ಅರಮನೆ ಸಿಬ್ಬಂದಿಗೆ ಸೈನಿಕರ ಧಿರಿಸು

ಮೈಸೂರು: ಇಲ್ಲಿನ ವಿಶ್ವವಿಖ್ಯಾತ ಅರಮನೆಗೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಆವರಣದಲ್ಲಿ ರಾಜ ಪರಂಪರೆಯ ವಾತಾವರಣ ನಿರ್ಮಿಸಲು ಅರಮನೆ ಆಡಳಿತ ಮಂಡಳಿ ತೀರ್ಮಾನಿಸಿದೆ.
ಈಗ ಅರಮನೆ ಹೊರ ಮತ್ತು ಒಳಾವರಣದಲ್ಲಿ ಪೊಲೀಸರ ರಕ್ಷಣೆ ಇದೆ. ಟಿಕೆಟ್ ವಿತರಣೆ ಕೆಲಸವನ್ನು ಆಡಳಿತ ಮಂಡಳಿ ಸಿಬ್ಬಂದಿ ನಿರ್ವಹಿಸುತ್ತಿದೆ. ಇವರು ರಾಜಾಡಳಿತ ಸಂದರ್ಭದ ಪೋಷಾಕು ಧರಿಸಿದರೆ ಆಕರ್ಷಣೀಯವಾಗಿರುತ್ತದೆ ಎಂಬುದು ತಜ್ಞರ ವಾದ.
ಅದರಂತೆ ಟಿಕೆಟ್ ಸಂಗ್ರಹ ಮತ್ತು ವಾಹನ ನಿಲುಗಡೆಯಿಂದ ಬರುವ ಆದಾಯದಲ್ಲಿ ಸ್ವಲ್ಪ ವೆಚ್ಚ ಮಾಡಿ ಸಿಬ್ಬಂದಿಗೆ ಇಂಥ ಪೋಷಾಕು ನೀಡುವುದು ಮತ್ತು ಕೈಗೆ ಬೆತ್ತದ ಬದಲಿಗೆ ಈಟಿ ಮಾದರಿ ಆಯುಧ ನೀಡುವುದು, ರಾಜರ ಕಾಲದಂತೆ ದ್ವಾರದ ಎರಡು ಬದಿ ಸಿಬ್ಬಂದಿ ನಿಲ್ಲಿಸುವ ಉದ್ದೇಶ ಮಂಡಳಿ ಹೊಂದಿದೆ.
ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿದ್ದ ಮೈಸೂರು ಸಿವಿಲ್ ಯೂನಿಫಾರಂ ಮಾದರಿಯ ಸಮವಸ್ತ್ರ ನೀಡುವುದು ಮಂಡಳಿ ಇರಾದೆ. ಕಡು ಕೆಂಪು ವರ್ಣದ ಮಂಡಿವರೆಗಿನ ಜುಬ್ಬದ ಮಾದರಿಯ ಬಟ್ಟೆ, ವೆಲ್ವೆಟ್ನ ಕಾಲರ್, ಚಿನ್ನ ವರ್ಣ ಲೇಪಿತ ಉದ್ದನೆಯ ಎಂಬ್ರಾಯಿಡರಿ ಕಫ್, ಕಮ್ಮರ್ ಬಂದ್ ಹೆಸರಿನ ಉತ್ತರಿಯವನ್ನು ಸೊಂಟಕ್ಕೆ ಕಟ್ಟಿಕೊಂಡು, ಬಿಳಿ ಪ್ಯಾಂಟ್ ಧರಿಸಿರುತ್ತಾರೆ. ಕೆಂಪು ಬಣ್ಣದ ರುಮಾಲನ್ನು ತಲೆಗೆ ಸುತ್ತಿರುತ್ತಾರೆ.
ಪ್ರಮುಖ ದ್ವಾರಗಳಾದ ಜಯಮಾರ್ತಾಂಡ, ಬಲರಾಮ, ಕರಿಕಲ್ಲುತೊಟ್ಟಿ, ವರಹಾ ಗೇಟ್ಗಳ ಬಳಿ ಸೈನಿಕರ ಪೋಷಾಕು ಧರಿಸಿದ ಅಶ್ವಾರೋಹಿ ಪೊಲೀಸ್ ಸಿಬ್ಬಂದಿ ಕುದುರೆ ಮೇಲೆ ಕಾವಲಿರುವಂತೆ ನೋಡಿಕೊಳ್ಳುವ ಆಲೋಚನೆಯೂ ಇದೆ. ಈಗ ದಸರಾ ವೇಳೆ ಮಾತ್ರ ಈ ಉಡುಪು ಧರಿಸುತ್ತಾರೆ.
ಅರಮನೆ ಸುತ್ತಲಿನ 40 ಎಕರೆ ಉದ್ಯಾನ ವನ್ನು ಊಟಿ ಮಾದರಿ ಅಭಿವೃದ್ಧಿಪಡಿಸಿ ಪ್ರತಿ ದಸರಾ ವೇಳೆಗೆ ಬೃಹತ್ ಪುಷ್ಪ ಪ್ರದರ್ಶನ ಆಯೋಜಿಸಲೂ ಮಂಡಳಿ ತೀರ್ಮಾನಿಸಿದೆ.
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. 365 ದಿನವೂ ಪ್ರವಾಸಿಗರ ಸಂಖ್ಯೆ ಹೀಗೆಯೇ ಇರುವಂತೆ ಮಾಡಲು ಅರಮನೆ ಮಂಡಳಿ ಉದ್ದೇಶಿಸಿದೆ.
ಪರಂಪರೆ ಉಳಿಸಿಕೊಂಡರೆ ಹೆಚ್ಚು ಪ್ರವಾಸಿಗರ ಸೆಳೆಯಲು ಸಾಧ್ಯ. ಆ ಮೂಲಕ ಸ್ಥಳೀಯ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ. ಇದನ್ನು ಮಂಡಳಿ ಸಭೆಯಲ್ಲಿಟ್ಟು ಅನುಮತಿ ಪಡೆಯಲಾಗುವುದು.
- ಟಿ.ಎಸ್. ಸುಬ್ರಹ್ಮಣ್ಯ ಉಪ ನಿರ್ದೇಶಕ, ಅರಮನೆ ಮಂಡಳಿ
-ಡಿ.ಎನ್. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


