ಸುಗ್ರೀವಾಜ್ಞೆ ಕಸದ ಬುಟ್ಟಿಗೆ ಎಸೆಯಿರಿ

ಪಿಟಿಐ ನವದೆಹಲಿ/ವಾಷಿಂಗ್ಟನ್ ಸೆ.27
ಕಳಂಕಿತ ಜನಪ್ರತಿನಿಧಿಗಳ ರಕ್ಷಿಸುವ ಸಲುವಾಗಿ ಜಾರಿ ಮಾಡಲು ಹೊರಟಿರುವ ಸುಗ್ರೀವಾಜ್ಞೆ 'ಸಂಪೂರ್ಣ ಮೂರ್ಖತನದ್ದು. ಇದನ್ನು ಹರಿದು, ಕಸದಬುಟ್ಟಿಗೆ ಬಿಸಾಕಬೇಕು...'
ಹೀಗಂತ ಹೇಳಿದ್ದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಶುಕ್ರವಾರ ಬೆಳಗ್ಗೆ ಪ್ರೆಸ್ಕ್ಲಬ್ಗೆ ನಾಟಕೀಯ ಬೆಳವಣಿಗೆಯಲ್ಲಿ ಆಗಮಿಸಿದ ಅವರು, ಸುಗ್ರೀವಾಜ್ಞೆ ಕುರಿತಂತೆ ಗರಂ ಆಗಿಯೇ ಮಾತನಾಡಿದರು. ತಮ್ಮದೇ ಪಕ್ಷದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಸುಗ್ರೀವಾಜ್ಞೆ ಹೊರಡಿಸಿದ್ದು ದೊಡ್ಡ ತಪ್ಪು ಎಂದು ಘೋಷಿಸಿದರು. ಇತ್ತ ರಾಹುಲ್ ಈ ರೀತಿಯಲ್ಲಿ ಘೋಷಣೆ ಮಾಡುತ್ತಿರುವಾಗ, ಅತ್ತ ವಾಷಿಂಗ್ಟನ್ನಲ್ಲಿ ಮಲಗಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಎದ್ದ ತಕ್ಷಣವೇ ಶಾಕ್ ಟ್ರೀಟ್ಮೆಂಟ್. ರಾಹುಲ್ ಮಾತನಾಡಿದ ಬಗೆ, ಪ್ರಧಾನಿ ಜೊತೆಗಿನ ಸಿಬ್ಬಂದಿಗೆ ಅಚ್ಚರಿ ತರಿಸಿತ್ತು.
ಈ ಸಂಬಂಧ ವಾಷಿಂಗ್ಟನ್ನಿಂದಲೇ ಹೇಳಿಕೆ ನೀಡಿದ ಪ್ರಧಾನಿ ಸಿಂಗ್, ದೇಶಕ್ಕೆ ವಾಪಸಾದ ಮೇಲೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದರು. ಹೇಳಿಕೆ ಜೊತೆಗೆ ರಾಹುಲ್ ಪತ್ರಬರೆದಿದ್ದರು ಎಂದಿದ್ದಾರೆ.
ಅಲ್ಲದೆ ಸೋನಿಯಾ ಗಾಂಧಿ ಅವರಿಗೂ ಕರೆ ಮಾಡಿ, ರಾಹುಲ್ ಪ್ರಕರಣದ ಬಗ್ಗೆ ಪ್ರಧಾನಿ ಸಿಂಗ್ ಚರ್ಚೆ ನಡೆಸಿದ್ದಾರೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರ ಕಳಂಕಿತ ಪ್ರಜಾಪ್ರತಿನಿಧಿಗಳ ರಕ್ಷಣೆಗಾಗಿ ರಾಷ್ಟ್ರಪತಿಯವರಲ್ಲಿಗೆ ಕಳುಹಿಸಿರುವ ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಕಾಂಗ್ರೆಸ್ನ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ನಾಟಕೀಯ ಆಗಮನ: ಪ್ರೆಸ್ಕ್ಲಬ್ಗೆ ಬರುವ ಮುನ್ನ ರಾಹುಲ್ ಗಾಂಧಿ ಅವರು, ಪಕ್ಷದ ವಕ್ತಾರ ಅಜಯ್ ಮಾಕನ್ ಅವರಲ್ಲಿ ಏನು ನಡೆಯುತ್ತಿದೆ ಎಂದು ವಿಚಾರಿಸಿದ್ದರು. ಬಳಿಕ ನೇರವಾಗಿ ಪ್ರೆಸ್ಕ್ಲಬ್ಗೆ ಬಂದ ಅವರು, ಪತ್ರಿಕಾಗೋಷ್ಠಿಯಲ್ಲಿ ಮಧ್ಯಪ್ರವೇಶಿಸಿದರು. 'ನಾನೀಗ ಸುಗ್ರೀವಾಜ್ಞೆ ಕುರಿತ ನನ್ನ ಅಭಿಪ್ರಾಯ ಹೊರಹಾಕುತ್ತಿದ್ದೇನೆ. ಇದೊಂದು ಸಂಪೂರ್ಣ ಮೂರ್ಖತನದ ಕೆಲಸ. ಇದನ್ನು ಹರಿದು, ಎಸೆಯಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ'.
'ನಾವು ರಾಜಕೀಯ ಲಾಭದ ಬಗ್ಗೆ ಚರ್ಚಿಸುತ್ತೇವೆ, ಕಾಂಗ್ರೆಸ್ಸೂ ಹೊರತಲ್ಲ, ಬಿಜೆಪಿಯೂ ಹೊರತಲ್ಲ. ಸಮಾಜವಾದಿ ಪಕ್ಷವಾಗಲಿ, ಜೆಡಿಯುವಾಗಲಿ, ಎಲ್ಲರೂ ಇದೇ ರೀತಿಯ ಕ್ರಮ ಕೈಗೊಳ್ಳುತ್ತಾರೆ.'
'ಇಂಥ ಸಣ್ಣಪುಟ್ಟ ಮೂರ್ಖತನದ ಕೆಲಸಗಳನ್ನು ನಿಲ್ಲಿಸುವ ಕಾಲ ಬಂದಿದೆ. ನನ್ನ ಪಕ್ಷವಾಗಲಿ ಅಥವಾ ಬೇರೆ ರಾಜಕೀಯ ಪಕ್ಷಗಳಾಗಲಿ ಎಲ್ಲರೂ ಈ ರೀತಿ ಚಿಂತಿಸಬೇಕು. ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ, ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಬೇಕಾದರೆ ಇಂಥ ಸಣ್ಣಪುಟ್ಟ ಹೊಂದಾಣಿಕೆಗಳನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಎಲ್ಲ ಕಡೆಗಳಲ್ಲೂ ಹೊಂದಾಣಿಕೆ ನಡೆಸಿಕೊಂಡೇ ಹೋಗಬೇಕಾಗುತ್ತದೆ' ಎಂದು ರಾಹುಲ್ ಹೇಳಿದರು.
ಹೀಗೆ ಹೇಳಿದ ತಕ್ಷಣ ವಾಪಸ್ ಹೊರಡಲು ಅನುವಾದ ರಾಹುಲ್ ಗಾಂಧಿ ಅವರನ್ನು ಭಾರಿ ಪ್ರಶ್ನೆಗಳ ಮೂಲಕ ಪತ್ರಕರ್ತರು ತಡೆದರು. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ ಅವರು ನನ್ನ ಪಕ್ಷ ಮಾಡಿದ ತಪ್ಪಿನ ಬಗ್ಗೆ ಹೇಳಲು ಇಲ್ಲಿಗೆ ಬಂದಿದ್ದೇನೆ ಎಂದಷ್ಟೇ ಹೇಳಿ ಪ್ರೆಸ್ಕ್ಲಬ್ನಿಂದ ಹೊರನಡೆದರು.
ರಾಹುಲ್ ಸುಪ್ರೀಂ: ಪ್ರೆಸ್ಕ್ಲಬ್ನಿಂದ ರಾಹುಲ್ ಹೋಗುತ್ತಿದ್ದಂತೆ ಪತ್ರಿಕಾಗೋಷ್ಠಿ ಮುಂದುವರಿಸಿದ ವಕ್ತಾರ ಅಜಯ್ ಮಾಕನ್ ಅವರು ರಾಹುಲ್ ಗಾಂಧಿ ಏನು ಹೇಳಿದ್ದಾರೋ ಅದೇ ಪಕ್ಷದ ನಿಲುವು. ಕಾರಣ ಅವರು ಪಕ್ಷದ ಸುಪ್ರೀಂ ಎಂದು ಹೇಳಿದರು.
ಸುಗ್ರೀವಾಜ್ಞೆ ವಾಪಸ್: ಪ್ರೆಸ್ಕ್ಲಬ್ನಲ್ಲಿ ಆದ ಈ ಬೆಳವಣಿಗೆಗಳಿಂದಾಗಿ ಯುಪಿಎ ಸರ್ಕಾರ ಈಗ ಅಡಕತ್ತರಿಯಲ್ಲಿ ಸಿಲುಕಿದೆ. ಸರ್ಕಾರದ ನೇತೃತ್ವ ವಹಿಸಿರುವ ಪಕ್ಷದ ಪ್ರಮುಖ ನಾಯಕರೇ ಸರ್ಕಾರಕ್ಕೆ ಮುಜುಗರ ಉಂಟು ಮಾಡಿರುವುದರಿಂದ ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವುದರಲ್ಲಿ ಅರ್ಥವಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ. ಹೀಗಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿದೇಶದಿಂದ ವಾಪಸ್ ಬರುತ್ತಲೇ ಇದನ್ನು ವಾಪಸ್ ಪಡೆಯುವ ಸಾಧ್ಯತೆ ಇದೆ.
ಇದೊಂದು ನಾಟಕ: ರಾಹುಲ್ ಹೇಳಿಕೆಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಸುಗ್ರೀವಾಜ್ಞೆ ಹೊರಡಿಸುವ ವರೆಗೂ ಸುಮ್ಮನಿದ್ದು ಈಗ ಇಂಥ ಹೇಳಿಕೆ ನೀಡುವ ಅವಶ್ಯಕತೆ ಏನಿತ್ತು. ಪಕ್ಷ ಮತ್ತು ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲವೇ ಎಂದು ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಆರೋಪಿಸಿದ್ದಾರೆ. ಇದು ಸಂಪೂರ್ಣವಾಗಿ ನಾಟಕವಾಗಿದೆ. ಜನರ ಗಮನ ಬೇರೆಡೆ ಸೆಳೆಯಲು ಮತ್ತು ಪ್ರಧಾನಿಯನ್ನು ಸಂಪೂರ್ಣವಾಗಿ ತಪ್ಪಿತಸ್ಥರನ್ನಾಗಿ ಮಾಡುವ ಕ್ರಮ ಎಂದು ಆಪಾದಿಸಿದ್ದಾರೆ.
ಇದಷ್ಟೇ ಅಲ್ಲ, ಸುಗ್ರೀವಾಜ್ಞೆಗೆ ಕಾರಣರಾದ ಎಲ್ಲರೂ ರಾಜಿನಾಮೆ ನೀಡಬೇಕು ಎಂದು ಜೇಟ್ಲಿ ಆಗ್ರಹಿಸಿದ್ದಾರೆ.
ರಾಹುಲ್ ಹೇಳಿಕೆ ಕಾಂಗ್ರೆಸ್ನಲ್ಲಿನ ಭಿನ್ನಾಭಿಪ್ರಾಯಗಳನ್ನು ಹೊರಹಾಕಿದೆ. ಇದಷ್ಟೇ ಅಲ್ಲ, ಸರ್ಕಾರದ ಕೆಲಸಗಳನ್ನು ಪಕ್ಷದ ನಾಯಕನೊಬ್ಬ ಹೇಗೆ ವರ್ಣಿಸಬಹುದು ಎಂಬುದಕ್ಕೆ ಇದೇ ಸಾಕ್ಷಿ.
-ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ರಾಹುಲ್ ಅವರ ಹೇಳಿಕೆಯೇ ಕಾಂಗ್ರೆಸ್ ಹೇಳಿಕೆ. ಹೀಗಾಗಿ ಕಾಂಗ್ರೆಸ್ ಸುಗ್ರೀವಾಜ್ಞೆಗೆ ವಿರೋಧ ವ್ಯಕ್ತಪಡಿಸಲಿದೆ.
-ಅಜಯ್ ಮಾಕನ್, ಕಾಂಗ್ರೆಸ್ ವಕ್ತಾರ
ತಡವಾಗಿ ಜ್ಞಾನೋದಯ
ಸುಗ್ರೀವಾಜ್ಞೆ ರಾಷ್ಟ್ರಪತಿಗಳ ಬಳಿ ಹೋಗಿ ಮೂರು ದಿನವಾಯ್ತು, ಇದು ಅಸಾಂವಿಧಾನಿಕ ಬೇಡವೇ ಬೇಡ ಎಂಬ ಒತ್ತಡ ಕೇಳಿಬಂದದ್ದು ಎರಡು ದಿನದ ಹಿಂದೆ, ರಾಷ್ಟ್ರಪತಿಗಳು ವಿವರಣೆ ಕೇಳಿದ್ದು ಗುರುವಾರ... ಇದೆಲ್ಲಾ ಆದ ಮೇಲೆ ರಾಹುಲ್ ಗಾಂಧಿ ಅವರಿಗೆ ಜ್ಞಾನೋದಯವಾಯಿತೇ? ಇಂಥ ಪ್ರಶ್ನೆಗಳು ಇದೀಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಹಿಂದಿನಿಂದಲೂ ಯಾವುದಾದರೂಪ್ರಕರಣದ ಅಂತಿಮಘಟ್ಟದಲ್ಲಿ ಪ್ರವೇಶಿಸುವ ರಾಹುಲ್ ಗಾಂಧಿ ಪಕ್ಷದೊಳಗೆ ಹೀರೋ ಆಗಲು ಹೊರಟಿದ್ದಾರಾ ಎಂಬ ಅನುಮಾನಗಳನ್ನೂ ರಾಜಕೀಯ ತಜ್ಞರು ಹೊರಹಾಕಿದ್ದಾರೆ. ಸುಖಾಸುಮ್ಮನೆ ಈಗ ಪ್ರಧಾನಿ ಸಿಂಗ್ ಅವರನ್ನು ಬಲಿಪಶು ಮಾಡಲು ಹೊರಟಿರುವ ರಾಹುಲ್ ಹೀರೋ ಆಗಲು ಹೊರಟಿದ್ದಾರೆ ಎಂಬ ಆಕ್ಷೇಪ ಪ್ರಧಾನಿಗಳ ಮಾಜಿ ಮಾಧ್ಯಮ ಸಲಹೆಗಾರ ಸಂಜಯ ಬಾರು ಅವರದ್ದು. ಬುಧವಾರ ಕಾಂಗ್ರೆಸ್ ನಾಯಕ ಹಾಗೂ ರಾಹುಲ್ ಗಾಂಧಿ ಆಪ್ತ ಎನ್ನಿಸಿಕೊಂಡಿದ್ದ ದಿಗ್ವಿಜಯ್ ಸಿಂಗ್, ಗುರುವಾರ ರಾಹುಲ್ ಅವರ ಇನ್ನೊಬ್ಬ ಆಪ್ತ, ಸಚಿವ ಮಿಲಿಂದ್ ದೇವೋರಾ ಕೂಡ ಸುಗ್ರೀವಾಜ್ಞೆಗೆ ವಿರೋಧಿಸಿದ್ದರು. ಅಲ್ಲದೆ ಗುರುವಾರವಷ್ಟೇ ಬಿಜೆಪಿ ನಾಯಕರು ರಾಷ್ಟ್ರಪತಿ ಭೇಟಿ ಮಾಡಿದಾಗ, ಪ್ರಣಬ್ ಕೂಡ ಆಕ್ಷೇಪವೆತ್ತಿದ್ದರು. ಈ ಎಲ್ಲಾ ಬೆಳವಣಿಗೆಗಳು ಆದ ಮೇಲೆ ರಾಹುಲ್ಗೆ ಏಕೆ ಈ ಬಗ್ಗೆ ಅರಿವಾಯಿತು ಎಂಬುದೇ ಅಚ್ಚರಿಯ ವಿಷಯ ಎಂದು ರಾಜಕೀಯ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಸಹಿ ಇಲ್ಲ
ಕಳಂಕಿತರ ರಕ್ಷಣೆಗೆ ಸಂಬಂಧಿಸಿದ ಸುಗ್ರೀವಾಜ್ಞೆಗೆ ಸಹಿ ಹಾಕದೇ ಇರಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ. ಪ್ರಣಬ್ 3 ಕಾನೂನು ಪಂಡಿತರ ಬಳಿ ಈ ಬಗ್ಗೆ ಚರ್ಚೆ ನಡೆಸಿದ್ದು ಸಹಿ ಹಾಕದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಅವರು ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಲ್ಲ ಎಂದು ಹೇಳಲಾಗಿದೆ. ಸುಗ್ರೀವಾಜ್ಞೆ ವಾಪಸ್ ಪಡೆಯಲಿ ಎಂದು ಪ್ರಣಬ್ ನಿರ್ಧರಿಸಿದ್ದು, ಯಾವಾಗ ಬೇಕಾದರೂ ವಾಪಸ್ ಪಡೆಯಲಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


