ಧರ್ಮೇಶ್ ವಿಕೃತಿಗೆ ಇನ್ನೊಂದು ಜಿಂಕೆ ಬಲಿ

ಕನ್ನಡಪ್ರಭ ವಾರ್ತೆ ಚಾಮರಾಜನಗರ ಫೆ.1
ಬಂಡೀಪುರದ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಓಂಕಾರ ಅರಣ್ಯದಲ್ಲಿ ಗುರುವಾರ ರಾತ್ರಿ ಮೈಸೂರು ಸಿಐಡಿ ಡಿವೈಎಸ್ಪಿ ಟಿ.ಕೆ. ಧರ್ಮೇಶ್ ಗುಂಡಿಗೆ ಜಿಂಕೆ ಬಲಿಯಾದ ಸಂದರ್ಭದಲ್ಲೇ ಗುಂಡಿನ ಶಬ್ದಕ್ಕೆ ಬೆಚ್ಚಿ ಮತ್ತೊಂದು ಜಿಂಕೆ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಓಂಕಾರ ವಲಯ ಅರಣ್ಯದ ಕೊತ್ತನಹಳ್ಳಿ ಬಳಿಯ ಮಾವಿನಹಳ್ಳದ ಬಳಿಯಿರುವ ಬಾವಿಯಲ್ಲಿ ಜಿಂಕೆಯ ಶವ ಪತ್ತೆಯಾಗುವ ಮೂಲಕ ಗುಂಡಿಗೆ ಒಂದು ಜಿಂಕೆ ಬಲಿಯಾದರೆ, ಅದೇ ಗುಂಡಿನ ಸದ್ದಿಗೆ ಓಡಿ ಹೋಗುವ ತವಕದಲ್ಲಿ ಮತ್ತೊಂದು ಜಿಂಕೆ ಬಾವಿಗೆ ಬಿದ್ದು ಜೀವ ಕಳೆದುಕೊಂಡಿದೆ.
ವಿಷಯ ಅರಿತ ಅರಣ್ಯ ಇಲಾಖೆಯ ಸಿಬ್ಬಂದಿ ಓಂಕಾರ ಆರ್ಎಫ್ಒ ಕೆ.ಪಿ. ಸತೀಶ್ಕುಮಾರ್ಗೆ ಶನಿವಾರ ಬೆಳಗ್ಗೆ ಸಿಬ್ಬಂದಿಯ ಸಹಕಾರದಿಂದ ಬಾವಿಯಲ್ಲಿದ್ದ ಜಿಂಕೆಯನ್ನು ಮೇಲಕ್ಕೆ ಎತ್ತಿದ್ದರು. ನಂತರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಆರ್ಎಫ್ಒ ಕೆ.ಪಿ. ಸತೀಶಕುಮಾರ್ ಅವರ ಸಮ್ಮುಖದಲ್ಲಿ ಬಂಡೀಪುರ ಅರಣ್ಯ ಇಲಾಖೆಯ ಡಾ. ನಾಗರಾಜು ಜಿಂಕೆಯ ಶವ ಪರೀಕ್ಷೆ ನಡೆಸಿದರು.
ಶವ ಪರೀಕ್ಷೆ, ಅಗ್ನಿ ಸ್ಪರ್ಶ: ಶವ ಪರೀಕ್ಷೆ ನಡೆಸುವ ಸಮಯದಲ್ಲಿ ಗುಂಡಿನ ಗಾಯದ ಗುರುತುಗಳಿರಬಹುದು ಎಂಬ ಶಂಕೆ ಹುಸಿಯಾಯಿತು. ಗುರುವಾರ ರಾತ್ರಿ ನಡೆದ ಗುಂಡಿನ ಸದ್ದಿಗೆ ಜಿಂಕೆ ಗಾಬರಿಗೊಂಡು ಹತ್ತಿರದಲ್ಲೇ ಇದ್ದ ಬಾವಿಗೆ ಬಿದ್ದಿದೆ ಎಂದು ವೈದ್ಯರು ಸ್ವಷ್ಟಪಡಿಸಿದ್ದಾರೆ.
ಮೈಸೂರು ಸಿಐಡಿ ಡಿವೈಎಸ್ಪಿ ಟಿ.ಕೆ. ಧರ್ಮೇಶ್ ಸೇರಿದಂತೆ ಅವರ ಸ್ನೇಹಿತರು ಕೊತ್ತನಹಳ್ಳಿಯ ಬಳಿ ಜಿಂಕೆ ಬೇಟೆಯಾಡಿ ಒಂದು ಜಿಂಕೆ ಕೊಂದಿದ್ದಾರೆ. ಆ ಸಮಯದಲ್ಲಿ ಈ ಜಿಂಕೆಗೂ ಗುಂಡು ತಗುಲಿರಬೇಕು ಎಂದು ಅನುಮಾನ ಅರಣ್ಯ ಅಧಿಕಾರಿಗಳಿಗೆ ಮೂಡಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಜಿಂಕೆ ಶವ ಸುಡಲಾಯಿತು.
ಅಮಾನತು ಮಾಡಿ
ಗುಂಡ್ಲುಪೇಟೆ: ಓಂಕಾರ ಅರಣ್ಯದಲ್ಲಿ ಜಿಂಕೆ ಭೇಟೆಯಾಡಿ ಸಿಕ್ಕಿ ಬಿದ್ದಿರುವ ಸಿಐಡಿ ಡಿವೈಎಸ್ಪಿ ಟಿ.ಕೆ. ಧರ್ಮೇಶ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಬಂಡೀಪುರ ಹುಲಿ ಯೋಜನೆಯ ವನ್ಯಜೀವಿ ಪರಿಪಾಲಕ ಎನ್.ಎಂ. ನವೀನ್ಕುಮಾರ್ ಆಗ್ರಹಿಸಿದ್ದಾರೆ. ಡಿವೈಎಸ್ಪಿ ಟಿ.ಕೆ. ಧರ್ಮೇಶ್ ಅವರ ಮೇಲೆ ಗಂಭೀರ ಪ್ರಕರಣದ ಕೇಸು ದಾಖಲಾಗಿದೆ. ಕೂಡಲೇ ಸಿಐಡಿ ಡಿಐಜಿ ಅಮಾನತಿನಲ್ಲಿಟ್ಟು ಸೇವೆಯಿಂದ ವಜಾಗೊಳಿಸಲಿ ಎಂದು ಹೇಳಿದ್ದಾರೆ.
ಹವ್ಯಾಸಿ ಬೇಟೆಗಾರರಂತೆ
ಚಾಮರಾಜನಗರ: ಓಂಕಾರ ವಲಯದಲ್ಲಿ ಅಕ್ರಮವಾಗಿ ಪ್ರವೇಶಿಸಿ ಜಿಂಕೆ ಕೊಂದ ಮೈಸೂರಿನ ಸಿಐಡಿ ಡಿವೈಎಸ್ಪಿ ಟಿ.ಕೆ. ಧರ್ಮೇಶ್ ಅವರ ಬಗ್ಗೆ ಯಾವುದೇ ಸಂಶಯ ಇರಲಿಲ್ಲ... ಈಗ ನೋಡಿದರೆ ಹವ್ಯಾಸಿ ಬೇಟೆಗಾರರಂತೆ ಕಾಣುತ್ತಾರೆ ಎಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹುಲಿ ಯೋಜನೆ ನಿರ್ದೇಶಕ ಎಚ್.ಸಿ. ಕಾಂತರಾಜು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಎಲ್ಲವೂ ವಿಚಾರಣೆ ಬಳಿಕ ಬಹಿರಂಗವಾಗಲಿದೆ ಎಂದರು.
ದೇವರಾಜು ಕಪ್ಪಸೋಗೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


