ಬುಖಾರಿ ಬೊಬ್ಬೆಗೆ ಬೆಲೆ ಎಷ್ಟು?

ದೆಹಲಿಯ ಜಾಮಾ ಮಸೀದಿಯ 'ಶಾಹಿ ಇಮಾಮ್' ಸೈಯದ್ ಅಹಮದ್ ಬುಖಾರಿ "ಜಾತ್ಯತೀತತೆಯನ್ನು ಬಲಪಡಿಸುವ' ಸಲುವಾಗಿ ತಾವು ಕಾಂಗ್ರೆಸ್ಗೆ ಬೆಂಬಲ ನೀಡುವುದಾಗಿ ಘೋಷಿಸಿ, ಮುಸಲ್ಮಾನರಿಗೂ ಇದೇ ಹಾದಿಯಲ್ಲಿ ನಡೆಯಲು ಮತ್ತು ಸಮಾಜವಾದಿ ಪಕ್ಷವನ್ನು ಸೋಲಿಸಲು ಕರೆಕೊಟ್ಟಿದ್ದಾರೆ. ಅವರು ಸೋನಿಯಾ ಗಾಂಧಿಯವರೊಂದಿಗೆ ನಡೆಸಿದ ಮಾತುಕತೆಯ ನಂತರದ ವಿದ್ಯಮಾನವಿದು! ಆದರೆ ಅಹಮದ್ ಬುಖಾರಿಯ ಈ ನಡೆಯನ್ನು ಖಂಡಿಸಿರುವ ಅವರ ಸಹೋದರ ಯಾಹ್ಯಾ ಬುಖಾರಿ "ಮುಸಲ್ಮಾನರು ಇಮಾಮ್ ಬುಖಾರಿಯವರ ಮಾತು ಕೇಳುವುದಿಲ್ಲ. ಕಾಂಗ್ರೆಸ್ಸೇ ಅತಿದೊಡ್ಡ ಕೋಮುವಾದಿ ಪಕ್ಷ" ಎಂದಿದ್ದಾರೆ. ಅಣ್ಣ ತಮ್ಮಂದಿರ ಕಚ್ಚಾಟ ನೋಡಿ ಅಲ್ಲಿನ ಮುಸಲ್ಮಾನರು ಗೊಂದಲಕ್ಕೊಳಗಾಗಿರುವುದಂತೂ ಸುಳ್ಳಲ್ಲ. ಏಕೆಂದರೆ, ಅಹಮದ್ ಬುಖಾರಿ ಮತ್ತು ಅವರ ಸಹೋದರ ಯಾಹ್ಯಾ ಯಾವಾಗ ಯಾವ ಪಕ್ಷದತ್ತ ವಾಲುತ್ತಾರೋ, ಯಾರಿಗೆ ಬೆಂಬಲ ನೀಡಬೇಕೆಂದು ಹೇಳುತ್ತಾರೋ ಎನ್ನುವುದು ಯಾರಿಗೂ ಊಹೆ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ! ಇಷ್ಟೆಲ್ಲ ಸದ್ದು ಮಾಡುತ್ತಿರುವ ಇಮಾಮ್ ಅಹಮದ್ ಬುಖಾರಿ ಮತ್ತು ಯಾಹ್ಯಾ ಬುಖಾರಿ ಯಾರು ಎನ್ನುವುದನ್ನು ನೋಡಿದಾಗ ದೊಡ್ಡ ಕಥೆಯೇ ತೆರೆದುಕೊಳ್ಳುತ್ತದೆ.
ಇವರುಗಳ ತಂದೆ ಇಮಾಮ್ ಅಬ್ದುಲ್ಲಾ ಬುಖಾರಿಯೂ ಧಾರ್ಮಿಕ ಕೆಲಸಕ್ಕಿಂತ ರಾಜಕೀಯದಲ್ಲಿ ಕೈಯಾಡಿಸಿಯೇ ಹೆಸರಾದವರು! 1977ರಲ್ಲಿ ಅವರು ಯಾವಾಗ 'ಕಾಂಗ್ರೆಸ್ ಅನ್ನು ನಿರಾಕರಿಸಿ ಜನತಾ ಪಾರ್ಟಿಗೆ ಮತ ನೀಡಿ' ಎಂದು ಫತ್ವಾ ಹೊರಡಿಸಿದರೋ ಆಗಲೇ ಜಾಮಾ ಮಸೀದಿ ರಾಜಕೀಯ ಅಡ್ಡಾ ಆಗಿ ಬದಲಾಗಿಬಿಟ್ಟಿತು. "ಗಾಳಿ ಬಂದತ್ತ ವಾಲುವ ಗುಣವಿದ್ದ ಅಬ್ದುಲ್ಲಾ ಅವರು ತುರ್ತುಪರಿಸ್ಥಿತಿಯ ವೇಳೆ ಜನತೆ ಕಾಂಗ್ರೆಸ್ ವಿರುದ್ಧ ಆಕ್ರೋಶಗೊಂಡಿದ್ದಾರೆ ಎನ್ನುವುದು ತಿಳಿಯುತ್ತಲೇ, ಆ ಪಕ್ಷಕ್ಕೆ ಮತ ನೀಡಬೇಡಿ ಎಂದು ಫತ್ವಾ ಹೊರಡಿಸಿದರು. ತಾವು ಕಾಂಗ್ರೆಸ್ ಪರ ಮಾತನಾಡಿದರೆ ಮುಸಲ್ಮಾನರು ತಿರುಗಿ ಬೀಳುತ್ತಾರೆ ಎನ್ನುವುದು ಅವರಿಗೆ ಗೊತ್ತಿತ್ತು. ಪರಿಸ್ಥಿತಿ ತಿಳಿಯಾದ ನಂತರ ಕಾಂಗ್ರೆಸ್ಗೆ ಮತ ನೀಡಿ ಎಂದು ಹೇಳಿಬಿಟ್ಟರು!" ಎಂದು ನೆನಪುಮಾಡುಕೊಳ್ಳುತ್ತಾರೆ ಮಾನವ ಹಕ್ಕು ಕಾರ್ಯಕರ್ತ ಸಲೀಂ ಸಿದ್ದಿಕಿ.
ತಂದೆಯ ಒಡನಾಟದಿಂದ ರಾಜಕೀಯದ ಅಗಾಧ ಶಕ್ತಿಯ ಅರಿವಾಗುತ್ತಿದ್ದಂತೆಯೇ ಮಗ ಅಹಮದ್ ಬುಖಾರಿ 1980ರಲ್ಲಿ "ಆದಂ ಸೇನಾ" ಎನ್ನುವ ಪಕ್ಷವನ್ನು ಸ್ಥಾಪಿಸಿದರು. ಹುಟ್ಟಿದಷ್ಟೇ ವೇಗದಲ್ಲೇ ಆ ಪಕ್ಷ ಹೊರಟೂಹೋಯಿತು. ಕೊನೆಗೆ 2000ರಲ್ಲಿ ಜಾಮಾ ಮಸೀದಿಯ 'ಶಾಹಿ ಇಮಾಮ್' ಪಟ್ಟ ಸ್ವೀಕರಿಸಿದ ಅವರು ಆ ಮಸೀದಿಯನ್ನು ವಿವಿಧ ಪಕ್ಷಗಳ ಕಚೇರಿ ಮಾಡಿಬಿಟ್ಟರು.
ಅಹಮದ್ ಬುಖಾರಿ 2012ರ ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮುಸ್ಲಿಂ ಅಭ್ಯರ್ಥಿ ಖಾನ್ನನ್ನು ಬೆಂಬಲಿಸಿದ್ದರು. ಆದರೆ ಖಾನ್ ಚುನಾವಣೆಯಲ್ಲಿ ಸೋತುಬಿಟ್ಟ. ಆದರೂ ಪಟ್ಟು ಬಿಡದ ಬುಖಾರಿ, ಖಾನ್ನನ್ನು ವಿಧಾನಪರಿಷತ್ತಿನಲ್ಲಿ ಕೂಡಿಸಲು ಸಫಲರಾದರು. ಇದಾದ ನಂತರ ತಮ್ಮ ಯಾಹ್ಯಾನನ್ನು ರಾಜ್ಯಸಭೆಗೆ ಸೇರಿಸಬೇಕು ಮತ್ತು ಖಾನ್ಗೆ ಸಚಿವಸ್ಥಾನಕೊಡಬೇಕು ಎಂದು ಹೊಸ ತಗಾದೆ ತೆಗೆದಾಗ ಮುಲಾಯಂ ಸಿಂಗ್ಯಾದ ಮುನಿಸಿಕೊಂಡು ನಿರಾಕರಿಸಿಬಿಟ್ಟರು. ಬುಖಾರಿ ಬುಸುಗುಡುತ್ತಲೇ ಸಮಾಜವಾದಿ ಪಕ್ಷದಿಂದ ಹೊರಬಂದು, "ಆ ಪಕ್ಷ ಮುಸ್ಲಿಂ ವಿರೋಧಿಯಾಗಿದೆ" ಎಂದು ಘೋಷಿಸಿ, ತಾವು ಅನೇಕ ವರ್ಷಗಳಿಂದ ದೂಷಿಸುತ್ತಾ ಬಂದಿದ್ದ ಬಿಎಸ್ಪಿಯನ್ನು ಹೊಗಳತೊಡಗಿದರು!
2004ರಲ್ಲಿ ಎಲ್ಲರಿಗೂ ಅಚ್ಚರಿಯಾಗುವಂತೆ ಗುಜರಾತ್ ಬಿಜೆಪಿಯನ್ನು ಕೊಂಡಾಡಿ ಅವರು ಸುದ್ದಿ ಮಾಡಿದ್ದರು. "ನರೇಂದ್ರ ಮೋದಿ ಕಡೇಪಕ್ಷ ಮುಸಲ್ಮಾನರ ರಕ್ಷಣೆಗೆ ಪ್ರಯತ್ನ ಪಟ್ಟರು, ಆದರೆ ಕಾಂಗ್ರೆಸ್ ಗುಜರಾತ್ನಲ್ಲಿ ಏನು ಮಾಡಿತು?" ಎಂದು ಅಂದು ಪ್ರಶ್ನಿಸಿದ್ದರು ಬುಖಾರಿ.
ಆದರೆ ಈ ಹೊಗಳಿಕೆಯ ಹಿಂದೆಯೂ ರಾಜಕೀಯ ಲೆಕ್ಕಾಚಾರವಿತ್ತು! ಬುಖಾರಿಯವರ ತಮ್ಮ ಯಾಹ್ಯಾ, ಜಾಮಾ ಮಸೀದಿಯ ನಯಿಬ್ ಇಮಾಮ್ ಹುದ್ದೆಯನ್ನು ತಮಗೆ ಕೊಡಬೇಕೆಂದು ಜಗಳಕ್ಕಿಳಿದಿದ್ದರು. ಕೊಡಲಿಲ್ಲವೆಂದರೆ ಕಡೇಪಕ್ಷ ತಮಗೆ ರಾಜಕೀಯ ಬೆಂಬಲ ಸಿಗುವಂತೆ ಮಾಡಬೇಕೆಂದು ಕೊನೆಗೆ ತಾಕೀತು ಮಾಡಿದ್ದರು. ಯಾಹ್ಯಾ ಅವರಿಗೆ ಬಿಜೆಪಿಯೊಂದಿಗೆ ಮೊದಲಿನಿಂದಲೂ ನಂಟಿತ್ತು. ಹೀಗಾಗಿ ಬೇರೆ ದಾರಿ ಕಾಣದೇ ಅಹಮದ್ ಬುಖಾರಿ ಗುಜರಾತ್ ಅನ್ನು ಹೊಗಳುವ ಅನಿವಾರ್ಯಕ್ಕೆ ಸಿಕ್ಕಿಬಿದ್ದರು.
ಮಾತೆತ್ತಿದರೆ ಮುಸಲ್ಮಾನರ ಹಿತಕ್ಕಾಗೇ ತಾವು ಬದುಕಿರುವುದು ಎಂದು ಹೇಳುವ ಈ ಸಹೋದರರು, ಮುಸಲ್ಮಾನರ ಹೆಸರಲ್ಲಿ ತಾವಷ್ಟೇ ದುಂಡಾಗುತ್ತಾ ಹೋದರು. ಇದೆಲ್ಲ ಜನರಿಗೆ ಅರ್ಥವಾಗುತ್ತಾ ಹೋಯಿತು. ಹಾಗಾಗೇ ಮುಸ್ಲಿಂ ಸಮುದಾಯದ ಬಹುತೇಕರು ಬುಖಾರಿ ಸಹೋದರರನ್ನು ತಿರಸ್ಕರಿಸತೊಡಗಿದರು. ಈ ಕಾರಣಕ್ಕಾಗಿಯೇ ಜಾಮಾ ಮಸೀದಿ ಕ್ಷೇತ್ರದಲ್ಲಿ ನಡೆದ ಪ್ರತಿಯೊಂದು ಚುನಾವಣೆಯಲ್ಲಿಯೂ ಅಹಮದ್ ಬುಖಾರಿ, ಶೋಯೆಬ್ ಇಕ್ಬಾಲ್ ವಿರುದ್ಧ ಮುಖಭಂಗ ಅನುಭವಿಸುವಂತಾಗಿದೆ! ಮತಿಯಾ ಮಹಲ್ ಕ್ಷೇತ್ರದ ಶಾಸಕ ಶೋಯೆಬ್ ಇಕ್ಬಾಲ್ ಅವರನ್ನು ಅಹಮದ್ ಬುಖಾರಿ ಮೊದಲಿನಿಂದಲೂ ವಿರೋಧಿಸುತ್ತಾ ಬಂದವರು. ಪ್ರತಿ ಚುನಾವಣೆಯಲ್ಲೂ "ಇಕ್ಬಾಲ್ಗೆ ಮತ ಹಾಕಬೇಡಿ" ಎಂದು ಫತ್ವಾ ಹೊರಡಿಸುತ್ತಾರೆ. ಆದರೆ ಪ್ರತಿ ಚುನಾವಣೆಯಲ್ಲೂ ಇಕ್ಬಾಲ್ ಹೆಚ್ಚು ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಲೇ ಇದ್ದಾರೆ.
ಅಂದ ಹಾಗೆ, ಈ ಅಹಮದ್ ಬುಖಾರಿಯವರ ವಿರುದ್ಧ, ಕಾರ್ಯನಿರತ ಪೊಲೀಸ್ ಅಧಿಕಾರಿಯ ಮೇಲೆ ಗುಂಪುಕಟ್ಟಿಕೊಂಡು ದಾಳಿ ಮಾಡಿದ ಕಾರಣಕ್ಕೆ 2001ರಲ್ಲೇ ಕ್ರಿಮಿನಲ್ ಕೇಸು ದಾಖಲಾಗಿತ್ತು. ಆದರೆ ಅವರನ್ನು ಬಂಧಿಸಿದರೆ ಕೋಮು ಹಿಂಸಾಚಾರ ಭುಗಿಲೇಳಬಹುದು ಎನ್ನುವ ಭಯದಿಂದ ಕಳೆದ 13 ವರ್ಷಗಳಿಂದ ದೆಹಲಿ ಪೊಲೀಸರು ಸುಮ್ಮನೇ ಕುಳಿತಿದ್ದಾರೆ! ಬುಖಾರಿಗೆ ರಾಜಕೀಯ ಬೇಕಿರುವುದು ಇಂಥದೇ ಸ್ವಹಿತಾಸಕ್ತಿ ರಕ್ಷಣೆಗೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


