ಕೋಟೆಪುರದಲ್ಲಿ ಕಲ್ಲುತೂರಾಟ: ಲಾಠಿಚಾರ್ಜ್
ಮಂಗಳೂರು: ಉಳ್ಳಾಲ ಮೊಗವೀರಪಟ್ಣದಲ್ಲಿ ಗುಂಪು ಗಲಭೆ ಬಳಿಕ, ನಗರ ಕಮಿಷನರ್ ಆರ್.ಹಿತೇಂದ್ರ ನೇತೃತ್ವದಲ್ಲಿ ಶಾಂತಿ ಸಭೆ ಮುಗಿಯುತ್ತಿದ್ದಂತೆ, ಗುರುವಾರ ರಾತ್ರಿ ಮತ್ತೆ ಘರ್ಷಣೆ ಭುಗಿಲೆದ್ದಿದೆ. ಕೋಟೆಪುರದಲ್ಲಿ ರಾತ್ರಿ ಕಲ್ಲು ತೂರಾಟ ನಡೆದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ಉಳ್ಳಾಲದಲ್ಲಿ ಗುರುವಾರ ಕಮಿಷನರ್ ನೇತೃತ್ವದಲ್ಲಿ ಎರಡೂ ಸಮುದಾಯದವರನ್ನು ಸೇರಿಸಿ ಶಾಂತಿ ಸಭೆ ನಡೆಸಲಾಯಿತು. ಮುಗಿದ ತಕ್ಷಣ ಕೋಟೆಪುರದಲ್ಲಿ ಒಂದು ಸಮುದಾಯದವರಿಗೆ ಸೇರಿದ ಬೋಟುಗಳ ಮೇಲೆ ಕಲ್ಲು ತೂರಾಟದ ಬಗ್ಗೆ ಪೊಲೀಸರರಿಗೆ ಮಾಹಿತಿ ಬಂದಿದೆ.
ತಕ್ಷಣ ಪೊಲೀಸರು ಜೀಪುಗಳಲ್ಲಿ ಕೋಟೆಪುರದತ್ತ ತೆರಳಲು ಸಿದ್ಧರಾದಾಗ ಮೊಗವೀರರು ತಾವೂ ಬರುವುದಾಗಿ ಪಟ್ಟು ಹಿಡಿದರು. ಆದರೆ, ಪೊಲೀಸರು ಲೆಕ್ಕಿಸದೆ ಕೋಟೆಪುರಕ್ಕೆ ಧಾವಿಸಿದರು. ಅತ್ತ ಪೊಲೀಸರು ಹೋಗುತ್ತಿದ್ದಂತೆ, ಇತ್ತ ಮೀನುಗಾರರು ತಮ್ಮ ಬೋಟುಗಳ ರಕ್ಷಣೆಗಾಗಿ ಕೋಟೆಪುರದತ್ತ ತೆರಳಿದ್ದಾರೆ. ಆಗ ಎರಡೂ ಕಡೆಗಳಿಂದ ಪರಸ್ಪರ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ದುಷ್ಕೃತ್ಯದಲ್ಲಿ ತೊಡಗಿದವರನ್ನು ಪತ್ತೆಹಚ್ಚಲು ಪೊಲೀಸರು ರಾತ್ರಿ ಎರಡೂ ಕಡೆಯವರ ಮನೆಗಳಿಗೆ ನುಗ್ಗಿ ತಪಾಸಣೆ ನಡೆಸಿದ್ದಾರೆ.
ವಹಿವಾಟು ಬಂದ್: ಘರ್ಷಣೆ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಗುರುವಾರ ಅಂಗಡಿಗಳು ಬಂದ್ ಆಗಿವೆ. ಬಸ್ಗಳು ಖಾಲಿಯಾಗಿ ಸಂಚರಿಸಿವೆ.
ಗಲಭೆಗೆ ಸಂಬಂಧಿಸಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಉದ್ವಿಗ್ನ ಪರಿಸ್ಥಿತಿ ಇದ್ದರೂ ಸಂಜೆವರೆಗೂ ಪರಿಸ್ಥಿತಿ ಪೊಲೀಸರ ನಿಯಂತ್ರಣದಲ್ಲಿತ್ತು. ನಿಷೇಧಾಜ್ಞೆಯನ್ನು ಶುಕ್ರವಾರ ಸಂಜೆವರೆಗೆ ವಿಸ್ತರಿಸಲಾಗಿದೆ. ನಿಷೇಧಾಜ್ಞೆ ನಡುವೆ ಆರೋಗ್ಯ ಸಚಿವ ಯು.ಟಿ.ಖಾದರ್ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಪ್ರತ್ಯೇಕವಾಗಿ ಉಳ್ಳಾಲಕ್ಕೆ ಭೇಟಿ ನೀಡಿದರು.
ರಾಜಕೀಯ ದುರುದ್ದೇಶ: ಖಾದರ್
ಪೊಲೀಸರು ನಿಷ್ಪಕ್ಷಪಾತವಾಗಿ ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ರಾಜಕೀಯ ದುರುದ್ದೇಶದಿಂದ ಕೆಲವರು ನನ್ನ ವಿರುದ್ಧ ಆರೋಪ ಮಾಡುತ್ತಾರೆ. ಕೇವಲ ನಾಲ್ಕು ಮಂದಿ ದುಷ್ಕರ್ಮಿಗಳ ದಾಳಿ ನಡೆಸಿದ್ದಕ್ಕೆ ನನ್ನ ವಿರುದ್ಧ ರಾಜಕೀಯ ಲಾಭಕ್ಕಾಗಿ ಆರೋಪ ಮಾಡುತ್ತಿದ್ದಾರೆ. ದಾಳಿ ನಡೆಸಿದವರು ಹಿಂದೆ ಯಾವ ರಾಜಕೀಯ ಪಕ್ಷದ ಜತೆಗೆ ಇದ್ದರು ಎಂಬುದನ್ನು ಜನ ತಿಳಿಯಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

