ಪೊಲಿಎಕಾನಾಮಿಕ್ಸ್

ಚುನಾವಣೆ ದಿನ ಸಮೀಪಿಸುತ್ತಿದೆ. ದೇಶದ ಮುಂದಿನ ಐದು ವರ್ಷಗಳ ಭವಿಷ್ಯ ಬರೆಯುವ ದಿನ ಹತ್ತಿರ ಬಂದಿದೆ. ಆದರೆ, ಈ ಬಾರಿಯೂ ನಾವು ಜಾತಿ, ಧರ್ಮ, ಬಣ್ಣದ ಮಾತುಗಳಿಗೆ ಮರುಳಾಗಬೇಕೇ? ಹೊಸ ಸರ್ಕಾರ ಮತದಾರರ ಮೇಲೆ ಹೇಗೆ ಪರಿಣಾಮ ಬೀರಲಿದೆ? ಈ ಪ್ರಶ್ನೆಗಳಿಗೆ ಉತ್ತರ ನೀಡುವ ಸಣ್ಣದೊಂದು ಪ್ರಯತ್ನ ಇಲ್ಲಿದೆ.
ಪರಿಣಾಮ ಹೇಗೆ?
ಸಂಸತ್ತಿನಲ್ಲಿ ಹಣಕಾಸು ಸಚಿವರು ಮಂಡಿಸಿದ ಬಜೆಟ್ ಪ್ರಕಾರ ಸರ್ಕಾರ 2014- 15ನೇ ಸಾಲಿನಲ್ಲಿ 17,63,000 ಕೋಟಿ ವೆಚ್ಚ ಮಾಡಲಿದೆ. ಬಹುತೇಕರಿಗೆ ಇಷ್ಟೊಂದು ದೊಡ್ಡ ಮೊತ್ತದ ಹಣ ಹೇಗೆ ವಿನಿಯೋಗವಾಗುತ್ತದೆ ಎನ್ನುವ ಕಲ್ಪನೆಯೇ ಇಲ್ಲ. ಇಷ್ಟು ದೊಡ್ಡ ಪ್ರಮಾಣದ ಹಣದಲ್ಲಿ ಪ್ರತಿ ವ್ಯಕ್ತಿಗೆ ಪ್ರತಿ ವರ್ಷ 14,500 ವೆಚ್ಚ ಮಾಡಲಾಗುತ್ತದೆ. ಅಂದರೆ ಪ್ರತಿ ಕುಟುಂಬಕ್ಕೆ ವರ್ಷವೊಂದಕ್ಕೆ 75 ಸಾವಿರ. ಒಂದು ವೇಳೆ ಸರ್ಕಾರ ಐದು ವರ್ಷ ಕಾಲ ಅಧಿಕಾರದಲ್ಲಿದ್ದರೆ ಪ್ರತಿ ಕುಟುಂಬಕ್ಕೆ ಐದು ವರ್ಷಗಳಲ್ಲಿ 3.75 ಲಕ್ಷದಷ್ಟು ವೆಚ್ಚ ಮಾಡಿದಂತಾಗುತ್ತದೆ. ಇಷ್ಟು ಹಣ ನಮ್ಮ ಬದುಕು ಬದಲಾಯಿಸಲು ಸಾಕು.
ಯಾರ ಹಣ? ಎಲ್ಲಿಗೆ ಹೋಗುತ್ತದೆ?
ಸರ್ಕಾರ ವೆಚ್ಚ ಮಾಡುವುದು ನಾವೇ ತೆರಿಗೆ ಮೂಲಕ ಪಾವತಿಸಿದ ಹಣ. ತೀರಾ ಬಡವ್ಯಕ್ತಿ ಮತ್ತು ಓದುತ್ತಿರುವ ವಿದ್ಯಾರ್ಥಿ ಕೂಡ ಬಟ್ಟೆ, ಮೊಬೈಲ್, ಸಾಬೂನ್, ಪೇಸ್ಟ್ ಮತ್ತಿತರ ವಸ್ತುಗಳನ್ನು ಕೊಳ್ಳುವಾಗ ತೆರಿಗೆ ಪಾವತಿಸುತ್ತಾನೆ. ಜನಸಾಮಾನ್ಯರು ಸೇವಾ ತೆರಿಗೆ ಮತ್ತು ವ್ಯಾಟ್ ಪಾವತಿಸುತ್ತಾರೆ. ಉಳ್ಳವರು ಆದಾಯ ತೆರಿಗೆ ಪಾವತಿಸುತ್ತಾರೆ, ಕಂಪನಿಗಳು ಕಾರ್ಪೊರೇಟ್, ಅಬಕಾರಿ ಮತ್ತಿತರ ತೆರಿಗೆ ಪಾವತಿಸುತ್ತವೆ. ಒಟ್ಟಾರೆ ನಮ್ಮ ಹಣದಿಂದಲೇ ಸರ್ಕಾರ ನಡೆಯುತ್ತದೆ. ಸರಳವಾಗಿ ಹೇಳಬೇಕಾದರೆ ಸರ್ಕಾರದ ಹಣ ಜನರ ಹಣ. ಚುನಾವಣೆ ವೇಳೆ ಈ ಹಣದ ಮೇಲೆ ಆಡಳಿತಾರೂಢ ಪಕ್ಷ ಹಾಗೂ ಅದರ ಮಿತ್ರಪಕ್ಷಗಳ ನಿಯಂತ್ರಣಕ್ಕೆ ಹೋಗುತ್ತದೆ. ನಂಬಿಕೆ ಇಲ್ಲದ ವ್ಯಕ್ತಿಯ ಕೈಗೆ 100 ನೀಡಲೂ ಹಿಂದೆ ಮುಂದೆ ಯೋಚಿಸುವ ನಾವು ಲಕ್ಷಾಂತರ ಕೋಟಿ ರುಪಾಯಿಯನ್ನು ಸುಖಾ ಸುಮ್ಮನೆ ಯಾರದ್ದೋ ಕೈಗೆ ಕಣ್ಣು ಮುಚ್ಚಿ ಒಪ್ಪಿಸಬಹುದೇ? ಈ ಕುರಿತು ಯೋಚಿಸುವುದು ಒಳಿತಲ್ಲವೆ?
ತೆರಿಗೆ ಹಣದಿಂದ ಏನಾಗಬೇಕು?
ಫೆಬ್ರವರಿ 2014ರಂದು ಎಡಿಆರ್ ದೇಶಾದ್ಯಂತ ಸರ್ವೆ ನಡೆಸಿತ್ತು. ಇದರ ಫಲಿತಾಂಶವೇನೆಂದರೆ ಬಹುತೇಕರು ಉದ್ಯೋಗ, ಮೂಲ ಅಗತ್ಯಗಳಾದ ಶುದ್ಧ ಕುಡಿವ ನೀರು, ಶಿಕ್ಷಣ, ಆರೋಗ್ಯ, ಮೂಲಸೌಕರ್ಯಗಳಾದ ರಸ್ತೆ, ಸಾರ್ವಜನಿಕ ಸಾರಿಗೆ ಮತ್ತು ಕಾನೂನು ಸುವ್ಯವಸ್ಥೆ, ಮಹಿಳೆಯರಿಗೆ ಭದ್ರತೆ ಕಲ್ಪಿಸಬೇಕೆಂದು ಬಯಸುತ್ತಾರೆ.
ಬಡ್ಡಿ ಪಾವತಿಸಲು ವೆಚ್ಚ
ಸರ್ಕಾರ ತಾನು ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡುತ್ತದೆ. ಹಾಗಾಗಿ ಪ್ರತಿ ವರ್ಷ ಹೆಚ್ಚೆಚ್ಚು ಹಣ ಸಾಲವಾಗಿ ಪಡೆಯುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಹಣದಲ್ಲಿ ದೊಡ್ಡ ಪಾಲು(ಶೇ.36.6) ಸಾಲದ ಮೇಲಿನ ಬಡ್ಡಿದರ ಪಾವತಿಸಲು ಹೋಗುತ್ತದೆ. ಇದರ ಜತೆಗೆ ಸರ್ಕಾರಿ ನೌಕರರ ಪಿಂಚಣಿ, ವೇತನಕ್ಕೂ ದೊಡ್ಡ ಮೊತ್ತ ತೆಗೆದಿಡಲಾಗುತ್ತದೆ. ಜನರ ಅಗತ್ಯಗಳಿಗೆ ಬಳಕೆ ಯಾಗುವ ಹಣದ ಪ್ರಮಾಣ ಸಣ್ಣದು.
ಯಾಕೆ ತಲೆಕೆಡಿಸಿಕೊಳ್ಳಬೇಕು?
ದೇಶ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುವಂತೆ ನೋಡಿಕೊಳ್ಳಲು ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ಸಿಗುವ ಅವಕಾಶ ಇದೊಂದೆ. ನಾವು ಮತ ಚಲಾಯಿಸಬೇಕು. ಸಂಸತ್ತಿಗೆ ಯೋಗ್ಯ ವ್ಯಕ್ತಿಗಳನ್ನು ಆರಿಸಿ ಕಳುಹಿಸಬೇಕು.
ಯಾರಿಗೆ ಮತ ಚಲಾಯಿಸಬೇಕು?
ಮೊದಲು ನಾವು ಒಂದಷ್ಟು ಶಾಂತ ರೀತಿಯಲ್ಲಿ ಯೋಚಿಸಬೇಕು. ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ನಮ್ಮ ಮತ ಪಡೆಯಲು ನಾನಾ ತಂತ್ರ, ಕಸರತ್ತು ನಡೆಸುತ್ತವೆ. ಅದಕ್ಕಾಗಿ ಅವು ಕ್ಯಾಂಪೇನ್ ಮ್ಯಾನೇಜರ್ಗಳು, ಸಂವಹನ ತಜ್ಞರನ್ನು ನೇಮಿಸುತ್ತವೆ. ಎಲ್ಲ ರೀತಿಯ ಭರವಸೆ ನೀಡುತ್ತವೆ, ಜಾತಿ, ಧರ್ಮದ ವಿಚಾರವನ್ನು ಎತ್ತುತ್ತವೆ, ಬಣ್ಣದ ಭರವಸೆ ನೀಡುತ್ತವೆ, ಆಕಾಶಕ್ಕೆ ಏಣಿ ಹತ್ತಿಸುತ್ತವೆ. ಪ್ರತಿಸ್ಪರ್ಧಿಗಳ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತವೆ. ಪಕ್ಷದ ಪರ ಪ್ರಚಾರಕ್ಕಾಗಿ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತವೆ. ಈ ಹಣ ಎಲ್ಲಿಂದ ಬರುತ್ತದೆ? ಹೆಚ್ಚು ಹಣ ವೆಚ್ಚ ಮಾಡುವ ವ್ಯಕ್ತಿ ಜನರಿಗಾಗಿ ಕೆಲಸ ಮಾಡಬಲ್ಲನೇ? ಅಥವಾ ಈ ಹಣ ನೀಡಿದ ವ್ಯಕ್ತಿ ಅಥವಾ ಕಂಪನಿ ಪರವಾಗಿ ಕೆಲಸ ಮಾಡುವರೇ? ಈ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಬೇಕು.
ಈ ಪ್ರಶ್ನೆ ಕೇಳಿಕೊಳ್ಳಿ
ನನ್ನ ಹಣ ಈ ಅಭ್ಯರ್ಥಿ ಕೈಯಲ್ಲಿ ಸುರಕ್ಷಿತವಾಗಿರಬಲ್ಲುದೇ?
ಆತ ಅಥವಾ ಆಕೆಗೆ ನಾವು ಬಯಸಿದ ಫಲಿತಾಂಶ ನೀಡುವ ಸಾಮರ್ಥ್ಯ ಇದೆಯೇ?
ಅಭ್ಯರ್ಥಿ ಪ್ರಾಮಾಣಿಕವಾಗಿ ಮಾತನಾಡುತ್ತಿದ್ದಾನೆಯೇ? ಅಥವಾ ಅಧಿಕಾರ ದಾಹಿಯೇ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


