ಬೆಮೆಲ್, ಬಿಎಚ್‌ಇಎಲ್‌ಗೂ ಮೈಲ್ಯಾಕ್ ಬಣ್ಣ
ಮೈಸೂರು: ಚುನಾವಣೆ ಸಮೀಪಿಸಿತು ಎಂದರೆ ಮೈಸೂರಿನ ಅಳಿಸಲಾಗದ ಶಾಯಿ ಎಲ್ಲರ ಜ್ಞಾಪಕಕ್ಕೆ ಬರುತ್ತದೆ. ಆದರೆ ದೇಶದ ಪ್ರಮುಖ ಉದ್ಯಮಗಳಾದ ಬೆಮೆಲ್, ಬಿಎಚ್‌ಇಎಲ್, ಕೆಎಸ್ಸಾರ್ಟಿಸಿ, ಕೆಪಿಟಿಸಿಎಲ್ ಮುಂತಾದ ಅನೇಕ ಕಾರ್ಖಾನೆಗಳಿಗೂ ಮೈಲ್ಯಾಕ್ ತಯಾರಿಸುವ ಮೈಸೂರು ಪೇಂಟ್ಸ್ ಬೇಕೆ ಬೇಕು.
ಬಣ್ಣ ತಯಾರಿಕೆಯಲ್ಲಿರುವ ದೇಶದ ಏಕೈಕ ಸಾರ್ವಜನಿಕ ಉದ್ಯಮವಾದ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಸಂಸ್ಥೆಯು ಇಡೀ ದೇಶಕ್ಕೆ ಅಳಿಸಲಾಗದ ಶಾಯಿ ಪೂರೈಸುವ ಜೊತೆಗೆ ತಾನು ತಯಾರಿಸುವ ಎಪಾಕ್ಸಿ ಪೇಂಟ್ಸ್, ವಾರ್ನಿಷ್, ಜಿಂಕ್ ರಿಚ್ ಪ್ರೈಮರ್, ಪಾಲಿಯೂರಿಥೀನ್ ಪೇಂಟ್ಸ್, ಸೀಲಿಂಗ್ ವ್ಯಾಕ್ಸಸ್ ಅನ್ನು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಕ್ಕೆ ಪೂರೈಸುತ್ತಿದೆ.
ಯುದ್ಧ ಭೂಮಿಯಲ್ಲಿ ಸೈನಿಕರು ಮತ್ತು ಆಹಾರ ಸಾಮಗ್ರಿಯನ್ನು ಸಾಗಿಸುವ ದೊಡ್ಡ ಟ್ಯಾಂಕರ್‌ಗಳು, ಜೆಸಿಬಿ ಯಂತ್ರಗಳು ಮತ್ತು ರೈಲು ಬೋಗಿಗಳ ತಯಾರಿಕೆಗೆ ಅಗತ್ಯ ವಸ್ತುಗಳನ್ನು ಪೂರೈಸುವ ಬೆಮೆಲ್, ದೊಡ್ಡ ಎಲೆಕ್ಟ್ರಿಕಲ್ ಉಪಕರಣ ತಯಾರಿಸುವ ಬಿಎಚ್‌ಇಎಲ್, ಕರ್ನಾಟಕ ಮತ್ತು ಕೇರಳದ ಸಾರಿಗೆ ಬಸ್‌ಗಳು, ಕೆಪಿಟಿಸಿಎಲ್‌ನ ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಸಕ್ಕರೆ ಕಾರ್ಖಾನೆಗಳೂ ಸಹ ಮೈಸೂರು ಪೇಂಟ್ಸ್ ಬಳಸುತ್ತವೆ ಎಂದರೆ ಅಚ್ಚರಿ ಆಗಬಹುದು. ಬದಲಾಗುವ ವಾತಾವರಣ, ಬಿಸಿಲು, ಮಳೆಗೂ ಮಾಸದ ಬಣ್ಣ ಇದಾಗಿದೆ. ಈ ಮೇಲೆ ಕಾಣಿಸಿದ ಯಂತ್ರೋಪಕರಣಗಳಿಗೆ ಸಾಧಾರಣ ಪೇಂಟ್ ಬಳಸುವುದು ಅಸಾಧ್ಯ. ಆದ್ದರಿಂದ ಅನೇಕ ಕಂಪನಿಗಳು ಮುಂಚೆಯೇ ಸೂಚಿಸಿ ತಮಗೆ ಬೇಕಾದ ಮಾದರಿಯ ಬಣ್ಣವನ್ನು ತಯಾರಿಸಿಕೊಳ್ಳುತ್ತವೆ.
ಬಣ್ಣದ ಉತ್ಪನ್ನಗಳಿಂದಲೆ ಮೈಲ್ಯಾಕ್ ಸಂಸ್ಥೆ ಪ್ರತಿ ವರ್ಷ 6 ರಿಂದ 10 ಕೋಟಿ ಮೊತ್ತದ ವಹಿವಾಟು ನಡೆಸುತ್ತದೆ. 1937ರಲ್ಲಿ ಮೈಸೂರಿನ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಈ ಸಂಸ್ಥೆಯು 1947ರ ಸುಮಾರಿಗೆ ಸಾರ್ವಜನಿಕ ಉದ್ದಿಮೆಯಾಗಿ ಪರಿವರ್ತನೆ ಆಯಿತು. ಅಂದಿನಿಂದ ಇಂದಿನವರೆಗೆ ಇತರೆ ಬಹುರಾಷ್ಟ್ರೀಯ ಖಾಸಗಿ ಕಂಪನಿಗಳ ಒತ್ತಡದ ನಡುವೆಯೂ ದೇಶದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದೆ ಎನ್ನುತ್ತಾರೆ ಮೈಲ್ಯಾಕ್‌ನ ಪ್ರಧಾನ ವ್ಯವಸ್ಥಾಪಕ ಸಿ. ಹರ ಕುಮಾರ್.
ವ್ಯಾಕ್ಸಸ್‌ಗೆ ಹೆಚ್ಚಿದ ಬೇಡಿಕೆ: ಮೈಲ್ಯಾಕ್ ತಯಾರಿಸುವ ಸೀಲಿಂಗ್ ವ್ಯಾಕ್ಸಸ್‌ಗೆ ಬೇಡಿಕೆ ಹೆಚ್ಚಿದೆ. ಅನೇಕ ಸಂದರ್ಭಗಳಲ್ಲಿ ಪೊಲೀಸರು ಅಥವಾ ನ್ಯಾಯಾಲಯದಿಂದ ಬೀಗ ಮುದ್ರೆ ಹಾಕುವುದು, ಮತಪೆಟ್ಟಿಗೆಯನ್ನು ಸೀಲ್ ಮಾಡುವುದಕ್ಕೆ ಮೈಲ್ಯಾಕ್‌ನ ಈ ಸೀಲಿಂಗ್ ವ್ಯಾಕ್ಸಸ್ ಬಳಸಲಾಗುತ್ತದೆ. ಅಂತೆಯೇ ಅಂಚೆ ಕಚೇರಿಯಲ್ಲಿ ಬಳಸುವ ಕಪ್ಪು ಬಣ್ಣದ ಸೀಲ್ (ಪೋಸ್ಟಲ್ ಸ್ಟಾಂಪ್ ಕ್ಯಾನ್ಸುಲೇಷನ್ ಇಂಕ್) ಇಲ್ಲಿಯೇ ತಯಾರಾಗುತ್ತದೆ. ಇಲ್ಲಿ ತಯಾರಾಗುವ ಜಿಂಕ್ ರಿಚ್ ಪ್ರೈಮರ್ ಮತ್ತು ಕೋಲ್‌ಟಾರ್ ಎಪಾಕ್ಸಿ ಪೆಯಿಂಟ್ಸ್ ಅನ್ನು ಅಣೆಕಟ್ಟುಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಬೇರೆಡೆ ರಫ್ತು ಮಾಡುವ ಪೀಠೋಪಕರಣಗಳು, ತೇಗ ಮತ್ತು ರೋಸ್ ಮರಕ್ಕೆ ಇಲ್ಲಿ ತಯಾರಾಗುವ ಬೃಂದಾವನ್ ಆಲ್ಕೋಹಾಲಿಕ್ ಪಾಲಿಷ್‌ನ್ನೆ ಬಳಸಲಾಗುತ್ತಿದೆ. ಅಲ್ಲದೆ ಗಣೇಶನ ಹಬ್ಬದ ವೇಳೆ ಗಣೇಶನ ಪ್ರತಿಮೆಗೆ ಬಳಬೇಕಾದ ಪರಿಸರ ಸ್ನೇಹಿ ಪೇಂಟ್ಸ್‌ಗಳು, ರಸ್ತೆಗಳಲ್ಲಿ ನಿಲ್ಲಿ, ಸ್ಟಾಪ್, ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಮುಂತಾದ ಸೂಚನೆಗಳಿಗೆ ಸಂಚಾರ ಪೊಲೀಸರು ಬಳಸುವ ಪೇಂಟ್ಸ್ ಸಹ ಇಲ್ಲಿ ಲಭ್ಯ. ಇನ್ನು ಎಲ್ಲರಿಗೂ ತಿಳಿದಂತೆ ಇಲ್ಲಿನ ಅಳಿಸಲಾಗದ ಶಾಯಿ ಭಾರತ ಮಾತ್ರವಲ್ಲದೆ, ಟರ್ಕಿ, ನೇಪಾಳ, ಕೆನಡಾ, ಮಂಗೋಲಿಯ, ರಿಪಬ್ಲಿಕ್ ಆಫ್ ಬೆನಿನ್, ಫಿಜಿ ಐಸ್‌ಲ್ಯಾಂಡ್, ಅಫ್ಘಾನಿಸ್ತಾನ, ಪಾಕಿಸ್ತಾನ, ಡೆನ್ಮಾರ್ಕ್ ಸೇರಿದಂತೆ ಹದಿನಾರು ರಾಷ್ಟ್ರಗಳಿಗೆ ಪೂರೈಕೆ ಆಗುತ್ತದೆ.
ಮೋದಿ ಮೆಚ್ಚುಗೆ: ಮೈಸೂರಿನ ಅಳಿಸಲಾಗದ ಶಾಯಿಯ ಬಗ್ಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
-ಡಿ.ಎನ್. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

