ಪ್ರಧಾನ ಸುದ್ದಿ

ಅಮೇಠಿಯಲ್ಲಿ ಸ್ಮೃತಿ, ರಾಯಬರೇಲಿಗೆ ಅಜಯ್

ಅಮೇಠಿಯಲ್ಲಿ ಸ್ಮೃತಿ, ರಾಯಬರೇಲಿಗೆ ಅಜಯ್
Published On :

ಕನ್ನಡಪ್ರಭ ಪ್ರತಿನಿಧಿಯಿಂದ, ನವದೆಹಲಿ, ಏ.1
ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ತೆಲಗಿ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದ ಹಿರಿಯ ವಕೀಲ ಅಜಯ್ ಅಗರ್‌ವಾಲ್ ರಾಯ್‌ಬರೇಲಿಯಲ್ಲಿ ಸೋನಿಯಾಗಾಂಧಿ ವಿರುದ್ಧ ಸೆಣಸಲಿದ್ದಾರೆ. ಕಾಂಗ್ರೆಸ್ ಯುವರಾಜ ರಾಹುಲ್ ಪ್ರತಿನಿಧಿಸುತ್ತಿರುವ ಅಮೇಠಿಯಲ್ಲಿ ಕಿರುತೆರೆ ತಾರೆ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಸ್ಮೃತಿ ಇರಾನಿ ಕಣಕ್ಕಿಳಿಯಲಿದ್ದಾರೆ.

ಉಮಾ ಭಾರತಿ ಝಾನ್ಸಿ ಕ್ಷೇತ್ರ ಬಿಟ್ಟು ಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ರಾಯ್ ಬರೇಲಿ ಕ್ಷೇತ್ರದಲ್ಲಿ ಅಜಯ್ ಅಗರ್‌ವಾಲ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ರಾಯ್‌ಬರೇಲಿಗೆ ಉಮಾಭಾರತಿ ಕಣಕ್ಕಿಳಿಸುವಂತೆ ಯೋಗ ಗುರು ಬಾಬಾ ರಾಮ್‌ದೇವ್ ಸಲಹೆ ಮಾಡಿದ್ದರು. ಉಮಾ ಭಾರತಿ ಸ್ಪರ್ಧಿಸಿದರೆ ಪ್ರಚಾರ ಮಾಡುವುದಾಗಿಯೂ ಹೇಳಿದ್ದರು. ಆದರೆ, ಈ ಸಲಹೆಯನ್ನು ಉಮಾ  ನಯವಾಗಿ ತಿರಸ್ಕರಿಸಿದ್ದಾರೆ. ಝಾನ್ಸಿ ಕ್ಷೇತ್ರದಲ್ಲೇ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಒಂದು ಹಂತದಲ್ಲಿ ಪಕ್ಷ ನೀಡಿದ ಉಭಯ ಕ್ಷೇತ್ರಗಳಲ್ಲೂ ಸ್ಪರ್ಧಿಸುವ ಅವಕಾಶವನ್ನು ಉಮಾಭಾರತಿ ತಿರಸ್ಕರಿಸಿದ್ದಾರೆ. ಹೀಗಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದ ವಕೀಲ ಅಜಯ್ ಅಗರ್‌ವಾಲ್ ಅವರನ್ನು ಕಣಕ್ಕಿಳಿಸಿದೆ.

ಪಿಐಎಲ್ ಸಲ್ಲಿಸಿ ಹೋರಾಡಿದ್ದರು: ಅಜಯ್ ಅಗರ್‌ವಾಲ್ ತೆಲಗಿ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೋರಾಟ ನಡೆಸಿದ್ದವರು. ನಕಲಿ ಛಾಪಾ ಕಾಗದ ಹಗರಣ ರಾಷ್ಟ್ರವ್ಯಾಪಿ ಹರಡಿದ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಸಿಬಿಐ ಏಕೀಕೃತ ತನಿಖೆ ನಡೆಸಬೇಕು, ತನಿಖೆಗೆ ಕಾಲಮಿತಿ ವಿಧಿಸಬೇಕು ಎಂದು ಅಜಯ್ ಅಗರ್‌ವಾಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಈ ಅರ್ಜಿ ಪರಿಗಣಿಸಿ ಸಿಬಿಐನಿಂದ ಏಕೀಕೃತ ತನಿಖೆಗೆ ಆದೇಶ ನೀಡಿತ್ತು.

ಸಿಬಿಐ ತನಿಖೆ ಮೇಲೆ ಸುಪ್ರೀಂಕೋರ್ಟ್ ನಿಗಾ ವಹಿಸುವಂತೆಯೂ ಅಗರ್‌ವಾಲ್ ಮನವಿ ಮಾಡಿದ್ದರು. ಸಿಬಿಐ ತನಿಖೆ ಮುಗಿಯುವವರೆಗೂ ಪ್ರಮುಖ ಆರೋಪಿ ತೆಲಗಿಯನ್ನು ಜೈಲಿನಿಂದ ಬಿಡುಗಡೆ ಮಾಡುವುದಿಲ್ಲ ಎಂದು ಕನಾಟಕ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ್ದ ಅಜಯ್ ಅಗರ್‌ವಾಲ್, ಕರ್ನಾಟಕ ಸರ್ಕಾರದ ಆದೇಶದಿಂದಾಗಿ ತನಿಖೆಗೆ ಹಿನ್ನಡೆಯಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ಗೆ ವಿವರಿಸಿದ್ದರು.
ಸಿಬಿಐ ತನಿಖೆಗೆ ಕರ್ನಾಟಕ ಸರ್ಕಾರದ ಯಾವುದೇ ಆದೇಶ ಅಡ್ಡಿ ಬರಬಾರದು ಎಂದು ಸುಪ್ರೀಂ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.


ಶಿವಸೇನೆಯು ಎನ್‌ಡಿಎ ಮೈತ್ರಿಕೂಟದಲ್ಲಿಲ್ವೇ? ಮುಂಬೈನಲ್ಲಿ ಬಿಹಾರದ ಜನರನ್ನು ಹೊಡೆಯುವವರು ಶಿವಸೇನೆ ಮತ್ತು ಎನ್‌ಡಿಎ ಮಂದಿ ಅಲ್ವೇ?
- ರಾಹುಲ್ ಗಾಂಧಿ ಕಾಂಗ್ರೆಸ್ ಉಪಾಧ್ಯಕ್ಷ


ಅಮೇಠಿಯಲ್ಲೇನಿದ್ದರೂ ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸ್ಪರ್ಧೆಯಾಗಿರಲಿದೆ. ಆಮ್ ಆದ್ಮಿ ಪಕ್ಷ ಕಾಂಗ್ರೆಸ್‌ನ ಬಿ- ಟೀಂ ಆಗಿರಲಿದೆ.
- ಸ್ಮೃತಿ ಇರಾನಿಬಿಜೆಪಿ ನಾಯಕಿ

ನರೇಂದ್ರ ಮೋದಿ ಅವರನ್ನು ಪ್ರಧಾನಿ ಸ್ಥಾನಕ್ಕೇರಿಸಿ. ಭಾರತದಲ್ಲಿ ಯಾವ ರೀತಿ ಬದಲಾವಣೆಯಾಗುತ್ತದೋ ನೀವೇ ನೋಡಿ.
- ಎಲ್.ಕೆ. ಆಡ್ವಾಣಿಬಿಜೆಪಿ ಹಿರಿಯ ನಾಯಕ


ಮೋದಿ ಅವರು ವಾಜಪೇಯಿಯವರಷ್ಟು ಉತ್ತಮ ಭಾಷಣಕಾರರಲ್ಲ. ಆದರೆ ಅವರೊಬ್ಬ ವಿಶಿಷ್ಟ ವ್ಯಕ್ತಿಯಾಗಿದ್ದು, ಜನಸಮೂಹವನ್ನು ಸೆಳೆಯುವ ಸಾಮರ್ಥ್ಯವಿದೆ.
- ಉಮಾಭಾರತಿ ಬಿಜೆಪಿ ನಾಯಕಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.