ಕುದಿ ಬಾಣಲೆ ಮೇಲೆ ಈ ಬಾರಿ ಚುನಾವಣೆ

ಕನ್ನಡಪ್ರಭ ವಾರ್ತೆ | ಬೆಂಗಳೂರು | ಏ.6
ದೇಶದಲ್ಲಿ ಹದಿನಾರನೇ ಲೋಕಸಭೆಗೆ ರಾಜ್ಯದಿಂದ ಪ್ರತಿನಿಧಿಗಳನ್ನು ಜನತೆ ಅಕ್ಷರಶಃ ಸುಡು ಬಿಸಿಲಿನಡಿಯಲ್ಲೇ ಆಯ್ಕೆ ಮಾಡಬೇಕಾಗಿದೆ. ಕರ್ನಾಟಕದಲ್ಲಿ ಮತದಾನ ನಡೆಯುವ (ಏ.17) ದಿನ 40 ಡಿಗ್ರಿ ಆಸುಪಾಸಿನಲ್ಲಿ ತಾಪಮಾನ ಇರುವ ಸಾಧ್ಯತೆ ಇದೆ.
ಹೌದು, ಸೂರ್ಯನ ಕಾವು ಮತದಾನಕ್ಕೆ ಸವಾಲು ಹಾಕುವ ಮುನ್ಸೂಚನೆ ನೀಡಿದೆ. ಜಮ್ಮು ಕಾಶ್ಮಿರ ಹಾಗೂ ಹಿಮಾಚಲ ಪ್ರದೇಶದ ಹೊರತುಪಡಿಸಿ ದೇಶದ ಎಲ್ಲ ರಾಜ್ಯಗಳಲ್ಲಿ ಉರಿ ಬಿಸಿಲಿನ ನಡುವೆಯೇ ಮತದಾನದ ಅನಿವಾರ್ಯ ಎದುರಾಗಿದೆ. ಹೀಗಾಗಿ ಮತದಾನಕ್ಕೆ ಜನರನ್ನು ಮನೆಯಿಂದ ಹೊರತರಲು ಚುನಾವಣೆ ಆಯೋಗ ಹಾಗೂ ರಾಜಕೀಯ ಪಕ್ಷ ಮತ್ತಷ್ಟು ಬೆವರು ಸುರಿಸಬೇಕಿದೆ. ರಾಜ್ಯದಲ್ಲಿ ಅಂದು 36 ಡಿಗ್ರಿಯಿಂದ 42 ಡಿಗ್ರಿವರೆಗೆ ತಾಪಮಾನವಿರಲಿದೆ ಹವಾಮಾನ ಇಲಾಖೆ ಮುನ್ಸೂಚನೆಯಿದೆ. ಹವಾನಿಯಂತ್ರಿತ ನಗರದ ಖ್ಯಾತಿಯ ಬೆಂಗಳೂರಿನಲ್ಲೇ 39 ಡಿಗ್ರಿ ತಾಪಮಾನ ಇರಲಿದೆ.
ಮತ ಬೇಟೆ: ರಾಜ್ಯದಲ್ಲಿ ಈಗಾಗಲೇ ಮಧ್ಯಾಹ್ನದ ಸಮಯದಲ್ಲಿ ಮನೆ ಅಥವಾ ಕಚೇರಿಯಿಂದ ಹೊರಬರಲು ಜನ ಇಷ್ಟಪಡುತ್ತಿಲ್ಲ. ಅಂಥದ್ದರಲ್ಲಿ ಮತದಾನದಂದು ಇವತ್ತಿಗಿಂತ 2ರಿಂದ 4ಡಿಗ್ರಿವರೆಗೆ ತಾಪಮಾನ ಏರಿದರೆ ಮಧ್ಯಾಹ್ನದ ಸಮಯ ಮತಗಟ್ಟೆಗೆ ಬರುವುದೇ ಅಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ದಗೆ ಕನಿಷ್ಠ 40 ಡಿಗ್ರಿ ಗಡಿ ದಾಟುವ ಸೂಚನೆಯನ್ನು ಇಲಾಖೆ ನೀಡಿದೆ.
ಗುಜರಾತ್ನಲ್ಲಿ ಅತ್ಯಧಿಕ: ಇಲಾಖೆ ಪ್ರಕಾರ ಕರ್ನಾಟಕ ಸೇರಿ ದೇಶದ 13 ರಾಜ್ಯಗಳಲ್ಲಿ ಬಿಸಿಲಿನ ಧಗೆಯನ್ನು ಮತದಾರ ಎದುರಿಸಬೇಕಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ರಾಜ್ಯ ಗುಜರಾತ್ನಲ್ಲಿ ಅತಿ ಹೆಚ್ಚು ತಾಪಮಾನವಿರುತ್ತದೆ ಎಂದು ಇಲಾಖೆ ತಿಳಿಸಿದೆ. ನಂತರದ ಸ್ಥಾನವನ್ನು ಕರ್ನಾಟಕವೇ ಹೊಂದಿದೆ. ಉತ್ತರ ಪ್ರದೇಶ, ಪಂಜಾಬ್, ಕೇರಳ, ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ, ಜಾರ್ಖಂಡ, ಮಧ್ಯಪ್ರದೇಶ, ರಾಜಸ್ತಾನ, ತಮಿಳುನಾಡು, ಓಡಿಶಾ, ಛತ್ತೀಸ್ಗಡ, ಆಂಧ್ರಪ್ರದೇಶದಲ್ಲಿ 36 ಡಿಗ್ರಿಗಿಂತಲೂ ಅಧಿಕ ತಾಪವಿರಲಿದೆ.
ಎಚ್ಚೆತ್ತ ಆಯೋಗ
ಬಿಸಿಲಿಗೆ ಹೆದರಿ ಜನ ಮತದಾನದಿಂದ ದೂರವಾಗಬಾರದು ಎಂಬ ಕಾರಣದಿಂದ ರಾಜ್ಯದಲ್ಲಿ ಆಯೋಗ ಎಚ್ಚೆತ್ತುಕೊಂಡಿದೆ. ರಾಜ್ಯದ ಪ್ರತಿ ಮತಗಟ್ಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇದಲ್ಲದೆ ಮತದಾನ ಅವಧಿಯನ್ನು ಬೆಳಗ್ಗೆ ಹಾಗೂ ಸಂಜೆ ತಲಾ ಒಂದು ಗಂಟೆ ವಿಸ್ತರಿಸಲಾಗಿದೆ. ಹೀಗಾಗಿ, ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ಮಾಡಬಹುದು. ದೆಹಲಿ ಚುನಾವಣೆಯಲ್ಲಾದಂತೆ ಸಂಜೆ 6 ಗಂಟೆ ನಂತರವೂ ಮತಗಟ್ಟೆಯಲ್ಲಿ ಜನ ಇದ್ದರೆ ಮತದಾನಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಅನಿಲ್ ಕುಮಾರ್ ಝಾ ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಕಾವು
ಏ.7 ಏ.17
ಬೆಂಗಳೂರು 36 39
ಬೆಳಗಾವಿ 36 38
ವಿಜಾಪುರ 38 40
ದಾವಣಗೆರೆ 38 40
ಹುಬ್ಬಳ್ಳಿ 39 40
ಮಂಗಳೂರು 33 37
ರಾಯಚೂರು 39 42
ಭಾನುವಾರ ದಾಖಲಾದ ತಾಪ
ಗುಲ್ಬರ್ಗದಲ್ಲಿ ಗರಿಷ್ಠ 40, ಕನಿಷ್ಠ 29 ಡಿಗ್ರಿ, ರಾಯಚೂರು, ಯಾದಗಿರಿಯಲ್ಲಿ 40-27, ಬೀದರ್ನಲ್ಲಿ 41-27, ಬಳ್ಳಾರಿಯಲ್ಲಿ 39-26 ಹಾಗೂ ಕೊಪ್ಪಳದಲ್ಲಿ ಗರಿಷ್ಠ 37- 25 ಡಿಗ್ರಿ ತಾಪ ಇತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


