ಚುನಾವಣಾ ಗೆಲುವೇ ಬೆಟ್ಟಿಂಗ್ ಲೆಕ್ಕಾಚಾರ!

ಕನ್ನಡಪ್ರಭ ವಾರ್ತೆ ಬೆಂಗಳೂರು ಏ.18
ಐಪಿಎಲ್ ಜೊತೆಗೆ ಚುನಾವಣಾ ಫಲಿತಾಂಶಕ್ಕೂ ಬೆಟ್ಟಿಂಗ್ ಜೋರು
ಕೆಲವರು ಕುರಿಗಳನ್ನುಪಣಕ್ಕಿಟ್ಟರೆ, ಇನ್ನೂ ಚೀಟಿ ದುಡ್ಡು ಕಟ್ಟಿದ್ದಾರೆ
ಲೋಕಸಭಾ ಚುನಾವಣೆಯ ಮತದಾನ ಮುಗಿದು ಈಗ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಎನ್ನುವ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದ್ದು ಬೆಟ್ಟಿಂಗ್ ಭರಾಟೆ ಕಾವೇರುತ್ತಿದೆ.
ಬೆಟ್ಟಿಂಗ್ನಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರ ಫೇವರೇಟ್ ಆಗಿದೆ. ಬಿಜೆಪಿ ಅಭ್ಯರ್ಥಿ ಸಂಸದ ಅನಂತಕುಮಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರ ನಡುವೆ ತುರುಸಿನ ಪೈಪೋಟಿ ಇದೆ ಎನ್ನುವುದು ಬೆಟ್ಟಿಂಗ್ ಪಂಡಿತರ ಲೆಕ್ಕಾಚಾರ. ಈ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳಿಗೂ ಗೆಲುವಿನ ಸಾಧ್ಯತೆ ಫಿಫ್ಟಿ-ಫಿಫ್ಟಿ ಇರುವುದರಿಂದ 1ಗೆ 1 ಬೆಟ್ಟಿಂಗ್ ಹಾಕಲು ಉತ್ಸುಕರಾಗಿದ್ದಾರೆ. ಜೆಡಿಎಸ್ನ ಅಭ್ಯರ್ಥಿ ರುತ್ ಮನೋರಮಾ ಪರ ಬೆಟ್ಟಿಂಗ್ ಹಾಕುವುದು ಅತಿ ಕಡಿಮೆ.
ಇನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಡಿ.ಕೆ. ಸುರೇಶ್ ಗೆದ್ದೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸದಲ್ಲಿರುವ ಬೆಟ್ಟಿಂಗ್ ಶೂರರು, 1ಗೆ 1.25 ಕೊಡಲು ಸಿದ್ಧರಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಆರ್. ಪ್ರಭಾಕರ್ ರೆಡ್ಡಿ ಕೂಡಾ ಹಿಂದೆ ಬಿದ್ದಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಜೆಡಿಎಸ್ಗೆ ಹೆಚ್ಚಿನ ಅವಕಾಶ ಇದೆ ಎನ್ನುವ ಕಾರ್ಯಕರ್ತರು ರೆಡ್ಡಿ ಅವರ ಪರವಾಗಿಯೂ ಬೆಟ್ಟಿಂಗ್ ಹಾಕುವ ಸಾಧ್ಯತೆ ಹೆಚ್ಚಿವೆ ಎನ್ನುತ್ತಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಮೂರು ಅಭ್ಯರ್ಥಿಗಳ ಪರವಾಗಿಯೂ ಬೆಟ್ಟಿಂಗ್ ನಡೆಯುವ ಸಾಧ್ಯತೆಗಳಿವೆ.
ಇನ್ನು ಬೆಂ.ಉತ್ತರ ಕ್ಷೇತ್ರದಲ್ಲಿ ಸದಾನಂದಗೌಡ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎನ್ನುವುದು ಬೆಟ್ಟಿಂಗ್ ಹಾಕುವವರ ವಾದ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ 60- 40 ಹೋರಾಟವಿದೆ.
ಹೀಗಾಗಿ ಸದಾನಂದಗೌಡ ಅವರ ಮೇಲೆ ಹೆಚ್ಚಿನ ಬೆಟ್ಟಿಂಗ್ ಹಾಕಲಾಗುತ್ತಿದೆ. ಒಂದು ವೇಳೆ ಸಿ. ನಾರಾಯಣಸ್ವಾಮಿ ಗೆದ್ದರೆ ಸದಾನಂದಗೌಡ ಪರ ಬೆಟ್ಟಿಂಗ್ ಹಾಕಿದವರು 1ಕ್ಕೆ 1.10 ನೀಡಬೇಕಾಗುತ್ತದೆ.
ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳಿಗೂ ಗೆಲ್ಲುವ ಅವಕಾಶ ಸಮಾನವಾಗಿದೆ. ಜೆಡಿಎಸ್ನ ನಂದಿನಿ ಆಳ್ವ ಪರ ಬೆಟ್ಟಿಂಗ್ ಹಾಕಲು ಹೆಚ್ಚಿನ ಆಸಕ್ತಿ ಕಂಡು ಬಂದಿಲ್ಲ. ಮತದಾನ ಪ್ರಮಾಣ ಕಳೆದ ಚುನಾವಣೆಗಿಂತ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಯಾರ ಪರ ಮತದಾರ ಆಸಕ್ತಿ ತೋರಿಸಿದ್ದಾನೆ ಎನ್ನುವುದು ಕುತೂಹಲ ಮೂಡಿಸಿದೆ.
ಮೋದಿ ಅಲೆ ಇರುವುದರಿಂದ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುವುದರಿಂದ ಬಿಜೆಪಿ ಗೆಲವು ಖಚಿತ. ಅಲ್ಲದೇ ಕಾಂಗ್ರೆಸ್ನ ಹಿರಿಯ ಮುಖಂಡ ಜಾಫರ್ ಷರೀಫ್ ಕಾಂಗ್ರೆಸ್ ತೊರೆದಿರುವುದು ಬಿಜೆಪಿಗೆ ಲಾಭ ತಂದು ಕೊಡುತ್ತದೆ ಎನ್ನಲಾಗುತ್ತಿದೆ. ಆದರೆ, ಕಾಂಗ್ರೆಸ್ನ ಯುವ ಅಭ್ಯರ್ಥಿ ರಿಜ್ವಾನ್ ಅರ್ಷದ್ ಈ ಬಾರಿ ಪಿ.ಸಿ. ಮೋಹನ್ ಅವರನ್ನು ಸೋಲಿಸುತ್ತಾರೆ ಎನ್ನುವ ಲೆಕ್ಕಾಚಾರದ ಮೇಲೂ ಬೆಟ್ಟಿಂಗ್ ಜೋರಾಗಿದೆ. ಹೀಗಾಗಿ ಇಲ್ಲಿನ 1ಕ್ಕೆ 1 ಬೆಟ್ಟಿಂಗ್ ಕಟ್ಟುವ ಸಾಧ್ಯತೆಗಳಿವೆ.
ನನ್ನ ಸ್ನೇಹಿತ ನಂದನ್ ನೀಲೆಕಣಿ ಅವರು ಗೆಲ್ಲುತ್ತಾರೆಂದು 5 ಸಾವಿರ ಬೆಟ್ಟಿಂಗ್ ಕಟ್ಟಲು ಮುಂದಾಗಿದ್ದಾನೆ. ನನಗೆ ಅನಂತಕುಮಾರ್ ಗೆಲ್ಲುವ ವಿಶ್ವಾಸವಿದೆ. ಆದರೆ, ಇನ್ನು ಸಾಕಷ್ಟು ಕಾಲಾವಕಾಶ ಇರುವ ಕಾರಣ ಯೋಚನೆ ಮಾಡಿ ಮತ ಎಣಿಕೆ ದಿನ ಹತ್ತಿರ ಬಂದಾಗ ಬೆಟ್ಟಿಂಗ್ ಮಾಡುತ್ತೇನೆ ಎಂದು ದಕ್ಷಿಣ ಕ್ಷೇತ್ರದ ರಾಷ್ಟ್ರೀಯ ಪಕ್ಷವೊಂದರ ಕಾರ್ಯಕರ್ತನ ಮಾತು.
ಎಂಎಲ್ಎ ಚುನಾವಣೆಯಷ್ಟು ಕಾವಿಲ್ಲ: ಲೋಕಸಭಾ ಕ್ಷೇತ್ರಗಳು ಹಲವು ವಿಧಾನಸಭಾ ಕ್ಷೇತ್ರ ಒಳಗೊಂಡಿರುವುದರಿಂದ ವಿಧಾನಸಭೆ ಚುನಾವಣೆಯಂತೆ ಸೋಲು ಗೆಲುವಿನ ಲೆಕ್ಕಾಚಾರ ಸುಲಭವಲ್ಲ ಎನ್ನಲಾಗುತ್ತಿದೆ. ಇದರೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಾವು ಕೂಡಾ ನಿಧಾನವಾಗಿ ಏರುತ್ತಿದೆ. ಕ್ರಿಕೆಟ್ ಬೆಟ್ಟಿಂಗ್ ವ್ಯವಸ್ಥಿತವಾಗಿ ನಡೆಯುತ್ತದೆ. ಐಪಿಎಲ್ನಲ್ಲಿ ಬೆಟ್ಟಿಂಗ್ ಹಾಕುವವರಿಗೆ ಹಣವೇ ಪ್ರಧಾನ.
ಆದರೆ, ಚುನಾವಣೆ ಬೆಟ್ಟಿಂಗ್ ಹಾಗಲ್ಲ. ಇಲ್ಲಿ ಹಣಕ್ಕಿಂತಲೂ ಹೆಚ್ಚಾಗಿ ತಮ್ಮ ಪಕ್ಷ ಹಾಗೂ ಅಭ್ಯರ್ಥಿ ಗೆಲ್ಲುವ ಪ್ರತಿಷ್ಠೆ ಮುಖ್ಯ. ಇಲ್ಲೇನಿದ್ದರೂ ಸ್ನೇಹ, ಪರಿಚಯ, ವಿಶ್ವಾಸವಷ್ಟೇ ಕೆಲಸ ಮಾಡುತ್ತದೆ ಎನ್ನುತ್ತಾರೆ ಬೆಟ್ಟಿಂಗ್ ಪ್ರಿಯರು.
ಅಲ್ಲದೆ, ಚುನಾವಣೆಯ ಮತ ಎಣಿಕೆಗೆ ಸರಿಸುಮಾರು ಒಂದು ತಿಂಗಳು ಇರುವುದರಿಂದ, ಮತ ಎಣಿಕೆ ದಿನ ಮೇ 16 ಸಮೀಪವಾಗುತ್ತಿರುವಂತೆ ಬೆಟ್ಟಿಂಗ್ ಹೆಚ್ಚಾಗಲಿದೆ ಎಂದು ಲೆಕ್ಕಾಚಾರ ಮಾಡಲಾಗಿದೆ.
ಬಾಜಿ ಬಜಾರು
ಚಿಕ್ಕಬಳ್ಳಾಪುರ: ಚುನಾವಣೆಯಲ್ಲಿ ಸೋಲು ಗೆಲುವು ಸಾಧಿಸುವ ಅಭ್ಯರ್ಥಿಗಳ ವಿಷಯದಲ್ಲಿ ಮೌಲ್ಯವುಳ್ಳ ವಸ್ತುಗಳನ್ನು, ಜೊತೆಗೆ ಲಕ್ಷಾಂತರ ರುಪಾಯಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ, ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ, ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ನಡುವೆ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ ಎನ್ನುವುದು ಬೆಟ್ಟಿಂಗ್ಗೆ ಹೆಚ್ಚಾಗಲು ಕಾರಣ. ತಾಲೂಕಿನ ಪೆರೇಂದ್ರದಲ್ಲಿ ಮಹಮದ್ ಖಾಲಿದ್ ಮತ್ತು ಮುನಿರಾಜು ತಮ್ಮ ಗೆಳೆಯರ ಸಮ್ಮುಖ ಅಲಿಖಿತ ಒಪ್ಪಂದದಲ್ಲಿ 50 ಸಾವಿರ ಕಟ್ಟಿದ್ದರೆ, ಬಾಗೇಪಲ್ಲಿ ಪಟ್ಟಣದಲ್ಲಿ ಚಾಲಕ ಶ್ರೀನಿವಾಸ್ ದ್ವಿಚಕ್ರ ವಾಹನವನ್ನು ಪಣಕ್ಕಿಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


