ಪ್ರಧಾನ ಸುದ್ದಿ

ಫ್ರಾನ್ಸ್ ನೀರೆಯ ಯೋಗ ಪ್ರೀತಿ

Published On :

ಗೋಕರ್ಣ: ವಿದೇಶಿ ವೃದ್ಧೆ ಗೋಕರ್ಣ ಬಳಿ ನೆಲೆನಿಂತು ಎರಡೂವರೆ ವರ್ಷದಿಂದ ಇಲ್ಲಿನ ಚಿಣ್ಣರಿಗಾಗಿ 'ಮುದ್ದು ಪ್ಲೇ ಸ್ಕೂಲ್‌' ಎಂಬ ಮುದ್ದಾದ ಶಾಲೆ ನಡೆಸುತ್ತಿದ್ದಾರೆ.
ಗೋಕರ್ಣದಿಂದ ಕೇವಲ 3 ಕಿ.ಮೀ. ದೂರದ ಬಂಕಿಕೊಡ್ಲದ ಈ ಶಾಲೆಯಲ್ಲಿ ಚಿಣ್ಣರು ಕನ್ನಡ, ಇಂಗ್ಲಿಷ್, ಹಿಂದಿ, ಯೋಗ, ತ್ಯಾಜ್ಯ ನಿರ್ವಹಣೆ ಬಗ್ಗೆ ತರಬೇತಿ ಪಡೆದು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ.
ಶಂಕರ ಪ್ರಸಾದ ಫೌಂಡೇಶನ್‌ನ ಸ್ವಾಮಿ ಯೋಗ ರತ್ನಾ ಸರಸ್ವತಿ ಎಂಬ ವೃದ್ಧೆ (75) ಮೂಲತಃ ಪ್ಯಾರಿಸ್‌ನವರು. ಇವರ ಮೂಲ ಹೆಸರು ಡೀನ್. ಈಕೆ ಭಾರತದ ಸಂಸ್ಕೃತಿ, ವಾತಾವರಣ ಹಿಂದೂ ಧರ್ಮಕ್ಕೆ ಮಾರುಹೋಗಿ ಬೆಂಗಳೂರಿನ ಬಿಹಾರಯೋಗ ಶಾಲೆಯಲ್ಲಿ ಯೋಗ ಕಲಿತು 3 ವರ್ಷದಿಂದ ವಿದೇಶಿಯರಿಗಲ್ಲದೇ ಸ್ಥಳಿಯರಿಗೂ ಯೋಗ ಕಲಿಸುತ್ತ ಮಕ್ಕಳಿಗೆ ಕನ್ನಡ, ಇಂಗ್ಲಿಷ್, ಹಿಂದಿ ಕಲಿಸಲು ಸ್ಥಳೀಯರೆ ಆದ ಸೌಮ್ಯಾ ನಾಡಕರ್ಣಿಯರನ್ನು ಶಿಕ್ಷಕಿಯನ್ನಾಗಿ ನೇಮಿಸಿಕೊಂಡು ಪ್ರಚಾರವಿಲ್ಲದೆ ಸೇವೆ ಮಾಡುತ್ತಿದ್ದಾರೆ.
ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆ ಮಕ್ಕಳ ಮನೋಲ್ಲಾಸಕ್ಕಾಗಿ ನಿರ್ಮಿಸಿದ ಜಾರುಬಂಡಿ, ಜೋಕಾಲಿ ಮುಂತಾದ ಕ್ರೀಡೆಗಳ ಸಾಧನ ಕಣ್ ತುಂಬಿಕೊಳ್ಳುತ್ತದೆ. ತಮಗೆ ಬಂದ ಅಕ್ಷರಗಳನ್ನು ಬರೆಯಲು, ಚಿತ್ರ ಬಿಡಿಸಲು ಹೊರ ಆವರಣದ ಗೋಡೆಗೆ ಕರಿಹಲಗೆಯನ್ನು ನಿರ್ಮಿಸಿದ್ದು ಮಕ್ಕಳೆಲ್ಲರೂ ತಮಗೆ ಬಂದ ಚಿತ್ರವನ್ನು ಬಿಡಿಸುವ ಸ್ವಾತಂತ್ರ್ಯ ನೀಡಲಾಗಿದೆ.
ಮಕ್ಕಳು ಕಲಿಯುವ ಕೊಠಡಿ ಸ್ವಚ್ಛ ಸುಂದರ. ಎರಡೂವರೆ ವರ್ಷದಿಂದ 4 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಪ್ರವೇಶವಿರುವ ಈ ಶಾಲೆ 'ಬೆಳೆಯುವ ಸಿರಿ ಮೊಳಕೆಯಲ್ಲೇ ನೋಡು' ಎಂಬಂತೆ ಚಿಕ್ಕ ಚಿಕ್ಕ ಮಕ್ಕಳು ಮಾಡುವ ಯೋಗ ಎಲ್ಲರನ್ನೂ ವಿಸ್ಮಯಗೊಳಿಸುತ್ತದೆ.
ಬೆಳಗ್ಗೆ 9.30ರಿಂದ 12.30ರ ತನಕ ಹಾಲು-ಹಣ್ಣು, ಪೌಷ್ಟಿಕ ಆಹಾರ ನೀಡುವ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ಇವರು ವಿದೇಶಿ ಮಹಿಳೆಯಾದರೂ ಈಗ ಭಾರತ ನಾರಿಯಾಗಿದ್ದಾರೆ. ಸರ್ಕಾರದ ಧನ ಸಹಾಯ ದೊರೆತರೆ ಗೋಶಾಲೆ ತೆರೆಯುವ, ಇನ್ನೂ ಹೆಚ್ಚಿನ ಅಭಿವೃದ್ಧಿಪಡಿಸುವ ಇರಾದೆ ಹೊಂದಿದ್ದಾರೆ.
ಕನ್ನಡದಲ್ಲೇ ಮಾತು: ಶಾಲೆಯಲ್ಲಿ 20 ಮಕ್ಕಳಿದ್ದಾರೆ. ಪ್ರತಿ ಮಕ್ಕಳಿಗೆ ವರ್ಷಕ್ಕೆ ಕೇವಲ 4 ಸಾವಿರ ಹಣ ಪಡೆಯಲಾಗುತ್ತದೆ. ರತ್ನಾ ಸರಸ್ವತಿ ಶಾಲೆಯ ಪರಿಸರದಲ್ಲೇ ವಾಸಿಸುತ್ತಾರೆ. ಮಕ್ಕಳಿಗೆ ಸ್ವತಃ ಯೋಗ ಹೇಳಿಕೊಡುತ್ತಾರೆ. ಮಕ್ಕಳನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ. ಅಚ್ಚರಿ ಎಂದರೆ ಕನ್ನಡದಲ್ಲೇ ಮಾತನಾಡುತ್ತಾರೆ ಹಾಗೂ ಓದುತ್ತಾರೆ. ಕನ್ನಡವನ್ನು ಪ್ರೀತಿಸುತ್ತಾರೆ.
ಮಕ್ಕಳಿಗೆ ಶಾಲೆಯಲ್ಲಿ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆಯ ಬಗ್ಗೆ ತರಬೇತಿ ನೀಡಲಾಗುತ್ತದೆ. ಶಾಲೆಯಲ್ಲಿ ಎರಡು ಬುಟ್ಟಿಗಳನ್ನು ಇಡಲಾಗಿದೆ. ಒಂದು ಬುಟ್ಟಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಮಾತ್ರ ಹಾಕಲಾಗುತ್ತದೆ. ಇನ್ನೊಂದರಲ್ಲಿ ಕಾಗದ ಮತ್ತಿತರ ತ್ಯಾಜ್ಯಗಳನ್ನು ಹಾಕಲಾಗುತ್ತದೆ. ಮಕ್ಕಳೀಗ ಇದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ.
ಇಡಿ ಗೋಕರ್ಣದಲ್ಲಿ ಪ್ಲೇ ಸ್ಕೂಲ್ ಇಲ್ಲ. ಮಕ್ಕಳಿಗೆ ಕನ್ನಡದ ಜೊತೆ ಇತರ ಭಾಷೆಯ ಜ್ಞಾನವೂ ಸಿಗಬೇಕು. ಹಾಗಾಗಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯನ್ನು ಕಲಿಸಲಾಗುತ್ತಿದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಹಳ್ಳಿಯ ಮಕ್ಕಳು ಇಂಗ್ಲಿಷ್ ಜ್ಞಾನ ಹೊಂದಬೇಕು. ಇದಕ್ಕೆ ಸರ್ಕಾರದಿಂದ ಧನ ಸಹಾಯ ದೊರೆತರೆ ಇನ್ನೂ ಅನುಕೂಲ. ಇನ್ನಷ್ಟು ಅಭಿವೃದ್ಧಿ ಸಾಧಿಸಬಹುದು ಎಂದು ರತ್ನಾ ಸರಸ್ವತಿ ಅಭಿಪ್ರಾಯಪಡುತ್ತಾರೆ.

ರಮೇಶ ಪಂಡಿತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.