ಹಿಂಸೆಯ ನಡುವೆ 11 ರಾಜ್ಯದಲ್ಲಿ ದಾಖಲೆ ಮತ

ಪಶ್ಚಿಮ ಬಂಗಾಳ 82
ಅಸ್ಸಾಂ 77.5
ತಮಿಳುನಾಡು 73
ಮಧ್ಯಪ್ರದೇಶ 64.4
ಜಾರ್ಖಂಡ್ 63.4
ಛತ್ತೀಸ್ಗಡ 62.5
ಬಿಹಾರ 60
ರಾಜಸ್ಥಾನ 59.2
ಉ.ಪ್ರದೇಶ 58.58
ಮಹಾರಾಷ್ಟ್ರ 55.33
ಶೇಕಡಾವಾರು ಪ್ರಮಾಣ
ನವದೆಹಲಿ: ದೇಶದ 11 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 117 ಸ್ಥಾನಗಳಿಗೆ ಗುರುವಾರ ಮತದಾನ ನಡೆದಿದೆ. 6ನೇ ಹಂತದ ಮತದಾನದ ವೇಳೆ ಕೆಲವು ರಾಜ್ಯಗಳಲ್ಲಿ ಹಿಂಸಾಚಾರದ ಘಟನೆಗಳು ನಡೆದವು. ಮಹಾರಾಷ್ಟ್ರ ಹಾಗೂ ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳಲ್ಲೂ ಉತ್ತಮ ಮತದಾನ ದಾಖಲಾಗಿದೆ. ಪುದುಚೇರಿ ಮತ್ತು ಪಶ್ಚಿಮ ಬಂಗಾಳದಲ್ಲಿ ದಾಖಲೆ ಮತದಾನವಾಗಿದೆ.
ಕೆಲವೆಡೆ ಹಿಂಸಾಚಾರ
6ನೇ ಹಂತದ ಮತದಾನದ ವೇಳೆ ಕೆಲವು ರಾಜ್ಯಗಳಲ್ಲಿ ಹಿಂಸಾಚಾರ ನಡೆದಿದೆ. ಅಸ್ಸಾಂನಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದು, ಇತರೆ ರಾಜ್ಯಗಳಲ್ಲಿ ಒಟ್ಟಾರೆ 13 ಮಂದಿ ಗಾಯಗೊಂಡಿದ್ದಾರೆ. ಅಸ್ಸಾಂನ ಕೊಕ್ರಝಾರ್ ಕ್ಷೇತ್ರದಲ್ಲಿ 40 ಮಂದಿ ದುಷ್ಕರ್ಮಿಗಳು ಮತಗಟ್ಟೆಯನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದಾಗ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದು, ಈ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ರಾಜಸ್ಥಾನ, ತಮಿಳುನಾಡು, ಜಾರ್ಖಂಡ್ನಲ್ಲಿ ಸಣ್ಣಪುಟ್ಟ ಘರ್ಷಣೆ ನಡೆದಿದೆ.
ಬಾಲಿವುಡ್ ಮತ
ವಾಣಿಜ್ಯ ನಗರಿ ಮುಂಬೈನಲ್ಲಿ ಬಾಲಿವುಡ್ ಹಾಗೂ ಕಾರ್ಪೊರೇಟ್ ಲೋಕದ ದಿಗ್ಗಜರು ಆಸಕ್ತಿಯಿಂದ ಮತ ಚಲಾಯಿಸಿದ್ದು ಕಂಡುಬಂತು. ತಾರೆಯರಾದ ಅಮೀರ್ ಖಾನ್, ರೇಖಾ, ವಿದ್ಯಾ ಬಾಲನ್, ಸನ್ನಿ ಡಿಯೋಲ್, ಸೋನಂ ಕಪೂರ್, ಉದ್ಯಮಿಗಳಾದ ಆದಿ ಗೋದ್ರೇಜ್, ಅನಿಲ್ ಅಂಬಾನಿ, ಎಸ್ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹಕ್ಕು ಚಲಾಯಿಸಿದರು. ಆದರೆ ಮುಂಬೈನಲ್ಲಿ ಶೇ.53ರಷ್ಟು ಮತದಾನವಷ್ಟೇ ನಡೆದಿದೆ.
ರಜನಿ ಮೊದಲು
ಚೆನ್ನೈ ಕೇಂದ್ರ ಕ್ಷೇತ್ರದಲ್ಲಿ ಸೂಪರ್ಸ್ಟಾರ್ ರಜನೀಕಾಂತ್ ಅವರು ಮೊದಲ ಮತದಾರ. ಗುರುವಾರ ಬೆಳಗ್ಗೆ 7ಗಂಟೆಗೆ ಸ್ಟೆಲ್ಲಾ ಮರಿಯಾ ಕಾಲೇಜಿನ ಮತಗಟ್ಟೆಗೆ ಆಗಮಿಸಿ ಅವರು ಹಕ್ಕು ಚಲಾಯಿಸಿದರು.
ಸಚಿನ್ಗೆ ವಿಶಿಷ್ಟ ಬರ್ತ್ಡೆ
ಗುರುವಾರ ತಮ್ಮ 41ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಕ್ಕು ಚಲಾಯಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. ಮತದಾನ ಮಾಡಲೆಂದೇ ದುಬೈನಿಂದ ಮರಳಿದ ಸಚಿನ್, ಪತ್ನಿ ಅಂಜಲಿ ಜತೆ ಬಾಂದ್ರಾ ಸಮೀಪದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಬಳಿಕ ಶಾಯಿ ಹಚ್ಚಿದ ಕೈಬೆರಳಿನ ಚಿತ್ರವನ್ನು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದ ಸಚಿನ್, 'ನಾನು ಮತ ಹಾಕಿದೆ. ನೀವು ಹಾಕಿದಿರಾ? ಜವಾಬ್ದಾರಿಯುತ ನಾಗರಿಕನಾಗಿ ಮತ ಹಾಕುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದು ಸಂತಸ ತಂದಿದೆ' ಎಂದು ಟ್ವೀಟ್ಮಾಡಿದರು.
ಮೋದಿ ಅಲೆಯಿಲ್ಲ: ಪ್ರಧಾನಿ
ಗುವಾಹಟಿಯಲ್ಲಿ ಪ್ರಧಾನಿ ಸಿಂಗ್, ಪತ್ನಿ ಗುರುಶರಣ್ ಕೌರ್ ಅವರು ಹಕ್ಕು ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ದೇಶದಲ್ಲಿ ಮೋದಿ ಅಲೆಯಿಲ್ಲ. ಅದೆಲ್ಲ ಮಾಧ್ಯಮಗಳ ಸೃಷ್ಟಿ. ಕಾಂಗ್ರೆಸ್ ಪಕ್ಷ ಬಹುಮತ ಗಳಿಸುವುದು ಖಚಿತ ಎಂದರು.
ನಾನು ಮತ ಹಾಕಿದೆ.. ನೀವೂ ಹಾಕಿದಿರಾ? ಶ್ರೇಷ್ಠ ರಾಷ್ಟ್ರದ ಜವಾಬ್ದಾರಿಯುತ ನಾಗರಿಕನಾಗಿ ನನ್ನ ಹುಟ್ಟುಹಬ್ಬದ ದಿನವನ್ನು ಅದ್ಭುತವಾಗಿ ಆರಂಭಿಸಿದೆ.
- ಸಚಿನ್ ತೆಂಡೂಲ್ಕರ್
ಹಕ್ಕು ಚಲಾವಣೆಯು ಪ್ರಜಾಪ್ರಭುತ್ವದ ಪ್ರಮುಖ ಪ್ರಕ್ರಿಯೆ. ಒಬ್ಬ ಭಾರತೀಯನಾಗಿ ಮತ ಹಾಕುವುದು ನನ್ನ ಕರ್ತವ್ಯ.
- ಅಮೀರ್ ಖಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


