ಜಪಾನ್ಗೆ ಹಾರಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: 6 ದಿನಗಳ ಪ್ರವಾಸ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಗ್ಗೆ ಜಪಾನ್ಗೆ ತೆರಳಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಇಂದು ಬೆಳಗ್ಗೆ 6ಗಂಟೆಗೆ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ಗೆ ತೆರಳಿದರು. ನರೇಂದ್ರ ಮೋದಿ ಅವರೊಂದಿಗೆ ಪ್ರಧಾನಮಂತ್ರಿ ಕಾರ್ಯಾಲಯದ ಕೆಲ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ತೆರಳಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದು ಪ್ರಮುಖ ವಿಚಾರವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೇಶದ ಪ್ರಮುಖ ವಾಣಿಜ್ಯೋಧ್ಯಮಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ನ ಮುಖೇಶ್ ಅಂಬಾನಿ ಮತ್ತು ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್ಜಿ ಅವರು ಜಪಾನ್ಗೆ ತೆರಳಿದ್ದಾರೆ.
ಇನ್ನು ಕೆಲವೇ ಗಂಟೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ವಿಮಾನ ಜಪಾನ್ನ ಕ್ಯಾಟೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದು, ಜಪಾನ್ ಪ್ರಧಾನಿ ಶಿಂನ್ಜೋ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಳ್ಳಲ್ಲಿದ್ದಾರೆ. ಬಳಿಕ ಜಪಾನ್ ಪ್ರಧಾನಿ ಶಿಂನ್ಜೋ ಅವರ ನಿವಾಸಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಖಾಸಗಿಯಾಗಿ ಶಿಂನ್ಜೋ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಬಳಿಕ ಉಭಯ ದೇಶದ ಪ್ರಧಾನಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಲಿದ್ದಾರೆ. ಈ ವೇಳೆ ಮುಖ್ಯವಾಗಿ ದ್ವಿಪಕ್ಷೀಯ ಮಾತುಕತೆಯಂತಹ ಹಲವು ವಿಚಾರಗಳು ಚರ್ಚೆಯಾಗಲಿವೆ. ಭೇಟಿ ವೇಳೆ ಉಭಯ ದೇಶಗಳ ನಡುವಿನ ಆರ್ಥಿಕ ವ್ಯವಹಾರ, ಪರಮಾಣು ವಿಚಾರ, ಬುಲೆಟ್ ರೈಲು, ನೌಕಾಪಡೆಗೆ ಅತ್ಯಾಧುನಿಕ ವಿಮಾನಗಳ ಪಡೆಯುವುದು ಮತ್ತು ಭದ್ರತಾ ವಿಚಾರಗಳು ಸೇರಿದಂತೆ ಹತ್ತು ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಪ್ರಮುಖವಾಗಿ ಭಾರತದಲ್ಲಿ ಬುಲೆಟ್ ರೈಲು ಓಡಿಸುವ ವಿಚಾರಕ್ಕೆ ಕುರಿತಂತೆ ಜಪಾನ್ ಪ್ರಧಾನಿ ಶಿಂನ್ಜೋ ಅವರೊಂದಿಗೆ ನರೇಂದ್ರ ಮೋದಿ ಅವರು ಚರ್ಚೆ ನಡೆಸಲಿದ್ದಾರೆ. ಭಾರತದಲ್ಲಿ ಬುಲೆಟ್ ರೈಲು ಓಡಿಸುವ ಸಾಧ್ಯತೆ, ಅಗತ್ಯ ತಂತ್ರಜ್ಞಾನ ಮತ್ತು ಆರ್ಥಿಕ ನೆರವು ನೀಡುವ ಕುರಿತು ಚರ್ಚೆ ನಡೆಸಲಾಗುತ್ತದೆ. ಮೂಲಗಳ ಪ್ರಕಾರ ಭಾರತದಲ್ಲಿ ಬುಲೆಟ್ ರೈಲು ಓಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತಂತ್ರಜ್ಞಾನ ವಿನಿಮಯ ಮತ್ತು ಆರ್ಥಿಕ ನೆರವು ನೀಡುವ ವಿಚಾರದಲ್ಲಿ ಜಪಾನ್ ಪ್ರಧಾನಿ ಶಿಂನ್ಜೋ ಅವರು ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅವರು ಈ ಬಗ್ಗೆ ತಮ್ಮ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಜಪಾನ್ ಆತಂಕ ದೂರ ಮಾಡಿದ ಪ್ರಧಾನಿ ಮೋದಿ
ಪ್ರವಾಸಕ್ಕೂ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ದೇಶದ ಆತಂಕವೊಂದನ್ನು ದೂರ ಮಾಡಿದ್ದಾರೆ. ಈ ಹಿಂದೆ ಜಪಾನ್ ದೇಶದೊಂದಿಗೆ ಭಾರತ ಮಾಡಿಕೊಂಡಿದ್ದ ಅಣ್ವಸ್ತ್ರ ನೀತಿಯನ್ನು ಭಾರತದ ನೂತನ ಪ್ರಧಾನಿ ನರೇಂದ್ರ ಮೋದಿ ಅವರು ಪುನರ್ ಪರೀಶೀಲನೆ ಮಾಡಬಹುದೆಂಬ ಮಾಧ್ಯಮಗಳ ವರದಿಯನ್ನು ಮೋದಿ ತಳ್ಳಿಹಾಕಿದ್ದಾರೆ.
ನಿನ್ನೆ ಪ್ರವಾಸಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು, ಜಪಾನ್ ದೇಶದೊಂದಿಗೆ ಭಾರತ ಮಾಡಿಕೊಂಡಿರುವ ಪರಮಾಣು ಒಪ್ಪಂದವನ್ನು ಪುನರ್ ಪರಿಶೀಲನೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಿಂದ ಜಪಾನ್ ಕೊಂಚ ನಿರಮ್ಮಳವಾಗಿದ್ದು, ಅಣ್ವಸ್ತ್ರ ಆತಂಕದಿಂದ ದೂರಾಗಿದೆ.
ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಅವರು ಐದು ದಿನಗಳ ಜಪಾನ್ ಪ್ರವಾಸ, ಉಭಯ ದೇಶಗಳ ದ್ವಿಪಕ್ಷೀಯ ಮಾತುಕತೆಗೆ ಉತ್ತಮ ವೇದಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


