ನಕ್ಸಲ್ ಸಂಬಂಧ ಮಾಹಿತಿಗಾಗಿ ಹೋಗಿದ್ದೆ...
ಕ.ಪ್ರ.ವಾರ್ತೆ ಮೈಸೂರು ಫೆ. 1
ನಕ್ಸಲ್ ಸಂಬಂಧ ಮಾಹಿತಿಗಾಗಿ ಹೋಗಿದ್ದೆ...
- ಇದು ಜಿಂಕೆ ಬೇಟೆ ಪ್ರಕರಣದಲ್ಲಿ ಬಂಧಿಯಾಗಿರುವ ಸಿಐಡಿ ಡಿವೈಎಸ್ಪಿ ಟಿ.ಕೆ. ಧರ್ಮೇಶ್ ಹೇಳಿಕೆ. ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಹೇಳಿಕೆಯ ಆಯ್ದ ಭಾಗ ಇಲ್ಲಿದೆ.
ಜ.30ರಂದು ಒಬ್ಬ ವ್ಯಕ್ತಿಯನ್ನು ಭೇಟಿ ಮಾಡಲು ಹೋಗಿದ್ದೆ. ಅಲ್ಲಿಂದ ಬರುವಾಗ ನನ್ನ ಜೀಪು ಪಂಚರ್ ಆಯಿತು. ಆಮೇಲೆ ವ್ಹೀಲ್ ಬದಲಾಯಿಸುವಾಗ ಎರಡು ಜೀಪ್ಗಳು ಬಂದವು. ನನ್ನ ಬಳಿ ವೆಪನ್ ಮತ್ತು ಗುಂಡು ಇತ್ತು. ಆಗ ಜೀಪಿನಲ್ಲಿ ಬಂದವರು(ಅರಣ್ಯಾಧಿಕಾರಿಗಳು) ಯಾರದು ವೆಪನ್ ಎಂದು ಕೇಳಿದರು. ನಾನು ನಮ್ಮದೇ ಅಂತ ಹೇಳಿದೆ. ಲೈಸನ್ಸ್ ಸಹ ಇತ್ತು. ಸರಿ, ಹಾಗಿದ್ದರೆ ನಮ್ಮ ಸಾಹೇಬರು ಇಲ್ಲೇ ಇದ್ದಾರೆ ಬಂದು ಹೇಳಿ ಅಂದರು. ಸರಿ ಎಂದು ನಾನೂ ಹೋದೆ. ನಾನು ಗುಂಡು ಹಾರಿಸಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ನನ್ನ ಗುರಿಯಾಗಿಸಿಕೊಂಡಿದ್ದಾರೆ ಎಂದು ಅಂದುಕೊಂಡಿಲ್ಲ. ಆದರೆ ವೆಪನ್ ತರಬಾರದಿತ್ತು ಎಂದಷ್ಟೆ ಹೇಳಿದರು. ಬೆಳಗ್ಗೆ 8.30ರವರೆಗೂ ನನ್ನನ್ನು ಮಾತನಾಡಿಸಲಿಲ್ಲ. ಸಂಜೆಯವರೆಗೆ ಸುಮಾರು 20ರಿಂದ 25 ಕಿ.ಮೀ. ದೂರದ ಕ್ಯಾಂಪಿನಲ್ಲಿ ಇರಿಸಲಾಗಿತ್ತು. ನಾನು ಕೆಲಸದ ಮೇಲೆ ಹೋಗಿದ್ದು ನಿಜ. ನಿರ್ದಿಷ್ಟ ವ್ಯಕ್ತಿಯಿಂದ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಲು ಹೋಗಿದ್ದೆ. ಬೇಕಿದ್ದರೆ ಪರಿಶೀಲಿಸಲಿ. ಕೆಲವು ಮಾಧ್ಯಮಗಳಲ್ಲಿ ನಾನು ಜಿಂಕೆ ಬೇಟೆಯಾಡಲು ಹೋಗಿದ್ದೆ, ಮೋಜು ಮಾಡಲು ಹೋಗಿದ್ದೆ ಎಂದೆಲ್ಲ ಬಂದಿದೆಯಂತೆ. ಅದು ಸುಳ್ಳು. ನಾನು ಕಾರ್ಯ ನಿಮಿತ್ತ ಹೋಗಿದ್ದೆ. ಬೇಕಿದ್ದರೆ ಮೊಬೈಲ್ ಮಾಹಿತಿ ಕಲೆ ಹಾಕಲಿ. ಯಾವುದರ ಬಗ್ಗೆ ಎಂದರೆ ಒಂದು ಪ್ರಕರಣ. ನಕ್ಸಲ್ ಮೂವ್ಮೆಂಟ್ ಮೈಸೂರು, ಮಂಗಳೂರು ಭಾಗದಲ್ಲಿದೆ ಎಂಬ ಮಾಹಿತಿಯಿಂದ ಹೋಗಿದ್ದೆ.
ಯಾರು ಈ ಧರ್ಮೇಶ್?: ಪೊಲೀಸ್ ಇಲಾಖೆಗೆ ಸಬ್ ಇನ್ಸ್ಪೆಕ್ಟರ್ ಆಗಿ ಸೇರಿದಾಗಿನಿಂದಲೂ ಮೈಸೂರು ನಗರದಲ್ಲಿಯೇ ಹೆಚ್ಚಾಗಿ ಸೇವೆ ಸಲ್ಲಿಸಿರುವ ಟಿ.ಕೆ. ಧರ್ಮೇಶ್ ನಗರದ ಹೆಬ್ಬಾಳು ನಿವಾಸಿ, ನರಸಿಂಹರಾಜ, ಕೃಷ್ಣರಾಜ, ಮೇಟಗಳ್ಳಿ, ಮಂಡಿ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಎಚ್.ಆರ್. ಕಸ್ತೂರಿ ರಂಗನ್ ಅವರು ಪೊಲೀಸ್ ಆಯುಕ್ತರಾಗಿದ್ದಾಗ ರೌಡಿ ಪ್ರತಿಬಂಧಕ ದಳ ರಚಿಸಿದ್ದರು. ಕೆ.ಎಸ್. ತಮ್ಮಯ್ಯ, ಪುಟ್ಟಸ್ವಾಮಿಗೌಡ, ಟಿ.ಕೆ. ಧರ್ಮೇಶ್ ಮೊದಲಾದವರು ಈ ತಂಡದಲ್ಲಿದ್ದರು. ರೌಡಿಗಳನ್ನು ನಿಗ್ರಹಿಸಿದ್ದಲ್ಲದೇ ದಂಡುಪಾಳ್ಯ ಗ್ಯಾಂಗ್ನ ಕೃಷ್ಣನನ್ನು ಬಂಧಿಸಿ, ಕೆ.ಜಿ.ಗಟ್ಟಲೇ ಚಿನ್ನ ವಶಪಡಿಸಿಕೊಂಡಿದ್ದರು. ಮುಖ್ಯಮಂತ್ರಿ ಚಿನ್ನದ ಪದಕ ವಿಜೇತರು. ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಂತೆ ಧರ್ಮೇಶ್ ಜಮೀನಿನಿದ್ದು, ಅಲ್ಲಿರುವ ತೋಟದ ಮನೆಗೆ ಆಗಾಗ ಹೋಗಿ ಬರುತ್ತಿದ್ದರು.
'ಪ್ರಕರಣ ಗಂಭೀರವಾಗಿ ತೆಗೆದುಕೊಳ್ಳಿ'
ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಐಡಿ ಡಿವೈಎಸ್ಪಿಯೇ ಜಿಂಕೆ ಬೇಟೆ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಪರಿಸರಾಸಕ್ತರು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಇಲಾಖೆ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.ಡಿವೈಎಸ್ಪಿ ವಿರುದ್ಧ ಪ್ರಕರಣ ದಾಖಲಿಸದಂತೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ತೀವ್ರ ಒತ್ತಡವಿತ್ತು. ಆದರೆ ಇಲಾಖಾಧಿಕಾರಿಗಳು ಮಣಿದಿಲ್ಲ. ಹೀಗಿದ್ದರೂ ಇನ್ನೂ ಒತ್ತಡ ಇದ್ದೇ ಇದೆ. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಮೂಲಕ ವನ್ಯಜೀವಿ ಸಂರಕ್ಷಣೆಗೆ ಮುಂದಾಗಬೇಕೆಂದು ಅವರು ಕೋರಿದ್ದಾರೆ. ಇದಕ್ಕೆ ಇಬ್ಬರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದು ಪರಿಸರ ತಜ್ಞ ಸಂಜಯ್ ಗುಬ್ಬಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

