ಪ್ರಧಾನ ಸುದ್ದಿ

ಸ್ವಿಜರ್ಲೆಂಡ್‌ಗೆ ಹಾರಲಿರುವ ಹಳ್ಳಿ ಹುಡುಗಿ

ಸ್ವಿಜರ್ಲೆಂಡ್‌ಗೆ ಹಾರಲಿರುವ ಹಳ್ಳಿ ಹುಡುಗಿ
Published On :

ಕನ್ನಡಪ್ರಭ ವಾರ್ತೆ ,  ಧಾರವಾಡ ,  ಸೆ.29
ಮಕ್ಕಳ ಸಮಸ್ಯೆ ಹಾಗೂ ಹಕ್ಕುಗಳ ಬಗ್ಗೆ ಮಾತನಾಡಲು ಭಾರತದ ಪ್ರತಿನಿಧಿಯಾಗಿ ಧಾರವಾಡದ ಹಳ್ಳಿ ಹುಡುಗಿಯೊಬ್ಬಳು ದೂರದ ಸ್ವಿಜರ್ಲೆಂಡ್‌ಗೆ  ಹಾರಲಿದ್ದಾಳೆ.
ಅ.10ರಂದು ಸ್ವಿಜರ್ಲೆಂಡ್‌ನ ಜಿನೀವಾದಲ್ಲಿ ನಡೆಯಲಿರುವ ಯುಎನ್‌ಸಿಆರ್‌ಸಿ (ಯುನೈಟೆಡ್ ನೇಷನ್ ಕಮಿಟಿ ಆನ್ ದಿ ರೈಟ್ಸ್ ಆಫ್ ದಿ ಚೈಲ್ಡ್) 66ನೇ ಸಮ್ಮೇಳನದಲ್ಲಿ ಜಗತ್ತಿನ ವಿವಿಧ ದೇಶಗಳ ಮಕ್ಕಳು ಪ್ರತಿನಿಧಿಗಳಾಗಿ ಭಾಗವಹಿಸುತ್ತಿದ್ದಾರೆ.
ಭಾರತದ ಪ್ರತಿನಿಧಿಯಾಗಿ ಇಲ್ಲಿನ ಕಿಡ್ಸ್ ಸಂಸ್ಥೆ ನೇತೃತ್ವದ 'ಗುಬ್ಬಚ್ಚಿ ಮಕ್ಕಳ ಮಹಾಸಂಘ'ದ ಉಪಾಧ್ಯಕ್ಷೆ, ಧಾರವಾಡ ಜಿಲ್ಲೆಯ ರಾಮಪುರ ಗ್ರಾಮದ ಮಂಜುಳಾ ಮುನವಳ್ಳಿ (17) ಹಾಗೂ ಗುಜರಾತ್‌ನ ಅಪ್ಸಾನಾ ಎಂಬ ಬಾಲಕಿ ಆಯ್ಕೆಯಾಗಿದ್ದಾರೆ. ಈ ಇಬ್ಬರು ಮಕ್ಕಳು ಮಂಡಿಸುವ ವಿಷಯವನ್ನು ಭಾಷಾಂತರಿಸಲು ಮುಂಬೈನ ಮೇರಿ ಎಂಬುವರು ಸಹ ಜಿನೀವಾ ಪ್ರವಾಸ ಕೈಗೊಂಡಿದ್ದಾರೆ.
ಭಾರತವೂ ಸದಸ್ಯ: ಮಕ್ಕಳ ಹಕ್ಕು ರಕ್ಷಣೆಗಾಗಿ ಇರುವ ಯುಎನ್‌ಸಿ ಆರ್‌ಸಿ ಸದಸ್ಯತ್ವವನ್ನು ಭಾರತ 1992ರಲ್ಲಿ ಪಡೆದು ಮಕ್ಕಳ ಹಕ್ಕು ರಕ್ಷಣೆಗೆ ಬದ್ಧವಾಗಿದೆ. ಅದರಂತೆ ಪ್ರತಿ ವರ್ಷವೂ ಯುಎನ್‌ಸಿಆರ್‌ಸಿ ವತಿಯಿಂದ ಈ ರೀತಿಯ ಸಮ್ಮೇಳನ ನಡೆಸುವ ಮೂಲಕ ಸದಸ್ಯತ್ವ ಪಡೆದ ದೇಶಗಳ ಮಕ್ಕಳ ಪ್ರತಿನಿಧಿಗಳನ್ನು ಸಮ್ಮೇಳನದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗುತ್ತದೆ. ಅಲ್ಲದೆ, ಮಕ್ಕಳ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ನೀಡುತ್ತಿದೆ. ಸಮ್ಮೇಳನದಲ್ಲಿ ಭಾಗವಹಿಸಿದ ವಿವಿಧ ದೇಶಗಳ ವಿಭಿನ್ನ ಸಂಸ್ಕೃತಿ ಹೊಂದಿರುವ ಮಕ್ಕಳಿಂದ ಆಯಾ ದೇಶಗಳ ಮಕ್ಕಳ ಸ್ಥಿತಿ, ಸರ್ಕಾರದ ಕ್ರಮಗಳ ಕುರಿತು ಸುದೀರ್ಘ ವಿಚಾರಣೆ ಸಹ ಈ ಸಂಸ್ಥೆ ನಡೆಸುತ್ತದೆ.
ಆಯಾ ದೇಶಗಳ ಸರ್ಕಾರಗಳು ಮಕ್ಕಳ ಸಮಸ್ಯೆ ಹಾಗೂ ಹಕ್ಕುಗಳ ಕುರಿತಾಗಿ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸಿರುತ್ತದೆ. ಪ್ರಸ್ತುತ ನಡೆಯುತ್ತಿರುವ ಸಮ್ಮೇಳನಗಳ ಮೂಲಕ ಮಕ್ಕಳ ಅಭಿಪ್ರಾಯ ಹಾಗೂ ಸರ್ಕಾರ ಕ್ರಮಗಳನ್ನು ಹೋಲಿಸಿ  ಕೈಗೊಂಡ ಕ್ರಮಗಳಲ್ಲಿ ಏರು-ಪೇರುಗಳಿದ್ದಲ್ಲಿ ಸರ್ಕಾರಕ್ಕೆ ಸೂಕ್ತ ಸಲಹೆ ಹಾಗೂ ಕ್ರಮ ಕೈಗೊಳ್ಳುವಂತೆ ನಿರ್ದೇಶನ ಈ ಸಂಸ್ಥೆ ನೀಡುತ್ತದೆ.   
ದೇಶದಲ್ಲಿ ಯೂಥ್ ನೆಟ್ ವರ್ಕ್ ಸಭೆಯು ವಿವಿಧ ರಾಜ್ಯಗಳಲ್ಲಿನ ಎನ್‌ಜಿಓಗಳ ಸಹಾಯದಿಂದ ಪ್ರತಿ ರಾಜ್ಯದ ಮೂರು ಮಕ್ಕಳಿಂದ ಮಕ್ಕಳ ಸಮಸ್ಯೆಗಳ ಬಗ್ಗೆ ವರದಿ ಪಡೆಯುತ್ತದೆ. ಈ 3 ವರದಿಗಳಲ್ಲಿ ಉತ್ತಮ ವರದಿಯನ್ನು ಯುಎನ್‌ಸಿ ಆರ್‌ಸಿಗೆ ಕಳುಹಿಸಲಾಗುತ್ತದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದ ಮಂಜುಳಾ ಮತ್ತು ಗುಜರಾತ್‌ನ ಅಪ್ಸಾನಾ ಆಯ್ಕೆಯಾಗಿದ್ದಾರೆ. ರಾಜ್ಯದ ವತಿಯಿಂದ ನಮ್ಮ ಸಂಸ್ಥೆಯ ಸದಸ್ಯೆ ಮಂಜುಳಾ ಆಯ್ಕೆಯಾಗಿರುವುದು ಕಿಡ್ಸ್ ಸಂಸ್ಥೆಗೆ ತುಂಬ ಹೆಮ್ಮೆಯ ಸಂಗತಿ ಎನ್ನುತ್ತಾರೆ ಸಂಸ್ಥೆ ನಿರ್ದೇಶಕಿ ಪಂಕಜಾ ಕಲ್ಮಠ.
ಧಾರವಾಡದ ಆರ್‌ಎಲ್‌ಎಸ್ ಕಾಲೇಜಿನ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿಯಾಗಿರುವ ಮಂಜುಳಾ 2007ರಿಂದ ಕಿಡ್ಸ್ ಸಂಸ್ಥೆಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುಬ್ಬಚ್ಚಿ ಮಹಾಸಂಘದ ಮೂಲಕ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾಳೆ. ಮೂರು ಎಕರೆ ಜಮೀನಿನಲ್ಲಿ ಮಂಜುಳಾ ಕುಟುಂಬ ಉಪ ಜೀವನ ಸಾಗಿಸುತ್ತಿದ್ದು, ಇದೀಗ ಮಗಳ ಜಿನಿವಾ ಪ್ರಯಾಣಕ್ಕೆ ತಂದೆ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಎನ್‌ಜಿಓಗಳು ಗ್ರಾಮೀಣ ಪ್ರದೇಶದ ಮಕ್ಕಳ ಸಮಸ್ಯೆಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗುತ್ತಿವೆ. ಹಾಗೆಯೇ, ಗ್ರಾಮೀಣರನ್ನು ಗುರುತಿಸುವ ಕೆಲಸ ಮಾಡುತ್ತಿವೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು ಮಂಜುಳಾ ತಂದೆ ಮಹಾಂತೇಶ.
ಆರು ವರ್ಷಗಳಿಂದ ಕಿಡ್ಸ್ ಸಂಸ್ಥೆ ಸದಸ್ಯೆಯಾಗಿ ಅನೇಕ ಮಕ್ಕಳ ವಿವಿಧ ಸಮಸ್ಯೆ ಆಲಿಸಿ ಅವುಗಳಿಗೆ ಸರ್ಕಾರದಿಂದ ಪರಿಹಾರ ಒದಗಿಸಲು ಪ್ರಯತ್ನಿಸಿದ್ದೇನೆ. ಅಂತೆಯೇ, ಈಗ ದೇಶದ ಮಕ್ಕಳ ಪ್ರತಿನಿಧಿಯಾಗಿ ಹೊರಟಿದ್ದು ತುಂಬ ಸಂತಸ ತಂದಿದೆ.
- ಮಂಜುಳಾ ಮುನವಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.