ಪ್ರಧಾನ ಸುದ್ದಿ

ತುಮಕೂರು ಸ್ಮಾರ್ಟ್

ತುಮಕೂರು ಸ್ಮಾರ್ಟ್
Published On :

ಭಾರತಕ್ಕೆ ಸ್ಮಾರ್ಟ್ ಸಿಟಿ ಕಲ್ಪನೆ ಹೊಸದು. ಗುಜರಾತ್‌ನಲ್ಲಿ ಮೋದಿ ಮುಖ್ಯಮಂತ್ರಿಯಾಗಿದ್ದಾಗ  786 ಎಕರೆ ವ್ಯಾಪ್ತಿಯಲ್ಲಿ ಎರಡು ಕಡೆ ಗಿಫ್ಟ್ ಸಿಟಿ ಹಾಗೂ ದೊಲೆರಾ ಸಿಟಿಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದರು. ಅದು ಸಾಕಾರವಾಗುತ್ತಿದೆ. ಮೊನ್ನೆ ನಡೆದ ಕೇಂದ್ರ ಬಜೆಟ್‌ನಲ್ಲಿ ದೇಶದಲ್ಲಿ 7 ಕಡೆ ಕೈಗಾರಿಕಾ ಸ್ಮಾರ್ಟ್ ಸಿಟಿ ಮಾಡುವ ಘೋಷಣೆಯನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊರಡಿಸಿತು. ಅದರಲ್ಲಿ ತುಮಕೂರು ಕೂಡ ಒಂದು. ಈಗಾಗಲೇ ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಮಾಡುವ ಸಂಬಂಧ ನವದೆಹಲಿಯಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿದೆ. ಸ್ಮಾರ್ಟ್ ಸಿಟಿ ಸಂಬಂಧ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಭರ್ತಿ 700 ಕೋಟಿ ಸಹ ಮೀಸಲಿಡಲಾಗಿದೆ. 12500 ಎಕರೆ ಪ್ರದೇಶದಲ್ಲಿ ಈ ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ನಿರ್ಮಾಣವಾಗಲಿದೆ. ಸ್ಮಾರ್ಟ್ ಸಿಟಿ ಎಲ್ಲಿರುತ್ತದೆ, ಹೇಗಿರುತ್ತದೆ, ಏನೆಲ್ಲಾ ಬರುತ್ತೆ, ಏನೆಲ್ಲಾ ಇರುತ್ತೆ ಎನ್ನುವ ಬಗ್ಗೆ ಬೆಳಕು ಚೆಲ್ಲುವ ಮಾಹಿತಿ ಇಲ್ಲಿದೆ.

ಮನೆ ಬಾಡಿಗೆ, ಠೇವಣಿ ಇತ್ಯಾದಿ ಹೇಗಿದೆ?
ಮನೆ ಬಾಡಿಗೆ ವಿಪರೀತವಾಗಿದೆ. ಸಣ್ಣ, ಮದ್ಯಮ ವರ್ಗದವರಿಗೆ ಭಾರೀ ಹೊಡೆತ ಬೀಳಲಿದೆ. ನಿಮ್ಜ್ ಯೋಜನೆಯಲ್ಲಿ ಮಾಲೀಕರು ಹಾಗೂ ಕೂಲಿ ಕಾರ್ಮಿಕರಿಗೆ ವಸತಿ ಸೌಲಭ್ಯವಿದೆ.

ಸಣ್ಣ, ಮಧ್ಯಮ ಕೈಗಾರಿಕೆಗಳ ಮೇಲಾಗುವ ಪರಿಣಾಮ ಏನು?
ಸ್ಮಾರ್ಟ್ ಸಿಟಿಯಲ್ಲೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಶೇ.13ರಷ್ಟು ಆದ್ಯತೆ ನೀಡಲೇಬೇಕು. ಅತ್ತುತ್ತಮ ಪರಿಣಾಮ ಈ ಕೈಗಾರಿಕೆಗಳ ಮೇಲೆ ಬೀರಲಿದೆ. ಮಾರುಕಟ್ಟೆ, ಉತ್ಪಾದನೆ, ಲಾಭ ಎಲ್ಲವೂ ಹೆಚ್ಚಾಗಲಿದೆ.

ಬೆಂಗಳೂರಿನ ಹೊರೆ ತಡೆದುಕೊಳ್ಳುವ ತಾಕತ್ತು ತುಮಕೂರಿಗಿದೆಯೇ?
ಸ್ಮಾರ್ಟ್ ಸಿಟಿ ರಾಜಧಾನಿ ಬೆಂಗಳೂರಿಗೆ ಒಂದು ಸ್ಪರ್ಧಾತ್ಮಕ ನಗರವಾಗಿ ಪೈಪೋಟಿ ನೀಡಲಿದೆ. ಇಲ್ಲಿ ಉಪನಗರದ ಪ್ರಶ್ನೆಯೇ ಬರಲ್ಲ. ಸ್ಮಾರ್ಟ್ ಸಿಟಿಯೆಂದರೆ ವಸತಿ ಸಹಿತ ಸಕಲ ಸೌಲಭ್ಯವೂ ಇರುವ ಮಾಲೀಕರು, ಕೂಲಿ ಕಾರ್ಮಿಕರಿರುವ ಒಂದು ವ್ಯವಸ್ಥಿತ ನಗರ. ಹೀಗಾಗಿ ತುಮಕೂರಿಗೆ ಉಪನಗರದ ಹೊರೆ ಎಂಬ ಪ್ರಶ್ನೆಯೇ ಬರಲ್ಲ.

ಕೈಗಾರಿಕೆಗಳಿಗೆ ಬೇಕಾಗುವ ಮಾನವ ಸಂಪನ್ಮೂಲ ಎಷ್ಟಿದೆ?
ರೈತರನ್ನು ಸೇರಿಸಿ ಅಂದಾಜು 10 ಲಕ್ಷ ಉದ್ಯೋಗ ಸ್ಮಾರ್ಟ್ ಸಿಟಿಯಿಂದ ಲಭ್ಯವಾಗಲಿದೆ. ಇದರಲ್ಲಿ 2.5 ಲಕ್ಷ ನೇರ ಉದ್ಯೋಗ ಸೃಷ್ಟಿಯಾಗಲಿದೆ. ಮಾನವ ಸಂಪನ್ಮೂಲವೂ ಜಿಲ್ಲೆಯಲ್ಲಿ ಸಾಕಷ್ಟಿದೆ. ಹೀಗಾಗಿ ಯಾವುದೇ ತೊಂದರೆ ಆಗುವುದಿಲ್ಲ. ಅಲ್ಲದೇ ಬೆಂಗಳೂರು ಕೂಡ ಕೂಗಳತೆ ದೂರದಲ್ಲಿರುವುದರಿಂದ ಮಾನವ ಸಂಪನ್ಮೂಲಕ್ಕೆ ಕೊರತೆಯಾಗುವುದಿಲ್ಲ.

ಪೊಲೀಸ್ ವ್ಯವಸ್ಥೆ ಹೇಗಿದೆ?
ಪೊಲೀಸ್ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದೆ. ಜನಸಂಖ್ಯಾಧಾರಿತ ಪೊಲೀಸ್ ಸಿಬ್ಬಂದಿ ಇಲ್ಲ. ಸ್ಮಾರ್ಟ್ ಸಿಟಿ ಅಥವಾ ಜನಸಂಖ್ಯೆಗನುಗುಣವಾಗಿ ನೇಮಕಾತಿ ನಡೆಯಬೇಕಿದೆ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಿಸುವುದು ಕಷ್ಟವಾಗುವುದು ದಿಟ.

ಸಾರಿಗೆ ವ್ಯವಸ್ಥೆ ಹೇಗಿದೆ?
ನಗರ ಹಾಗೂ ದೂರದೂರಿನ ಸಾರಿಗೆ ಅತ್ಯುತ್ತಮವಾಗಿದೆ. ಕೈಗಾರಿಕಾ ವಸಾಹತುವಾಗಲಿರುವ ವಸಂತ ನರಸಾಪುರದಲ್ಲಿ ಏರ್‌ಸ್ಟ್ರಿಪ್ ಅಳವಡಿಸಲಾಗಿದೆ.
ಚೆನೈ-ಮಂಗಳೂರು ಕಾರಿಡಾರ್, ಸೀ ಕಾರಿಡಾರ್, ಎನ್‌ಎಚ್ 4, ಎನ್‌ಎಚ್ 206, ಎನ್‌ಎಚ್ 234, ಎನ್‌ಎಚ್ 48 ಇದೆ. ಎನ್‌ಎಚ್ 13 ಲಿಂಕ್ ರಸ್ತೆಯಾಗಲಿದೆ.
ಇಡೀ ಜಿಲ್ಲೆಯ ನಾಲ್ಕೂ ಮೂಲೆಗಳಲ್ಲೂ ರೈಲ್ವೆ ಸಂಪರ್ಕ ಸಾಧ್ಯವಾಗಲಿದೆ.
ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ, ಚಾಮರಾಜನಗರ, ಹಿರಿಯೂರು-ಚೆನ್ನರಾಯಪಟ್ಟಣ ಮಾರ್ಗಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಕೆಲಸ ಶೀಘ್ರಗತಿಯಲ್ಲಿ ಮುಂದುವರೆಯಬೇಕಿದೆ.
70 ಕಿಮೀ ಮೆಟ್ರೋ ರೈಲು ಯೋಜನೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಾಜ್ಯದ 18 ಜಿಲ್ಲೆಗಳ ರಸ್ತೆ ಸಂಪರ್ಕ ತುಮಕೂರು ಮೂಲಕವೇ ಹಾದು ಹೋಗಿದೆ. ಹಾಗೆಯೇ ಸುಮಾರು 8 ರಾಜ್ಯಗಳ ವಾಹನಗಳು ತುಮಕೂರು ಮೂಲಕವೇ ಹಾದು ಹೋಗಬೇಕಿದೆ.

ತಾಲೂಕುಗಳ ಮೇಲಾಗುವ ಪರಿಣಾಮ?
ಜಿಲ್ಲಾದ್ಯಂತ ಹೊಸ ಯೋಜನೆ ರೂಪಿಸುವ ಅವಕಾಶವಿದೆ. ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್. ಚೆನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕಾ ಕಾರಿಡಾರ್ ಹಾದು ಹೋಗಲಿದೆ. 50ರಿಂದ 100 ಕಿಮೀ ವ್ಯಾಪ್ತಿಯಲ್ಲಿ ಸುಮಾರು 3000 ಎಕರೆ ಜಮೀನಿನಲ್ಲಿ ಅಭಿವೃದ್ಧಿಪಡಿಸಲು ಅವಕಾಶವಿದೆ. ಮಧುಗಿರಿಯಲ್ಲಿ ದಾಳಿಂಬೆ, ಟೂರಿಸಂ, ಶಿರಾದಲ್ಲಿ ಪಶು-ಪಕ್ಷಿಗಳ ಪಶುಸಂಗೋಪನೆ ಪಾರ್ಕ್, ಕೊರಟಗೆರೆಯಲ್ಲಿ ಆಯುಷ್ ಪಾರ್ಕ್, ತುರುವೇಕೆರೆ, ಗುಬ್ಬಿಯಲ್ಲಿ ಕಾಯರ್, ಕೊಕನಟ್ ಪಾರ್ಕ್, ಪಾವಗಡದಲ್ಲಿ ಕಡಲೆಕಾಯಿ ಎಣ್ಣೆ ಘಟಕ, ಕುಣಿಗಲ್‌ನಲ್ಲಿ ಜೇಡಿಮಣ್ಣಿನ ಕರಕುಶಲ ಕೈಗಾರಿಕೆ, ತಿಪಟೂರಿನಲ್ಲಿ ಟೆಕ್ಸ್‌ಟೈಲ್ಸ್ ಪಾರ್ಕ್, ತುಮಕೂರಿನಲ್ಲಿ ವಿಜ್ಞಾನಗುಡ್ಡ, ಮೆಗಾ ಮಾರ್ಕೆಟ್ ಮಾಡಬಹುದಾಗಿದೆ.

ಪರಿಣಾಮಗಳೇನು?
ಎಷ್ಟೇ ಗ್ರೀನ್ ಬೆಲ್ಟ್ ಎಂದು ಬೊಬ್ಬೆ ಹೊಡೆದರೂ ಪರಿಸರಕ್ಕಂತೂ ಮಾರಕವೇ. ಕಾರಣ ದೇಶದಲ್ಲಿ ಪರಿಸರಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಕಾನೂನುಗಳು ಧೂಳು ತಿನ್ನುತ್ತಿವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸತ್ತು ಹೋಗಿದೆ. ಪರಿಸರ ಕಾಪಾಡಿಕೊಂಡು ಸ್ಮಾರ್ಟ್ ಸಿಟಿ ಮಾಡುವುದು ಸವಾಲೇ ಸರಿ. ಹೀಗಾಗಿ ಪರಿಸರಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ.

ಜಿಲ್ಲಾಡಳಿತ ಸಜ್ಜಾಗಿದೆಯೇ?
ತುಮಕೂರು ಜಿಲ್ಲಾಡಳಿತ ಶಕ್ತಿ ಹೀನವಾಗಿದೆ. 68 ಲಕ್ಷ ಹಣವನ್ನು ಒಂದು ಎಕರೆ ಜಮೀನಿಗೆ ನಿಗದಿಗೊಳಿಸಿದೆ. ಆದರೆ ಎಲ್ಲವೂ ಸರಿಯಾಗಲು ಕನಿಷ್ಟ 32 ಲಕ್ಷ ಕಕ್ಕಬೇಕಾಗಿದೆ. ಒಂದು ಎಕರೆ ಜಮೀನಿಗೆ ಒಂದು ಕೋಟಿ ರುಪಾಯಿ ವೆಚ್ಚವಾಗಲಿದೆ. ಹೀಗಾಗಿ ಜಿಲ್ಲಾಡಳಿತ ಸ್ಮಾರ್ಟ್ ಸಿಟಿ ಸೃಷ್ಟಿಗೆ ಸದ್ಯಕ್ಕಂತೂ ಸಜ್ಜಾಗಿಲ್ಲ.

ಸ್ಮಾರ್ಟ್ ಸಿಟಿ ಎಂದರೇನು?
ಪರಿಸರಕ್ಕೆ ಪೂರಕವಾದ ಅತ್ಯಾಧುನಿಕ ಸಕಲ ವ್ಯವಸ್ಥೆಗಳು ಒಂದೇ ಕಡೆ ಇರುವ ಜಾಗ. ಒಂದರ್ಥದಲ್ಲಿ ಡಿಜಿಟಲ್ ಸಿಟಿ. ಈ ಸಿಟಿಯಲ್ಲಿ ಏನೇನು ಇರುತ್ತೆ ಅನ್ನೋದಕ್ಕಿಂತ ಏನೇನು ಇಲ್ಲ ಅನ್ನೋದೇ ಸೂಕ್ತ. ವೈಫೈ ಕನೆಕ್ಷನ್, ದಿನವಿಡೀ ವಿದ್ಯುತ್,  24 ಗಂಟೆ ನೀರು, ಸೋಲಾರ್ ಪವರ್, ಹವಾನಿಯಂತ್ರಿತ ಮುಕ್ತ ಹಸಿರು ಕಟ್ಟಡಗಳು, ಇಡೀ ಸಿಟಿಯೇ ಡಿಜಿಟಲ್, ಅಂಗನವಾಡಿಯಿಂದ ಉನ್ನತ ಶಿಕ್ಷಣದವರೆಗೆ, ಕೊತ್ತಂಬರಿ ಸೊಪ್ಪಿನಿಂದ ದೊಡ್ಡ ದೊಡ್ಡ ಕಾರುಗಳವರೆಗೆ, ಸಿನಿಮಾ ಥಿಯೇಟರ್, ಮಾಲ್‌ಗಳು, ಕಾರು ಬಳಕೆ ಅತ್ಯಂತ ಕಡಿಮೆ. ಸೈಕ್ಲಿಂಗ್ ಮೂಲಕ ಇಡೀ ಸಿಟಿ ಸುತ್ತಿ ಬೇಕಾದ ವಸ್ತುಗಳ ಖರೀದಿಸಬಹುದು. ಸೈಬರ್ ಕೆಫೆ, ಐಷಾರಾಮಿ ಹೊಟೇಲ್‌ಗಳು. ಇಡೀ ಸಿಟಿಯ ಘನತ್ಯಾಜ್ಯಗಳು ತಕ್ಷಣ ವಿಲೇವಾರಿಯಾಗಿ ಪ್ಯೂರಿಫೈ ಆಗುವ ವ್ಯವಸ್ಥೆ. ಹೀಗೆ ಏನು ಬೇಕೋ ಎಲ್ಲವೂ ಒಂದೇ ಸೂರಿನಲ್ಲಿ ಸಿಗುವ ವ್ಯವಸ್ಥೆ ಇರುವುದೇ ಸ್ಮಾರ್ಟ್‌ಸಿಟಿ.

ಪರಿಸರಕ್ಕೆ ಪೂರಕವಾದ ಅತ್ಯಾಧುನಿಕ ಸಕಲ ವ್ಯವಸ್ಥೆಗಳು ಒಂದೇ ಕಡೆ ಇರುವ ಜಾಗ. ಒಂದರ್ಥದಲ್ಲಿ ಡಿಜಿಟಲ್ ಸಿಟಿ. ಈ ಸಿಟಿಯಲ್ಲಿ ಏನೇನು ಇರುತ್ತೆ ಅನ್ನೋದಕ್ಕಿಂತ ಏನೇನು ಇಲ್ಲ ಅನ್ನೋದೇ ಸೂಕ್ತ. ವೈಫೈ ಕನೆಕ್ಷನ್, ದಿನವಿಡೀ ವಿದ್ಯುತ್,  24 ಗಂಟೆ ನೀರು, ಸೋಲಾರ್ ಪವರ್, ಹವಾನಿಯಂತ್ರಿತ ಮುಕ್ತ ಹಸಿರು ಕಟ್ಟಡಗಳು, ಇಡೀ ಸಿಟಿಯೇ ಡಿಜಿಟಲ್, ಅಂಗನವಾಡಿಯಿಂದ ಉನ್ನತ ಶಿಕ್ಷಣದವರೆಗೆ, ಕೊತ್ತಂಬರಿ ಸೊಪ್ಪಿನಿಂದ ದೊಡ್ಡ ದೊಡ್ಡ ಕಾರುಗಳವರೆಗೆ, ಸಿನಿಮಾ ಥಿಯೇಟರ್, ಮಾಲ್‌ಗಳು, ಕಾರು ಬಳಕೆ ಅತ್ಯಂತ ಕಡಿಮೆ. ಸೈಕ್ಲಿಂಗ್ ಮೂಲಕ ಇಡೀ ಸಿಟಿ ಸುತ್ತಿ ಬೇಕಾದ ವಸ್ತುಗಳ ಖರೀದಿಸಬಹುದು. ಸೈಬರ್ ಕೆಫೆ, ಐಷಾರಾಮಿ ಹೊಟೇಲ್‌ಗಳು. ಇಡೀ ಸಿಟಿಯ ಘನತ್ಯಾಜ್ಯಗಳು ತಕ್ಷಣ ವಿಲೇವಾರಿಯಾಗಿ ಪ್ಯೂರಿಫೈ ಆಗುವ ವ್ಯವಸ್ಥೆ. ಹೀಗೆ ಏನು ಬೇಕೋ ಎಲ್ಲವೂ ಒಂದೇ ಸೂರಿನಲ್ಲಿ ಸಿಗುವ ವ್ಯವಸ್ಥೆ ಇರುವುದೇ ಸ್ಮಾರ್ಟ್‌ಸಿಟಿ.

ರಿಯಲ್ ಎಸ್ಟೇಟ್ ವ್ಯವಹಾರ ಹೇಗಿದೆ?

ಭೂ ವ್ಯವಹಾರ ಬಿರುಸಾಗಿದೆ. ಆದರೆ  ನಿಮ್ಜ್ ಯೋಜನೆ ರದ್ದಾಗಿದೆ ಎಂದು ಭೂ ಮಾಫಿಯಾ ಸುಳ್ಳು ಸುದ್ದಿ ಹಬ್ಬಿಸಿ, ರೈತರು, ಸಣ್ಣ ಹಿಡುವಳಿದಾರರೊಂದಿಗೆ ಸಣ್ಣ-ಪುಟ್ಟ ಹಣಕ್ಕೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಭೂ ಮಾಫಿಯಾ ಸುದ್ದಿ ನಂಬಿ ಯಾಮಾರುತ್ತಿರುವ ರೈತರು ಭೂಮಿಯನ್ನು ಕಡಿಮೆ ಬೆಲೆಗೆ ಮಾರುತ್ತಿದ್ದಾರೆ.
ಕಡಿಮೆ ಬೆಲೆಗೆ ರೈತರ ಭೂಮಿ ಕೊಳ್ಳುವ ಭೂ ಮಾಫಿಯಾ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲು ಸಿದ್ಧವಾಗುತ್ತಿದೆ. ಎಲ್ಲೋ ಒಂದು ಕಡೆ ಸ್ಮಾರ್ಟ್ ಸಿಟಿಯಾಗುವುದಕ್ಕೆ ಭೂ ಮಾಫಿಯಾ ಪೆಟ್ಟು ನೀಡುತ್ತಿದೆ. ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರೈತರ, ಸಣ್ಣ ಹಿಡುವಳಿದಾರರ ಹಿತ ಕಾಯಬೇಕು. ಇಲ್ಲದೇ ಹೋದರೆ ಸ್ಮಾರ್ಟ್ ಸಿಟಿಗೆ ಜಮೀನು ಸಿಗದೇ ಹೋಗುವ ಆತಂಕವೂ ಎದುರಾಗಲಿದೆ. ಈಗಾಗಲೇ ನೋಟಿಫೈ ಮಾಡಿರುವ ಜಮೀನನ್ನು ಸಹ ಭೂ ಮಾಫಿಯಾ ಖರೀದಿಸುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಮೂಲಭೂತ ಸೌಕರ್ಯಸ್ಥಿತಿಗತಿ ಹೇಗಿದೆ?
ನಿಮ್ಜ್ ಹಿನ್ನೆಲೆಯಲ್ಲಿ 460 ಕೆವಿ ವಿದ್ಯುತ್ ಲೈನ್ ಉದ್ಘಾಟನಾ ಹಂತದಲ್ಲಿದೆ.
ವಿದ್ಯುತ್ ಸಮಸ್ಯೆ ತಲೆದೋರುವುದಿಲ್ಲ. ಆದರೆ ನೀರಿನ ವಿಷಯದಲ್ಲಿ ಗೊಂದಲವಿದೆ.
1.135 ಟಿಎಂಸಿ ಹೇಮಾವತಿ ನೀರು ತುಮಕೂರಿಗೆ ತರಲು ನಿರ್ಧರಿಸಲಾಗಿದೆ.
ದಾಬಸ್‌ಪೇಟೆ ಕೈಗಾರಿಕಾ ವಲಯಕ್ಕೂ ಇದೇ ನೀರನ್ನು ಕೊಡುವ ನಿರ್ಧಾರ ಮಾಡಲಾಗಿದೆ.
ನಿಮ್ಜ್ ವಲಯಕ್ಕೆ ಒಂದೂವರೆ ಟಿಎಂಸಿಯಷ್ಟು ನೀರು ಬೇಕೇ ಬೇಕು.
0.62 ಟಿಎಂಸಿ ಕೊಳಚೆ ನೀರನ್ನು ಶುದ್ಧೀಕರಣ ಮಾಡಿ ಕೈಗಾರಿಕಾ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತದೆ.
ಭೀಮಸಂದ್ರ ಕೆರೆಯ ಕೊಳಚೆ ನೀರು ಶುದ್ಧೀಕರಣ ಮಾಡಲು ಯೋಜನೆ ಸಿದ್ಧವಾಗಿದೆ.
ಹಾಲಿ ಕೈಗಾರಿಕೆಗಳಿಗೆ ಹೇಮಾವತಿ ಕುಡಿಯುವ ನೀರನ್ನೇ ಬಳಕೆ ಮಾಡಲಾಗುತ್ತಿದೆ.
ನೀರಿನ ಗೊಂದಲ ಬಗೆಹರಿಸಲು ಸಚಿವ ಸಂಪುಟ ತೀರ್ಮಾನ ಮಾಡಬೇಕಿದೆ.
12,500 ಎಕರೆ ಜಾಗದಲ್ಲಿ ಮಳೆ ನೀರು ಕೊಯ್ಲು ಮಾಡುವ ಉದ್ದೇಶವೂ ಇದೆ.
ಎತ್ತಿನಹೊಳೆ ಯೋಜನೆಯಿಂದ ಒಂದು ಕಾಲು ಟಿಎಂಸಿ ನೀರು ಕೊಡುವ ಭರವಸೆಯಿದೆ.
ಕೈಗಾರಿಕೆ ಸಲುವಾಗಿ 12,500 ಎಕರೆ ಜಮೀನನ್ನು ವಶಪಡಿಸಿಕೊಳ್ಳಬೇಕಿದೆ.
ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಇನ್‌ಪ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ (
ಕೆಐಎಡಿಬಿ) ಹುಡ್ಕೋದಿಂದ ಸುಮಾರು 1500 ಕೋಟಿಯಿಂದ 3000 ಕೋಟಿವರೆಗೆ ಸಾಲ ಪಡೆದು ಜಮೀನು ಪಡೆದುಕೊಳ್ಳಲು ಅವಕಾಶವಿದೆ. ಈ ಕುರಿತು ಕೆಎಸ್‌ಐಐಡಿಸಿ ಟಿಪ್ಪಣಿ ಕಳುಹಿಸಿದ್ದರೂ ಯಾವುದೇ ಕ್ರಮ ಆಗಿಲ್ಲ. ಸಚಿವ ಸಂಪುಟ ಈ ವಿಷಯವನ್ನು ತಡೆ ಹಿಡಿದಿದೆ. ರಾಜ್ಯ ಸರ್ಕಾರ ಕೂಡಲೇ ತೀರ್ಮಾನ ಮಾಡಬೇಕು. ತಕ್ಷಣ ಆದರೆ ಮಾತ್ರ ಯೋಜನೆ ಮುಂದುವರೆಯಲಿದೆ. ಇಲ್ಲದಿದ್ದರೆ ಕಷ್ಟ.

ಕೈಗಾರಿಕಾಭಿವೃದ್ಧಿ ಹೇಗಿದೆ?
ತುಮಕೂರಿನ ಹೊರವಲಯದಲ್ಲಿ ವಸಂತನರಸಾಪುರ ಕೈಗಾರಿಕಾ ವಲಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬೆಂಗಳೂರಿನ ಒತ್ತಡ ಕಡಿಮೆ ಮಾಡಲು ಕಳೆದ 8 ವರ್ಷಗಳಿಂದ ಕೈಗಾರಿಕಾ ವಲಯವನ್ನಾಗಿ ತುಮಕೂರನ್ನು ಗುರುತಿಸಲಾಗಿದೆ. ಈ ಮೊದಲು ಹಿರೇಹಳ್ಳಿ ಕೈಗಾರಿಕಾ ವಲಯವಿತ್ತು. ಈಗ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಪಕ್ಕದಲ್ಲೇ ಕೈಗಾರಿಕೆ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಈಗಾಗಲೇ ಜಪಾನ್, ಜರ್ಮನ್ ಸೇರಿದಂತೆ ಬೇರೆ ಬೇರೆ ದೇಶಗಳ ಕೈಗಾರಿಕೆಗಳು ವಸಂತನರಸಾಪುರದಲ್ಲಿ ಕಾರ್ಯಾರಂಭ ಮಾಡುತ್ತಿದೆ.

ಸ್ಮಾರ್ಟ್‌ಸಿಟಿ ಸಂಬಂಧ ಕೇಂದ್ರ ಸರ್ಕಾರ ಜಿಲ್ಲಾಡಳಿತವನ್ನು ಏನನ್ನೂ ಕೇಳಿಲ್ಲ. ಅಧಿಕೃತವಾಗಿ ಪತ್ರ ಕೂಡ ಬಂದಿಲ್ಲ. ಅಲ್ಲಿಂದ ಪತ್ರ ಬಂದ ಬಳಿಕ ಜಿಲ್ಲಾಡಳಿತದಿಂದ ಎಲ್ಲ ಸಹಕಾರ ನೀಡಲಾಗುವುದು.
-ಸತ್ಯಮೂರ್ತಿ, ಜಿಲ್ಲಾಧಿಕಾರಿ

ಸ್ಮಾರ್ಟ್ ಸಿಟಿಯನ್ನಾಗಿ ರೂಪಿಸಲು ತುಮಕೂರನ್ನು ಆಯ್ಕೆ ಮಾಡಿರುವುದು ಸಂತಸದ ವಿಷಯ. ಸ್ಮಾರ್ಟ್ ಸಿಟಿಯನ್ನು ಎಲ್ಲಿ ಮಾಡುತ್ತಾರೆ ಎಂಬುದು ನಿಖರವಾಗಿ ಗೊತ್ತಿಲ್ಲ. ವಸಂತನರಸಾಪುರದಲ್ಲಿ ಮಾಡುತ್ತಾರೋ ಅಥವಾ ಬೇರೆಡೆ ಮಾಡುತ್ತಾರೋ ಎಂಬುದು ಸದ್ಯದಲ್ಲಿ ತಿಳಿಯುತ್ತದೆ. ತುಮಕೂರು ನಗರ ಶಾಸಕನಾಗಿ ಎಲ್ಲಾ ಸಹಕಾರ ನೀಡುವೆ.
-ಡಾ.ರಫೀಕ್ ಅಹಮದ್, ತುಮಕೂರು ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.