ನ್ಯಾಯಾಂಗದ ಮತ್ತೊಂದು ನೀಲಿ ಛಾಯೆ

-ಮಧ್ಯಪ್ರದೇಶ ಜಡ್ಜ್ ಮೇಲೆ ಲೈಂಗಿಕ ಕಿರುಕುಳ ಆರೋಪ
-ಲೈಂಗಿಕ ಕಿರುಕುಳ ವಿಚಾರಣೆ ಸಮಿತಿಯ ಅಧ್ಯಕ್ಷೆಯೇ ಸಂತ್ರಸ್ತೆ
ನವದೆಹಲಿ/ಭೋಪಾಲ್: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ವಿಚಾರಣೆಗಾಗಿ ನೇಮಿಸಲಾಗಿದ್ದ ನ್ಯಾಯಾಂಗ ಸಮಿತಿಯ ನ್ಯಾಯಾಧೀಶೆಯೊಬ್ಬರೇ ತಾವು ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ದೂರು ನೀಡಿದ್ದಾರೆ.
ಲೈಂಗಿಕ ದೌರ್ಜನ್ಯಗಳ ವಿಚಾರಣೆಗಾಗಿ ನೇಮಿಸಲಾಗಿರುವ 'ವಿಶಾಖಾ ಸಮಿತಿ'ಯ ಅಧ್ಯಕ್ಷರಾಗಿದ್ದ ಗ್ವಾಲಿಯರ್ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ತಾವು ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ. ಮಧ್ಯಪ್ರದೇಶ ಹೈಕೋರ್ಟ್ನ ನ್ಯಾಯಾಧೀಶರೊಬ್ಬರ ವಿರುದ್ಧ ಈ ಸಂಬಂಧ ಅವರು ಈ ಬಗ್ಗೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ಅವರಿಗೆ ಪತ್ರ ಬರೆದಿದ್ದು, ಕಿರುಕುಳದ ಹಿನ್ನೆಲೆಯಲ್ಲಿ ತಾವು ನ್ಯಾಯಮೂರ್ತಿ ಹುದ್ದೆಗೆ ರಾಜಿನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಪತ್ರದಲ್ಲೇನಿದೆ?
ತಮ್ಮ ಮೇಲಿನ ಅಧಿಕಾರ ಸ್ಥಾನದಲ್ಲಿದ್ದ ಮಧ್ಯಪ್ರದೇಶ ಹೈಕೋರ್ಟ್ನ ನ್ಯಾಯಾಧೀಶರೊಬ್ಬರು ಅವರ ಬಂಗಲೆಗೆ ಒಬ್ಬಂಟಿಯಾಗಿ ಬರುವಂತೆ ಆಹ್ವಾನಿಸುತ್ತಿದ್ದರೆಂದು ನ್ಯಾಯಾಧೀಶೆ ದೂರಿದ್ದಾರೆ. ಅಲ್ಲದೇ, ಜಿಲ್ಲಾ ರಿಜಿಸ್ಟ್ರಾರ್ ಮೂಲಕ ಸಂದೇಶ ಕಳುಹಿಸಿದ್ದ ಆ ನ್ಯಾಯಾಧೀಶ, ಐಟಂ ಹಾಡೊಂದಕ್ಕೆ ನೃತ್ಯ ಮಾಡುವಂತೆಯೂ ಸೂಚಿಸಿದ್ದರು. ಅವರ ಆಣತಿಯಂತೆ ನಡೆದುಕೊಳ್ಳದ್ದಕ್ಕೆ ತಮ್ಮನ್ನು ವರ್ಗಾಯಿಸಲಾಯಿತು ಎಂದೂ ನ್ಯಾಯಾಧೀಶೆ ಪತ್ರದಲ್ಲಿ ದೂರಿದ್ದಾರೆ.
ಅನುಮಾನದ ಕಣ್ಣು
ಇತ್ತೀಚೆಗೆ, ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನ್ಯಾ. ಸ್ವತಂತ್ರ ಕುಮಾರ್ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿತ್ತು. ಅಲ್ಲದೇ, ಇನ್ನೊಬ್ಬ ನಿವೃತ್ತ ನ್ಯಾಯಮೂರ್ತಿ ಎ.ಕೆ. ಗಂಗೂಲಿ ವಿರುದ್ಧವೂ ಇಂಥದ್ದೇ ದೂರು ಕೇಳಿಬಂದಿತ್ತು. ಜೊತೆಗೆ, ಕೆಲ ದಿನಗಳ ಹಿಂದೆ ನ್ಯಾಯಾಂಗದಲ್ಲಿ ರಾಜಕಾರಣಿಗಳ ಹಸ್ತಕ್ಷೇಪವಿದೆ ಎಂದು ಘಟನೆಯೊಂದನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದರು. ಈ ಎಲ್ಲ ಘಟನೆಗಳು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನಸಾಮಾನ್ಯರು ಅನುಮಾನದ ದೃಷ್ಟಿ ಹರಿಸುವಂತಾಗಿದೆ.
ದೂರಿನ ಪ್ರತಿ ಇನ್ನೂ ನನ್ನ ಕೈ ಸೇರಿಲ್ಲ. ದೂರು ಬಂದ ಮೇಲೆ ಅದನ್ನು ಪರಾಮರ್ಶಿಸಿ, ಆನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ನ್ಯಾ. ಆರ್.ಎಂ. ಲೋಧಾ,
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


