ಐಪಿಎಲ್ ಮೀರಿಸಿದ ಎಲೆಕ್ಷನ್ ಬೆಟ್ಟಿಂಗ್

ಧಾರವಾಡ: ಐಪಿಎಲ್ ಟ್ವೆಂಟಿ20 ಕ್ರಿಕೆಟ್ ಪಂದ್ಯ ಶುರುವಾದರೆ ಸಾಕು ಬೆಟ್ಟಿಂಗ್ ದಂಧೆ ಗರಿಗೆದರಿಕೊಳ್ಳುತ್ತಿತ್ತು. ಆದರೆ, ಇದೀಗ ಐಪಿಎಲ್ ಬೆಟ್ಟಿಂಗ್ಗಿಂತ ಲೋಕಸಭೆ ಚುನಾವಣೆ ಬೆಟ್ಟಿಂಗ್ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಮಳೆ ನಿಂತರೂ ಮಳೆ ಹನಿ ನಿಲ್ಲೋದಿಲ್ಲ ಎನ್ನುವಂತೆ ಲೋಕಸಭೆ ಚುನಾವಣೆ ಮುಗಿದು ಹತ್ತು ದಿನ ಕಳೆದರೂ ಚುನಾವಣೆ ರಣರಂಗದ ಬಗ್ಗೆಯೇ ಕ್ಷೇತ್ರದಲ್ಲಿ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಚುನಾವಣೆಯಲ್ಲಿ ಹಗಲು-ರಾತ್ರಿ ದುಡಿದ ಅಭ್ಯರ್ಥಿಗಳು ಮತದಾನದ ನಂತರ ನಿರಾಳರಾಗಿ ಪ್ರವಾಸ ಹಾಗೂ ವಿಶ್ರಾಂತಿಯ ಮೊರೆ ಹೋಗಿದ್ದರೆ, ಇನ್ನ್ನೊಂದೆಡೆ ಅವರ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು ಮಾತ್ರ ಇನ್ನೂ ಚುನಾವಣೆಯ ಗುಂಗಿನಿಂದ ಹೊರಬಂದಿಲ್ಲ. ಚುನಾವಣೆ ಬೆಟ್ಟಿಂಗ್ ಜೋರಾಗಿದ್ದು, ಗೆಲವು-ಸೋಲಿನ ಲೆಕ್ಕಾಚಾರ ಎಲ್ಲರ ಬಾಯಲ್ಲಿ ಸುಳಿದಾಡುತ್ತಿದೆ.
ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ 17 ಜನ ಕಣದಲ್ಲಿದ್ದರೂ ಬಿಜೆಪಿ ಪ್ರಹ್ಲಾದ ಜೋಶಿ ಹಾಗೂ ಕಾಂಗ್ರೆಸ್ನ ವಿನಯ ಕುಲಕರ್ಣಿ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿದೆ. ಅಲ್ಲಲ್ಲಿ ಶ್ರೀರಾಮಸೇನೆಯ ಪ್ರಮೋದ ಮುತಾಲಿಕ್ ಹೆಸರು ಕೇಳಿ ಬರುತ್ತಿದ್ದರೂ ಬೆಟ್ ಕಟ್ಟುವಷ್ಟಿಲ್ಲ. ಧಾರವಾಡ, ಹುಬ್ಬಳ್ಳಿ ನಗರ ಪ್ರದೇಶದಲ್ಲಿ ಜೋಶಿ ಗೆಲ್ಲುತ್ತಾರೆಂದು ಬೆಟ್ಟಿಂಗ್ ನಡೆದರೆ, ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಗೆಲುವು ಸಾಧಿಸುತ್ತಾರೆಂದು ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
ಪ್ರಹ್ಲಾದ ಜೋಶಿ ಅವರ 10 ವರ್ಷದ ಸಾಧನೆ ಜತೆಗೆ ಮೋದಿ ಅಲೆಯ ಪ್ರಭಾವ ಸೋಲು-ಗೆಲವಿನ ಲೆಕ್ಕಾಚಾರದಲ್ಲಿ ಹೆಚ್ಚಿನ ಕೆಲಸ ಮಾಡುತ್ತಿದೆ. ಈ ಬಾರಿ ಪ್ರಹ್ಲಾದ ಜೋಶಿ ಹ್ಯಾಟ್ರಿಕ್ ಗೆಲವು ಕಾಣುವುದು ಖಚಿತ ಎಂಬ ನಂಬಿಕೆ ಮೇಲೆ ಬೆಟ್ಟಿಂಗ್ ನಡೆಯುತ್ತಿದೆ. ವಿನಯ ಕುಲಕರ್ಣಿ ಅವರಿಗೆ ಜಾತಿ ಬಲ ಸಾಕಷ್ಟಿದ್ದು, ವೈಯಕ್ತಿಕ ಪ್ರಭಾವವೂ ಬೆಟ್ಟಿಂಗ್ ಕಟ್ಟಲು ಹಲವರಿಗೆ ಪ್ರೇರಣೆ ನೀಡಿದೆ. ನಮ್ಮ ನಾಯಕನೇ ಗೆಲ್ಲುತ್ತಾನೆಂದು ಅತೀವ ಭರವಸೆಯಿಂದ ಕೆಲವರು ಬೆಟ್ಟಿಂಗ್ನಲ್ಲಿ ಭಾಗಿಯಾಗುತ್ತಿದ್ದರೆ, ಇನ್ನೂ ಕೆಲವರು ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕುತ್ತಿದ್ದಾರೆ.
ಎಲ್ಲೆಲ್ಲಿ ನಡೆಯುತ್ತಿದೆ ಬೆಟ್ಟಿಂಗ್?: ನಗರ ಪ್ರದೇಶದಲ್ಲಿ ಬಾರ್, ರೆಸ್ಟೋರೆಂಟ್ಗಳಲ್ಲಿ ಬೆಟ್ಟಿಂಗ್ ಮಾತುಕತೆ ನಡೆಯುತ್ತಿದ್ದು, 50 ಸಾವಿರದಿಂದ 1 ಲಕ್ಷದವರೆಗೆ ಬೆಟ್ ಕಟ್ಟುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸಮುದಾಯ ಭವನ, ಅಗಸಿ ಕಟ್ಟೆಗಳ ಮೇಲೆ ಇದೇ ಸೋಲು-ಗೆಲವಿನ ಲೆಕ್ಕಾಚಾರದೊಂದಿಗೆ 10ರಿಂದ 20 ಸಾವಿರವರೆಗೂ ಬೆಟ್ಟಿಂಗ್ ಶುರುವಾಗಿದೆ. ಚುನಾವಣೆ ಬೆಟ್ಟಿಂಗ್ ಜ್ವರ ಹರಡುತ್ತಿದ್ದು, ಸಾಲ-ಸೋಲ ಮಾಡಿಯಾದರೂ ಬೆಟ್ಟಿಂಗ್ನಲ್ಲಿ ತಮ್ಮ ಹೆಸರು ನಮೂದಿಸುತ್ತಿದ್ದಾರೆ. ಸ್ನೇಹಿತರು ಹಾಗೂ ಮಧ್ಯವರ್ತಿಗಳೇ ಹಣಕಾಸಿನ ವ್ಯವಹಾರ ನಿಭಾಯಿಸುತ್ತಿದ್ದಾರೆ.
ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


