ಎಲ್ಲ ಇದ್ರೂ 'ಏನೂ ಇಲ್ಲ' ಎನ್ನುವ ಸಿಬ್ಬಂದಿ!

ಶಿವಮೊಗ್ಗ: ಬಾಣಂತಿಗೆ ನೆಲವೇ ಆಶ್ರಯ, ಉಗ್ರಾಣದಲ್ಲೇ ಉಳಿದ ಮಡಿಲು ಕಿಟ್, ಮಾಸಿದ- ಹರಿದು ಹೋದ ಬೆಡ್ಶೀಟ್ ಬಳಕೆಗೆ, ಸ್ಕ್ಯಾನಿಂಗ್- ಎಕ್ಸರೇ ಮಾಡಲು ಸೂಕ್ತ ಆಪರೇಟರ್ಗಳೇ ಇಲ್ಲ, ಕುಡಿಯಲು ನೀರಿನ ವ್ಯವಸ್ಥೆಯೇ ಇಲ್ಲ, ಸಿಬ್ಬಂದಿಯಿಂದ ಲಂಚಕ್ಕೆ ಪೀಡನೆ... ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇವೆಲ್ಲವನ್ನೂ ಕಣ್ತುಂಬಿಕೊಂಡ ಆರೋಗ್ಯ ಸಚಿವರು ಕಕ್ಕಾಬಿಕ್ಕಿಯಾದ ಪ್ರಸಂಗ ಭಾನುವಾರ ಶಿವಮೊಗ್ಗದಲ್ಲಿ ನಡೆಯಿತು.
ಭಾನುವಾರ ಶಿವಮೊಗ್ಗಕ್ಕೆ ಆಗಮಿಸಿದ್ದ ಆರೋಗ್ಯ ಸಚಿವ ಯು.ಟಿ. ಖಾದರ್ ಮೆಗ್ಗಾನ್ ಆಸ್ಪತ್ರೆಗೆ ಬೆಳಗ್ಗೆ 8.40ರ ಸುಮಾರಿಗೆ ದಿಢೀರ್ ಭೇಟಿಕೊಟ್ಟರು. ಸುಮಾರು ಒಂದು ತಾಸು ಆಸ್ಪತ್ರೆಯ ಆವರಣದಲ್ಲಿ ಸುತ್ತಾಡಿ ಪರಿಶೀಲಿಸಿದ ಅವರು, ರೋಗಿಗಳು ಹಾಗೂ ರೋಗಿಗಳ ಕುಟುಂಬದವರಿಂದ ಅಹವಾಲು ಆಲಿಸಿದರು.
ಪರಿಶೀಲನೆ: ಏಕಾಏಕಿ ಸಚಿವರನ್ನು ಕಂಡ ಮೆಗ್ಗಾನ್ ಆಸ್ಪತ್ರೆ ಒಂದು ಕ್ಷಣ ಕಂಪಿಸಿತು. ಭಾನುವಾರದ ಮೂಡ್ನಲ್ಲಿದ್ದ ಸಿಬ್ಬಂದಿ ಏಕಾಏಕಿ ಎಚ್ಚೆತ್ತವರಂತೆ ಕಂಡುಬಂದು, ಆಸ್ಪತ್ರೆಯ ಶುದ್ಧತೆಯಲ್ಲಿ ತೊಡಗಿಕೊಂಡರು.
ಇನ್ನೊಂದೆಡೆ ಸಚಿವರು ಆಸ್ಪತ್ರೆಯ ಪ್ರಮುಖ ಕಟ್ಟಡದಲ್ಲಿ ಸುತ್ತುಹೊಡೆದು ಪರಿಶೀಲನೆ ಆರಂಭಿಸಿದರು. ಅಷ್ಟರಲ್ಲಿ ಅಲ್ಲಿದ್ದ ವೃದ್ಧರೊಬ್ಬರು ಆಸ್ಪತ್ರೆಯ ಕುಡಿವ ನೀರಿನ ಸಮಸ್ಯೆಯನ್ನು ಏರಿದ ದನಿಯಲ್ಲೇ ಸಚಿವರ ಮುಂದಿಟ್ಟರು. ಜೊತೆಗೆ ವೈದ್ಯರು ಸರಿಯಾದ ರೀತಿಯಲ್ಲಿ ರೋಗಿಗಳ ಕುಟುಂಬದವರೊಂದಿಗೆ ಸ್ಪಂದಿಸದೇ ಇರುವುದು, ನರ ರೋಗ ತಜ್ಞರ ಕೊರತೆ ಇರುವುದು, ಸ್ಕ್ಯಾನಿಂಗ್ ಸೆಂಟರ್ನಲ್ಲಿ ಆಪರೇಟರ್ ಕೊರತೆ, ಕಿಡ್ನಿ ರೋಗಿಗಳ ಪರದಾಟ ಸಚಿವರ ಗಮನಕ್ಕೆ ಬಂತು.
ಉಗ್ರಾಣದಲ್ಲೇ ಮಡಿಲು ಕಿಟ್: ಮಕ್ಕಳ ವಾರ್ಡ್ಗೆ ಭೇಟಿಕೊಟ್ಟ ಸಚಿವರು ಅಲ್ಲಿನ ಪರಿಸ್ಥಿತಿ ಗಮನಿಸಿ ಹೌಹಾರಿದರು. ಹೆರಿಗೆಯಾಗಿ 3, 4, 6 ದಿನ ಕಳೆದ ಮಕ್ಕಳು ಅಲ್ಲಿದ್ದರೂ, ಆ ಮಕ್ಕಳಿಗೆ ಕಿಟ್ ವಿತರಿಸದೇ ಇರಲು ಕಾರಣವೇನೆಂಬ ಸಚಿವರ ಪ್ರಶ್ನೆಗೆ ಅಲ್ಲಿನ ಸಿಬ್ಬಂದಿಯಿಂದ ಉತ್ತರವೇ ಬರಲಿಲ್ಲ. 'ನಿಮ್ಮ ಮಗುವಿಗೆ ಈ ರೀತಿ ಆಗಿದ್ದರೆ ಸುಮ್ಮನಿರುತ್ತಿದ್ದಿರೇನು' ಎಂದು ಪ್ರಶ್ನಿಸುತ್ತಿದ್ದಂತೆ ಸಿಬ್ಬಂದಿ ತಲೆ ತಗ್ಗಿಸಿ ನಿಂತರು. 'ಫಲಾನುಭವಿಗಳಿಗೆ ತಕ್ಷಣವೇ ಮಡಿಲು ಕಿಟ್ ವಿತರಿಸಬೇಕು, ನಂತರ ಪರಿಶೀಲನೆಗೆ ಜನರನ್ನು ಕಳುಹಿಸುತ್ತೇನೆ' ಎಂದು ಸಚಿವರು ಎಚ್ಚರಿಕೆ ನೀಡಿದರು.
ಇದೇ ವಾರ್ಡ್ನಲ್ಲಿ ಬಳಸಲಾದ ಬೆಡ್ಶೀಟ್ಗಳು ಹರಿದು ಹೋಗಿದ್ದನ್ನು ಖಾದರ್, ಬೆಡ್ಶೀಟ್ ಖರೀದಿಸದೇ ಎಷ್ಟು ವರ್ಷವಾಯಿತು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ಸಿಬ್ಬಂದಿ, ಅಧಿಕಾರಿಗಳು ಬೆವತು ಹೋದರು.
ಲಂಚ ಹಾವಳಿ: ನವಜಾತ ಶಿಶುವಿನ ತಂದೆಯೊಬ್ಬರು ಆಸ್ಪತ್ರೆಯ ಲಂಚ ಹಾವಳಿಯನ್ನು ಸಚಿವರ ಮುಂದೆ ಪ್ರಸ್ತುತಪಡಿಸಿದರು. ತಮಗೆ ಮಗುವಾಗಿ ಮೂರು ದಿನಗಳಾಗಿದೆ. ಇಲ್ಲಿಯವರೆಗೆ ಪರಿಸ್ಥಿತಿ ಹೇಗಿದೆ ಎಂದು ಹೇಳಿಲ್ಲ. ಲಂಚ ಮಾತ್ರ ಕೇಳುತ್ತಾರೆ. ಹೊರಗಡೆ ಹೋಗಿ (ಖಾಸಗಿಯಾಗಿ) ತೋರಿಸಿ ಎಂದು ಹೇಳುತ್ತಾರೆ. ಈವರೆಗೆ ರು. 3,750 ರುಪಾಯಿ ಕಿತ್ತಿದ್ದಾರೆ ಎಂದು ದೂರಿದರು.
ತಕ್ಷಣವೇ ಅಧಿಕಾರಿಗಳನ್ನು ಅಲ್ಲಿಗೆ ಕರೆಸಿಕೊಂಡ ಸಚಿವರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವಂತೆ ಸೂಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 'ಇಲ್ಲಿನ ಸಮಸ್ಯೆ ಕುರಿತಂತೆ ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೂ ತರಲಾಗುತ್ತದೆ. ಇಬ್ಬರೂ ಕುಳಿತು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತೇವೆ' ಎಂದರು.
ನೆಲದ ಮೇಲೆ ಬಾಣಂತಿ
ಹೆರಿಗೆ ವಾರ್ಡ್ಗೆ ತೆರಳಿದ ಸಚಿವರು ಅಲ್ಲಿನ ಪರಿಸ್ಥಿತಿ ಕಂಡು ಅವಕ್ಕಾಗಿ ಹೋದರು. ಒಂದು ವಾರ್ಡ್ನಲ್ಲಿ ಇಬ್ಬರು ಬಾಣಂತಿಯರನ್ನು ನೆಲದ ಮೇಲೆ ಹಾಸಿಗೆ ಹಾಕಿ ಮಲಗಿಸಲಾಗಿತ್ತು. ಹಾಗಲ್ಲ- ಹೀಗಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಲು ಬಂದರಾದರೂ ಸಚಿವರ ಸಿಟ್ಟಾದ ಮುಖಕಂಡು ಮೌನಕ್ಕೆ ಶರಣಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


