ಸರಸ್ವತಿ ತೋರಿದ ಹಾದಿಯಲ್ಲಿ ಸಾಗಿದೆ
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಯಾವಾಗಲೂ ಸರಸ್ವತಿ ತೋರಿಸುವ ಹಾದಿಯಲ್ಲೇ ಹೋಗು, ಲಕ್ಷ್ಮಿ ತೋರಿಸುವ ಹಾದಿಯಲ್ಲಿ ಹೋಗಬೇಡ ಎಂದು ನನ್ನ ತಾಯಿ ಹೇಳಿದ್ದರು. ನಾನು ಸರಸ್ವತಿ ತೋರಿದ ಹಾದಿಯಲ್ಲೇ ಸಾಗಿದ್ದೇನೆ. ಸರಸ್ವತಿ ಸದಾ ನನ್ನ ಕೈ ಹಿಡಿದಿದ್ದಾಳೆ.
ಭಾರತ ರತ್ನ ಸ್ವೀಕರಿಸಿದ ತೃಪ್ತಭಾವದಲ್ಲಿದ್ದ, ಮಂದಸ್ಮಿತ ಪ್ರೊ.ಸಿ.ಎನ್.ಆರ್. ರಾವ್ ಹೇಳಿದ ಮಾತಿದು.
ತಾಯಿ ಹೇಳಿದ ಮಾತನ್ನೇ ಅವರು ವಿದ್ಯಾರ್ಥಿಗಳಿಗೆ ಹೇಳಿದರು. ಎಂದೂ ಲಕ್ಷ್ಮಿಯ ಹಿಂದೆ ಹೋಗಬೇಡಿ. ಸರಸ್ವತಿಯ ಹಾದಿಯಲ್ಲೇ ನಡೆಯಿರಿ. ನಿಮಗೆ ಯಶಸ್ಸು ಸಿಗುತ್ತದೆ. ಇಂಧನ ಮತ್ತು ಜಲ ಕ್ಷೇತ್ರದಲ್ಲಿ ಸಂಶೋಧನೆ ಆಗಬೇಕಿದ್ದು ಈ ಹೊತ್ತಿನ ಅತ್ಯಗತ್ಯ ಎಂದೂ ಅವರು ಹೇಳಿದರು.
ಭಾರತ ರತ್ನ ಪ್ರಶಸ್ತಿ ಪಡೆದ ಸಂಭ್ರಮದಲ್ಲಿದ್ದ ಪ್ರೊ.ರಾವ್ ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಲೇ ಸಂಶೋಧನೆ ದಿಕ್ಕು, ದೆಸೆ ಹೇಗಿರಬೇಕೆಂದು ಹೇಳಿದ್ದಾರೆ. ಪ್ರೊ.ರಾವ್ ಹೇಳಿದ್ದಿಷ್ಟು
- ನನಗೆ ಬೇರೆ ಬೇರೆ ದೇಶಗಳಿಂದ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ಆದರೆ, ನಮ್ಮ ದೇಶ ಇಂಥ ದೊಡ್ಡ ಮರ್ಯಾದೆ, ಗೌರವ ನೀಡಿದ್ದು ಸಂತೋಷ ತಂದಿದೆ. ಬೇರೆ ಕಡೆ ಎಷ್ಟೇ ಬಿರುದು, ಪದಕ ಬರಲಿ, ಇದರಷ್ಟು ದೊಡ್ಡದಲ್ಲ. ನಮ್ಮ ದೇಶವೇ ನಮಗೆ ನೀಡಿದಾಗ ಆಗುವ ಸಂತೋಷ ದೊಡ್ಡದು.
- ಭಾರತ ರತ್ನ ಪಡೆಯುವಾಗ ನಾನು ನನ್ನ ತಂದೆ- ತಾಯಿ, ಉಪಾಧ್ಯಾಯರು, ಸಹೋದ್ಯೋಗಿಗಳನ್ನಷ್ಟೇ ಅಲ್ಲ, ನನ್ನ ಜತೆ ಕೆಲಸ ಮಾಡಿದ ನೂರಾರು ಕಿರಿಯರನ್ನು ನೆನಪಿಸಿಕೊಂಡೆ. ಅವರು ಕೆಲಸ ಮಾಡಿದ್ದರಿಂದಲೇ ನಮಗೆ ಕೀರ್ತಿ ಬಂದಿದೆ.
- ಕಳೆದ ಮೂವತ್ತು ವರ್ಷದಿಂದ ದೇಶದಲ್ಲಿ ಅನೇಕ ರೀತಿ ಸಲಹೆಗಾರನಾಗಿ ಕೆಲಸ ಮಾಡ್ತಾ ಇದ್ದೇನೆ. ಅದರಿಂದ ದೇಶಕ್ಕೆ ಒಳ್ಳೇದಾಗಿದೆ ಅನ್ಕೊಂಡಿದ್ದೀನಿ. ಜತೆಗೆ ನಾನು ವಿಜ್ಞಾನದಲ್ಲಿ ಸಂಶೋಧನೆ ಮಾಡಿದ್ದು, ಎಲ್ಲವನ್ನು ಪರಿಗಣಿಸಿ ನನಗೆ ಈ ಗೌರವ ಕೊಟ್ಟಿದ್ದಾರೆ ಅನ್ಕೊಂಡಿದ್ದೀನಿ.
- ಪ್ರಪಂಚದಲ್ಲಿ ಏನಾದ್ರೂ ನಿಮಗೆ ಶಾಶ್ವತವಾಗಿ ಬೇಕಾದ್ರೆ ಹಣದಿಂದ ಪಡೆಯಲು ಸಾಧ್ಯವಿಲ್ಲ, ಅದಕ್ಕೆ ವಿದ್ಯೆ ಬೇಕು, ವಿದ್ಯೆ ಮೂಲಕ ಹೋದ್ರೆ ಮಾತ್ರ ಏನಾದ್ರೂ ಸಾಧನೆ ಮಾಡಬಹುದು.
- ಭಾರತ ಅಭಿವೃದ್ಧಿ ಹೊಂದಬೇಕಾದರೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಿನ ಸಂಶೋಧನೆ ಆಗಬೇಕು. ನಾವು ಸಂಶೋಧನೆಯಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಬೇರೆ ದೇಶಗಳೊಂದಿಗೆ ನಾವು ಸ್ಪರ್ಧಿಸಬೇಕಾದರೆ ಹೆಚ್ಚಿನ ಸಂಶೋಧನೆ ಮಾಡಬೇಕು. ಸಂಶೋಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ದೇಶದ ಪ್ರಗತಿ ವಿಜ್ಞಾನವನ್ನು ಅವಲಂಬಿಸಿದೆ. ವಿಜ್ಞಾನಕ್ಕೆ ಪ್ರಾಮುಖ್ಯತೆ ಕೊಡದೇ ಹೋದರೆ ಭಾರತದ ಭವಿಷ್ಯಕ್ಕೆ ತೊಂದರೆ ಆಗುತ್ತೆ. ನಮ್ಮ ಯುವ ಪೀಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ತಳೆಯಬೇಕು. ಸಮಾಜವೂ ಆಸಕ್ತಿ ತಳಬೇಕು, ಇದರಿಂದ ದೇಶದ ಭವಿಷ್ಯಕ್ಕೆ ಒಳ್ಳೆದಾಗುತ್ತದೆ.
- ನಮ್ಮ ಗುರಿ ಏನಿದ್ದರೂ ಶ್ರೇಷ್ಠವಾದುದರತ್ತ ಸಾಗುವುದಾಗಬೇಕು. ನಮ್ಮ ಸಂಶೋಧನೆ ಶ್ರೇಷ್ಠವಾಗಿರಬೇಕು ಮತ್ತು ಯಾವುದು ಅಗತ್ಯವಿದೆಯೋ ಮತ್ತು ಪ್ರಾಮುಖ್ಯತೆ ಇದೆಯೋ ಅದರ ಸಂಶೋಧನೆ ನಡೆಯಬೇಕು. ನಾವು ಎಷ್ಟು ಸಂಶೋಧನೆ ಮಾಡಿದ್ದೇವೆ ಎಂಬುದು ಮುಖ್ಯವಲ್ಲ. ಎಷ್ಟು ಶ್ರೇಷ್ಠ ಸಂಶೋಧನೆ ಮಾಡಿದ್ದೇವೆ ಅನ್ನೋದು ಮುಖ್ಯ.
- 17ನೇ ವರ್ಷದಿಂದ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಪ್ರಾರಂಭಿಸಿದೆ. ಕಳೆದ 50 ವರ್ಷಗಳಿಂದ ನಾನು ಅಧ್ಯಾಪಕ, ಪ್ರಾಧ್ಯಾಪಕನಾಗಿ ಕೆಲಸ ಮಾಡಿದ್ದೇನೆ. ಬೇಕಾದಷ್ಟು ಜನರು ನನ್ನ ಜತೆ ಸಂಶೋದನೆ ಮಾಡಿದ್ದಾರೆ. ಆದರೆ, ಒಂದು ದಿನ ಈ ಗೌರವಕ್ಕೆ ಪಾತ್ರನಾಗುತ್ತೇನೆಂದು ಅಂದುಕೊಂಡಿರಲಿಲ್ಲ. ಯಾರಿಗೂ ಭವಿಷ್ಯ ಹೇಳಕ್ಕಾಗಲ್ಲ, ವಿಜ್ಞಾನಿಗೂ ಕೂಡಾ. ಸಂಶೋಧನೆ ಮಾಡ್ತಾ ಮಾಡ್ತಾ ಎಷ್ಟು ಒಳ್ಳೆಯ ಫಲಿತಾಂಶ ಬರುತ್ತದೆ ಅಂತ ಯಾವ ವಿಜ್ಞಾನಿಯೂ ಹೇಳಕ್ಕಾಗೊಲ್ಲ.
- ಭಾರತ ಬೇರೆ ದೇಶಗಳೊಂದಿಗೆ ಸ್ಪರ್ಧಿಸಬೇಕಾದ್ರೆ ಇನ್ನೂ ಸಾಕಷ್ಟು ಕೆಲಸ ಮಾಡಬೇಕು. ಇಂಧನ, ಜಲ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮಾಡುವ ಅಗತ್ಯ ಇದೆ.
- ನಮ್ಮ ಜನರಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಕಡಿಮೆ. ವಿಜ್ಞಾನದಲ್ಲಿ ಏನೆಲ್ಲ ಸಂಶೋಧನೆಗಳು ಸಾಧನೆಗಳಾಗಿವೆ ಎಂಬುದರ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ. ಶಿಕ್ಷಕರಿಗೂ ವಿಜ್ಞಾನದ ಬಗ್ಗೆ ಆಸಕ್ತಿ ಕಡಿಮೆ.
- ವಿಜ್ಞಾನ ಮುಂದೆ ಬರದಿದ್ರೆ ದೇಶ ಮುಂದೆ ಬರಲು ಸಾಧ್ಯವಿಲ್ಲ. ಅದನ್ನು ಶಿಕ್ಷಕರು, ಪೋಷಕರು, ಆಡಳಿತಗಾರರು ಮನದಟ್ಟು ಮಾಡಿಕೊಳ್ಳಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

