ಪ್ರಧಾನ ಸುದ್ದಿ

ಗಣಿ ಕಳಂಕದವರಿಂದ ಗಿಣಿ ಪಾಠ!

ಗಣಿ ಕಳಂಕದವರಿಂದ ಗಿಣಿ ಪಾಠ!
Published On :

ಜೈಲಿಗೆ ಹೋದವರ ಪಕ್ಕದಲ್ಲಿಟ್ಟುಕೊಂಡು ಭ್ರಷ್ಟಾಚಾರ ವಿರುದ್ಧ ಮಾತು
ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಐಸಿಸಿ ಉಪಾಧ್ಯಕ್ಷ ರಾಹುಲ್


ಬಳ್ಳಾರಿ/ಮಂಗಳೂರು: ಭ್ರಷ್ಟಾಚಾರ ಮಾಡಿದವರನ್ನು ಪಕ್ಕದಲ್ಲಿ ಕೂಡಿಸಿಕೊಂಡು ನರೇಂದ್ರ ಮೋದಿ ಭ್ರಷ್ಟಾಚಾರ ತಡೆಗಟ್ಟುವ ಬಗ್ಗೆ ಮಾತನಾಡುತ್ತಾರೆ. ಭ್ರಷ್ಟಾಚಾರ ಬಗ್ಗೆ ಮಾತನಾಡುವ ಬಿಜೆಪಿ ನಾಯಕರಿಗೆ ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್ಗಡದಲ್ಲಿ ಭ್ರಷ್ಟಾಚಾರ ಕಾಣುತ್ತಿಲ್ಲವೇ? ಇದರ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಶುಕ್ರವಾರ ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ 5 ವರ್ಷ ಬಿಜೆಪಿ ಏನು ಮಾಡಿದೆ? ಬಳ್ಳಾರಿಯಲ್ಲಿದ್ದ ಮಂತ್ರಿಗಳು ಗಣಿ ಕದ್ದಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. ಆಗ ರಾಜ್ಯದಲ್ಲಿ ಕರ್ನಾಟಕ ಸರ್ಕಾರವಿರಲಿಲ್ಲ, ಬಳ್ಳಾರಿ ಸರ್ಕಾರವಿತ್ತು. ಬಿಜೆಪಿಯಲ್ಲಿ ಅಧಿಕಾರ ಬಲದಿಂದ ಯಾವ ಪ್ರಮಾಣದಲ್ಲಿ ಲೂಟಿ ಮಾಡಿದ್ದಾರೆಂಬುದು ಎಲ್ಲರಿಗೂ ತಿಳಿದಿದೆ. ನೈಸರ್ಗಿಕ ಸಂಪತ್ತು ಜನರ ಸ್ವತ್ತಾಗಬೇಕು. ಆಗ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಅವರನ್ನೇ ಮತ್ತೆ ಬಿಜೆಪಿಗೆ ಬರಮಾಡಿಕೊಂಡಿದ್ದಾರೆ. ಗಣಿ ಅಕ್ರಮ ಆರೋಪದಿಂದ ಜೈಲು ಸೇರಿದ ಜನಾರ್ದನ ರೆಡ್ಡಿ ಯಾವುದೇ ಕಾರಣಕ್ಕೂ ಹೊರಗೆ ಬರುವುಲ್ಲ. ಬಳ್ಳಾರಿ ನನಗೆ ಹೊಸದಲ್ಲ. ನನ್ನ ತಾಯಿ ಇಲ್ಲಿ ಸ್ಪರ್ಧಿಸಿದ್ದರು ಎಂದರು.

ವಿಶ್ವಮಟ್ಟಕ್ಕೆ ಕೊಂಡೊಯ್ಯುತ್ತೇವೆ: ಬಳಿಕ ಮಂಗಳೂರಿಗೆ ಆಗಮಿಸಿದ ರಾಹುಲ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಮಾಹಿತಿ-ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಮೆರಿಕ, ಯುರೋಪ್ ದೇಶಗಳಲ್ಲಿ ಬೆಂಗಳೂರು ಮತ್ತು ಮಂಗಳೂರು ಪ್ರಸಿದ್ಧವಾಗುವಂತೆ ಮಾಡುತ್ತೇವೆ. ರಾಜ್ಯದಲ್ಲಿ ಬಂದ ಕಾಂಗ್ರೆಸ್ ಸರ್ಕಾರಗಳು ಬಡವರ, ದೀನ ದಲಿತರ ಕಲ್ಯಾಣ ಮಾಡಿದವು. ಬೆಂಗಳೂರಲ್ಲಿ ಶಿಕ್ಷಣ, ತಂತ್ರಜ್ಞಾನ ಬೆಳೆಯಿತು. ಎಲ್ಲ ರೀತಿಯಲ್ಲಿಯೂ ಕರ್ನಾಟಕ ಪ್ರಗತಿ ಆದ ಬಳಿಕ ಬಿಜೆಪಿ ಸರ್ಕಾರ ಬಂತು ಭ್ರಷ್ಟಾಚಾರದ ದಾಖಲೆ ಮಾಡಿತು. ಹಿಂದೂ ಧರ್ಮದ ರಕ್ಷಣೆ ಮಾಡುತ್ತೇವೆ ಎಂದು ಹೇಳಿಕೊಂಡು ಬಂದವರು, ಮೊದಲ ಬಾರಿ ರಾಜ್ಯದ ಮುಖ್ಯಮಂತ್ರಿ ಒಬ್ಬರು ಜೈಲ್ಗೆ ಹೋಗಿ ದಾಖಲೆ ಮಾಡಿದರು ಎಂದರು.
ನಾವು ಭಾರತೀಯರು ಪರಸ್ಪರ ಹೊಡೆದಾಡುವಂತೆ ಮಾಡುವುದಿಲ್ಲ. ಪ್ರೀತಿ, ಭಾತೃತ್ವದ ರಾಜಕಾರಣ ಮಾಡುತ್ತೇವೆ. ಪ್ರತಿಪಕ್ಷದವರದ್ದು ದ್ವೇಷದ ರಾಜಕಾರಣ. ಅವರು ದೇಶದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತರ ನಡುವೆ ರಾಜ್ಯ, ರಾಜ್ಯಗಳ ನಡುವೆ ಹೊಡೆದಾಟ ಮಾಡಿಸುತ್ತಾರೆ. ಮಹಿಳೆಯರ ಮೇಲೆ ಹಲ್ಲೆ ಮಾಡುತ್ತಾರೆ. ದ್ವೇಷ ರಾಜಕಾರಣ ಮಾಡುವವರನ್ನು ನಾವು ಸೋಲಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಹೆಚ್ಚಿನ ಜನರಿಗೆ ಶಕ್ತಿ ಅಧಿಕಾರ ನೀಡುವ ಸಿದ್ಧಾಂತ. ಆದರೆ ಬಿಜೆಪಿ ಒಬ್ಬನೇ ವ್ಯಕ್ತಿ ಭಾರತ ಆಡಳಿತ ನಡೆಸುವ ಸಿದ್ಧಾಂತಕ್ಕೆ ಜೋತು ಬಿದ್ದಿದೆ. ಇಡೀ ಭಾರತಕ್ಕೆ ಒಬ್ಬನೇ ಚೌಕಿದಾರ್ನನ್ನು ಮಾಡಿ ಭಾರತವನ್ನು ಮರೆಯುವ ಹವಣಿಕೆಯಲ್ಲಿದ್ದಾರೆ. ಹಿಂದೂಸ್ತಾನದಲ್ಲಿ ಕೋಟಿಗಟ್ಟಲೆ ಚೌಕಿದಾರ್ಗಳು ಇದ್ದಾರೆ. ಅವರಿಗೆ ಶಕ್ತಿ ನೀಡಿದರೆ ಅವರೇ ರಕ್ಷಣೆ ಮಾಡುತ್ತಾರೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.