ಪ್ರಧಾನ ಸುದ್ದಿ

ಮೈಸೂರಿನಲ್ಲಿ ಅತ್ಯಾಧುನಿಕವಾಗಿ ಪ್ರಾಣಿ ವಧೆ

Published On :

ಕ.ಪ್ರ. ವಾರ್ತೆ  ಮೈಸೂರು  ಏ. 29
ರಾಜ್ಯದಲ್ಲಿಯೇ ಮೊದಲ ಬಾರಿಗೆ ಅತ್ಯಾಧುನಿಕ ಪ್ರಾಣಿಗಳ ವಧಾ ಕೇಂದ್ರ ಮೈಸೂರಿನಲ್ಲಿ ಆರಂಭವಾಗುತ್ತಿದೆ. ಸುಮಾರು 40 ಕೋಟಿ ವೆಚ್ಚದಲ್ಲಿ ತೆರೆಯಲು ಉದ್ದೇಶಿಸಿರುವ ಪ್ರಾಣಿ ವಧಾ ಕೇಂದ್ರದ ಯೋಜನೆಯನ್ನು ಅತ್ಯಾಧುನಿಕ ಯಂತ್ರೋಪಕರಣದ ಜೊತೆಗೆ, ಪ್ರಾಣಿ ತ್ಯಾಜ್ಯದಿಂದ ಗೊಬ್ಬರ ಮತ್ತು ಪೌಷ್ಟಿಕಯುಕ್ತ ಪದಾರ್ಥಗಳ ತಯಾರಿಕೆಗೆ ನೆರವಾಗುವಂತೆ ರೂಪಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ ಆರಂಭಗೊಳ್ಳುತ್ತಿರುವ ಈ ಕೇಂದ್ರದಲ್ಲಿ ಪ್ರತಿ ದಿನ ಸುಮಾರು 1500 ಕುರಿ ಅಥವಾ ಮೇಕೆಯನ್ನು ವಧೆ ಮಾಡಿ, ಸಂಸ್ಕರಿಸಬಹುದು. ಅಂತೆಯೇ ಸುಮಾರು 200 ದೊಡ್ಡ ಪ್ರಾಣಿಗಳನ್ನು ವಧೆ ಮಾಡಲು ಅವಕಾಶ ಇದೆ. ಇಲ್ಲಿನ ಆಧುನಿಕ ವ್ಯವಸ್ಥೆಯಿಂದ ಅನುಪಯುಕ್ತ ವಸ್ತುಗಳು ಸಂಗ್ರಹ ಆಗುವುದು ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಪ್ರಾಣಿಗಳ ವಾಸನೆ ತಗಲುವುದು ತಪ್ಪುತ್ತದೆ. ಬೃಹತ್ ಮಟ್ಟದ ಮತ್ತು ಅತ್ಯಾಧುನಿಕ ವ್ಯವಸ್ಥೆ ಇರುವ ಈ ವಧಾ ಕೇಂದ್ರವು ಕೆಸರೆ ಬಳಿ ನಗರ ಪಾಲಿಕೆಗೆ ಸೇರಿದ ಸುಮಾರು 4 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ.
ಈ ಯೋಜನೆಗಾಗಿ ಕೇಂದ್ರ ಸರ್ಕಾರ ರು. 15 ಕೋಟಿ, ರಾಜ್ಯ ಸರ್ಕಾರ 5 ಕೋಟಿ ಬಿಡುಗಡೆ ಮಾಡಿದೆ. ನಗರ ಪಾಲಿಕೆ ಈ ಯೋಜನೆಗೆ ರು. 5 ಕೋಟಿ ಮೀಸಲಿಟ್ಟಿದೆ. ಅಲ್ಲದೆ ಕರ್ನಾಟಕ ನಗರ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು 15 ಕೋಟಿಯನ್ನು ಸಾಲದ ರೂಪದಲ್ಲಿ ನೀಡುತ್ತಿದೆ. ಪ್ರಸ್ತುತ ಸಾಲ ಹೊರತುಪಡಿಸಿ ರು. 25 ಕೋಟಿಯನ್ನು ಹೊಂದಿರುವ ನಗರ ಪಾಲಿಕೆ, ಶೀಘ್ರದಲ್ಲಿಯೇ ಈ ಯೋಜನೆ ಕಾರ್ಯಗತಗೊಳಿಸಲು ಉದ್ದೇಶಿಸಿದೆ.
ನಗರದ ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆಯ ಬೋಟಿ ಬಜಾರ್ ಅನ್ನು ಮುಂದಿನ ದಿನಗಳಲ್ಲಿ ಈ ನೂತನ ಕೇಂದ್ರಕ್ಕೆ ಸ್ಥಳಾಂತರಿಸುವ ಚಿಂತನೆ ಇದೆ. ಈ ಕೇಂದ್ರದಲ್ಲಿನ ಪ್ರಾಣಿ ತ್ಯಾಜ್ಯದಿಂದ ತಯಾರಿಸುವ ಗೊಬ್ಬರವನ್ನು ನಗರ ಪಾಲಿಕೆ ಉದ್ಯಾನಗಳಿಗೆ ಮತ್ತು ಹೆಚ್ಚುವರಿ ಗೊಬ್ಬರವನ್ನು ಮಾರಾಟ ಮಾಡುವುದು, ಪ್ರಾಣಿಗಳ ರಕ್ತದಲ್ಲಿ ಪೌಷ್ಟಿಕ ಉತ್ಪನ್ನಗಳನ್ನು ತಯಾರಿಸುವ ಯೋಜನೆಯೂ ಪಾಲಿಕೆಗೆ ಇದೆ. ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಕೇವಲ ಮೈಸೂರಿಗೆ ಮಾತ್ರವಲ್ಲದೆ ಚಿತ್ರದುರ್ಗ ಮತ್ತು ಹೊಸಪೇಟೆಗೆ ಇದೆ ಮಾದರಿಯ ಚಿಕ್ಕದಾದ ಅತ್ಯಾಧುನಿಕ ಪ್ರಾಣಿ ವಧಾ ಕೇಂದ್ರ ತೆರೆಯಲು ಅನುಮತಿ ನೀಡಿದೆ.
ಮೈಸೂರಿನಲ್ಲಿ ಅತ್ಯಾಧುನಿಕ ಪ್ರಾಣಿ ವಧಾ ಕೇಂದ್ರ ತೆರೆಯಲು ನಗರಾಭಿವೃದ್ಧಿ ಇಲಾಖೆ ಅನುಮತಿ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಬಿಡುಗಡೆ ಆಗಿದೆ. ಯೋಜನೆಗಾಗಿ ನಗರ ಪಾಲಿಕೆಯೂ ರು. 5 ಕೋಟಿ ಮೀಸಲಿಟ್ಟಿದೆ.
- ಪಿ.ಜಿ. ರಮೇಶ್, ಪಾಲಿಕೆ ಆಯುಕ್ತ

ಡಿ.ಎನ್. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.