ಗುಂಡೇಟಿಂದ್ಲೇ ಜಿಂಕೆ ಸತ್ತಿದ್ದು
ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಓಂಕಾರ ವಲಯ ಅರಣ್ಯದಲ್ಲಿ ಸಿಐಡಿ ಡಿವೈಎಸ್ಪಿ ಟಿ.ಕೆ. ಧರ್ಮೇಶ್ ಮತ್ತವರ ತಂಡ ಜಿಂಕೆ ಹತ್ಯೆ ಮಾಡಿದ ಪ್ರಕರಣದಲ್ಲಿ ಜಿಂಕೆ ಗುಂಡೇಟಿನಿಂದ ಮೃತಪಟ್ಟಿದೆ ಎಂದು ಶವ ಪರೀಕ್ಷೆಯ ವರದಿಯಲ್ಲಿ ಬಹಿರಂಗವಾಗಿದೆ. ಜಿಂಕೆ ಗುಂಡೇಟಿನಿಂದ ಮೃತಪಟ್ಟಿದೆ ಎಂದು ಶವಪರೀಕ್ಷೆ ನಡೆಸಿರುವ ವೈದ್ಯ ಡಾ.ನಾಗರಾಜು ತಿಳಿಸಿದ್ದಾರೆ ಎಂದು ಬಂಡೀಪುರ ಹುಲಿ ಯೋಜನೆಯ ಹೆಡಿಯಾಲ ಸಹಾಯಕ ಸಂರಕ್ಷಣಾಧಿಕಾರಿ ಹಾಗೂ ಜಿಂಕೆ ಹತ್ಯೆ ಪ್ರಕರಣದ ತನಿಖಾಧಿಕಾರಿ ರವಿಶಂಕರ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಜಿಂಕೆಯು ಗುಂಡಿಗೆ ಬಲಿಯಾಗಿದೆ ಎಂದು ವೈದ್ಯರು ವರದಿಯಲ್ಲಿ ಹೇಳಿದ್ದಾರೆ.
ಹೆಚ್ಚಿನ ಮಾಹಿತಿ ಹಾಗೂ ಗುಂಡು ಯಾವ ರೈಫಲ್ನಿಂದ ಹಾರಿದ್ದು ಎಂದು ತಿಳಿಯಲು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅಮಾನತು ಮಾಡುವಂತೆ ಪತ್ರ: ಓಂಕಾರ ವಲಯ ಅರಣ್ಯಾಧಿಕಾರಿ ಕೆ.ಪಿ. ಸತೀಶ್ಕುಮಾರ್ ಹಾಗೂ ಸಿಬ್ಬಂದಿ ಜಿಂಕೆ ಸತ್ತ ಪ್ರಕರಣದ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಿಐಡಿ ಡಿವೈಎಸ್ಪಿ ಟಿ.ಕೆ.ಧರ್ಮೇಶ್ ಅವರನ್ನು ಅಮಾನತಿನಲ್ಲಿಡಬೇಕು ಎಂದು ಸಿಐಡಿ ವಿಭಾಗದ ಡಿಜಿಪಿ ಅವರಿಗೆ ಜಿಂಕೆ ಹತ್ಯೆ ಪ್ರಕರಣದ ತನಿಖಾಧಿಕಾರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹಿರಿಯ ಅಧಿಕಾರಿಗಳ ಮೂಲಕ ಪತ್ರ ಬರೆದಿದ್ದಾರೆ.
ಓಂಕಾರ ಅರಣ್ಯ ವಲಯದಲ್ಲಿ ಜಿಂಕೆ ಹತ್ಯೆ ಮಾಡಲು ಬಳಸಲಾದ ಗುಂಡು ಇದುವರೆಗೆ ಪತ್ತೆಯಾಗಿಲ್ಲ. ಹೀಗಾಗಿ ಅರಣ್ಯ ಅಧಿಕಾರಿಗಳು ಆ ಗುಂಡಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದು, ಮೆಟಲ್ ಡಿಟೆಕ್ಟರ್ ಬಳಸಿ ಗುಂಡು ಹುಡುಕುವ ಬಗ್ಗೆ ಚಿಂತಿಸಲಾಗಿದೆ ಎಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಚ್.ಸಿ. ಕಾಂತರಾಜು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಅಮಾನತು ಏಕಿಲ್ಲ?: ಜಿಂಕೆ ಹತ್ಯೆ ಮಾಡಿ ಗುರುವಾರಕ್ಕೆ ಒಂದು ವಾರವಾಗುತ್ತಿದೆ. ಆದರೆ, ಇದುವರೆಗೆ ಸಿಐಡಿ ಡಿವೈಎಸ್ಪಿ ಟಿ.ಕೆ. ಧರ್ಮೇಶ್ ಅವರನ್ನು ಅಮಾನತು ಮಾಡದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ನಿಯಮದ ಪ್ರಕಾರ ಪ್ರಕರಣ ಘಟನೆ ನಡೆದು 48 ಗಂಟೆಗಳ ಒಳಗಾಗಿ ಅಮಾನತಿನಲ್ಲಿಡಬೇಕು. ಆದರೆ, ಇದುವರೆಗೆ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಪರಿಸರ ಆಸಕ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಂಕೆ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಸಿಐಡಿ ಡಿವೈಎಸ್ಪಿ ಟಿ.ಕೆ. ಧರ್ಮೇಶ್ ಅವರನ್ನು ಅಮಾನತು ಮಾಡುವಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಮೂಲಕ ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗಿದೆ. ಪತ್ರ ತಲುಪಿದ ನಂತರ ಅವರನ್ನು ಅಮಾನತು ಮಾಡುವ ನಿರೀಕ್ಷೆಯಿದೆ.
- ಎಚ್.ಸಿ. ಕಾಂತರಾಜು
ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ, ಬಂಡೀಪುರ ರಾಷ್ಟ್ರೀಯ ಉದ್ಯಾನವನ.
-ದೇವರಾಜು ಕಪ್ಪಸೋಗೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

