ಪ್ರಧಾನ ಸುದ್ದಿ

ಕೈಗಾರಿಕಾ ಭದ್ರತಾ ಪಡೆ ರಿಪೋರ್ಟಿಂಗ್..

Published On :

ಬೆಂಗಳೂರು: ಕೇಂದ್ರ ಕೈಗಾರಿಕಾ ಭದ್ರತೆ ಪಡೆ ಮಾದರಿಯಲ್ಲಿ ರಾಜ್ಯದಲ್ಲೂ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್) ರಾಜ್ಯದ ಮಹತ್ವದ ಸ್ಥಳಗಳ ಭದ್ರತೆಗೆ ನಿಯೋಜನೆಯಾಗುವ ದಿನಗಳು ಹತ್ತಿರವಾಗಿವೆ.
ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಭಯೋತ್ಪಾದಕರು, ನಕ್ಸಲ್ ಭೀತಿ, ಸೇರಿದಂತೆ ವಿವಿಧ ಕಾರಣಗಳಿಂದ ಭದ್ರತೆ ಬೇಕೆನಿಸಿದಾಗ ಕೇಂದ್ರದ ಪಡೆಗಳ ಮೊರೆ ಹೋಗಬೇಕಿತ್ತು. ಆದರೆ ಇನ್ನು ಕೆಲವೇ ತಿಂಗಳುಗಳಲ್ಲಿ ರಾಜ್ಯದ ಕೆಎಸ್‌ಐಎಸ್‌ಎಫ್ ಪೂರ್ಣ ಪ್ರಮಾಣದ ಕರ್ತವ್ಯಕ್ಕೆ ಲಭ್ಯವಾಗಲಿದೆ.
ಹೈದ್ರಾಬಾದ್‌ನಲ್ಲಿ ತರಬೇತಿ ಮುಗಿಸಿ ರಾಜ್ಯಕ್ಕೆ ಆಗಮಿಸಿರುವ ಕರ್ನಾಟಕ ಕೈಗಾರಿಕೆ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್) 133 ಸಬ್ ಇನ್ಸ್‌ಪೆಕ್ಟರ್‌ಗಳು ಪ್ರಾಯೋಗಿಕ ತರಬೇತಿ ಆರಂಭಿಸಿದ್ದು ಈಗಾಗಲೇ ಚುನಾವಣೆಯಲ್ಲಿ ವಿವಿಐಪಿಗಳ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
ಆದರೆ, ಮಹತ್ವದ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಲು ಪೊಲೀಸ್ ಕಾನ್ಸ್‌ಟೇಬಲ್‌ಗಳ ಅಗತ್ಯವೂ ಇದೆ. 1670 ಕಾನ್ಸ್‌ಟೇಬಲ್‌ಗಳು ಈಗ ಹೈದ್ರಾಬಾದ್‌ನ ಕೇಂದ್ರ ಕೈಗಾರಿಕಾ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಂತರ ಅವರನ್ನು ರಾಜ್ಯದಲ್ಲಿ ಪ್ರಾಯೋಗಿಕ ತರಬೇತಿಗೆ ಒಳಪಡಿಸಿ ಬೇಡಿಕೆ ಇರುವ ರಾಜ್ಯದ ಪ್ರಮುಖ ಸ್ಥಳಗಳು, ಜಲಾಶಯಗಳು, ಕಟ್ಟಡಗಳು, ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ನಿಯೋಜಿಸಲಾಗುತ್ತದೆ.
ಕಾಯ್ದೆ ಸಿದ್ಧ: ಸಿಐಎಸ್‌ಎಫ್, ಪೊಲೀಸ್ ಇಲಾಖೆಗೆ ಪ್ರತ್ಯೇಕ ಕಾಯ್ದೆ ಇರುವಂತೆ, ಕೆಎಸ್‌ಐಎಸ್‌ಎಫ್‌ಗೂ ಪ್ರತ್ಯೇಕ ಕಾಯ್ದೆ ಕೆಎಸ್‌ಐಎಸ್‌ಎಫ್ ಆಡಳಿತ ವಿಭಾಗದಿಂದ ಸಿದ್ಧಗೊಂಡಿದ್ದು ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ. ಸರ್ಕಾರ ಕಾನೂನು ಘಟಕದಿಂದ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಂಡ ಬಳಿಕ ಅಧಿಕೃತವಾಗಿ ಕೆಎಸ್‌ಐಎಸ್‌ಎಫ್ ಅಸ್ತಿತ್ವಕ್ಕೆ ಬರಲಿದೆ. ಇದಕ್ಕೆ ಇನ್ನು 6 ತಿಂಗಳು ಬೇಕಾಗಬಹುದು ಎಂದು ಆಂತರಿಕ ಭದ್ರತೆ ವಿಭಾಗದ ಡಿಐಜಿ ಮುರುಗನ್ ಹೇಳಿದರು.
ಬೆಟಾಲಿಯನ್ ಮಾದರಿ: ಬೆಟಾಲಿಯನ್ ಮಾದರಿಯಲ್ಲಿ ಕೆಎಸ್‌ಐಎಸ್‌ಎಫ್ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಸಿಐಎಸ್‌ಎಫ್‌ನಿಂದಲೂ ಸಿಬ್ಬಂದಿ ಬಳಸಿಕೊಳ್ಳಲಾಗುತ್ತದೆ. ಅಲ್ಲದೇ ಪ್ರತಿ ಬೆಟಾಲಿಯನ್‌ನಲ್ಲೂ ಒರ್ವ ಕಮಾಂಡೆಂಟ್ ಸೇರಿದಂತೆ ಕಾನ್ಸ್‌ಟೇಬಲ್‌ವರೆಗಿನ ವಿವಿಧ ದರ್ಜೆ ಅಧಿಕಾರಿಗಳು ಇರುತ್ತಾರೆ.
ಖಾಸಗಿ ಸಂಸ್ಥೆಗಳಿಗೂ ಭದ್ರತೆ: ಸಂಸ್ಥೆ, ಕಟ್ಟಡ, ಜಲಾಶಯ ಮುಂತಾದ ಸ್ಥಳಗಳಿಗೆ ಭದ್ರತೆ ಒದಗಿಸಿದರೆ ಸಿಬ್ಬಂದಿಗೆ ಸಂಬಳ, ವಸತಿ, ವೈದ್ಯಕೀಯ ವೆಚ್ಚ, ಸಾರಿಗೆ ಮುಂತಾದ ಅಗತ್ಯ ಸೌಕರ್ಯಗಳನ್ನು ಭದ್ರತೆ ಪಡೆದಿರುವ ಸಂಸ್ಥೆಗಳೇ ಭರಿಸಬೇಕು. ಹೀಗಾಗಿ ಒಮ್ಮೆ ಇಂತಿಷ್ಟು ಭದ್ರತೆ ಬೇಕು ಎಂದು ನಿಗದಿಯಾದಲ್ಲಿ ಸಂಸ್ಥೆ ಆವರಣ, ಸುತ್ತ ಮುತ್ತಲಿನ ಜಾಗದಲ್ಲಿ ಸಿಬ್ಬಂದಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಖಾಸಗಿ ಸಂಸ್ಥೆಗಳಿಂದ ಬೇಡಿಕೆ ಬಂದರೆ ಅದನ್ನು ಪರಿಗಣಿಸಲಾಗುತ್ತದೆ. ಸದ್ಯ, ಸರ್ಕಾರಿ ಸಂಸ್ಥೆಗಳ ಬೇಡಿಕೆಗೆ ಆದ್ಯತೆ ನೀಡುತ್ತೇವೆ. ಕೆಎಸ್‌ಐಎಸ್‌ಎಫ್‌ಗೆ ಸರ್ಕಾರ ಇನ್ನಷ್ಟು ಸಿಬ್ಬಂದಿ ನೇಮಕ ಮಾಡಿಕೊಂಡರೆ ಬೇಡಿಕೆ ಪೂರೈಕೆ ಸಾಧ್ಯ.
140 ಸಂಸ್ಥೆಗಳಿಂದ ಬೇಡಿಕೆ:  ರಾಜ್ಯದ ಸರ್ಕಾರ ಸ್ವಾಮ್ಯದ ಜಲಾಶಯಗಳು, ವಿಧಾನಸೌಧ ಸೇರಿದಂತೆ ವಿವಿಧ ಇಲಾಖೆಗಳಿಂದ ಭದ್ರತೆ ಕೋರಿ ಕೆಎಸ್‌ಐಎಸ್‌ಎಫ್‌ಗೆ ಬೇಡಿಕೆ ಬಂದಿದೆ.
ಸಿಐಎಸ್‌ಎಫ್ ಮಾದರಿಯ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯಿಂದ ಭದ್ರತೆ ಕೋರಿ 140ಕ್ಕೂ ಅಧಿಕ ಬೇಡಿಕೆಗಳು ರಾಜ್ಯ ಸರ್ಕಾರ ಸ್ವಾಮ್ಯದ ಜಲಾಶಯಗಳು, ಕಟ್ಟಡಗಳು, ಸಂಸ್ಥೆಗಳಿಂದ ಬಂದಿವೆ. ಸಂಸ್ಥೆಗಳಿಗೆ ಯಾವ ರೀತಿಯ ಬೆದರಿಕೆ ಇದೆ. ಅಗತ್ಯತೆ ಮೇಲೆ ನಿಯೋಜಿಸಲಾಗುತ್ತದೆ.
- ಮುರುಗನ್, ಡಿಐಜಿ, ಆಂತರಿಕ ಭದ್ರತೆ

ಕರ್ನಾಟಕವೇ 2ನೆಯದು
ಸಿಐಎಸ್‌ಎಫ್ ಮಾದರಿ ಅಳವಡಿಸಿಕೊಂಡಿರುವ ದೇಶದ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ರಾಜ್ಯ. ಆಂಧ್ರಪ್ರದೇಶ ಪೊಲೀಸ್ ಇಲಾಖೆ ಮಾತ್ರ ರಾಜ್ಯ ಸಿಬ್ಬಂದಿಯನ್ನು ಕೈಗಾರಿಕಾ ಭದ್ರತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ರಾಜ್ಯ ಸರ್ಕಾರ ಸ್ವಾಮ್ಯದ ಕೇಂದ್ರಗಳ ಭದ್ರತೆಗೆ ಬಳಸಿಕೊಳ್ಳುತ್ತಿದೆ.

 ಮಂಜುನಾಥ ನಾಗಲೀಕರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.