ಸಮಾವೇಶಕ್ಕೆ ಬೈ; ಪಾದಯಾತ್ರೆಗೆ ಜೈ

ಬೆಂಗಳೂರು: ರಾಜಕೀಯ ದಿಗ್ಗಜರ ಭಾಷಣ, ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗುತ್ತಿದ್ದ ರಾಜಕೀಯ ಸಮಾವೇಶಗಳು ಮಾಯವಾಗುತ್ತಿವೆ.
ಚುನಾವಣೆ ಪ್ರಚಾರ ನಿಯಮಗಳು ಬದಲಾದಂತೆ ರಾಜಕೀಯ ಪಕ್ಷಗಳ ರಣತಂತ್ರವೂ ಬದಲಾಗಿದೆ. ಸಮಾವೇಶಕ್ಕೆ ಗುಡ್ಬೈ ಹೇಳುತ್ತಿರುವ ಅಖಾಡದಲ್ಲಿರುವ ಅಭ್ಯರ್ಥಿಗಳು ಪಾದಯಾತ್ರೆ, ಮನೆ ಮನೆಗೆ ಭೇಟಿಯನ್ನೆ ಮತ ಬೇಟೆಗೆ ಪ್ರಮುಖ ಅಸ್ತ್ರವನ್ನಾಗಿಸಿಕೊಳ್ಳುತ್ತಿದ್ದಾರೆ. ಚುನಾವಣೆ ಆಯೋಗದ ಹದ್ದಿನ ಕಣ್ಣಿನ ಪರಿಧಿಯಿಂದ ತಪ್ಪಿಸಿಕೊಳ್ಳಲು ಅಭ್ಯರ್ಥಿಗಳು ಹುಡುಕಿಕೊಂಡಿರುವ ಹೊಸ ಪ್ರಯೋಗವಿದು. ಮತ್ತೊಂದು ಸತ್ಯವೇನೆಂದರೆ ಭಾಷಣ ಕೇಳಲೆಂದೆ ದೊಡ್ಡ ಸಂಖ್ಯೆಯಲ್ಲಿ ಜನರು ಬರಲು ಅಂತಹ ಆಕರ್ಷಕ ಮತುಗಾರ ರಾಜಕಾರಣಿಯನ್ನು ರಾಜ್ಯ ಹೊಂದಿಲ್ಲ.
ಸಮಾವೇಶಕ್ಕೆ ತಗಲುವ ವೆಚ್ಚ ಹಾಗೂ ಇದರ ಪ್ರಭಾವವನ್ನು ಅರಿತ ಪರಿಣಾಮದಿಂದಲೇ ಬಹಿರಂಗ ಸಭೆಗಳನ್ನು ಕೇವಲ ರಾಷ್ಟ್ರೀಯ ನಾಯಕರ ಪ್ರಚಾರಕ್ಕೆ ಸೀಮಿತಗೊಳಿಸಲಾಗುತ್ತಿದೆ. ಬಹಿರಂಗ ಸಭೆಗೆ ಖರ್ಚು ಮಾಡುವ ಹಣದ ಲೆಕ್ಕವನ್ನು ತೋರಿಸಬೇಕಾಗುತ್ತದೆ, ಇದರ ಜತೆಗೆ ಅಭ್ಯರ್ಥಿಯ ಗರಿಷ್ಠ ಮಿತಿಯನ್ನು ಸರಿದೂಗಿಸುವುದು ಕಷ್ಟವಾಗಿಬಿಡುತ್ತದೆ. ಮತ್ತೊಂದೆಡೆ ಬಹಿರಂಗ ಸಭೆಗಳಿಗೆ ಜನರನ್ನು ಕರೆತರುವುದು ಕೂಡ ಸುಲಭದ ಕೆಲಸವಲ್ಲ, ಅಲ್ಲಿ ನಡೆಯುವ ಸಣ್ಣ ಪುಟ್ಟ ತಪ್ಪುಗಳು ಸಾವಿರಾರು ಮತಗಳನ್ನು ಕಸಿಯುವ ಕೆಲಸವನ್ನು ಮಾಡಬಹುದು ಎನ್ನುವುದು ರಾಜಕೀಯ ಮುಖಂಡರ ಚಿಂತನೆ.
ಇದೇ ಕಾರಣದಿಂದ ರಾಜ್ಯದಲ್ಲಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕೆಲವೇ ರಾಷ್ಟ್ರೀಯ ನಾಯಕರ ಸಮಾವೇಶ ಆಯೋಜಿಸಲಾಗಿದೆ. ಅಪರೂಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಿಲ್ಲೊಂದು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ನರೇಂದ್ರ ಮೋದಿ 5, ರಾಹುಲ್ ಗಾಂಧಿ 2, ಸೋನಿಯಾ ಗಾಂಧಿ, ರಾಜನಾಥ್ ಸಿಂಗ್ ಹಾಗೂ ಶಿವರಾಜ್ ಸಿಂಗ್ ಚವ್ಹಾಣ್ ತಲಾ ಒಂದು ಸಮಾವೇಶ ನಡೆಸಿದ್ದಾರೆ. ಈ ಎಲ್ಲ ನಾಯಕರು ಮತ್ತೊಂದು ಸುತ್ತಿನ ಸಮಾವೇಶ ನಡೆಸುವ ಸಾಧ್ಯತೆಯಿದೆ.
ದುಡ್ಡು ಖರ್ಚು, ಜನರೂ ಬರುವುದಿಲ್ಲ: ಚುನಾವಣೆ ಅಧಿಸೂಚನೆ ಹೊರಡಿಸಿದ ಬಳಿಕ ನಡೆಸುವ ಪ್ರತಿಯೊಂದು ಸಮಾವೇಶದ ಖರ್ಚನ್ನು ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ಲೆಕ್ಕಕ್ಕೆ ಸೇರಿಸಲಾಗುತ್ತದೆ. ಜನರನ್ನು ಕರೆತರಲು ಬಳಸುವ ವಾಹನ, ಊಟ ಹಾಗೂ ಇತರೆ ಖರ್ಚುಗಳನ್ನು ಸ್ಥಳೀಯ ಅಭ್ಯರ್ಥಿಗಳ ತಲೆಗೆ ಬರುತ್ತದೆ. ಇಷ್ಟಾದರೂ ಸ್ಥಳೀಯ ನಾಯಕರ ಸಮಾವೇಶಗಳಿಗೆ ಜನರನ್ನು ಕರೆತರುವುದು ಸಾಧ್ಯವೇ ಇಲ್ಲ ಎನ್ನುವ ಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಹೊಂದಿದ ಮೋದಿ, ರಾಹುಲ್ ಗಾಂಧಿಯಂತಹ ನಾಯಕರ ಸಮಾವೇಶ ನಡೆಸಿದರೆ ಒಂದಷ್ಟು ಜನರನ್ನು ಸಮಾವೇಶಕ್ಕೆ ದುಂಬಾಲು ಬಿದ್ದು ಕರೆಸಿಕೊಳ್ಳಬಹುದು. ಆದರೆ ರಾಜ್ಯ ನಾಯಕರ ಭಾಷಣವನ್ನು ಹೇಗೂ ಕೇಳಿಯೇ ಇರುತ್ತೇವೆ ಎಂದು ಜನರು ಪ್ರಚಾರ ಸಭೆಗಳತ್ತ ತಲೆ ಹಾಕುತ್ತಿಲ್ಲ. ಇದರಿಂದ ಸಮಾವೇಶಕ್ಕೆ ಖರ್ಚು ಮಾಡಿದ್ದಕ್ಕೆ ತಕ್ಕ ಫಲ ಸಿಗುತ್ತಿಲ್ಲ ಎನ್ನುವುದು ರಾಜಕೀಯ ಪಕ್ಷಗಳ ಲೆಕ್ಕವಾಗಿದೆ.
ರಾಜ್ಯದಲ್ಲಿ ಮತ ಆಕರ್ಷಿಸುವ ವಾಗ್ಮಿಗಳಿಲ್ಲ: ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಹಾಗೂ ಎಸ್. ಬಂಗಾರಪ್ಪ ಅವರ ಮಾತುಗಳನ್ನು ಕೇಳಲೆ ಜನ ಸೇರುತ್ತಿದ್ದರು. ಯಾವುದೇ ಕ್ಷೇತ್ರಕ್ಕೆ ಹೆಗಡೆ ಅಥವಾ ಬಂಗಾರಪ್ಪ ಬರುತ್ತಾರೆ ಎಂದರೆ ಸಾವಿರಾರು ಜನ ಸೇರುತ್ತಿದ್ದರು. ಆದರೆ ಇಂದು ಅಂತಹ ವಾಗ್ಮಿಗಳ ಸಂಖ್ಯೆ ರಾಜ್ಯ ರಾಜಕೀಯದಲ್ಲಿ ಕಡಿಮೆಯಾಗಿದೆ. ಮತ್ತೊಂದೆಡೆ ಇವರ ಭಾಷಣ ಕೇಳಲು ಜನರಿಗೂ ಪುರುಸೊತ್ತು ಇಲ್ಲದಂತಾಗಿದೆ. ಸಮಾವೇಶವೆಂದರೆ ಒಂದರ್ಧ ದಿನ ಇದಕ್ಕಾಗಿಯೇ ಹೋಗಿಬಿಡುತ್ತದೆ.
ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


