ನಷ್ಟದ ಅಂಗಡಿಗಳಿಗೆ ಬೀಗ 'ನ್ಯಾಯ'

ಬೆಂಗಳೂರು: ನಷ್ಟಕ್ಕೆ ತುತ್ತಾಗಿರುವ ನ್ಯಾಯ ಬೆಲೆ ಅಂಗಡಿಗಳಿಗೆ ಇನ್ನು ಕುತ್ತು ಬರಲಿದೆ. ಅಷ್ಟೇ ಏಕೆ? ಲಾಭವಿಲ್ಲದ ಸೀಮೆಎಣ್ಣೆ ಅಂಗಡಿಗಳೂ ಅಳಿದು ಹೋಗಲಿವೆ.
ಏಕೆಂದರೆ ರಾಜ್ಯದಲ್ಲಿ ಕಡಿಮೆ ಆದಾಯ ಗಳಿಸುತ್ತಿರುವ ನ್ಯಾಯ ಬೆಲೆ ಅಂಗಡಿಗಳಿಗೆ ಬೀಗ ಜಡಿಯಲು ಆಹಾರ ಇಲಾಖೆ ಮುಂದಾಗಿದೆ. ಇದರೊಂದಿಗೆ ವಂಶಪಾರಂಪರ್ಯವಾಗಿ ಮುಂದುವರಿಯುತ್ತಿರುವ ಸೀಮೆಎಣ್ಣೆ ಅಂಗಡಿಗಳನ್ನೂ ಬಂದ್ ಮಾಡಲು ತೀರ್ಮಾನಿಸಲಾಗಿದೆ.
ಅನೇಕ ನ್ಯಾಯ ಬೆಲೆ ಅಂಗಡಿಗಳು ನಷ್ಟದಲ್ಲಿದ್ದರೂ ವಾಮ ಮಾರ್ಗಗಳ ಮೂಲಕ ಲಾಭ ಗಳಿಸಿ ಮುನ್ನಡೆಯುತ್ತಿವೆ. ಅಷ್ಟೇ ಅಲ್ಲ. ಅವು ರಾಜಕೀಯ ಪ್ರಭಾವಿತ ಪಡಿತರ ಮಾರಾಟ ಕೇಂದ್ರಗಳೂ ಆಗಿವೆ. ಇಂಥ ಅಂಗಡಿಗಳಿಂದ ಸರ್ಕಾರಕ್ಕೂ ಕಷ್ಟ, ಪಡಿತರದಾರರಿಗೂ ನಷ್ಟ ಎಂಬ ಕಾರಣಕ್ಕೆ ಇಲಾಖೆ ಅವುಗಳನ್ನು ಬಂದ್ ಮಾಡುತ್ತಿದೆ.
ಸದ್ಯ ರಾಜ್ಯದಲ್ಲಿರುವ 22,980 ಅಂಗಡಿಗಳ ಪೈಕಿ 5000ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳನ್ನು ನಷ್ಟದಲ್ಲಿದ್ದು ಅವುಗಳನ್ನು ಹಂತಹಂತವಾಗಿ ಬಂದ್ ಮಾಡುವಂತೆ ಇಲಾಖೆ ಆದೇಶ ಹೊರಡಿಸಿದೆ. ಹಾಗೆಯೇ ಕೇವಲ ಕೆಲವೇ ಕುಟುಂಬಕ್ಕೆ ಸೀಮಿತವಾಗಿರುವ ಮತ್ತು ನಿಯಮ ಮೀರಿ ಪರವಾನಗಿ ಪಡೆದಿರುವ 5000ಕ್ಕೂ ಹೆಚ್ಚು ಸೀಮೆ ಎಣ್ಣೆ ಅಂಗಡಿಗಳಿಗೆ ಗತಿ ಕಾಣಿಸಲಾಗುತ್ತಿದೆ.
ನ್ಯಾಯವೂ ಇಲ್ಲ, ಲಾಭವೂ ಇಲ್ಲ: ನ್ಯಾಯಬೆಲೆ ಅಂಗಡಿಗಳು ಒಂದು ಕ್ವಿಂಟಲ್ ಧಾನ್ಯ ಮಾರಾಟ ಮಾಡಿದರೆ ಅವುಗಳಿಗೆ ಇಲಾಖೆ 36 ನೀಡುತ್ತದೆ. ಜತೆಗೆ ಚೀಲದ ಹಣ 4 ಸಿಗುತ್ತದೆ. ಹೀಗಾಗಿ ಒಂದು ಅಂಗಡಿ ಲಾಭದಾಯಕವಾಗಿ ಮುನ್ನಡೆಯಬೇಕಾದರೆ ಕನಿಷ್ಠ 500 ಪಡಿತರದಾರರನ್ನು ಹೊಂದಿರಬೇಕು.
ಆಗ ಒಬ್ಬ ಪಡಿತರದಾರನಿಗೆ ತಿಂಗಳಿಗೆ ಸರಾಸರಿ 28 ಕೆ.ಜಿ. ಧಾನ್ಯದಂತೆ 500 ಮಂದಿಗೆ 140 ಕ್ವಿಂಟಲ್ ವರೆಗೂ ಹಂಚಿಕೆ ಮಾಡಬಹುದು. ಆ ಮೂಲಕ ಅಂಗಡಿ ಮಾಲೀಕರು 5600 ವರೆಗೂ ಸಂಪಾದಿಸಿಬಹುದು. ಆದರೆ ರಾಜ್ಯದಲ್ಲಿರುವ 22,980 ನ್ಯಾಯಬೆಲೆ ಅಂಗಡಿಗಳ ಪೈಕಿ ಬಹುತೇಕ ಅಂಗಡಿಗಳು 500 ಮಂದಿ ಪಡಿತರದಾರರನ್ನು ಮುಟ್ಟುವುದೇ ಕಷ್ಟವಾಗಿದೆ.
ವಿಚಿತ್ರವೆಂದರೆ, ಸುಮಾರು 5000 ಅಂಗಡಿಗಳು ಕೇವಲ 100 ಪಡಿತರದಾರನ್ನು ಮಾತ್ರ ಹೊಂದಿವೆ. ಇವುಗಳ ಮಾಸಿಕ ಆದಾಯ 1500 ಕೂಡ ಇಲ್ಲ.
ಆದರೂ ಈ ಅಂಗಡಿಗಳು ಯಾವುದೇ ತೊಂದರೆ ಇಲ್ಲದಂತೆ ನಡೆಯುತ್ತಿವೆ. ಅವು ಎಲ್ಲಿಯೂ ತಮಗೆ ಎಲ್ಲಿಯೂ ನಷ್ಟವಾಗುತ್ತಿದೆ ಎಂದು ಹೇಳುತ್ತಿಲ್ಲ. ಏಕೆಂದರೆ, ಈ ಅಂಗಡಿಗಳು ಕೆಲವು ಕಾರ್ಡ್ಗಳನ್ನು ತಮ್ಮವರ ಹೆಸರಿನಲ್ಲೇ ಹೊಂದಿದ್ದು, ಅದಕ್ಕೆ ಬರುವ ಧಾನ್ಯಗಳನ್ನು ಮಾರಾಟ ಮಾಡಿಕೊಳ್ಳುತ್ತಿವೆ.
ಇದರಲ್ಲೂ ತೂಕ ಮತ್ತು ಇತರ ರೀತಿಯ ಅಕ್ರಮಗಳನ್ನೂ ನಡೆಸುವ ಮೂಲಕ ಲಾಭದಲ್ಲೇ ಮುನ್ನಡೆಯುತ್ತಿವೆ. ಹಾಗೆಂದು ಅಂಗಡಿ ಮಾಲೀಕರ ಅಕ್ರಮಗಳನ್ನು ಪತ್ತೆ ಮಾಡುತ್ತಾ, ಕೇಸು ದಾಖಲಿಸುವುದಕ್ಕಿಂತ ನಷ್ಟದಲ್ಲಿರುವ ಅಂಗಡಿಗಳನ್ನು ಮುಚ್ಚಿದರೆ ಸಮಸ್ಯೆ ಪರಿಹಾರವಾಗುತ್ತದೆ. ಅಕ್ರಮವೂ ಕಡಿಮೆಯಾಗಿ ಇಲಾಖೆಗೆ ಆಗುತ್ತಿರುವ ನಷ್ಟ ತಪ್ಪುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸೀಮೆ ಎಣ್ಣೆ ರಾಜಕೀಯ
ಸೀಮೆಎಣ್ಣೆ ವಿತರಣಾ ವ್ಯವಸ್ಥೆ ರಾಜ್ಯದಲ್ಲಿ ಕುಟುಂಬ ರಾಜಕಾರಣಕ್ಕೆ ಸಿಲುಕಿದ್ದು, ಅದರಿಂದ ಅವು ಹೊರಬರಲಾಗದೆ ಒದ್ದಾಡುತ್ತಿದೆ. ರಾಜ್ಯದಲ್ಲಿ 16,540 ಸೀಮೆಎಣ್ಣೆ ಅಂಗಡಿಗಳಿದ್ದು ಅವುಗಳಲ್ಲಿ 5000 ಅಂಗಡಿಗಳು ವಂಶಪಾರಂಪರ್ಯ ಹಾಗೂ ರಾಜಕೀಯ ಪ್ರಭಾವಿಗಳ ಹಿಡಿತದಲ್ಲಿದೆ. ಸಾರ್ವಜನಿಕ ಪಡಿತರ ವಿತರಣಾ ಕಾಯ್ದೆ ಪ್ರಕಾರ 1992ರಲ್ಲಿ ಹೊರಡಿಸಿದ ಆದೇಶದಲ್ಲಿ ಸೀಮೆಎಣ್ಣೆ ಪರವಾನಗಿ ಪಡೆದವರು ಮೃತರಾದರೆ ಆ ಪರವಾನಗಿಯನ್ನು ಅರ್ಹರಿಗೆ ನೀಡಬೇಕು. ಒಂದು ವೇಳೆ ಪರವಾನಗಿ ಹೊಂದಿದ್ದವರು 60ನೇ ವಯಸ್ಸಿಗೂ ಮುನ್ನ ತೀರಿಕೊಂಡರೆ, ನಂತರ ಮೃತ ವ್ಯಕ್ತಿಯ ಅವಲಂಬಿತರಿಗೆ 'ಬೇಕಿದ್ದರೆ' ಅನುಕಂಪದ ಆಧಾರದಲ್ಲಿ ನೀಡಬಹುದು. ಆದರೆ ಮೃತರ ಕುಟುಂಬಕ್ಕೆ ನೀಡಲೇಬೇಕು ಎನ್ನುವಂತೆ ಅಲಿಖಿತ ನಿಮಯ ಮಾಡಿಕೊಂಡು ಇಲಾಖೆ ಅಧಿಕಾರಿಗಳು ಅದೇ ಕುಟುಂಬದವರಿಗೆ ನೀಡುತ್ತಿದ್ದಾರೆ. ಇಷ್ಟು ಎಷ್ಟರ ಮಟ್ಟಿಗೆ ಹೋಗಿದೆ ಎಂದರೆ ಪರವಾನಗಿ ಹೊಂದಿದ್ದವರು 60ನೇ ವಯಸ್ಸಿನ ನಂತರ ಮೃತರಾದರೂ ಅದೇ ಕುಟುಂಬಕ್ಕೆ ಪರವಾನಗಿ ಹೋಗುತ್ತಿದೆ. ಹೀಗಾಗಿ ಅನೇಕ ಕಡೆ ಸಿಮೆಎಣ್ಣೆ ಅಂಗಡಿಗಳು ಮೂರು ತಲೆಮಾರು ಕಳೆದರೂ ಒಂದೇ ಮನೆಯ ಹಿಡಿತದಲ್ಲೇ ಇದೆ. ಎಷ್ಟೋ ಕಡೆ ಗ್ರಾಮಪಂಚಾಯಿತಿ ಅಥವಾ ತಾಲೂಕು ಪಂಚಾತಿ ಸದಸ್ಯರಾದವರೇ ನ್ಯಾಯಬೆಲೆ ಅಂಗಡಿ ಮತ್ತು ಸೀಮೆಎಣ್ಣೆ ಪರವಾನಗಿ ಪಡೆದು ಇನ್ನೂ ಮುಂದುವರಿಯುತ್ತಿವೆ.
ಸದ್ಯ ನಷ್ಟದಲ್ಲಿರುವ ನ್ಯಾಯ ಬೆಲೆ ಅಂಗಡಿಗಳನ್ನು ಹಂತಹಂತವಾಗಿ ಮುಚ್ಚಿ ಅಲ್ಲಿರುವ ಪಡಿತರದಾರರನ್ನು ಪಕ್ಕದ ಅಂಗಡಿಯಲ್ಲಿ ಖರೀದಿಸುವಂತೆ ಮಾಡುತ್ತಿದ್ದೇವೆ. ನಂತರ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಿ ಪಡಿತರ ಆಹಾರ ಪದಾರ್ಥ ಪಾರದರ್ಶಕವಾಗಿ ಹಂಚಿಕೆಯಾಗುವಂತೆ ಮಾಡುತ್ತೇವೆ.
-ಹರ್ಷಗುಪ್ತಾ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತ
ಶಿವಕುಮಾರ್ ಬೆಳ್ಳಿತಟ್ಟೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


