ನರೇಂದ್ರ ಅಬೆ ಯುಗ ಆರಂಭ

ಟೋಕಿಯೋ: ಭಾರತ-ಜಪಾನ್ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯ ಬರೆಯುವ ಹಾಗೂ ಜಾಗತಿಕ ಪಾಲುದಾರಿಕೆಯನ್ನು ಉನ್ನತ ಮಟ್ಟಕೇರಿಸುವ ಅಜೆಂಡಾದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ತಮ್ಮ 5 ದಿನಗಳ ಜಪಾನ್ ಪ್ರವಾಸ ಆರಂಭಿಸಿದ್ದಾರೆ.
ಮೋದಿ ಅವರು ಒಸಾಕಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅವರನ್ನು ಕಾಣಲೆಂದು ಜಪಾನ್ ಪ್ರಧಾನಿ ಶಿನ್ಜೋ ಅಬೆ ಅವರು ಟೋಕಿಯೋದಿಂದ ಕ್ಯೋಟೋ (ಸುಮಾರು 500 ಕಿ.ಮೀ ದೂರ)ಗೆ ಧಾವಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು. ಸಾಮಾನ್ಯವಾಗಿ ರಾಜಧಾನಿ ಟೋಕಿಯೋದಲ್ಲೇ ಗಣ್ಯರನ್ನು ಭೇಟಿ ಮಾಡುವ ಪ್ರಧಾನಿ ಅಬೆ ಮೋದಿ ಭೇಟಿಗೆ ಅಷ್ಟು ದೂರ ಸಂಚರಿಸುವ ಮೂಲಕ ಏಷ್ಯಾದ ಎರಡನೇ ಮತ್ತು ಮೂರನೇ ಅತಿದೊಡ್ಡ ಆರ್ಥಿಕ ತೆಗಳ ನಡುವೆ ಬೆಳೆಯುತ್ತಿರುವ ಸಂಬಂಧದ ಮಹತ್ವವನ್ನು ಸಾರಿದರು. ಇದೇ ವೇಳೆ ಜಪಾನ್ಗೆ ಭೇಟಿ ನೀಡಿದ ಕೆಲವೇ ಗಂಟೆಗಳಲ್ಲಿ ಕ್ಯೋಟೋ ಹಾಗೂ ತಮ್ಮ ಕ್ಷೇತ್ರ ವಾರಣಾಸಿ ನಗರಕ್ಕೆ ಸಂಬಂಧಿಸಿದ ಒಪ್ಪಂದವೊಂದಕ್ಕೆ ಸಹಿ ಹಾಕುವ ಮೂಲಕ ಪ್ರಧಾನಿ ಮೋದಿ ಅವರು ತಾವು ಸಮಯಕ್ಕೆ ನೀಡುವ ಮೌಲ್ಯವೇನು ಎಂಬುದನ್ನು ತೋರಿಸಿದರು.
ಒಟ್ಟಾರೆ ಮೋದಿ ಅಧಿಕಾರಕ್ಕೆ ಬಂದ ಬಳಿಕ ಭಾರತ ಹಾಗೂ ಜಪಾನ್ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತಿರುವುದು ಅಮೆರಿಕ, ಚೀನಾದಂತಹ ರಾಷ್ಟ್ರಗಳಿಗೆ ನಡುಕ ಹುಟ್ಟಿಸಿದೆ. ಸಮಾನ ಮನಸ್ಥಿತಿಯ ಇಬ್ಬರು ನಾಯಕರು ಒಂದಾದರೆ ಅದರ ಪರಿಣಾಮ ಹೇಗಿರಬಹುದು ಎಂಬ ಭೀತಿಯೂ ನೆರೆ ರಾಷ್ಟ್ರಗಳನ್ನು ಕಾಡತೊಗಿದೆ.
ವಾರಣಾಸಿಗೆ ಕ್ಯೋಟೋ ಮಾದರಿ
ಜಪಾನ್ನ ಸ್ಮಾರ್ಟ್ ಸಿಟಿ ಎಂದೇ ಖ್ಯಾತಿ ಗಳಿಸಿರುವ ಕ್ಯೋಟೋ ಮಾದರಿಯಲ್ಲೇ ತಮ್ಮ ಕ್ಷೇತ್ರ ವಾರಣಾಸಿಯನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ ಪ್ರಧಾನಿ ಮೋದಿ. ಜಪಾನ್ಗೆ ಭೇಟಿ ನೀಡಿದ ಮೊದಲ ದಿನವೇ ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಅವರು ಕ್ಯೋಟೋ-ವಾರಣಾಸಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಪಾರಂಪರಿಕ ಸಂರಕ್ಷಣೆ, ನಗರದ ಆಧುನೀಕರಣ ಹಾಗೂ ಕಲೆ, ಸಂಸ್ಕೃತಿ ಕ್ಷೇತ್ರದಲ್ಲಿ ಸಹಕಾರ ಈ ಒಪ್ಪಂದದ ಉದ್ದೇಶವಾಗಿದೆ. ಬೌದ್ಧ ಸಂಸ್ಕೃತಿಯ ನೆಲೆವೀಡಾದ ಕ್ಯೋಟೋವನ್ನು ಅದರ ಪರಂಪರೆದೆ ಧಕ್ಕೆ ಬರದಂತೆ ಅಭಿವೃದ್ಧಿಪಡಿಸಲಾಗಿದ್ದು, ಅದೇ ಮಾದರಿಯಲ್ಲಿ ವಾರಣಾಸಿಯನ್ನೂ ಪ್ರಗತಿಯ ಪಥದತ್ತ ಕೊಂಡೊಯ್ಯಬೇಕು ಎನ್ನುವುದು ಪ್ರಧಾನಿ ಮೋದಿಯ ಇರಾದೆಯಾಗಿದೆ.
ಭಗವದ್ಗೀತೆ, ವಿವೇಕಾನಂದರ ಪುಸ್ತಕದ ಉಡುಗೊರೆ
ತಮ್ಮನ್ನು ನೋಡಲೆಂದೇ 500 ಕಿ.ಮೀ. ದೂರದಿಂದ ಧಾವಿಸಿ ಬಂದ ಜಪಾನ್ ಪ್ರಧಾನಿ ಅಬೆ ಅವರಿಗೆ ಪ್ರಧಾನಿ ಮೋದಿ ಅವರು ಭಗವದ್ಗೀತೆಯ ಸಂಸ್ಕೃತ ಹಾಗೂ ಜಪಾನ್ ಅವತರಣೆಕೆ ಹಾಗೂ ಸ್ವಾಮಿ ವಿವೇಕಾನಂದರಿಗೆ ಸಂಬಂಧಿಸಿದ ಪುಸ್ತಕದವನ್ನು ಉಡುಗೊರೆಯಾಗಿ ನೀಡಿದ್ದಾರೆ. ಭಾನುವಾರ ಪ್ರಧಾನಿ ಮೋದಿ ಅವರು ತೋಜಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಜಪಾನ್ನ ಹಲವು ನಾಯಕರೊಂದಿಗೆ ಮಾತುಕತೆ ನಡೆಸಲಿರುವ ಪ್ರಧಾನಿ, ಪರಿಣಾಮಕಾರಿ ಆಡಳಿತ ಹಾಗೂ ಐತಿಹಾಸಿಕ ನಗರಿಯ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಲ್ಲಿದ್ದಾರೆ. ಜತೆಗೆ, ಸ್ಟೆಮ್-ಸೆಲ್ ಸಂಶೋಧನೆಯಲ್ಲಿ ಜಪಾನ್ ಮಾಡಿರುವ ಸುಧಾರಣೆ ಬಗ್ಗೆಯೂ ಅವರು ಮಾಹಿತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಟೋಕಿಯೋಗೆ ಪ್ರಯಾಣ ಬೆಳೆಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


