ಪ್ರಧಾನ ಸುದ್ದಿ

ಸೋನಿಯಾ ಸ್ವಾಗತಕ್ಕೆ ಮಂಡ್ಯ ಸಜ್ಜು

Published On :

ಮಂಡ್ಯ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸ್ವಾಗತಕ್ಕೆ ಸಕ್ಕರೆ ನಗರ ಮಂಡ್ಯ ಸಕಲ ರೀತಿಯಲ್ಲೂ ಸಜ್ಜಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಹಾಗೂ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲವಿಗೆ ಕಾರಣರಾದ ಮತದಾರರಿಗೆ ಕೃತಜ್ಞತೆ ಅರ್ಪಿಸಲು ಸೋನಿಯಾ ಗಾಂಧಿ ಸೆ.30ರಂದು ನಗರದ ಸರ್ ಎಂವಿ ಕ್ರೀಡಾಂಗಣದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಗರದ ತುಂಬೆಲ್ಲಾ ಪ್ಲೆಕ್ಸ್ ಹಾವಳಿ, ಸೋನಿಯಾ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಕಾಂಗ್ರೆಸ್ ಪ್ರಮುಖ ನಾಯಕರ ಭಾವಚಿತ್ರಗಳನ್ನು ಒಳಗೊಂಡ ದೊಡ್ಡ ದೊಡ್ಡ ಕಮಾನುಗಳನ್ನು ನಗರದ ಹೆಬ್ಬಾಗಿಲಿನಲ್ಲಿ ಕಟ್ಟಲಾಗಿದೆ. ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಂಲಕಾರ ಮಾಡಲಾಗಿದೆ. ಮಾವಿನ ಸೊಪ್ಪು, ಕೆಲವು ಕಡೆ ಬಾಳೆ ಕಂಬಗಳನ್ನು ಕಟ್ಟಿ ಸಿಂಗಾರ ಮಾಡಲಾಗಿದೆ.  ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆದ ರಾಜ್ಯ ಉಸ್ತುವರಿ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸೇರಿದಂತೆ ಎಐಸಿಸಿ ಅನೇಕ ಪದಾಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದ ಸಚಿವರುಗಳು ಹಾಗೂ ಶಾಸಕರ ದಂಡು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದೆ.
2.50ಕ್ಕೆ ಸೋನಿಯಾ ಆಗಮನ: ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಆಗಮಿಸುವ ಸೋನಿಯಾ ಗಾಂಧಿ 2.50ಕ್ಕೆ ತೂಬಿನಕೆರೆ ಹೆಲಿಪ್ಯಾಡ್‌ನಲ್ಲಿ ಬಂದಿಳಿಯಲಿದ್ದಾರೆ. 10 ಕಿ.ಮೀ. ದೂರದಲ್ಲಿರುವ ಈ ಪ್ರದೇಶದಿಂದ ಕಾರ್ ಮೂಲಕ ಮಂಡ್ಯದ ಕ್ರೀಡಾಂಗಣಕ್ಕೆ ನೇರವಾಗಿ ಆಗಮಿಸಲಿದ್ದಾರೆ.
ಮಂಡ್ಯದಲ್ಲಿ ಭಾರಿ ಬಿಸಲಿನ ವಾತಾವರಣವಿದೆ. ಆಗಾಗ್ಗೆ ಮೋಡವು ಮುಸುಕುತ್ತದೆ. ಕಳೆದ ಕೆಲವು ದಿನಗಳಿಂದ ಮಳೆ ಬಂದಿಲ್ಲ. ಸೆ.30ರಂದು ಕೂಡ ಮಳೆ ಬರುವ ಸಾಧ್ಯತೆ ಕಡಿಮೆ ಇದೆ ಎಂದು ಹವಾಮಾನ ಇಲಾಖೆ ವರದಿ ಆಧರಿಸಿ ಕಾರ್ಯಕ್ರಮವನ್ನು ತೆರೆದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
1900 ಬಸ್‌ಗಳು ಬಾಡಿಗೆಗೆ
ಕಾಂಗ್ರೆಸ್ ತನ್ನ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಯವರ ಒಂದು ದಿನದ ಕಾರ್ಯಕ್ರಮಕ್ಕೆ ಅಂದಾಜು 2 ಕೋಟಿ ಖರ್ಚು ಮಾಡುವ ಅಂದಾಜು ಹಾಕಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಮೂಲಕ ಎಲ್ಲಾ ಖರ್ಚನ್ನು ಆಡಳಿತ ಹೊಣೆ ಹೊತ್ತವರೇ ನಿಭಾಯಿಸಲಿದ್ದಾರೆಂದು ಮೂಲಗಳು ಹೇಳಿವೆ. ಪತ್ರಿಕೆಗಳಿಗೆ ಜಾಹೀರಾತು, ಪಕ್ಷದ ನಾಯಕರ ಖರ್ಚು ವೆಚ್ಚಗಳು, ಸಿದ್ಧತೆ, ಬಸ್ ವ್ಯವಸ್ಥೆಗಳಿಗೆ ಕೆಪಿಸಿಸಿ ಖರ್ಚು ಮಾಡಲಿದೆ. ಒಂದು ಅಂದಾಜಿ ಪ್ರಕಾರ ನಾಳೆ ಕಾರ್ಯಕ್ರಮಕ್ಕೆ ವಿವಿದೆಡೆಯಿಂದ  ಜನರನ್ನು ಕರೆತರಲು 1900 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಾಡಿಗೆಗೆ ಪಡೆಯಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.