ಪ್ರಧಾನ ಸುದ್ದಿ

ವರ್ಗ ಪರ್ವ; ಕಾಂಗ್ರೆಸ್ ಕೆಂಪು

Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು , ಸೆ.26
ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಡಿವೈಎಸ್‌ಪಿ ವರ್ಗಾವಣೆ ಪಟ್ಟಿ ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ತಮ್ಮ ಶಿಫಾರಸುಗಳಿಗೆ ಕಿಮ್ಮತ್ತು ಸಿಕ್ಕಿಲ್ಲ ಎಂಬುದು ಅವರ ಈ ಆಕ್ರೋಶಕ್ಕೆ ಕಾರಣ. ತಮ್ಮ ಕ್ಷೇತ್ರಗಳಿಗೆ ತಾವು ಕೇಳಿದ ಅಧಿಕಾರಿಗಳನ್ನು ನಿಯೋಜಿಸಿಲ್ಲ. ಬಹುತೇಕ ಅಧಿಕಾರಿಗಳನ್ನು ವರ್ಗಾವಣೆ ಪಟ್ಟಿಯ ಸೂತ್ರಧಾರಿಗಳಾದ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರ ಮೂಗಿನ ನೇರಕ್ಕೆ ನೇಮಕ ಮಾಡಲಾಗಿದೆ ಎಂಬುದು ಹಲವು ಶಾಸಕರ ದೂರು.
ಸಿಎಂ ಬಳಿ ಅಸಮಾಧಾನ ಹಂಚಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಶಾಸಕರು ತಮ್ಮ ಈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೂ ದೂರವಾಣಿ ಕರೆ ಮಾಡಿ ಅತೃಪ್ತಿ ತೋಡಿಕೊಂಡಿದ್ದಾರೆ.
ಕೆಂಪಯ್ಯ ತಾಳಕ್ಕೆ ಹೆಜ್ಜೆ: ವರ್ಗಾವಣೆ ಪ್ರಕ್ರಿಯೆ ವಿರುದ್ಧ ಧ್ವನಿ ಎತ್ತಿದವರಲ್ಲಿ ಇಬ್ಬರು ಸಚಿವರು ಹಾಗೂ ಹಲವಾರು ಶಾಸಕರು ಸೇರಿದ್ದಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ತಮಗೆ ಬೇಕಾದ ಅಧಿಕಾರಿಗಳನ್ನು ನಿಯುಕ್ತಿಗೊಳಿಸಿ ಎಂದು ಶಾಸಕರು ಲೆಟರ್ ಹೆಡ್‌ನಲ್ಲಿ ಮನವಿ ಸಲ್ಲಿಸಿದ್ದರೂ ಸಿಎಂ ಸಿದ್ದರಾಮಯ್ಯ ಅದಕ್ಕೆ ಮನ್ನಣೆ ನೀಡಿಲ್ಲ.        
ಪ್ರತಿ ವರ್ಗಾವಣೆಯಲ್ಲೂ ಕೆಂಪಯ್ಯ ಅವರ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಗಿನ ನೇರಕ್ಕೆ ವರ್ಗಾವಣೆ: ಐಪಿಎಸ್ ಅಧಿಕಾರಿಗಳ ವರ್ಗವನ್ನೂ ಕೆಂಪಯ್ಯ ಅವರ ಸಲಹೆ ಮೇರೆಗೆ ಸಿದ್ದರಾಮಯ್ಯ ನಡೆಸಿದ್ದಾರೆ. ಈಗ ತಳಮಟ್ಟದ ಅಧಿಕಾರಿಗಳನ್ನೂ ಅವರ ಮೂಗಿನ ನೇರಕ್ಕೆ ವರ್ಗಾವಣೆ ಮಾಡಲಾಗಿದೆ. ಶಾಸಕರ ಪತ್ರಕ್ಕೆ ಕಿಮ್ಮತ್ತೇ ಇಲ್ಲ ಎಂಬಂತೆ ಕೆಂಪಯ್ಯ ವರ್ತಿಸಿದ್ದಾರೆ ಎಂಬುದು ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಸಕರ ಮನವಿಗೆ ಕಿಮ್ಮತ್ತಿಲ್ಲ: ಕೆಂಪಯ್ಯ ಈಗ ಸೇವೆಯಿಂದ ನಿವೃತ್ತರಾಗಿದ್ದಾರೆ. ಅವರಿಗೆ ಸರ್ಕಾರಿ ಮಟ್ಟದಲ್ಲಿ ಯಾವುದೇ ಸ್ಥಾನಮಾನವಿಲ್ಲ. ಆದರೆ ಪೊಲೀಸ್ ಇಲಾಖೆಯಲ್ಲಿ ನಡೆಯುವ ಎಲ್ಲ ವಿದ್ಯಮಾನಗಳಿಗೂ ಸಿದ್ದರಾಮಯ್ಯ ಅವರ ಸಲಹೆ ಪಡೆಯುತ್ತಾರೆ. 9 ವರ್ಷಗಳ ನಂತರ ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರೂ ಶಾಸಕರ ಅಗತ್ಯತೆಗಳಿಗೆ ಸ್ಪಂದಿಸುತ್ತಿಲ್ಲ. ಮೂರನೇ ವ್ಯಕ್ತಿಯ ಮಾತಿಗೆ ಮಹತ್ವ ನೀಡುವ ಅಗತ್ಯವಿತ್ತೇ? ಎಂದು ಕೆಪಿಸಿಸಿ ಅಧ್ಯಕ್ಷರನ್ನು ಪ್ರಶ್ನಿಸಿದ್ದಾರೆ.
ಮಿನಿಟ್ ಹಾಕಿದರೆ ಮಾಡ್ಬೇಕಾ?: ವರ್ಗಾವಣೆ ಪಟ್ಟಿ ಹೊರ ಬೀಳುವುದಕ್ಕೆ ಮುನ್ನವೇ ಕಾಂಗ್ರೆಸ್ ಶಾಸಕರು ಅಸಮಾಧಾನ ಪ್ರಕಟಿಸಲು ಆರಂಭಿಸಿದ್ದರು. ಏಕೆಂದರೆ ತಮ್ಮ ಲೆಟರ್ ಹೆಡ್‌ನಲ್ಲಿ ಹಾಕಿ ಕಳುಹಿಸಿದ್ದ ಮಿನಿಟ್‌ಗೆ ಕೆಂಪಯ್ಯ ಅಸಡ್ಡೆ ತೋರಿದ್ದರು. ಈ ರೀತಿ ಶಾಸಕರ ಪತ್ರ ತಂದ ಅಧಿಕಾರಿಗಳಿಗೆ ' ಎಂಎಲ್‌ಎ ಮಿನಿಟ್ ಹಾಕಿದ ತಕ್ಷಣ ಕೇಳಿದ ಸ್ಥಳಕ್ಕೆ ವರ್ಗ ಮಾಡಬೇಕೇನು? ಎಂದು ವ್ಯಂಗ್ಯವಾಡಿದ್ದರು.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯಲಾಗಿತ್ತು. ಆದರೂ ಅಂತಿಮವಾಗಿ ಅವರು ಕೆಂಪಯ್ಯ ಮಾತಿಗೇ ಮಣೆ ಹಾಕಿದ್ದಾರೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಯಮ ಪಾಲನೆ: ಕುತೂಹಲಕಾರಿ ಸಂಗತಿ ಎಂದರೆ ಈ ವಿವಾದಾತ್ಮಕ ವರ್ಗಾವಣೆಯಲ್ಲೂ ಸರ್ಕಾರ ನಿಯಮ ಪಾಲನೆ ಮಾಡಿದೆ. ಪೊಲೀಸ್ ಅನುಷ್ಠಾನ ಮಂಡಳಿ (ಪಿಇಬಿ) ಸಭೆಯಲ್ಲಿ ಪಟ್ಟಿಯನ್ನು ಮಂಡಿಸಿಯೇ ಒಪ್ಪಿಗೆ ಪಡೆಯಲಾಗಿದೆ. ಒಂದು ವರ್ಷಕ್ಕೆ ಮೀರಿ ಒಂದೇ ಠಾಣೆಯಲ್ಲಿ ಕೆಲಸ ಮಾಡಿದ 498 ಇನ್‌ಸ್ಪೆಕ್ಟರ್‌ಗಳು ಹಾಗೂ 135 ಡಿವೈಎಸ್ಪಿಗಳನ್ನು ಮಾತ್ರ ಎತ್ತಂಗಡಿ ಮಾಡಲಾಗಿದೆ.
ಪಿಇಬಿ ರಚನೆ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್ ಹಾಗೂ ಡಿವೈಎಸ್ಪಿಗಳಿಗೆ ಕನಿಷ್ಠ ಅವಧಿಯನ್ನು ಎರಡು ವರ್ಷಕ್ಕೆ ನಿಗದಿ ಮಾಡಲಾಗಿತ್ತು. ಆದರೆ, ಬಿಜೆಪಿ ಸರ್ಕಾರದ ಕೊನೆಯ ದಿನಗಳಲ್ಲಿ ಸುಗ್ರೀವಾಜ್ಞೆ ಮೂಲಕ ಈ ಅವಧಿಯನ್ನು ಒಂದು ವರ್ಷಕ್ಕೆ ಇಳಿಕೆ ಮಾಡಲಾಗಿತ್ತು. ಇದರ ಲಾಭವನ್ನು ಈಗ ಕಾಂಗ್ರೆಸ್ ಸರ್ಕಾರ ಪಡೆದುಕೊಂಡಿದೆ.
ಮಾಸ್ ಟ್ರಾನ್ಸ್‌ಫರ್, ಓಪನ್ ಟೆಂಡರ್: ಇದರ ಜತೆಗೆ ಈ ವರ್ಗಾವಣೆ ಬಗ್ಗೆ ಇಲಾಖೆಯಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದೆ. ಸರ್ಕಾರ ಓಪನ್ ಟೆಂಡರ್ ಮೂಲಕ ಮಾಸ್ ಟ್ರಾನ್ಸ್‌ಫರ್ ಮಾಡಿದೆ ಎಂಬ ಮಾತು ಕೇಳಿ ಬಂದಿದೆ.  ಜತೆಗೆ, ಬೆಂಗಳೂರು ನಗರ ಸೇರಿದಂತೆ ಆಯಕಟ್ಟಿನ ಸ್ಥಳಗಳಿಗೆ ಇನ್‌ಸ್ಪೆಕ್ಟರ್ ನೇಮಕ ಮಾಡುವಾಗ ಸರ್ಕಾರ 'ಅಹಿಂದ' ನೀತಿ ಪಾಲಿಸಿದೆ. ಬಹು ಸಂಖ್ಯಾತ ವರ್ಗಕ್ಕೆ ಸೇರಿದ ಅಧಿಕಾರಿಗಳನ್ನು ಠಾಣೆಯಿಂದ ಕಚೇರಿ ಕೆಲಸಕ್ಕೆ ನಿಯುಕ್ತಿಗೊಳಿಸುವಾಗ ಜಾಣತನ ಮೆರೆದಿದೆ ಎಂಬ ಆರೋಪವಿದೆ.

500 ಪೊಲೀಸ್ ಅಧಿಕಾರಿಗಳ ವರ್ಗ
ಬೆಂಗಳೂರು:
ಆಡಳಿತಕ್ಕೆ ಚುರುಕು ಮೂಡಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯನ್ನು ರಾಜ್ಯ ಸರ್ಕಾರ ಮಾಡಿದೆ. 500ಕ್ಕೂ ಅಧಿಕ ಇನ್ಸ್‌ಪೆಕ್ಟರ್‌ಗಳು, 55ಕ್ಕೂ ಹೆಚ್ಚು ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗಿರುವಾಗಲೇ ವರ್ಗಾವಣೆ ನಿರ್ಧಾರ ಪ್ರಕಟವಾಗಿರುವುದು ಮಹತ್ವ ಪಡೆದಿದೆ.      

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.