ಸೈಬರ್ ಅಪರಾಧ: ಇನ್ನು ರಾಜ್ಯದಲ್ಲೇ ಲ್ಯಾಬ್

ಬೆಂಗಳೂರು: ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಕುರುಹುಗಳನ್ನು ಹಿಡಿದು ಅವುಗಳ ಪರೀಕ್ಷೆಗಾಗಿ ಹೊರರಾಜ್ಯಗಳ ಪ್ರಯೋಗಾಲಯಕ್ಕೆ ರಾಜ್ಯದ ಪೊಲೀಸರ ಅಲೆದಾಟ ಇನ್ನು ತಪ್ಪಲಿದೆ.
ಅಷ್ಟೇ ಅಲ್ಲ ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಸಾಕ್ಷಿಗಳು ತಿಂಗಳುಗಟ್ಟಲೆ ಲ್ಯಾಬ್ನಲ್ಲಿ ಕೊಳೆಯುವುದು ಹಾಗೂ ಪ್ರಕರಣಗಳ ವಿಲೇವಾರಿ ತಡ ಆಗುವುದು ಕೂಡ ತಪ್ಪಲಿದೆ. ರಾಜ್ಯದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅಪರಾಧ ಪ್ರಕರಣಗಳ ತನಿಖೆ ಕುಂಟುತ್ತಾ ಸಾಗುತ್ತಿರುವುದರಿಂದ ಪೊಲೀಸರಿಗೆ ತೊಂದರೆಯಾಗುತ್ತಿದೆ. ಈ ತೊಂದರೆ ನಿವಾರಿಸಲೆಂದೇ ರಾಜ್ಯದಲ್ಲಿ ನೂತನ 'ಸೈಬರ್ ಲ್ಯಾಬ್' ಆರಂಭವಾಗುತ್ತಿದೆ.
ಈ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ಉಸ್ತುವಾರಿ ವಹಿಸಿಕೊಂಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದು, ಅದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಲ್ಯಾಬ್ನ ಸಿದ್ಧತೆಗೆ ಅಗತ್ಯ ಕೆಲಸಗಳು ನಡೆಯುತ್ತಿವೆ. ಇನ್ನು ಕೆಲವೇ ತಿಂಗಳುಗಳಲ್ಲಿ ಈ ಸೈಬರ್ ಲ್ಯಾಬ್ ಆರಂಭವಾಗಲಿದೆ. ಇದರಿಂದ ರಾಜ್ಯದ ಪೊಲೀಸರಿಗೆ ಸಾಕಷ್ಟು ಅನುಕೂಲವಾಗಲಿದೆ ಎನ್ನುತ್ತಾರೆ ಅವರು.
ಕೋಟಿ ವೆಚ್ಚದಲ್ಲಿ: ಒಂದು ಕೋಟಿ ವೆಚ್ಚದಲ್ಲಿ ಈ ಪರೀಕ್ಷಾಲಯ(ಲ್ಯಾಬ್)ವನ್ನು ಆರಂಭಿಸಲಾಗುತ್ತಿದ್ದು, 20 ಸಿಬ್ಬಂದಿ ಪ್ರತ್ಯೇಕವಾಗಿ ನೇಮಿಸಲು ಪತ್ರ ಬರೆಯಲಾಗಿದೆ. ಸಿಬ್ಬಂದಿ ನೇಮಕವಾಗುವವರೆಗೂ ಇರುವ ಸಿಬ್ಬಂದಿಯೇ ಸೈಬರ್ ಲ್ಯಾಬ್ನಲ್ಲಿ ಕೆಲಸ ಮಾಡಲಿದ್ದಾರೆ. ಅದಕ್ಕೂ ಮುನ್ನ ಅವರಿಗೆ ತರಬೇತಿ ನೀಡಲಾಗುತ್ತದೆ.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಸೈಬರ್ ಅಪರಾಧ ಪ್ರಕರಣಗಳ ಸಾಕ್ಷಿ, ಕುರುಹುಗಳು ಇಲ್ಲಿಯೇ ಪರೀಕ್ಷೆಗೊಳಪಡಲಿವೆ. ಇದರಿಂದ ಆರೋಪಿಗಳ ಪತ್ತೆ ಸುಲಭವಾಗಲಿದ್ದು, ಪ್ರಕರಣಗಳು ಬೇಗ ಇತ್ಯರ್ಥವಾಗುವ ನಿರೀಕ್ಷೆ ಹೊಂದಲಾಗಿದೆ.
ಸದ್ಯ ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ಎಷ್ಟು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಕಾರಣ, ಈಗ ಸಾಕಷ್ಟು ಪ್ರಕರಣಗಳು ಸ್ಥಳೀಯ ಪೊಲೀಸ್ ಠಾಣೆಗಳಲ್ಲೇ ದಾಖಲಾಗುತ್ತವೆ. ಪೊಲೀಸರು ಪ್ರತ್ಯೇಕವಾಗಿ ಅಂದರೆ, ವಿಧಿವಿಜ್ಞಾನ ಪ್ರಯೋಗಾಲಯದ ಗಮನಕ್ಕೆ ಬಾರದೆ ಖುದ್ದಾಗಿ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಹೋಗುತ್ತಾರೆ. ಹಾಗಾಗಿ ಸೈಬರ್ ಅಪರಾಧಗಳ ನಿಖರ ಮಾಹಿತಿ ಇಲ್ಲ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.
ಐಟಿ ಕಾಯ್ದೆ: ಐಟಿ ಕಾಯ್ದೆಯಲ್ಲಿ ಬರುವ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದ ಕುರುಹುಗಳನ್ನು ಈ ಲ್ಯಾಬ್ನಲ್ಲಿ ಪರೀಕ್ಷೆಗೊಳಪಡಿಸಬಹುದು. ಅಂತರ್ಜಾಲ ಸಂಬಂಧ ಅಪರಾಧ, ಮೊಬೈಲ್, ಮೊಬೈಲ್ ಸಿಮ್ ಹ್ಯಾಕ್, ಹಾರ್ಡ್ ಡಿಸ್ಕ್, ಸಿಡಿಯಲ್ಲಿನ ಮಾಹಿತಿ ಕದಿಯುವುದು ಸೇರಿದಂತೆ ಸೈಬರ್ ಅಪರಾಧ ಪ್ರಕರಣ ಹೊರತುಪಡಿಸಿ ಅಗತ್ಯಬಿದ್ದಲ್ಲಿ ಸಾಮಾನ್ಯ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಮಾಡಬಹುದು ಎನ್ನುತ್ತಾರೆ ದಯಾನಂದ್.
ಸಿ-ಡಾಕ್ ತರಬೇತಿ
ಸಿ- ಡಾಕ್ ಎಂಬ ಸಂಸ್ಥೆಯಿಂದ ವಿಧಿವಿಜ್ಞಾನ ಪ್ರಯೋಗಾಲಯ ಸಿಬ್ಬಂದಿಗೆ ಸೈಬರ್ ಅಪರಾಧ ಪ್ರಕರಣಗಳ ಸಾಕ್ಷಿ, ಕುರುಹುಗಳನ್ನು ಪರೀಕ್ಷಿಸುವ ಬಗ್ಗೆ ತರಬೇತಿ ಕೊಡಲಾಗುತ್ತದೆ. ಸದ್ಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿರುವ ಒಬ್ಬ ಸಿಬ್ಬಂದಿಗೆ ಈ ಬಗ್ಗೆ ತರಬೇತಿ ನೀಡಲಾಗಿದ್ದು, ತುರ್ತು ಅಗತ್ಯಬಿದ್ದಲ್ಲಿ ಸಿಐಡಿಯಲ್ಲಿರುವ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಆದರೆ, ಸಿಐಡಿಯಲ್ಲಿರುವ ಈ ಪ್ರಯೋಗಾಲಯವನ್ನು ಅಲ್ಲಿಗೆ ಬರುವ ಸೈಬರ್ ಅಪರಾಧಗಳ ಪತ್ತೆಗೆ ಮಾತ್ರ ಉಪಯೋಗಿಸಲಾಗುತ್ತದೆ. ಹಾಗಾಗಿ ಅಲ್ಲಿ ನೀಡುವ ಸರ್ಟಿಫಿಕೇಟ್(ಅರ್ಜಿಗೆ)ಗೆ ಮಹತ್ವ ಇರುವುದಿಲ್ಲ. ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲೇ ಪರೀಕ್ಷೆ ಮಾಡಿಸಬೇಕು. ಆದ್ದರಿಂದ ಎಫ್ಎಸ್ಎಲ್ನಲ್ಲಿ ಪ್ರತ್ಯೇಕ ಸೈಬರ್ ಲ್ಯಾಬ್ ತೆರೆಯಲಾಗುತ್ತಿದೆ ಎನ್ನುತ್ತಾರೆ ಎಫ್ಎಸ್ಎಲ್ ಅಧಿಕಾರಿಗಳು.
ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಅಪರಾಧ ನಡೆದ ಸ್ಥಳದಲ್ಲಿ ಪತ್ತೆಯಾಗುವ ಸುಳಿವುಗಳನ್ನು ಪರೀಕ್ಷೆ ಮಾಡಿಸಲು ರಾಜ್ಯದ ಪೊಲೀಸರು ಹೊರರಾಜ್ಯಗಳಿಗೆ ಹೋಗುತ್ತಿದ್ದರು. ಬೆಂಗಳೂರಿನಲ್ಲೇ ಸೈಬಲ್ ಲ್ಯಾಬ್ ಆಗುವುದರಿಂದ ಇನ್ನು ಪೊಲೀಸ್ ಸಿಬ್ಬಂದಿ ಬೇರೆ ರಾಜ್ಯಗಳಿಗೆ ಹೋಗುವಂತಿಲ್ಲ.
ಟಿ ಬಿ.ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತ, ಸಂಚಾರ ಮತ್ತು ಭದ್ರತೆ
ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


