ಶಿವಮೊಗ್ಗದಲ್ಲಿ ಹೊಸ ಮತದಾರರೇ ನಿರ್ಣಾಯಕ

ಶಿವಮೊಗ್ಗ: ಲೋಕಸಭೆ ಕ್ಷೇತ್ರದಲ್ಲಿ ನಡೆದಿದ್ದು ಮಾಜಿ ಮುಖ್ಯಮಂತ್ರಿಗಳ ಎರಡು ಕುಟುಂಬಗಳ ನಡುವಿನ ಸಾಂಪ್ರದಾಯಿಕ ಕದನ. ಬಿಜೆಪಿಯು ಬಿ.ಎಸ್. ಯಡಿಯೂರಪ್ಪ ಅವರ ಸಾಮರ್ಥ್ಯ ನಂಬಿಕೊಂಡಿದ್ದರೆ, ಜೆಡಿಎಸ್ ಬಂಗಾರಪ್ಪ ಅವರ ಪ್ರಭಾವ ಆಶ್ರಯಿಸಿತ್ತು. ಈ ನಡುವೆ ಕಾಂಗ್ರೆಸ್ ಪಕ್ಷವು ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪೈಪೋಟಿ ನಡೆಸಿತ್ತು.
ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯಂತೆ ಕಂಡರೂ ಚುನಾವಣೆ ನಂತರ ನೇರ ಹಣಾಹಣಿಯ ಲಕ್ಷಣ ಕಾಣುತ್ತಿದೆ. ಫೋಟೊ ಫಿನಿಷ್ ಫಲಿತಾಂಶದ ಸಾಧ್ಯತೆ ಕಡಿಮೆಯೇ. ಬಿಜೆಪಿಯ ಯಡಿಯೂರಪ್ಪ, ಜೆಡಿಎಸ್ನ ಗೀತಾ ಶಿವರಾಜಕುಮಾರ್, ಕಾಂಗ್ರೆಸ್ನ ಮಂಜುನಾಥ ಭಂಡಾರಿ ನಡುವೆ ತುರುಸಿನ ಸ್ಪರ್ಧೆ ನಡೆದಿದೆ. ಈ ನಡುವೆ ಆಮ್ ಆದ್ಮಿ ಪಕ್ಷದ ಶ್ರೀಧರ ಕಲ್ಲಹಳ್ಳ ಮಿಂಚು ಮೂಡಿಸಿದ್ದಾರೆ.
ಯಾರ ಮತ ಯಾರಿಗೆ?: ಜಾತಿ ಇಲ್ಲದೆ ಚುನಾವಣೆ ಇಲ್ಲ. ರಾಜಕೀಯ ಪಕ್ಷಗಳು ತಾವು ಎಷ್ಟೇ ಜಾತ್ಯತೀತ ಎಂದು ಹೇಳಿಕೊಂಡರೂ ಕೊನೆಗೆ ಚುನಾವಣೆ ಸಮಯದಲ್ಲಿ ಜಾತಿ ಆಧರಿಸುವುದು ಅನಿವಾರ್ಯ. ಈ ಬಾರಿಯ ಚುನಾವಣೆಯಲ್ಲಿ ಯಾವ ಜಾತಿಯವರು ಯಾರಿಗೆ ಮತ ನೀಡಿರಬಹುದು ಚುನಾವಣೋತ್ತರ ಸಮೀಕ್ಷೆಯಂತೆ ಹೀಗಿದೆ ಒಂದು ಲೆಕ್ಕಾಚಾರ. ಒಂದು ಸಮುದಾಯದ ಎಲ್ಲರೂ ಸಾರಾಸಗಟಾಗಿ ಬೆಂಬಲಿಸಿದ್ದಾರೆ ಎಂದು ಹೇಳಲಾಗದಿದ್ದರೂ ಒಟ್ಟಾರೆ ದಿಸೆ ಹೀಗಿತ್ತು ಎನ್ನಬಹುದು.
ಮತ ಹಂಚಿಕೆ: ನಿರ್ಣಾಯಕ ಎಂದೆನಿಸಿರುವ ಮುಸ್ಲಿಂ ಮತಗಳು ಬಿಜೆಪಿ ವಿರುದ್ಧವಾಗಿಯೇ ಚಲಾವಣೆಯಾಗಿವೆ. ಈ ಮತಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಹಂಚಿಹೋಗಿವೆ. 2008 ಹಾಗೂ 2009ರ ಚುನಾವಣೆಯಲ್ಲಿ ಆದಂತೆ ಲಿಂಗಾಯಿತರು ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಅವರನ್ನೆ ಬೆಂಬಲಿಸಿದ್ದಾರೆ. ಬ್ರಾಹ್ಮಣ, ತಮಿಳು ಸಮುದಾಯಗಳೂ ಇವರ ಪರ ನಿಂತಿವೆ.
ಈಡಿಗರ ಹೆಚ್ಚು ಮತಗಳು ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರತ್ತ ಒಲವು ತೋರಿದ್ದಾರೆ. ತೀರ್ಥಹಳ್ಳಿ ಹಾಗೂ ಭದ್ರಾವತಿಯಲ್ಲಿರುವ ಒಕ್ಕಲಿಗ ಸಮುದಾಯದವರ ಮತಗಳೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಹಂಚಿಕೆಯಾಗಿವೆ. ಇದೇ ರೀತಿ ಕ್ರೈಸ್ತರ ಮತಗಳೂ ಸಹ.
ಮಡಿವಾಳರ ಮತಗಳಲ್ಲಿ ಬಹುಪಾಲು ಬಿಜೆಪಿಗೆ ಬಂದಿವೆ. ಹಿಂದುಳಿದ ವರ್ಗದವರ ಮತಗಳ ಬುಟ್ಟಿಗೆ ಬಿಜೆಪಿ ಕೈಹಾಕಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಪೆಟ್ಟು ನೀಡಿರುವ ಸಾಧ್ಯತೆ ಇದೆ. ಬಂಟರ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿರಬಹುದು.
ಹೊಸ ಮತದಾರರು: ಸುಮಾರು ಒಂದೂಕಾಲು ಲಕ್ಷದಷ್ಟಿರುವ ಹೊಸ ಮತದಾರರು ನಿರ್ಣಾಯಕರೆನಿಸಿದ್ದಾರೆ. ಈ ಮತದಾರರು ಬಹುತೇಕ ಫೇಸ್ಬುಕ್ ಮುಖಗಳೇ ಆಗಿವೆ. ಮೋದಿ ಅಲೆ ಇವರನ್ನು ಮೋಡಿ ಮಾಡಿದೆಯೇ, ಅಥವಾ ಬುದ್ಧಿವಂತ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೋ, ಸಿನಿಮಾ ನಟರ ಪ್ರವಾಹಕ್ಕೆ ಮಾರು ಹೋಗಿದ್ದಾರೋ ಎನ್ನುವುದು ಗೆಲವಿಗೆ ನಿರ್ಣಾಯಕವಾಗಲಿದೆ. ತ್ರಿಕೋನ ಸ್ಪರ್ಧೆಯೇ ನಡೆದಿದ್ದರೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಯಾರನ್ನು ಸೋಲಿಸಿರಬಹುದು ಎಂಬುದೂ ಕುತೂಹಲದ ಅಂಶವೇ.
ಮೇಲುಗೈ ನಿರೀಕ್ಷೆ: ಸಹಜವಾಗಿ ಶಿಕಾರಿಪುರದಲ್ಲಿ ಬಿಜೆಪಿ ಮೇಲುಗೈ ಸಾಧಿಸುವ ನಿರೀಕ್ಷೆ ಇಟ್ಟುಕೊಂಡಿದೆ. ಇದೇ ಭಾವನೆಯನ್ನು ಜೆಡಿಎಸ್ ಪಕ್ಷವು ಸೊರಬದ ಜನತೆಯ ಮೇಲೆ ಹೊಂದಿದೆ. ಬೈಂದೂರು ಕ್ಷೇತ್ರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾಡಿರುವ ಕೆಲಸ ಬಿಜೆಪಿ ಕೈ ಹಿಡಿಯಬಹುದು. ತೀರ್ಥಹಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಭಾರಿ ಪ್ರಯತ್ನ ಮಾಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ಕೊಡಿಸುವ ಸವಾಲಿನೊಂದಿಗೆ ಕೆಲಸ ಮಾಡಿದ್ದಾರೆ. ಭದ್ರಾವತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಸಾಗರದಲ್ಲಿ ಮೂರೂ ಪಕ್ಷಗಳು ಸಮಬಲದ ಸಾಹಸ ನಡೆಸಿವೆ. ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಕ್ಷೇತ್ರಗಳಲ್ಲಿ ಸಹ ಮೂರೂ ಪಕ್ಷಗಳ ತೀವ್ರ ಸೆಣಸಾಟವಿತ್ತು. ಎಲ್ಲ ಸಮುದಾಯದವರೂ ತಮ್ಮ ತೀರ್ಮಾನ ಏನೆಂದು ಹೇಳಿದ್ದು, ಅದೀಗ ಬ್ಯಾಲೆಟ್ನಲ್ಲಿ ಭದ್ರವಾಗಿದೆ. ಗೊತ್ತಾಗಬೇಕಷ್ಟೇ.
ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


