ಪ್ರಧಾನ ಸುದ್ದಿ

ದೇಶಕ್ಕೆ ಮೋದಿ ನಾಯಕತ್ವ ಅನಿವಾರ್ಯ

ದೇಶಕ್ಕೆ ಮೋದಿ ನಾಯಕತ್ವ ಅನಿವಾರ್ಯ
Published On :

ಪ್ರಧಾನಿಯಾದ ಬಳಿಕ ಮೊದಲ ಅನಂತ ನಮೋ ಮೂರ್ತಿಯದ್ದೇ: ಭೈರಪ್ಪ

ಕನ್ನಡಪ್ರಭ ವಾರ್ತೆ ,  ಬೆಂಗಳೂರು ,  ಏ.22

ವಂಶಪಾರಂಪರ್ಯ ಆಡಳಿತ ವಾಕರಿಕೆ ಹುಟ್ಟಿಸಿರುವುದರಿಂದ ದೇಶಕ್ಕೆ ನರೇಂದ್ರ ಮೋದಿ ನಾಯಕತ್ವ ಅನಿವಾರ್ಯ ಎಂದಿರುವ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ, ಮೋದಿ ಪ್ರಧಾನಿಯಾದರೆ ಮೊದಲು ಹೂಗುಚ್ಛ ನೀಡುವ ವ್ಯಕ್ತಿ ಅನಂತಮೂರ್ತಿ ಎಂದು ಲೇವಡಿ ಮಾಡಿದ್ದಾರೆ.
'ಮೊದಲ ಬಾರಿಗೆ ಒಂದು ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಪರ ಹೇಳಿಕೆ ನೀಡಿದ್ದೇನೆ. ಇದು ಈ ದಿನದ ಅಗತ್ಯ. ಆದರೆ ಅನಂತಮೂರ್ತಿ ಈ ಹಿಂದೆ ದೇವೇಗೌಡ, ರಾಮಕೃಷ್ಣ ಹೆಗಡೆ, ಸಿದ್ದರಾಮಯ್ಯ ಪರ ಹೇಳಿಕೆ ನೀಡಿದ್ದರು. ಅಧಿಕಾರಕ್ಕೇರುವ ಪಕ್ಷ ಹಾಗೂ ವ್ಯಕ್ತಿಗಳ ಪರ ಮಾತನಾಡುವುದು ಅನಂತಮೂರ್ತಿಗೆ ಮೊದಲಿಂದ ಅಂಟಿದೆ. ಆದರೆ ನಾನು ದೇಶದ ಒಳಿತಿಗಾಗಿ ಮೋದಿ ಅನಿವಾರ್ಯವಾಗಿರುವುದರಿಂದ ಹೇಳಿಕೆ ನೀಡುತ್ತಿದ್ದೇನೆ ಎಂದರು.
ಮೋದಿ ಬೆಂಬಲಿಸಲು ಮನವಿ ಮಾಡಿ ಸಾಹಿತಿಗಳಾದ ನರೇಂದ್ರ ಕೊಹ್ಲಿ, ತುಹಿಲ್ ಸಿನ್ಹಾ ಅವರೊಂದಿಗೆ ಭೈರಪ್ಪ ನವದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ನೆಹರು ಹಾಗೂ ಗಾಂಧಿ ಮನೆತನ ಬಿಟ್ಟು ಮತ್ಯಾರು ಅಧಿಕಾರ ನಡೆಸಲು ಲಾಯಕ್ಕಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ಈ ಚಿಂತನೆಯು ದೇಶದ ಜನತೆಗೆ ವಾಕರಿಕೆ ತರಿಸಿದೆ. ಆದರೆ ಮೋದಿ ಪರ ಹೇಳಿಕೆ ಏಕ ವ್ಯಕ್ತಿ ಆರಾಧನೆಯಲ್ಲ. ದೇಶಕ್ಕೆ ಸಮರ್ಥ ಹಾಗೂ ಪ್ರಭಾವಿ ನಾಯಕನ ಅಗತ್ಯವಿದೆ. ಈ ಸ್ಥಾನವನ್ನು ಮೋದಿ ತುಂಬುವ ವಿಶ್ವಾಸವಿದೆ ಎಂದು ಭೈರಪ್ಪ ಹೇಳಿದರು.
ಅಭಿವೃದ್ಧಿ ತೋರಿದ್ದಾರೆ: ಮೋದಿಯನ್ನು ಹಿಂದುತ್ವದ ಪ್ರತೀಕ ಎಂದು ಬಿಂಬಿಸಲಾಗುತ್ತಿದೆ. ಆದರೆ ಮುಸ್ಲಿಂ ಸೇರಿದಂತೆ ಎಲ್ಲ ವರ್ಗಗಳ ಒಟ್ಟಾಗಿ ಕರಕೊಂಡು ಹೋಗುವ ಸಾಮರ್ಥ್ಯ ಅವರಲ್ಲಿದೆ. ಮತ್ತೊಂದೆಡೆ ಅಭಿವೃದ್ಧಿ ವಿಚಾರ ಬಂದಾಗ ಅಲ್ಲಿ ಧರ್ಮ ಪ್ರವೇಶಿಸುವುದಿಲ್ಲ. ಅಭಿವೃದ್ಧಿ ಎಲ್ಲರಿಗೂ ಅನ್ವಯ ಎಂದು  ಅಭಿಪ್ರಾಯಪಟ್ಟರು.
ಗುಜರಾತ್ ದಂಗೆಯಲ್ಲಿ ಮೋದಿ ಪಾತ್ರವಿಲ್ಲವೆಂದು ಕೋರ್ಟ್ ಸ್ಪಷ್ಟಪಡಿಸಿದ್ದರೂ ಮೋದಿಯನ್ನು ಸಿಲುಕಿಸುವ ಸಂಚನ್ನು ಮಾಡಲಾಗುತ್ತಿದೆ. ಜನರು ಇದನ್ನು ಅರ್ಥೈಸಿಕೊಳ್ಳುವ ಶಕ್ತಿ ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಒಳ್ಳೆಯ ನಾಯಕ. ರಾಜ್ಯದ ಜನ ಅವರನ್ನು ಮೆಚ್ಚಿದ್ದಾರೆ. ಆದರೆ ಸಂಚು ರೂಪಿಸಿ ಅವರನ್ನು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಜ್ಞಾನಪೀಠಿ ತಿರುಗೇಟು
ರಾಜ್ಯ ಬಿಜೆಪಿ ಸರ್ಕಾರವು ಅಕ್ರಮ ಗಣಿಗಾರಿಕೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾಗ ಒಂದೂ ಮಾತನಾಡದ ಭೈರಪ್ಪ, ಈಗ ಮೋದಿ ಪರ ನಿಂತಿರುವುದು ಹಾಸ್ಯಾಸ್ಪದ. ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸದ ಕಲ್ಲು ಹೃದಯದ ಭೈರಪ್ಪ ಈಗ ಮೋದಿ ಪರ ನಿಂತಿದ್ದಾರೆ. ಮೋದಿಯೊಬ್ಬ ಹಿಟ್ಲರ್ ಎನ್ನುವುದನ್ನು ಅರ್ಥೈಸಿಕೊಳ್ಳದೇ ಬೆಂಬಲಿಸುತ್ತಿದ್ದಾರೆ. ಇನ್ನು ಮೋದಿ ಪ್ರಧಾನಿಯಾದರೆ ಹೂಗುಚ್ಛ ನೀಡುತ್ತೇನೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ಜ್ಞಾನಪೀಠ ಸಾಹಿತಿ ಯು.ಆರ್. ಅನಂತಮೂರ್ತಿ ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.