ಬಯಲು ಶೌಚ ಮುಕ್ತಸಿದ್ದರಾಮಯ್ಯ ಆಸಕ್ತ
ಕೊಪ್ಪಳ: ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಹೆಚ್ಚಿನ ಆಸಕ್ತಿ ತೋರಿದ್ದು, ಮನೆಗೊಂದು ಶೌಚಾಲಯ ನಿರ್ಮಾಣಕ್ಕಾಗಿ ಜಾಗೃತಿ ಮೂಡಿಸಿ ಜನತೆಯನ್ನು ಪ್ರೇರೇಪಿಸಲು ಮುಂದಾಗುವಂತೆ 95 ಸಾವಿರ ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಅತ್ಯಂತ ಗೌರವ, ಸ್ವಾಭಿಮಾನ, ಮರ್ಯಾದೆಯಿಂದ ಬದುಕಲು ಪ್ರತಿ ಮನೆಗೆ ಶೌಚಾಲಯ ನಿರ್ಮಾಣ ಮಾಡುವುದು ಅನಿವಾರ್ಯ. ವೈಯಕ್ತಿಕ ಶೌಚಾಲಯವಿಲ್ಲದೆ ಕತ್ತಲಾಗುವ ತನಕ ಕಾದು ಬಹಿರ್ದೆಸೆಗೆ ಹೋಗುವ ಅಸಹನೀಯ ಸ್ಥಿತಿಯನ್ನು ಮಹಿಳೆಯರು ಎದುರಿಸುತ್ತಿದ್ದಾರೆ. ಹೀಗಾಗಿ ವೈಯಕ್ತಿಕ ಶೌಚಾಲಯಕ್ಕೆ ಜನಪ್ರತಿನಿಧಿಗಳು ಒತ್ತು ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.
50 ಲಕ್ಷ ಕುಟುಂಬಕ್ಕಿಲ್ಲ ಶೌಚಾಲಯ
ರಾಜ್ಯದಲ್ಲಿ 50 ಲಕ್ಷ ಕುಟುಂಬಗಳು ಇನ್ನೂ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಂಡಿಲ್ಲ. ಈ ಕುಟುಂಬಗಳ ಸದಸ್ಯರೆಲ್ಲರೂ ಬಹಿರ್ದೆಸೆಗೆ ಬಯಲೇ ಅವಲಂಬಿಸಿದ್ದಾರೆ. ಇದರಿಂದ ಮಹಿಳೆಯರಂತೂ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಪರಿಸರ ನೈರ್ಮಲ್ಯ ಹಾಳಾಗಿ ರೋಗಗಳ ಹರಡುವಿಕೆಗೂ ಈ ಪದ್ಧತಿ ಕಾರಣವಾಗುತ್ತಿದೆ. ಹೀಗಾಗಿ, ಶೌಚಾಲಯ ಅಭಿಯಾನ ಸದ್ಯದ ಅನಿವಾರ್ಯತೆ ಎಂದು ಮುಖ್ಯಮಂತ್ರಿಗಳು ಪತ್ರದಲ್ಲಿ ಮನವರಿಕೆ ಮಾಡಿದ್ದಾರೆ.
95 ಜನಪ್ರತಿನಿಧಿಗಳಿಗೆ ಪತ್ರ
ರಾಜ್ಯದ ಗ್ರಾಪಂ. ತಾಪಂ ಹಾಗೂ ಜಿಪಂಗಳ 95 ಸಾವಿರ ಜನಪ್ರತಿನಿಧಿಗಳಿಗೂ ಸಿಎಂ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಜಂಟಿ ಪತ್ರ ಬರೆದು, ವೈಯಕ್ತಿಕ ಶೌಚಾಲಯ ಕಟ್ಟಿಕೊಳ್ಳಲು ಜನತೆಗೆ ಜನಪ್ರತಿನಿಧಿಗಳು ಪ್ರೇರಣೆ ನೀಡಬೇಕು. ರಾಜ್ಯದಲ್ಲಿ ಕೇವಲ ಒಂದೇ ವರ್ಷದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಸಾಧ್ಯವಿಲ್ಲ. ನಿರಂತರ ಪ್ರಯತ್ನ ಬೇಕು ಎಂದಿದ್ದಾರೆ. ರಾಜ್ಯದ ಪ್ರತಿ ಜನಪ್ರತಿನಿಧಿ ಪ್ರತಿವರ್ಷ ಕನಿಷ್ಠ 10-15 ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜನತೆಗೆ ಪ್ರೇರಣೆ ನೀಡಬೇಕು. 4 ವರ್ಷದಲ್ಲಿ ಪ್ರತಿಯೊಬ್ಬರೂ ಕನಿಷ್ಠ 60 ಶೌಚಾಲಯ ನಿರ್ಮಾಣಕ್ಕೆ ಕಾರಣರಾಗಬೇಕು. ಎಲ್ಲ 95 ಸಾವಿರ ಜನಪ್ರತಿನಿಧಿಗಳು ಈ ಸಂಕಲ್ಪ ಮಾಡಿದ್ದೇ ಆದರೆ, 4 ವರ್ಷಗಳಲ್ಲಿ ರಾಜ್ಯದ ಎಲ್ಲ ಕುಟುಂಬಗಳಿಗೂ ಶೌಚಾಲಯ ಸಿಗುತ್ತದೆ. ನಿರ್ಮಲ ಭಾರತ ಅಭಿಯಾನ ಪೂರ್ಣ ಪ್ರಮಾಣದ ಯಶಸ್ಸಿಗೆ ಸಾಧ್ಯವಾಗುತ್ತದೆ ಎಂದಿದ್ದಾರೆ.
ರಾಜ್ಯ ಸರ್ಕಾರದಿಂದ ವೈಯಕ್ತಿಕ ಶೌಚಾಲಯ ನಿರ್ಮಾಣದ ಕುರಿತು ಕೊಪ್ಪಳ ಜಿಲ್ಲೆಯಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಮುಖ್ಯಮಂತ್ರಿಗಳ ಪತ್ರವನ್ನು ಜಿಲ್ಲೆಯ 7 ಸಾವಿರಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳಿಗೆ ನೀಡಲಾಗಿದೆ. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಪ್ರೇರಣೆ ನೀಡಲಿದ್ದಾರೆ.
- ಕೃಷ್ಣ ಡಿ. ಉದಪುಡಿ, ಜಿಪಂ ಸಿಇಒ, ಕೊಪ್ಪಳ
-ದತ್ತು ಕಮ್ಮಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

