ಭಾವಪೂರ್ಣ ವಿದಾಯ

ಬೆಂಗಳೂರು: ಸಾಹಿತಿ ಡಾ.ಯು.ಆರ್.ಅನಂತಮೂರ್ತಿಯ ಸಂಸ್ಕಾರ ಪ್ರೀತಿ ಅವರ ಅಂತ್ಯಕ್ರಿಯೆ ದಿನ ಅನಾವರಣಗೊಂಡಿದೆ. ವೈದಿಕ ಪರಂಪರೆ, ಬ್ರಾಹ್ಮಣ, ಧಾರ್ಮಿಕ ವಿಧಿವಿಧಾನಗಳನ್ನು ವಿರೋಧಿಸಿಕೊಂಡೇ ಪ್ರವರ್ಧಮಾನಕ್ಕೆ ಬಂದ ಅನಂತಮೂರ್ತಿ ಅವರ ಅಂತ್ಯ ಸಂಸ್ಕಾರ ಹಿಂದು ಧರ್ಮದ ವಿಧಿವಾದನಗಳಂತೆ ಅತ್ಯಂತ ಸಾಂಪ್ರದಾಯಿಕವಾಗಿ ನಡೆಯಿತು. ಸಂಸ್ಕಾರ ಕಾದಂಬರಿ ಮೂಲಕ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದವರು. ಸಂಸ್ಕಾರ ಆದಿಯಾಗಿ ಎಲ್ಲ ಕಾದಂಬರಿ, ಕೃತಿ ಹಾಗೂ ಲೇಖನಗಳಲ್ಲಿ ವೈದಿಕ ಪರಂಪರೆಯನ್ನು ಘಂಟಾಘೋಷವಾಗಿ ವಿರೋಧಿಸಿದವರು. ವಿಪರ್ಯಾಸವೆಂದರೆ ಅವರು ಸಾಹಿತ್ಯ ಹಾಗೂ ಸಮಾಜಿಕ ಪಯಣದಲ್ಲಿ ಖಂಡಿಸಿಕೊಂಡು ಬಂದಿರುವ ಪ್ರತಿಯೊಂದು ವಿಧಿಯನ್ವಯವೇ ಅಂತ್ಯ ಸಂಸ್ಕಾರ ನಡೆಯಿತು.
ಅನಂತಮೂರ್ತಿ ಅವರ ಅಂತಿಮ ಯಾತ್ರೆ ಕೂಡ ಒಂದು ರೀತಿಯಲ್ಲಿ ಅವರ ಜೀವನ ಯಾತ್ರೆ ಪ್ರಾತಿನಿಧ್ಯದಂತಿತ್ತು. ಕ್ರಿಶ್ಚಿಯನ್ ಧರ್ಮದ ಆಚರಣೆಯಂತೆ ವಿಶೇಷ ಬಸ್‌ನಲ್ಲಿ ಪಾರ್ಥೀವ ಶರೀರದ ಮೆರವಣಿಗೆ ಬಂತು. ಆದರೆ ಕಲಾಗ್ರಾಮಕ್ಕೆ ಕಾಲಿಡುತ್ತಿದ್ದಂತೆ ಮಾಧ್ವ-ಬ್ರಾಹ್ಮಣ ಪರಂಪರೆ ಪ್ರಕಾರ ಅಂತ್ಯ ವಿಧಿ ನಡೆಯಿತು. ಅಂತ್ಯಕ್ರಿಯೆಗೆ ಸೂರ್ಯನಾರಾಯಣ ಶಾಸ್ತ್ರಿಗಳ ನೇತೃತ್ವದ 14 ಪುರೋಹಿತರ ತಂಡ ವಿಧಿವಿಧಾನದ ಜವಾಬ್ದಾರಿವಹಿಸಿಕೊಂಡಿತ್ತು. ಪುತ್ರ ಶರತ್ ಅವರು ಜನಿವಾರ ತೊಟ್ಟುಕೊಂಡು ಅಂತಿಮ ಕಾರ್ಯ ಮಾಡುತ್ತಿದ್ದರು. ಹಾಗೆಯೇ ಕೆಲ ಮಂತ್ರಗಳನ್ನು ಪಠಿಸುತ್ತಿದ್ದರು. ಅಂದಹಾಗೆ ಶರತ್ ಅವರಿಗೆ ಸ್ವತಃ ಅನಂತಮೂರ್ತಿಯೇ ನಿಂತು ಉಪನಯನ ಮಾಡಿಸಿದ್ದರು. ಕೆಲವರ್ಷಗಳ ಹಿಂದೆ ಮಗಳಿಗೆ ತಾವೇ ಆಸಕ್ತಿ ವಹಿಸಿ ತುಲಾಭಾರ ಮಾಡಿಸಿದ್ದರಂತೆ.
ಇವೆಲ್ಲ ಧಾರ್ಮಿಕ ವಿಧಿಗಳನ್ನು ಅನಂತಮೂರ್ತಿ ಇಚ್ಛೆಯಂತೆ ಮಾಡಲಾಗಿದೆ ಎಂದು ಕುಟುಂಬ ಮೂಲಗಳು ಹೇಳುತ್ತವೆ. ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಕೂಡದು ಎಂದು ಮೊದಲೇ ಸೂಚಿಸಿದ್ದರಂತೆ. ತಂದೆಯ ಆದೇಶದ ಮೇರೆಗೆ ಧಾರ್ಮಿಕ ವಿಧಿವಿಧಾನಗಳ ಜೊತೆ ಅಂತ್ಯಕ್ರಿಯೆ ನಡೆಸಲು ಮಕ್ಕಳು ನಿರ್ಧರಿಸಿದ್ದಾರೆ. ಚಿತೆಯಲ್ಲಿನ ಅಗ್ನಿ ಆರಿದ ಬಳಿಕ ಅಸ್ಥಿಯನ್ನು ಕಾವೇರಿ ಅಥವಾ ಗಂಗಾನದಿಯಲ್ಲಿ ವಿಸರ್ಜಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಪುರೋಹಿತರು ತಿಳಿಸಿದರು.
ಘಟಶ್ರಾದ್ಧ, ಸಂಸ್ಕಾರ, ಭಾರತೀಪುರ ಕೃತಿಗಳಲ್ಲಿ ಬರೆದುಕೊಂಡು ಬಂದ ವಿಚಾರಗಳಿಗೆ ವೈರುಧ್ಯ ಹಾಗೂ ಅಣಕವೆಂಬಂತೆ, ಅನಂತಮೂರ್ತಿ ಇಚ್ಛೆಯಂತೆ ಅಂತ್ಯಕ್ರಿಯ ನಡೆಯಿತು. ಇದನ್ನು ಟಿವಿಯಲ್ಲಿ ವೀಕ್ಷಿಸಿದವರಿಗೆ ಸಂಸ್ಕಾರದ ಪ್ರಾಣೇಶಾಚಾರ್ಯ ಹಾಗೂ ನಾರಾಯಣಪ್ಪನ ನಾನಾ ಮುಖಗಳು ಒಮ್ಮೆ ಕಣ್ಮುಂದೆ ಬಂದು ಹೋಗಿದ್ದರೆ ಆಶ್ಚರ್ಯವಿಲ್ಲ. ಒಂದೆಡೆ ಹಿಂದು ಧರ್ಮದ ವಿಧಿವಿಧಾನಗಳ ಪ್ರಕಾರ ಅಂತ್ಯ ಸಂಸ್ಕಾರದ ತಯಾರಿ ನಡೆಯುತ್ತಿದ್ದರೆ, ಪ್ರಗತಿಪರ ವಿಚಾರಗಳನ್ನು ಪ್ರತಿಪಾದಿಸುತ್ತ ಅನಂತಮೂರ್ತಿಯವರಿಗೆ ವಂದಿಮಾಗದರಂತಿದ್ದವರು ಮೂಕು ಪ್ರೇಕ್ಷಕರಾಗಿ ಕುಳಿತಿದ್ದುದು ಚರ್ಚೆಗೆ ಒಳಗಾಯಿತು.
ಹೇಳುವುದು ಶಾಸ್ತ್ರ, ತಿನ್ನೋದು ಮಾತ್ರ ಬದನೆಕಾಯಿ ಎಂದು ತಮ್ಮತಮ್ಮಲ್ಲೇ ಆಡಿಕೊಳ್ಳುತ್ತಿದ್ದುದೂ ಕೇಳಿಬಂತು. ಈ ಸಂಸ್ಕಾರಕ್ಕೆ ಅನಂತಮೂರ್ತಿ ಅವರ ಒಡನಾಡಿಗಳಾದ ಕೆ.ಮರುಳಸಿದ್ದಪ್ಪ, ಪ್ರೊ ಜಿಕೆ ಗೋವಿಂದರಾವ್, ವೈದೇಹಿ, ವೀಣಾ ಬನ್ನಂಜೆ, ಪಟ್ಟಾಭಿರಾಮ್ ಸೋಮಯಾಜಿ, ಫಣಿರಾಜ, ಜಿಎನ್ ನಾಗರಾಜ್ ಸಾಕ್ಷಿಯಾಗಿದ್ದರು. ಇದೇ ಸಂಸ್ಕಾರ ಪ್ರೇರಣೆ ಪಡೆದು ಮೂಢನಂಬಿಕೆ ನಿಯಂತ್ರಣ ಕಾಯಿದೆ ಜಾರಿಗೆ ತರಲು ಮುಂದಾಗಿದ್ದ ಮುಖ್ಯಮಂತ್ರಿ ಕೂಡ ಅಂತ್ಯಕ್ರಿಯೆ ನಡೆದ ಕಲಾಗ್ರಾಮದಲ್ಲಿ ಹಾಜರಿದ್ದರು.
ಅನಂತಮೂರ್ತಿಗೆ ಧಾರ್ಮಿಕ ಆಚರಣೆಗಳ ಬಗ್ಗೆ ಆಸಕ್ತಿ ಇತ್ತು. ಆದರೆ ಅಷ್ಟಾಗಿ ಆಚರಿಸುತ್ತಿರಲಿಲ್ಲ. ಮಗನ ಉಪನಯನ ಹಾಗೂ ಮಗಳ ತುಲಾಭಾರವನ್ನು ತಾವೇ ಸ್ವತಃ ಆಸಕ್ತಿಯಿಂದ ನಡೆಸಿದ್ದು ಇದಕ್ಕೆ ಉದಾಹರಣೆ.
-ಪಟ್ಟಾಭಿರಾಮ ಸೋಮಯಾಜಿ, ಲೇಖಕ
ಅನಂತಮೂರ್ತಿ ದೇಶ ಕಂಡ ಬಹುದೊಡ್ಡ ಚಿಂತಕ. ದೇಶ-ವಿದೇಶಗಳ ಸಾಂಸ್ಕೃತಿಕ ಲೋಕದಲ್ಲಿ ವಿಶೇಷ ಛಾಪು ಮೂಡಿಸಿದವರು. ಅವರ ಅಗಲಿಕೆಯಿಂದ ಕನ್ನಡ ಸಾಂಸ್ಕೃತಿಕ ಲೋಕ ಶೂನ್ಯವಾಗಿದೆ.
-ಉಮಾಶ್ರೀ, ಸಚಿವೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


