ಕೌನ್ಸೆಲಿಂಗ್ನಲ್ಲಿ ಭಾರಿ ಅಕ್ರಮ 'ವೃತ್ತಿ'
ಕ.ಪ್ರ.ವಾರ್ತೆ ಬೆಂಗಳೂರು ಫೆ. 1
ವೃತ್ತಿಪರ ಕೋರ್ಸ್ಗಳ ಕೌನ್ಸೆಲಿಂಗ್ನಲ್ಲಿ ಭಾರಿ ಅಕ್ರಮವಾಗಿರುವುದು ಬೆಳಕಿಗೆ ಬಂದಿದೆ.
ಅತ್ಯಂತ ಪಾರದರ್ಶಕ ವ್ಯವಸ್ಥೆ ಎಂದು ಬಾವಿಸಲಾಗಿದ್ದ ಆನ್ಲೈನ್ ಕೌನ್ಸೆಲಿಂಗ್ನಲ್ಲೇ ಈ ಪ್ರಮಾಣದ ಅಕ್ರಮ ನಡೆದಿರುವುದು ವಿದ್ಯಾರ್ಥಿಗಳು ಪರೀಕ್ಷಾ ಪ್ರಾಧಿಕಾರದ ಮೇಲೆ ನಂಬಿಕೆ ಕಳೆದುಕೊಳ್ಳುವಂತಹ ಬೆಳವಣಿಗೆ. ಬರೋಬ್ಬರಿ 72 ವಿದ್ಯಾರ್ಥಿಗಳ ಸೀಟು ಹಂಚಿಕೆಯಲ್ಲಿ ಅಕ್ರಮವಾಗಿರುವುದನ್ನು ಕಂಡು ಸರ್ಕಾರವೇ ಹೌಹಾರಿದೆ. ಕೌನ್ಸೆಲಿಂಗ್ ನಿಯಮಕ್ಕೆ ವಿರುದ್ಧವಾಗಿ ವೈದ್ಯಕೀಯದಲ್ಲಿ 11, ದಂತವೈದ್ಯಕೀಯದಲ್ಲಿ 4 ಹಾಗೂ ಎಂಜಿನಿಯರಿಂಗ್ನಲ್ಲಿ 57 ಸೀಟುಗಳನ್ನು ಅಕ್ರಮವಾಗಿ ಹಂಚಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂವರು ಹಿರಿಯ ಅಧಿಕಾರಿಗಳ ಕೈಚಳಕದಿಂದ ಈ ಗೋಲ್ಮಾಲ್ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವ ಕೌನ್ಸೆಲಿಂಗ್ನಲ್ಲಿ ಭಾರಿ ಗೋಲ್ಮಾಲ್ ನಡೆದಿದೆ ಎಂದು ಸೆ.10ರಂದೇ 'ಕನ್ನಡಪ್ರಭ' ದಾಖಲೆ ಸಮೇತ ಪ್ರಕಟಿಸಿತ್ತು. ಆದರೆ ಇದನ್ನು ನಿರ್ಲಕ್ಷಿಸಿದ್ದ ಸರ್ಕಾರಕ್ಕೆ ಈಗ ತಪ್ಪುಗಳ ಸರಮಾಲೆಯೇ ದೊರೆತಿದೆ. ಆನ್ಲೈನ್ ಕೌನ್ಸೆಲಿಂಗ್ನಲ್ಲಿ ನಕಲಿ ಜಾತಿ, ಗ್ರಾಮೀಣ, ಕನ್ನಡ ಮಾಧ್ಯಮದ ಪ್ರಮಾಣಪತ್ರ ಗಿಟ್ಟಿಸಿ ಸೀಟುಗಿಟ್ಟಿಸಿಕೊಳ್ಳುವ ದೊಡ್ಡ ದಂಧೆಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ನಡೆದಿರುವ ಬಗ್ಗೆ ದಾಖಲೆಗಳು ಪತ್ರಿಕೆಗೆ ಲಭ್ಯವಾಗಿವೆ.
ರಾಜ್ಯ ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿಯೇ ಎಚ್ಚೆತ್ತಿದ್ದರೆ ಈ 72 ಸೀಟುಗಳು ಅರ್ಹ ಪ್ರತಿಭಾನ್ವಿತರ ಪಾಲಾಗುತ್ತಿದ್ದವು. ಆದರೆ ಪ್ರಾಥಮಿಕ ತನಿಖೆ ಪ್ರಕಾರ ಮೇಲ್ನೋಟಕ್ಕೆ ಈ 72 ವಿದ್ಯಾರ್ಥಿಗಳ ಸೀಟುಗಳು ರದ್ದಾಗುವ ಸಾಧ್ಯತೆಯಿದೆ.
ವಿದ್ಯಾರ್ಥಿಗಳು, ಶಾಲಾ ಕಾಲೇಜಿಗೂ ನೋಟಿಸ್: ಬಿಜಾಪುರದ ವೈದ್ಯಕೀಯ ಕಾಲೇಜಿನಲ್ಲಿ ಮೇಘನಾ ಆರ್. ಹಾಗೂ ಮಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ನೇಹಾ ಕಾರಂತ್ ಎಂಬ ವಿದ್ಯಾರ್ಥಿನಿಯರ ಜಾತಿ ಹಾಗೂ ಗ್ರಾಮೀಣ ಕೋಟಾ ಬದಲಿಸಿ ಸೀಟು ಹಂಚಿಕೆಯಾದ ಪ್ರಕರಣ ಬೆಳಕಿಗೆ ಬಂದ ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಇಲಾಖಾ ತನಿಖೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಇವೆರಡು ಪ್ರಕರಣ ಹೊರತುಪಡಿಸಿ 9 ವೈದ್ಯ, 4 ದಂತವೈದ್ಯ ಹಾಗೂ 57 ಎಂಜಿನಿಯರಿಂಗ್ ಸೀಟು ಹಂಚಿಕೆ ಸಲುವಾಗಿ ದಾಖಲೆ ಪರಿಶೀಲನೆ ಬಳಿಕ ಪ್ರತ್ಯೇಕ ಮಾಹಿತಿ ನೀಡಿ ಮೀಸಲು ವರ್ಗವನ್ನು ಬದಲಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಇವೆಲ್ಲ ವಿದ್ಯಾರ್ಥಿಗಳು ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆದವರಾಗಿದ್ದಾರೆ. ವೈದ್ಯಕೀಯ ಕೋರ್ಸ್ನಲ್ಲಿ ಒಂದೊಮ್ಮೆ ಜಾತಿ ಬದಲಿಸದಿದ್ದರೆ ಸರ್ಕಾರಿ ಸೀಟು ದೊರೆಯುತ್ತಿರಲಿಲ್ಲ. ಇನ್ನು ಎಂಜಿನಿಯರಿಂಗ್ ಹಾಗೂ ದಂತವೈದ್ಯದಲ್ಲಿ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಪಡೆಯಲು ಈ ರೀತಿಯ ವ್ಯವಹಾರ ನಡೆಸಲಾಗಿದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯು ಎಲ್ಲ 72 ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿ ಮಾಡಿ ವಿವರಣೆ ನೀಡುವಂತೆ ಕೋರಿದೆ. ಇದರ ಜತೆಗೆ ದಾಖಲೆ ಪರಿಶೀಲನೆಗೆ ಮೊದಲ ಬಾರಿ ನೀಡಿದ್ದ ದಾಖಲೆಗಳಿಗೆ ಸಹಿ ಹಾಕಿರುವ ತಹಶೀಲ್ದಾರ್, ಎಸ್ಎಸ್ಎಲ್ಸಿ ಮತ್ತು ಪಿಯು ಪ್ರಾಂಶುಪಾಲರಿಗೆ ನೋಟಿಸ್ ಕಳುಹಿಸಲಾಗಿದೆ. ಮುಂದಿನ 15 ದಿನಗಳೊಳಗೆ ಉತ್ತರ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಸಿಐಡಿ ತನಿಖೆಗೆ ಶಿಫಾರಸು: ಕೌನ್ಸೆಲಿಂಗ್ನಲ್ಲಿ ಭಾರಿ ಅಕ್ರಮವಾಗಿರಬಹುದೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಗೊತ್ತಾಗಿದೆ. ಇದೇ ಕಾರಣದಿಂದ ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಪಿ.ಕುಲಕರ್ಣಿ ಅವರನ್ನು ವರ್ಗಾಯಿಸಿ ಅಥವಾ ಅಮಾನತುಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆಗೆ ಪದವಿಪೂರ್ವ ಶಿಕ್ಷಣ ಇಲಾಖೆ ಶಿಫಾರಸುಮಾಡಿದೆ. ಇದರ ಜತೆಗೆ ಸಂಪೂರ್ಣ ಕೌನ್ಸೆಲಿಂಗ್ ಕುರಿತಂತೆ ಸಿಐಡಿ ತನಿಖೆ ನಡೆಸುವಂತೆಯೂ ಇಲಾಖೆ ಮನವಿ ಮಾಡಿದೆ. ಸದ್ಯಕ್ಕೆ ಕುಲಕರ್ಣಿ ಅವರನ್ನು ದೀರ್ಘ ರಜೆ ಮೇಲೆ ಕಳುಹಿಸಲಾಗಿದೆ.
ಅಕ್ರಮ ಹೇಗೆ ನಡೆದಿದೆ?
ಪತ್ರಿಕೆಗೆ ಮೇಘನಾ ಆರ್. ಹಾಗೂ ನೇಹಾ ಕಾರಂತ್ ಅವರ ದಾಖಲೆಗಳು ಲಭ್ಯವಾಗಿವೆ. ಮೇಘನಾ ಆರ್. ಅವರು ರೆಡ್ಡಿ ಜನಾಂಗವಾಗಿರುವುದರಿಂದ 3ಎಗೆ ಸೇರುತ್ತಾರೆ. ಮೂರು ಹಂತದ ಕೌನ್ಸೆಲಿಂಗ್ವರೆಗೂ ಆಕೆ 3ಎನಲ್ಲಿಯೇ ಇರುತ್ತಾರೆ. ಯಾವಾಗ ಸೀಟು ದೊರೆಯುವುದಿಲ್ಲ ಎಂದು ಖಾತ್ರಿಯಾಗುತ್ತದೆಯೋ ಇದ್ದಕ್ಕಿದ್ದ ಹಾಗೆ ಜಾತಿಯನ್ನೇ ಬದಲಿಸಿ 2ಎ ಪ್ರವರ್ಗಕ್ಕೆ ಸೇರುತ್ತಾಳೆ. 'ಕನ್ನಡಪ್ರಭ' ಪತ್ರಿಕೆ ವರದಿ ಮಾಡಿದ ಬಳಿಕ ಈಕೆ ಸೀಟನ್ನು ಹಿಂತಿರುಗಿಸಿದ್ದಾಳೆ. ಅಲ್ಲಿಗೆ ಪ್ರಾಧಿಕಾರವು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿತ್ತು. ಆ ಬಳಿಕ ನೇಹಾ ಕಾರಂತ್ ಎಂಬ ವಿದ್ಯಾರ್ಥಿನಿ 12 ವರ್ಷಗಳ ಕಾಲ ಬೆಂಗಳೂರು ನಗರದಲ್ಲಿಯೇ ಓದಿದ್ದರೂ ಗ್ರಾಮೀಣ ಕೋಟಾದಡಿ ಸೀಟು ಪಡೆದಿದ್ದಾಳೆ. ಸಾಮಾನ್ಯ ವರ್ಗದಲ್ಲಿ ಸೀಟು ದೊರೆಯದ ಕಾರಣ ಗ್ರಾಮೀಣ ಕೋಟಾಕ್ಕೆ ಈಕೆ ವರ್ಗಾಯಿಸಿಕೊಂಡಿದ್ದಾಳೆ. ಯಾವುದೇ ಪ್ರವರ್ಗ ಹಾಗೂ ಇತರ ಮೀಸಲಿನಲ್ಲಿ ಸೀಟು ದೊರೆಯದಿದ್ದರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಮತ್ತೊಂದು ಮೀಸಲು ಮೂಲಕ ಸೀಟುಗಳನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ. ಆನ್ಲೈನ್ ಕೌನ್ಸೆಲಿಂಗ್ನಲ್ಲಿ ರ್ಯಾಂಕ್ ಬದಲಾವಣೆ ಹಾಗೂ ಸೀಟ್ ಬ್ಲಾಕಿಂಗ್ ಅಸಾಧ್ಯವಾದ್ದರಿಂದ ಈ ರೀತಿ ನಕಲಿ ದಾಖಲೆ ಸೃಷ್ಟಿಸಿ ಸೀಟು ವಿತರಿಸುವ ಗೋಲ್ಮಾಲ್ಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಅಕ್ರಮಕ್ಕೆ ಅಧಿಕಾರಗಳೇ ಹೇಗೆ ಕಾರಣ?
ಪ್ರಾಧಿಕಾರವೇ ರೂಪಿಸಿಕೊಂಡ ನಿಯಮದ ಪ್ರಕಾರ ದಾಖಲೆ ಪರಿಶೀಲನೆ ಬಳಿಕ ಮತ್ತೊಂದು ದಾಖಲೆಯನ್ನು ಅಧಿಕಾರಿಗಳು ಒಪ್ಪುವಂತಿಲ್ಲ. ಒಂದೊಮ್ಮೆ ಕೋರ್ಟ್ ಆದೇಶವಿದ್ದರೇ ಒಪ್ಪಬಹುದು. ಇದಾಗ್ಯೂ ವಿಶೇಷ ಪ್ರಕರಣವೆಂದು ಮಾನ್ಯ ಮಾಡಿದರೆ ಮೊದಲು ಏಕೆ ಇಂತಹ ನಕಲಿ ದಾಖಲೆ ನೀಡಿದ್ದಾರೆ ಅಥವಾ ಈಗ ನೀಡಿರುವ ದಾಖಲೆ ನಕಲಿಯೇ ಎಂದು ಪರಿಶೀಲಿಸಬೇಕಾಗುತ್ತದೆ. ಲಕ್ಷಾಂತರ ವಿದ್ಯಾರ್ಥಿಗಳ ಕೌನ್ಸೆಲಿಂಗ್ನಲ್ಲಿ ಇದು ಅಸಾಧ್ಯವೆಂದು ಅಧಿಕಾರಿಗಳು ನುಣುಚಿಕೊಳ್ಳಬಹುದು. ಆದರೆ ದಾಖಲೆ ಪರಿಶೀಲನೆ ಬಳಿಕ ಮತ್ತೆ ದಾಖಲೆಗಳನ್ನು ತಿದ್ದಿರುವುದು ಕೇವಲ 72 ಪ್ರಕರಣಗಳಲ್ಲಿ. ಇದರ ಸಂಪೂರ್ಣ ಜವಾಬ್ದಾರಿ ಪ್ರಾಧಿಕಾರದ ಆಡಳಿತಾಧಿಕಾರಿಯ ಮೇಲಿರುತ್ತದೆ. ಅವರ ಅನುಮತಿಯಿಲ್ಲದೇ ತಿದ್ದಲು ಸಾಧ್ಯವೂ ಇರುವುದಿಲ್ಲ.
ಸರ್ಕಾರ ಮೊದಲೇ ಎಚ್ಚೆತ್ತಿದ್ದರೆ...
ಸೆ.10ರಂದೇ ಈ ದಂಧೆ ಕುರಿತಂತೆ ಎಚ್ಚೆತ್ತಿದ್ದರೆ ಅರ್ಹ 72 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸೀಟು ದೊರೆಯುತ್ತಿತ್ತು.
ಅಧಿಕಾರಿಗಳನ್ನು ಅಂದೇ ಬದಲಿಸಿದ್ದರೇ ತನಿಖೆಗೆ ಇನ್ನಷ್ಟು ಸಹಕಾರವಾಗುತ್ತಿತ್ತು.
ಅಕ್ರಮ ಸಾಬೀತಾದ ಕೂಡಲೇ ಎಲ್ಲ 72 ಸೀಟುಗಳು ರದ್ದಾಗುತ್ತವೆ. ಇದರಿಂದ ರಾಜ್ಯಕ್ಕೆ 15 ವೈದ್ಯರು ಹಾಗೂ 57 ಎಂಜಿನಿಯರ್ಗಳ ಕೊರತೆಯಾಗುತ್ತದೆ.
ಈ ರೀತಿ ಸೀಟು ಪಡೆದವರಲ್ಲಿ ಬಹುತೇಕರು ಪ್ರಭಾವಿಗಳು ಅಥವಾ ದುಡ್ಡಿದ್ದವರು. ಇವರು ಕಾಮೆಡ್-ಕೆ ಅಥವಾ ಆಡಳಿತ ಮಂಡಳಿ ಸೀಟುಗಳಲ್ಲಿಯೂ ಪ್ರವೇಶ ಪಡೆಯಬಹುದಿತ್ತು. ಆದರೆ ಯಾವುದೋ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸೀಟು ದೊರೆಯುತ್ತಿತ್ತು.
ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

