ಪ್ರಧಾನ ಸುದ್ದಿ

ರಮಣಿಯರ ಲಟ್ಟಣಿಗೆ ಸೈನ್ಯ!

ರಮಣಿಯರ ಲಟ್ಟಣಿಗೆ ಸೈನ್ಯ!
Published On :

ಚಂಡೀಗಡ: ಮೋದಿ ಬ್ರಿಗೇಡ್ ಬಗ್ಗೆ ಎಲ್ಲರು ಕೇಳಿಯೇ ಇದ್ದೀರಿ. ಆದರೆ, ಪಂಜಾಬ್‌ನಲ್ಲೊಂದು ಬ್ರಿಗೇಡ್(ಸೈನ್ಯ) ಹುಟ್ಟಿಕೊಂಡಿದೆ. ಆದರೆ, ಇದು ಯಾವುದೇ ರಾಜಕೀಯ ಪಕ್ಷದ ಪರವಾದ ಸೈನ್ಯ ಅಲ್ಲ, ಇದು ಬೇಲನ್ ಬ್ರಿಗೇಡ್ ಅಂದರೆ ಲಟ್ಟಣಿಗೆಯ ಸೈನ್ಯ!
ಚುನಾವಣೆ ವೇಳೆ ಹೆಂಡ ಹಂಚುವುದನ್ನು ತಡೆಗಟ್ಟಲೆಂದೇ ಪಂಜಾಬ್‌ನ ಹೆಣ್ಣುಮಕ್ಕಳು ಸೇರಿ ಈ ಬ್ರಿಗೇಡ್ ಕಟ್ಟಿಕೊಂಡಿದ್ದಾರೆ. ಪಂಜಾಬ್‌ನಲ್ಲಿ ಚುನಾವಣೆ ವೇಳೆ ಡ್ರಗ್ಸ್ ಮತ್ತು ಮದ್ಯ ಹಂಚುವಿಕೆ ಮಾಮೂಲಿ. ಈ ಬಾರಿ ಚುನಾವಣೆಯನ್ನು ಮದ್ಯ ಮತ್ತು ಡ್ರಗ್ಸ್‌ನಿಂದ ಮುಕ್ತಗೊಳಿಸುವುದೇ ಈ ಸೈನ್ಯದ ಉದ್ದೇಶ. ಯಾವುದೇ ಪಕ್ಷದ ಅಭ್ಯರ್ಥಿಗಳು ಅಥವಾ ಬೆಂಬಲಿಗರು ಮದ್ಯ ಅಥವಾ ಡ್ರಗ್ಸ್ ಹಂಚುವುದು ಕಣ್ಣಿಗೆ ಬಿದ್ದರೆ ಈ ಸೈನ್ಯ ತನ್ನ 'ದಂಡ'ಪ್ರಯೋಗ ಮಾಡಲು ಹಿಂದೆ ಮುಂದೆ ನೋಡುವುದಿಲ್ಲವಂತೆ.
ಅನಿತಾ ಶರ್ಮಾ: ಈ ಲಟ್ಟಣಿಗೆ ಸೈನ್ಯದ ಹಿಂದಿನ ರೂವಾರಿ ಲೂದಿಯಾನಾದ 42 ವರ್ಷದ ಆರ್ಕಿಟೆಕ್ಟ್ ಅನಿತಾ ಶರ್ಮಾ. ಪಂಜಾಬ್ ಚುನಾವಣೆಯನ್ನು ಡ್ರಗ್ಸ್ ಮತ್ತು ಮದ್ಯ ಮುಕ್ತಗೊಳಿಸುವುದೇ ಅನಿತಾ ಮುಖ್ಯ ಗುರಿ. ಇತ್ತೀಚೆಗಿನ ಸಮೀಕ್ಷೆಗಳ ಪ್ರಕಾರ ಶೇ.70ರಷ್ಟು ಪಂಜಾಬಿಗರು ಚುನಾವಣೆ ವೇಳೆ ಡ್ರಗ್ಸ್ ಬಳಸುತ್ತವೆ.
ಕೆಲವು ರಾಜಕೀಯ ಪಕ್ಷಗಳಂತು ಚುನಾವಣೆ ವೇಳೆ ಚೀಟಿಗಳನ್ನೂ ಹಂಚುವುದು ಇದೆ. ಈ ಚೀಟಿಗಳನ್ನು ತೋರಿಸಿದರೆ ಕೆಲವು ಮದ್ಯದಂಗಡಿಯಲ್ಲಿ ಉಚಿತ ಮದ್ಯ ಪೂರೈಸಲಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ಬ್ರಿಗೇಡ್ ಪ್ರಯತ್ನ ನಡೆಸುತ್ತಿದೆ. ಅದರಂತೆ ಈ ಬ್ರಿಗೇಡ್‌ಗಳನ್ನು  ಪ್ರತ್ಯೇಕ ತಂಡಗಳಾಗಿ ವಿಭಜಿಸಲಾಗಿದೆ. ಸದ್ಯ ಚಂಡೀಗಡ ಸೇರಿ ಒಟ್ಟು 62 ನಗರಗಳಿಗೆ ಈ ಸೈನ್ಯ ವ್ಯಾಪಿಸಿದೆ. ಈ ಸೈನ್ಯಕ್ಕೆ ಕೆಲವು ಎನ್‌ಜಿಒಗಳ ಬೆಂಬಲವೂ ಇದೆ.
ಮಾ.5ರಂದು ಸ್ಥಾಪನೆಯಾದ ಈ ಬ್ರಿಗೇಡ್‌ನಲ್ಲಿ ಗೃಹಿಣಿಯರು, ರೈತರು, ಕಾರ್ಮಿಕರು, ಉದ್ಯೋಗಿಗಳೂ ಇದ್ದಾರೆ. ಹಾಗಂತ ಇದು ಸಂಪೂರ್ಣವಾಗಿ ಮಹಿಳೆಯರದ್ದೇ ಸೈನ್ಯ ಅಂತೇನೂ ಅಲ್ಲ. ಕೆಲ ಪುರುಷರೂ ಈ ಸಂಘಟನೆ ಜತೆಗೆ ಗುರುತಿಸಿಕೊಂಡಿದ್ದಾರೆ. ಅಂದ ಹಾಗೆ ಅನಿತಾ ಅವರು ಲಟ್ಟಣಿಗೆಯನ್ನೇ ತಮ್ಮ ಸಂಘಟನೆಯ ಚಿಹ್ನೆಯನ್ನಾಗಿ ಇಟ್ಟುಕೊಂಡದ್ದು ಯಾಕೆ ಗೊತ್ತಾ? ಅದು ಮಹಿಳಾ ಶಕ್ತಿಯ ಸಂಕೇತವಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.