ನೋಟು ಮುಟ್ಟಲ್ಲ; ವೋಟು ಮಾರಲ್ಲ...
ಕುಂದಾಪುರ ಮೂಲದ ಗ್ರಾ.ಪಂ. ಹಕ್ಕೊತ್ತಾಯ ಆಂದೋಲನ, ನಮ್ಮ ಭೂಮಿ ಸಂಸ್ಥೆಳಿಂದ ಜಾಗೃತಿ
-ಅನಕ್ಷರಸ್ಥರು, ಬಡವರ ಮತಗಳನ್ನು ಕೊಳ್ಳಲು ಮುಂದಾಗುವ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ
ಕ.ಪ್ರ.ವಾರ್ತೆ ಬೆಂಗಳೂರು ಏ. 5
'ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ, ಹುಷಾರ್...'
ಅನಕ್ಷರಸ್ಥರು ಹಾಗೂ ಬಡವರ ಮತಗಳನ್ನು ಕೊಳ್ಳಲು ರಾಜಕೀಯ ಪಕ್ಷಗಳು ಪೈಪೋಟಿ ನಡೆಸುವುದು ಎಲ್ಲರಿಗೂ ತಿಳಿದ ಸತ್ಯ. ಆದರೆ ಚುನಾವಣೆಯ ಹಿಂದಿನ ಎರಡು ದಿನಗಳಲ್ಲಿ ಹಣ ಹಂಚುವುದನ್ನು ಚುನಾವಣೆ ಆಯೋಗದಿಂದಲೂ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಕುಂದಾಪುರ ಮೂಲದ ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನ ಹಾಗೂ ನಮ್ಮ ಭೂಮಿ ಸಂಸ್ಥೆಗಳು ಮತ ಮಾರಾಟಕ್ಕಿಲ್ಲ ಆಂದೋಲನವನ್ನು ರಾಜ್ಯಾದ್ಯಂತ ಕಳೆದ 4 ವರ್ಷಗಳಿಂದ ಮಾಡುತ್ತಾ ಬಂದಿವೆ. ಸುಮಾರು ಎರಡು ಲಕ್ಷಕ್ಕೂ ಅಧಿಕ ಮತದಾರರನ್ನು ಭೇಟಿ ಮಾಡಿರುವ ಈ ಸಂಸ್ಥೆಗಳ ಪ್ರತಿನಿಧಿಗಳು ಮತ ಮಾರಾಟ ಕುರಿತಂತೆ ತಿಳಿವಳಿಕೆ ನೀಡುತ್ತಿದ್ದಾರೆ.
ಕಳೆದ 2007ರಲ್ಲಿ ಗ್ರಾಮ ಸಭೆಗಳ ಅಧಿಕಾರ ಕಿತ್ತುಕೊಳ್ಳಲು ಸರ್ಕಾರ ಮುಂದಾದಾಗ ಹುಟ್ಟಿಕೊಂಡ ಈ ಸಂಸ್ಥೆಯು ಗ್ರಾಮ ಪಂಚಾಯಿತಿ ಸದಸ್ಯರ ಹಕ್ಕುಗಳನ್ನು ರಕ್ಷಿಸಲು ಹೋರಾಟ ನಡೆಸುತ್ತಿತ್ತು. 2010ರಲ್ಲಿ ನಡೆದ ಗ್ರಾ,ಪಂ ಚುನಾವಣೆಯಲ್ಲಿ ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಇಳಿದ ಸಂಸ್ಥೆ, ಗ್ರಾಮೀಣ ಪ್ರದೇಶದಲ್ಲಿ ಮತ ಮಾರಾಟ ನಿಯಂತ್ರಣಕ್ಕೆ ಅಭಿಯಾನ ಆರಂಭಿಸಿತು. ರಾಜ್ಯದ 19 ಜಿಲ್ಲೆಗಳಲ್ಲಿ ನೇರವಾಗಿ 32,782 ಗ್ರಾ.ಪಂ ಮತದಾರರನ್ನು ಭೇಟಿ ಮಾಡಿ ಮತ ಮಾರಾಟ ಕುರಿತಂತೆ ಜಾಗೃತಿ ಮೂಡಿಸಲು ಆರಂಭಿಸಿತು. ಪರೋಕ್ಷವಾಗಿ ಸುಮಾರು 98,346 ಮತದಾರರ ಮನೆ ಮನೆಗೆ ಭೇಟಿ ನೀಡಿ ಅಮೂಲ್ಯ ಮತವನ್ನು ರಾಜಕೀಯ ಪುಡಾರಿಗಳು ನೀಡುವ ದುಡ್ಡಿಗೆ ಮಾರಿಕೊಳ್ಳದಂತೆ ಎಚ್ಚರಿಕೆ ನೀಡಲಾಯಿತು.
ನಂತರ ನಡೆದ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ 14 ಜಿಲ್ಲೆಗಳಲ್ಲಿ 35 ಸಾವಿರಕ್ಕೂ ಅಧಿಕ ಮತದಾರರನ್ನು ಭೇಟಿ ಮಾಡಿದ ಸಂಸ್ಥೆಯ ಪ್ರತಿನಿಧಿಗಳು, ಮತ ಮಾರಾಟದ ಪರಿಣಾಮವನ್ನು ವಿವರಿಸಲಾಯಿತು. ವಿಧಾನಸಭೆ ಚುನಾವಣೆಯಲ್ಲಿಯೂ ಇದನ್ನು ಮುಂದುವರಿಸಿದ ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನ ಸಂಸ್ಥೆ ಸುಮಾರು 22 ಸಾವಿರ ಮತದಾರರಿಗೆ ತಿಳಿವಳಿಕೆ ನೀಡುವಲ್ಲಿ ಯಶಸ್ವಿಯಾಯಿತು.
ಮತ ಮಾರಾಟ ಮಾಡಿದರೆ ಹುಷಾರ್
ಈ ಬಾರಿಯ ಲೋಕ ಕದನಕ್ಕೆ ವಿಶೇಷ ಅಭಿಯಾನದ ಮೂಲಕ ಗಮನ ಸೆಳೆಯುತ್ತಿರುವ ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನ ಸಂಸ್ಥೆ, ಮತ ಮಾರಾಟಕ್ಕಿಲ್ಲ, ಮಾರಾಟಕ್ಕಿದೆ ಎಂಬ ಎರಡು ಭಿತ್ತಿಚಿತ್ರಗಳ ಮೂಲಕ ಅಭಿಯಾನ ನಡೆಸುತ್ತಿದೆ. 'ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ' ಹಾಗೂ 'ನಾನು ಮತ್ತು ನನ್ನ ಮತ ಮಾರಾಟಕ್ಕಿದೆ' ಎಂಬ ಎರಡು ವ್ಯಂಗ್ಯಚಿತ್ರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. 'ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ' ಎಂದು ದುಡ್ಡು ನೀಡುವ ವ್ಯಕ್ತಿಗೆ ಹೇಳಿದರೆ, ಮುಂದಿನ 5 ವರ್ಷಗಳ ಕಾಲ ತಲೆ ಎತ್ತಿ ನಡೆಯಬಹುದು. ನಿಮ್ಮ ಜನಪ್ರತಿನಿಧಿಯಿಂದ ನಿಮ್ಮ ಸಮಸ್ಯೆಗೆ ಧೈರ್ಯದಿಂದ ಪರಿಹಾರ ಪಡೆಯಬಹುದು. ಅದೇ 'ನಾನು ಮತ್ತು ನನ್ನ ಮತ ಮಾರಾಟಕ್ಕಿದೆ' ಎಂದು ನಾಮಫಲಕ ಹಾಕಿ ಕುಳಿತರೆ ಮುಂದಿನ 5 ವರ್ಷಗಳವರೆಗೆ ರಾಜಕಾರಣಿಯ ಕಪಿಮುಷ್ಠಿಯಲ್ಲಿ ನರಳಬೇಕಾಗುತ್ತದೆ. ಜನಪ್ರತಿನಿಧಿಯ ಸೇವಕನಾಗಿ ತಲೆ ತಗ್ಗಿಸಿಕೊಳ್ಳಬೇಕಾಗುತ್ತದೆ ಎನ್ನುವುದನ್ನು ಮತದಾರರಿಗೆ ಅರ್ಥೈಸುವುದೇ ಅಭಿಯಾನದ ಉದ್ದೇಶ. ಪಾದಯಾತ್ರೆ, ಸಾರ್ವಜನಿಕ ಚರ್ಚೆ, ಸೈಕಲ್ ರ್ಯಾಲಿ, ಬೈಕ್ ರ್ಯಾಲಿ, ಬೀದಿ ನಾಟಕ, ಸ್ಟಿಕ್ಕರ್ ಮತ್ತು ಹಸ್ತಾಕ್ಷರ ಸಂಗ್ರಹದ ಮೂಲಕ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. ಜಾಗೃತಿ ಕಾರ್ಯಕ್ರಮಕ್ಕೆ ಮಹಿಳಾ ಸಮಖ್ಯ ಕರ್ನಾಟಕ, ಎಜಿಎಸ್‌ಎ, ಹಂಗರ್ ಪ್ರಾಜೆಕ್ಟ್, ಸಿಕ್ರಮ್, ಸಿವಿಕ್ ಸೇರಿದಂತೆ ಇನ್ನಿತರ ಎನ್‌ಜಿಒಗಳ ಮೂಲಕ ಮುಂದಿನ 10 ದಿನಗಳಲ್ಲಿ ಉಳಿದೆಲ್ಲ ಜಿಲ್ಲೆಗಳಲ್ಲಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಸಂಸ್ಥೆ ಹೇಳುವ ಪ್ರಕಾರ ಉತ್ತರ ಕರ್ನಾಟಕದ ಮಹಿಳೆಯರಲ್ಲಿ ಮತ ಮಾರಾಟ ಕುರಿತಂತೆ ಜಾಗೃತಿ ಮೂಡಿಸುವಲ್ಲಿ ಯಶಸ್ಸು ದೊರೆತಿದೆ.
ಮತಗಳನ್ನು ಮಾರಾಟ ಮಾಡಿಕೊಳ್ಳುವುದು ಸಂವಿಧಾನಕ್ಕೆ ಮಾಡುವ ದೊಡ್ಡ ಅಪಚಾರ. ಮತದಾರನಿಗೆ ಚುನಾವಣೆ ಎನ್ನುವುದು ದೇವರ ಪೂಜೆಯಿದ್ದಂತೆ. ಇಲ್ಲಿ ವಿಘ್ನವಾದರೆ ಮುಂದಿನ 5 ವರ್ಷಗಳ ಕಾಲ ನರಕ ಅನುಭವಿಸಬೇಕಾಗುತ್ತದೆ.
- ಚಿರಂಜೀವಿ ಸಿಂಗ್, ನಿವೃತ್ತ ಐಎಎಸ್ ಅಧಿಕಾರಿ
- ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

