಜಿನಾಮೆ ನೀಡಿದ್ದೇನೆ. ಹೊಸಬರಿಗೆ ದೀಕ್ಷೆ ಕೊಟ್ಟು ಕರ್ನಾಟಕಕ್ಕೆ ಮರಳುತ್ತೇನೆ.
-ಮಹಾಬಲೇಶ್ವರ ಭಟ್ಟ, ಪಶುಪತಿನಾಥ ದೇವಾಲಯದ ಪ್ರಧಾನ ಅರ್ಚಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


