

ಮುಂಬೈ: ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ತೋರಿರುವ ನಂತರ, ಬಿಜೆಪಿಯ ತಾಯಿ ಸಂಸ್ಥೆ ಆರ್ ಎಸ್ ಎಸ್ ಈಗ ವಿವಾದಾತ್ಮಕ ಸಾಂವಿಧಾನಕ ವಿಧಿ ೩೭೦ ರ ಬಗ್ಗೆ ತನ್ನ ಕಠಿಣ ನಿಲುವನ್ನು ಸಡಿಲಿಸಿಕೊಂಡಿದ್ದು, ಈಗ ೩೫(ಎ) ವಿಧಿಯ ವಿರುದ್ಧ ತನ್ನ ಗಮನ ಕ್ರೋಢೀಕರಿಸಿದೆ.
ವಿಧಿ ೩೫(ಎ) ದೇಶದ ವಿವಿಧ ಭಾಗಗಳ ಜನ ಜಮ್ಮು ಕಾಶ್ಮೀರದಲ್ಲಿ ನೆಲೆಯೂರಲು ತಡೆಯೊಡ್ಡಿದೆ ಎಂದು ಆರ್ ಎಸ್ ಎಸ್ ನ ಹಿರಿಯ ನಾಯಕ ಅರುಣ್ ಕುಮಾರ್ ತಿಳಿಸಿದ್ದಾರೆ.
ಲೋಕಸಭೆಯ ಒಪ್ಪಿಗೆಯಿಲ್ಲದೆ ೧೯೫೪ ರ 'ಮೇ'ನಲ್ಲಿ ರಾಷ್ಟ್ರಾಧ್ಯಕ್ಷರು ೩೫(ಎ) ಅನ್ನು ಸಂವಿಧಾನದಲ್ಲಿ ಸೇರಿಸಲು ಒಪ್ಪಿಗೆ ಕೊಟ್ಟಿದ್ದಾರೆ. ರಾಷ್ಟ್ರಾಧ್ಯಕ್ಷರ ಈ ನಿರ್ಧಾರ ದೇಶದಲ್ಲಿ ನಡೆದ ದೊಡ್ಡ ರಾಜಕೀಯ ಪಿತೂರಿ ಎಂದಿದ್ದಾರೆ ಕುಮಾರ್.
ಕುಮಾರ್ ಅವರ ಪ್ರಕಾರ ೧೯೫೨ ರಲ್ಲಿ ಪ್ರಧಾನಿ ಜವಾಹಾರ್ ಲಾಲ್ ನೆಹರು ಮತ್ತು ಕಾಶ್ಮೀರಿ ನಾಯಕ ಶೇಕ್ ಅಬ್ದುಲ್ಲ ನಡುವೆ ನಡೆದ ಹೊಂದಾಣಿಕೆಯಿಂದ ಹುಟ್ಟಿದ್ದು ೩೫(ಎ) ವಿಧಿ ಎನ್ನುತ್ತಾರೆ.
ಈ ವಿಧಿಯನ್ನು ತೆಗೆದು ಹಾಕಿದರೆ, ದೇಶದ ವಿವಿಧ ಭಾಗದ ಜನ ಜಮ್ಮು ಕಾಶ್ಮೀರದಲ್ಲಿ ಬಂದು ನೆಲೆಯೂರಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಆರ್ ಎಸ್ ಎಸ್ ಕೃಪಾಪೋಷಿತ ಜಮ್ಮು ಕಾಶ್ಮೀರ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಅರುಣ್ ಕುಮಾರ್.