ಪ್ರಧಾನ ಸುದ್ದಿ

ವಾದ್ರಾಗೆ ವಿಡಿಯೋ ಸಂಕಟ ತಂದ ಬಿಜೆಪಿ

ವಾದ್ರಾಗೆ ವಿಡಿಯೋ ಸಂಕಟ ತಂದ ಬಿಜೆಪಿ
Published On :

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಭೂ ಅಕ್ರಮಗಳಿಗೆ ಸಂಬಂಧಿಸಿ ಬಿಜೆಪಿ ವಿಡಿಯೋ ಮತ್ತು ಕಿರು ಹೊತ್ತಗೆ ಬಿಡುಗಡೆ ಮಾಡಿದೆ. 'ರಾಬರ್ಟ್ ಅಭಿವೃದ್ಧಿ ಮಾದರಿ' ಯಶಸ್ವಿಯಾಗಲು ಗಾಂಧಿ ಕುಟುಂಬದ ಕೃಪಾಕಟಾಕ್ಷವೇ ಕಾರಣ ಎಂದು ಆರೋಪಿಸಿದೆ.
ಭೂಮಿ ಮತ್ತು ಪರಿಸರಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ವಾದ್ರಾ ಭೂಒಪ್ಪಂದದ ವೇಳೆ ಉಲ್ಲಂಘಿಸಿದ್ದಾರೆ. ಗಾಂಧಿ ಕುಟುಂಬದ ಪ್ರಭಾವದಿಂದ ಅವರು ಭೂ ಒಪ್ಪಂದದಲ್ಲಿ ಬಹುದೊಡ್ಡ ಲಾಭಗಳಿಸಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.

-ಮೋದಿ ಅನುಕೂಲ ಮಾಡಿಕೊಟ್ಟಿಲ್ಲ: ಅದಾನಿ
ಚಿಕ್ಕಾಸಿಗೆ ಸಾವಿರಾರು ಎಕರೆ ಭೂಮಿ ಪಡೆದ ಆರೋಪಕ್ಕೆ ಸಂಬಂಧಿಸಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಕಿಡಿಕಾರಿದ್ದಾರೆ.ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸರ್ಕಾರದಿಂದ ನಾವು ವಿಶೇಷ ಕೊಡುಗೆಯನ್ನೇನೂ ಪಡೆದಿಲ್ಲ. ನಾವು ಬಂಜರುಭೂಮಿಯನ್ನಷ್ಟೇ ಖರೀದಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ.    

-ಆಯೋಗದಿಂದ ಹೊಸ ನಿಯಮಾವಳಿ
ಯೋಗಗುರು ರಾಮದೇವ್ ಹೇಳಿಕೆ ಚುನಾವಣಾ ಆಯೋಗದ ಆಕ್ರೋಶಕ್ಕೆ ಗುರಿಯಾಗಿದೆ. ಈ ಸಂಬಂಧ ಆಯೋಗ ಹೊಸ ಮಾರ್ಗದರ್ಶಿ ಬಿಡುಗಡೆ ಮಾಡಿದೆ. ಚುನಾವಣೆ ಮುಗಿಯುವವರೆಗೆ ಇತರರ ಖಾಸಗಿ ಬದುಕಿನ ಕುರಿತು ಹೇಳಿಕೆ ನೀಡುವಂತಿಲ್ಲ ಎಂದು ನಿರ್ದೇಶನ ಹೊರಡಿಸಿದೆ. ಜತೆಗೆ, ಧರ್ಮದ ವಿಚಾರ ಪ್ರಸ್ತಾಪಿಸುವಂತಿಲ್ಲ. ನಿಯಮ ಮೀರಿದರೆ ದಂಡ ಗ್ಯಾರಂಟಿ ಎಂದಿರುವ ಅದು, ರಾಮದೇವ್ ಕಾರ್ಯಕ್ರಮಗಳಿಗೆ ನಿಷೇಧ ಹೇರಿದೆ.

'ಮೋದಿಗೆ ಮತ ಹಾಕುವವರು ಸಮುದ್ರಕ್ಕೆ ಹಾರಲಿ'
ಶ್ರೀನಗರ/ನವದೆಹಲಿ:
ಚುನಾವಣಾ ಆಯೋಗದ ಸ್ಪಷ್ಟ ಎಚ್ಚರಿಕೆಯಿದ್ದರೂ ವಿವಾದಾತ್ಮಕ ಹೇಳಿಕೆಗಳಿಗೆ ಕಡಿವಾಣ ಬೀಳುತ್ತಿಲ್ಲ.  ಈಗ ತಲೆಹರಟೆ ಮಾತನಾಡುವ ಸರದಿ ಕೇಂದ್ರ ಸಚಿವ ಫಾರೂಖ್ ಅಬ್ದುಲ್ಲಾರದ್ದು.  ಭಾನುವಾರ ಶ್ರೀನಗರದಲ್ಲಿ ಮಾತನಾಡಿದ ಅಬ್ದುಲ್ಲಾ, 'ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಮತ ಹಾಕುವವರು ಸಮುದ್ರಕ್ಕೆ ಹಾರಲಿ' ಎನ್ನುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಇಷ್ಟಕ್ಕೇ ನಿಲ್ಲಿಸದೇ, 'ಕೋಮುವಾದವನ್ನು ಕಾಶ್ಮೀರಿಗಳು ಎಂದೂ ಸಹಿಸುವುದಿಲ್ಲ. ಹಾಗಾಗಿ ದೇಶವು ಕೋಮುವಾದಿಯಾದರೆ ಕಾಶ್ಮೀರವು ಭಾರತದೊಂದಿಗೆ ಉಳಿಯುವುದಿಲ್ಲ' ಎಂದೂ ಹೇಳಿದ್ದಾರೆ.  ತನ್ನ ಹೇಳಿಕೆ ವಿವಾದ ಸೃಷ್ಟಿಸಿದೆ ಎಂಬುದು ಗೊತ್ತಾದ ಕೂಡಲೇ ಸ್ಪಷ್ಟನೆ ನೀಡಿರುವ ಅವರು, ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಹೇಳಿಕೆಗೆ ಪ್ರತಿಯಾಗಿ ಆ ರೀತಿ ಹೇಳಿದ್ದೆನೇ ಹೊರತು ಬೇರೆ ಉದ್ದೇಶದಿಂದಲ್ಲ ಎಂದಿದ್ದಾರೆ. ಅಬ್ದುಲ್ಲಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, 'ದೇಶವು ಜಾತ್ಯತೀತವೆಂದು ಕರೆಸಿಕೊಳ್ಳಲು ಅಬ್ದುಲ್ಲಾರಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯವಿಲ್ಲ' ಎಂದಿದೆ.


ಬಿಜೆಪಿಯವರು ಗಲಿಬಿಲಿಗೊಂಡ ಇಲಿಗಳಂತೆ ಆಡುತ್ತಿದ್ದಾರೆ. ಅವರು ತಮ್ಮ ಸುಳ್ಳುಗಳ ಕಂತೆಯನ್ನು ಮತ್ತೊಮ್ಮೆ ಬಿಚ್ಚುತ್ತಾರೆ ಎನ್ನುವುದು ನನಗೆ ಗೊತ್ತು. ಅದರಲ್ಲಿ ವಿಶೇಷವೇನೂ ಇಲ್ಲ. ಅವರೇನು ಬೇಕಾದರೂ ಹೇಳಿಕೊಳ್ಳಲಿ. ನಾನದಕ್ಕೆ ಹೆದರುವುದಿಲ್ಲ. ಜತೆಗೆ, ಈ ರೀತಿಯ ವಿನಾಶಕಾರಿ ರಾಜಕೀಯದ ವಿರುದ್ಧ ಮಾತನಾಡುವುದನ್ನೂ ನಿಲ್ಲಿಸಲ್ಲ ಎಂದಿದ್ದಾರೆ ಪ್ರಿಯಾಂಕಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.