ವಿಷಮಕ್ಕೇರಿದ ವಾಕ್ಸಮರ

-ಚುನಾವಣಾ ಭರಾಟೆಯಲ್ಲಿ ವಿವೇಚನೆ ಮರೆತು ಹರಿಬಿಟ್ಟ ಮಾತು
ಈ ಚುನಾವಣೆ ಮತಸಮರವಷ್ಟೇ ಆಗಿ ಉಳಿದಿಲ್ಲ. ಅಪನಿಂದೆ, ಆಘಾತಕಾರಿ ಹೇಳಿಕೆಗಳ ಸಮರವಾಗಿಯೂ ಪರಿವರ್ತನೆಯಾಗುತ್ತಿದೆ. ನಾನಾ ಪಕ್ಷಗಳ ಮುಖಂಡರು ಕಳೆದ ಕೆಲವು ತಿಂಗಳುಗಳಿಂದೀಚೆಗೆ ನೀಡಿದ ಆಘಾತಕಾರಿ ಹೇಳಿಕೆಗಳು ಬೆಚ್ಚಿಬಿಳಿಸುತ್ತಿವೆ.
ಕನ್ನಡಪ್ರಭವಾರ್ತೆ|ಬೆಂಗಳೂರು|ಏ.2
ಮುಸ್ಲಿಮರು ಸರ್ಕಾರದಿಂದ ತೆಗೆದುಕೊಂಡ ಸಾಲ ಕಟ್ಟದೆ ಟೋಪಿ ಹಾಕಿ ಎಂದು ಈ ಹಿಂದೆ ಹೇಳಿ ವಿವಾದಕ್ಕೀಡಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಈಗ ಎಚ್.ಡಿ.ದೇವೇಗೌಡರ ಮೇಲೆ ತಮ್ಮ ನಾಲಿಗೆ ಚಾಟಿ ಬೀಸಿದ್ದಾರೆ.
'ಗೌಡರು ಯಾವಾಗ ವಿಷ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ನಾನು ಕಾಯುತ್ತಿದ್ದೇನೆ' ಎನ್ನುವ ಮೂಲಕ ಮಾತಿನ ಸಮರಕ್ಕೆ ನಾಂದಿ ಹಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಗೌಡರು, 'ಇದು ಶುದ್ಧ ನಾನ್ಸೆನ್ಸ್' ಎಂದು ಪ್ರತಿದಾಳಿ ನಡೆಸಿದ್ದಾರೆ.
ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ ಹೇಳಿಕೆ ಸರಿಯಾಗಿದೆ ಎಂದಿದ್ದು, ಎಚ್.ಡಿ. ಕುಮಾರಸ್ವಾಮಿ ಇದು ಕೀಳುಹೇಳಿಕೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಡೆದಿದ್ದೇನು? ಶಿವಾಜಿನಗರ ಕಾಂಗ್ರೆಸ್ ಕಚೇರಿ ಬಳಿ ನಡೆದ ಪ್ರಚಾರ ಸಭೆಯಲ್ಲಿ ತಮ್ಮ ರಾಜಕೀಯ ಗುರು ಎಸ್.ಎಂ.ಕೃಷ್ಣ ಸಮ್ಮುಖದಲ್ಲೇ ಹೀಗೆ ಹೇಳಿದ್ದಾರೆ. ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿ, ವಿಧಾನಸಭೆ ಚುನಾವಣೆ ಸಂದರ್ಭ ಗೌಡರು, 'ಜೆಡಿಎಸ್ ಅಧಿಕಾರಕ್ಕೆ ಬಾರದಿದ್ದರೆ ವಿಷ ತೆಗೆದುಕೊಂಡು ಸಾಯುತ್ತೇನೆ' ಎಂದಿದ್ದರು. ಅವರು ಯಾವಾಗ ವಿಷ ತೆಗೆದುಕೊಳ್ಳುತ್ತಾರೆ ಎಂದು ಕಾಯುತ್ತಿರುವುದಾಗಿ ಹೇಳಿದರು.
ಗೌಡರು ಮುಸ್ಲೀಸರ ಓಲೈಸಲು ಕೆಲ ಸುಳ್ಳು ಹೇಳಿಕೆ ನೀಡುತ್ತಾರೆ. ಮುಂದಿನ ಜನ್ಮ ಎಂಬುದಿದ್ದರೆ ಮುಸ್ಲಿಂ ಆಗಿ ಹುಟ್ಟುವುದಾಗಿ ಹೇಳಿದ್ದರು. ಪುನರ್ಜನ್ಮ ಇದೆಯೋ, ಇಲ್ಲವೋ? ಆದರೆ ಅದ ಕ್ಕಾಗಿ ಈಗಲೇ ಒತ್ತಾಯ ಮಾಡುತ್ತೇನೆ. ನೀವು ಈ ಜನ್ಮದಲ್ಲೇ ಮುಸ್ಲಿಂ ಆಗಿ ಮತಾಂತರಗೊಳ್ಳಿ. ಸಮುದಾಯಕ್ಕೆ ಸೇರಿಸಿಕೊಳ್ಳುವುದಕ್ಕೆ ನಮ್ಮ ರೋಶನ್ ಬೇಗ್ ಸಿದ್ಧರಾಗಿದ್ದಾರೆ. ಯಾರೂ ನಿಮ್ಮನ್ನು ತಡೆಯುವುದಿಲ್ಲ ಎಂದು ವ್ಯಂಗ್ಯವಾಡಿದ್ದರು.
ಮಾತ್ರವಲ್ಲ ಗೌಡರು ತಮ್ಮ 'ಅಳುವ ಆಸ್ತಿ' ಯನ್ನು ಪುತ್ರ ಕುಮಾರಸ್ವಾಮಿಗೆ ಬಿಟ್ಟು ಹೋಗುತ್ತಿದ್ದಾರೆ ಎಂದು ಛೇಡಿಸಿದ್ದರು.
ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ದೇವೇಗೌಡರು, 'ಕೆಪಿಸಿಸಿ ಅಧ್ಯಕ್ಷರಾಗಿ ಇಂಥ ಮಾತಾಡುವುದು ಸೂಕ್ತವಲ್ಲ. ಅದು ಶುದ್ಧ ನಾನ್ಸೆನ್ಸ್. ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ದೇವೇಗೌಡನನ್ನು ಬೈಯ್ಯಲೇಬೇಕು, ಹೀಯಾಳಿಸಲೇಬೇಕು ಎಂದು ಸೋನಿಯಾ ಅವರು ಪರಮೇಶ್ವರ್ಗೆ ಸೂಚನೆ ನೀಡಿ, ನೇಮಿಸಿದ್ದರೆ ಅಭ್ಯಂತರವಿಲ್ಲ. ಮಾತನಾಡಿ ತೃಪ್ತಿಪಟ್ಟುಕೊಳ್ಳಲಿ' ಎಂದಿದ್ದಾರೆ.
ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದಿದ್ದಕ್ಕೆ ಹೊಸ ಅರ್ಥ ಕಲ್ಪಿಸುವುದು ಅನಗತ್ಯ. ಕೆಪಿಸಿಸಿ ಅಧ್ಯಕ್ಷರಿಗೆ ಮಾತಿನ ನಿಗಾ ಇದ್ದರೆ ಒಳಿತು ಎಂದರು.
ಎಲುಬಿಲ್ಲದ ನಾಲಿಗೆ ಹೊರಳಿದ್ದು...
ಮೋದಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಹುಶಃ ಅವರ ತಲೆ ಕೆಟ್ಟಿರಬೇಕು.
- ಶರದ್ ಪವಾರ್, ಎನ್ಸಿಪಿ ಮುಖಂಡ
ನರೇಂದ್ರ ಮೋದಿ ಅವರೊಬ್ಬ ಸಾವಿನ ಸರದಾರ(ಮೌತ್ಕಾ ಸೌದಾಘರ್).
- ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ
ಕೇಜ್ರಿವಾಲ್, ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಪಾಕಿಸ್ತಾನಿ ಏಜೆಂಟ್ಗಳು.
- ನರೇಂದ್ರ ಮೋದಿ, ಗುಜರಾತ್ ಸಿಎಂ
ಸೋನಿಯಾ ದೇಶವನ್ನು ಲೂಟಿ ಮಾಡುವ ವಿದೇಶಿ ಸೊಸೆ.
- ಬಾಬಾ ರಾಮದೇವ್, ಯೋಗಗುರು
ಮೋದಿ ಅವರೊಬ್ಬ ನಪುಂಸಕ.
- ಸಲ್ಮಾನ್ ಖುರ್ಷಿದ್, ವಿದೇಶಾಂಗ ಸಚಿವ
ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರ ಬಟ್ಟೆ ಬಿಚ್ಚಿ ಇಟಲಿಗೆ ವಾಪಸ್ ಕಳುಹಿಸಬೇಕು.
- ಹೀರಾಲಾಲ್ ರೇಗಾರ್, ಬಿಜೆಪಿ ಶಾಸಕ
ಮಾಯಾವತಿ ಅವರು ಮೋದಿಯ ತೊಡೆಯ ಮೇಲೆ ಕೂತಿದ್ದರು. ಆಕೆ ಮತ್ತೊಮ್ಮೆ ಇದೇ ರೀತಿ ಕೂರಲಿದ್ದಾಳೆ. ಯಾಕೆಂದರೆ ಇಬ್ಬರಿಗೂ ಮದುವೆಯಾಗಿಲ್ಲ.
- ನಹೀದ್ ಹಸನ್, ಎಸ್ಪಿ ಅಭ್ಯರ್ಥಿ
ನಾವು ನರೇಂದ್ರ ಮೋದಿ ಅವರನ್ನು ಕತ್ತರಿಸಿ ಹಾಕುತ್ತೇವೆ.
- ಇಮ್ರಾನ್ ಮಸೂದ್, ಕಾಂಗ್ರೆಸ್ ಅಭ್ಯರ್ಥಿ
ನಾನು ಅರುಣ್ ಜೇಟ್ಲಿ ಮತ್ತು ಹಿರಿಯ ವಕೀಲ ಹರೀಶ್ ಸಾಳ್ವೆ ಅವರ ಮುಖಕ್ಕೆ ಉಗಿಯ ಬಯಸುತ್ತೇನೆ.
- ಸೋಮನಾಥ್ ಭಾರ್ತಿ, ಆಪ್ ಮುಖಂಡ
ಮೋದಿ ಅವರು ಆರೆಸ್ಸೆಸ್ನ ಗೂಂಡಾ, ರಾಜನಾಥ್ ಸಿಂಗ್ ಅವರ ಗುಲಾಮ.
- ಬೇಣಿ ಪ್ರಸಾದ್ ವರ್ಮಾ, ಕಾಂಗ್ರೆಸ್ ಮುಖಂಡ
ನಮಗೆ ನಿಮ್ಮ ಅನುಕಂಪದ ಅಗತ್ಯ ಇಲ್ಲ ಹಿರಿಯಣ್ಣ... ನಾಯಿ ಮರಿಯ ಹಿರಿಯಣ್ಣ ನರೇಂದ್ರ ಮೋದಿ ಅವರೇ...!!
- ಅಜಂಖಾನ್, ಎಸ್ಪಿ ಮುಖಂಡ
ಜೆಡಿಎಸ್ ಅಧಿಕಾರಕ್ಕೆ ಬಾರದೆ ಇದ್ದರೆ ನಾನು ವಿಷ ತೆಗೆದುಕೊಂಡು ಸಾಯುತ್ತೇನೆ ಎಂದಿದ್ದರು. ಅವರ ಈ ಹೇಳಿಕೆ ಪ್ರತಿ ನನ್ನ ಬಳಿ ಈಗಲೂ ಇದೆ. ಅವರು ಯಾವಾಗ ವಿಷ ತೆಗೆದುಕೊಳ್ಳುತ್ತಾರೆ ಎಂದು ನಾನು ಕಾಯುತ್ತಿದ್ದೇನೆ.
- ಜಿ. ಪರಮೇಶ್ವರ,
ಕೆಪಿಸಿಸಿ ಅಧ್ಯಕ್ಷ
ದೇವೇಗೌಡನನ್ನು ಬೈಯ್ಯಲೇಬೇಕು, ಹೀಯಾಳಿಸಿ ಮಾತನಾಡಲೇಬೇಕು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪರಮೇಶ್ವರ್ ಅವರನ್ನು ನೇಮಿಸಿದ್ದರೆ ಅವರು ಹೀಗೆಲ್ಲ ಮಾತನಾಡಿ ತೃಪ್ತಿಪಟ್ಟುಕೊಳ್ಳಲಿ.
- ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ಕೋರ್ಟ್ ತೀರ್ಪು ಏನೇ ಇರಲಿ ಮೋದಿ ಒಬ್ಬ ನರಹಂತಕ. ಗೋದ್ರಾ ದುರ್ಘಟನೆಯಲ್ಲಿ ಮಡಿದವರೇ ಇದಕ್ಕೆ ಸಾಕ್ಷಿ. ಅವರು ಪ್ರಧಾನಿಯಾದರೆ ರಕ್ತಪಾತ ನಿಶ್ಚಿತ. ನಾನು ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೇನೆ.
-ಸಿದ್ದರಾಮಯ್ಯಮುಖ್ಯಮಂತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


