ಪ್ರಧಾನ ಸುದ್ದಿ

ಭಾಷಾ ಮಾಧ್ಯಮ ಮಕ್ಕಳು, ಪೋಷಕರೇ ನಿರ್ಧರಿಸಲಿ

Published On :

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಶಿಕ್ಷಣದಲ್ಲಿ ಭಾಷಾ ಮಾಧ್ಯಮ ಯಾವುದಿರಬೇಕು ಎಂಬುದನ್ನು ಮಕ್ಕಳು ಮತ್ತು ಪೋಷಕರು ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಅಭಿಪ್ರಾಯ ಪಟ್ಟಿದೆ.
ಭಾಷಾ ಮಾಧ್ಯಮ ಆಯ್ಕೆ ವಿಚಾರದಲ್ಲಿ ಮಕ್ಕಳು ಮತ್ತು ಪೋಷಕರ ಹಕ್ಕಿಗೆ ಧಕ್ಕೆಯಾಗಬಾರದು ಎಂದೂ ಹೇಳಿದೆ. ಪ್ರತಿಯೊಬ್ಬ ನಾಗರಿಕರಿಗೂ ವ್ಯಕ್ತಿ ಸ್ವಾತಂತ್ರ್ಯ ಇದೆ. ಅದಕ್ಕನುಗುಣವಾಗಿ ಅವರಿಗೆ ಇಷ್ಟ ಬಂದ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ ಎಂದು ನ್ಯಾಯಮೂರ್ತಿ ಆರ್.ಎಂ.ಲೋಧಾ ನೇತೃತ್ವದ, ನ್ಯಾಯಮೂರ್ತಿಗಳಾದ ಎ.ಕೆ.ಪಟ್ನಾಯಕ್, ದೀಪಕ್ ಮಿಶ್ರ, ಮೊಹಮ್ಮದ್ ಖಲೀಫುಲ್ಲಾ, ಎಸ್.ಡಿ.ಮುಖ್ಯೋಪಾಧ್ಯಾಯ ಅವರನ್ನೊಳಗೊಂಡ ಸಂವಿಧಾನ ಪೀಠ ಪ್ರತಿಪಾದಿಸಿದೆ. ಜಾಗತೀಕರಣದ ಈ ಹೊತ್ತಿನಲ್ಲಿ ಮಾತೃಭಾಷೆ ಉಳಿವು ಅನಿವಾರ್ಯವಾಗಿದೆ. ಮಾತೃಭಾಷೆ ಉಳಿಯಬೇಕಾದರೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವುದು ಅನಿವಾರ್ಯ ಎಂದು ಸಾಹಿತಿಗಳ ಪರ ವಕೀಲ ಕೆ.ಎನ್. ಭಟ್ ಪ್ರತಿಪಾದಿಸಿದರು.       
ಭಾಷೆ ಉಳಿಯುವುದು ಅತಿ ಮುಖ್ಯ. ಮನೆ ಭಾಷೆಯಲ್ಲಿ ಕಲಿಯುವುದರಿಂದ ಬೇಗ ಗ್ರಹಿಸಬಹುದು. ನಾವು ಎಂಜಿನಿಯರಿಂಗ್, ಮೆಡಿಕಲ್‌ನಲ್ಲಿ ಮಾತೃಭಾಷೆ ಶಿಕ್ಷಣ ನೀಡಿ ಅನ್ನುತ್ತಿಲ್ಲ. ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಶಿಕ್ಷಣ ನೀಡಿ ಅಂತ ಒತ್ತಾಯಿಸುತ್ತಿದ್ದೇವೆ ಎಂದು ಅವರು, ಸಂವಿಧಾನ ಪೀಠಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿದರು. ಉಚಿತವಾಗಿ ನಡೆಯುವ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಮಾತೃಭಾಷೆಯಲ್ಲಿ ಶಿಕ್ಷಣ ನೀಡಿ ಅಂತ ಹೇಳೋದ್ರಲ್ಲಿ ಅರ್ಥ ಇಲ್ಲ. ಎಲ್ಲಾ ಶಾಲೆಗಳಲ್ಲಿಯೂ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂದರು.
ಯಾವುದು ಮಾತೃಭಾಷೆ?: ಸಾಹಿತಿಗಳ ಪರ ವಕೀಲ ಕೆ.ಎನ್. ಭಟ್ ಅವರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಯಾವುದನ್ನು ಮಾತೃಭಾಷೆ ಎಂದು ಹೇಳುತ್ತೀರಿ? ಮಾತೃ ಭಾಷೆ ಯಾವುದು ಅಂತ ನಿರ್ಧರಿಸುವುದೇ ಕಷ್ಟವಾಗಿದೆ. ಮಾತೃಭಾಷೆ ಅಂದರೆ ತಾಯಿ ಭಾಷೆಯೇ? ತಂದೆ ಭಾಷೆಯೇ? ಯಾವುದು ಮಾತೃಭಾಷೆ? ಮಾತೃಭಾಷೆ ಉಳಿಯಬೇಕು ಅನ್ನೋ ನಿಮ್ಮ ವಾದ ಸರಿ. ಆದರೆ, ಮಾತೃಭಾಷೆಯಲ್ಲೇ ಶಿಕ್ಷಣ ಕಡ್ಡಾಯ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿತು.
ಇದಕ್ಕೂ ಮೊದಲು ವಾದ ಮುಂದುವರೆಸಿದ ಕರ್ನಾಟಕ ಸರ್ಕಾರದ ಅಡ್ವೋಕೆಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅವರು, ಭಾಷಾ ಮಾಧ್ಯಮ ನಿರ್ಧರಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ ಎಂದು ಮತ್ತೆ ಪ್ರತಿಪಾದಿಸಿದರು.
ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಸೂಕ್ತ ಎಂದು ತಜ್ಞರ ಸಮಿತಿ ಕೂಡ ಹೇಳಿದೆ. ಡಾ.ಅಂಬೇಡ್ಕರ್ ಕೂಡಾ ಸಂವಿಧಾನ ರಚನಾ ಸಭೆಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಡಾ. ಅಂಬೇಡ್ಕರ್ ಮಂಡಿಸಿದ ನಿರ್ಣಯಕ್ಕೆ ಸೋಲು ಉಂಟಾಗಿತ್ತು ಎಂಬುದು ನಿಮಗೂ ಗೊತ್ತಿರಬಹುದು ಎಂದು ತಿಳಿಸಿತು.
ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಅಂತ ಯಾವ ಕಾನೂನು ಹೇಳಿದೆ? ಯಾವ ಕಾನೂನಿನಲ್ಲಿ ಇದೆ? ಬೇರೆಯವರ ಮೇಲೆ ಭಾಷಾ ಮಾಧ್ಯಮವನ್ನು ಹೇಗೆ ಹೇರುತ್ತೀರಿ? ಪ್ರತಿಯೊಬ್ಬ ನಾಗರಿಕರಿಗೂ ವ್ಯಕ್ತಿ ಸ್ವಾತಂತ್ರ್ಯ ಇದೆ. ಅವರಿಗೆ ಇಷ್ಟ ಬಂದ ಮಾಧ್ಯಮವನ್ನು ಅವರು ಆಯ್ಕೆ ಮಾಡಿಕೊಳ್ಳಬಹುದು ಎಂದರು.
ಆಂಗ್ಲೋ ಇಂಡಿಯನ್ಸ್, ಕ್ರಿಶ್ಚಿಯನ್ ಶಾಲೆಗಳು ಮಾತೃ ಭಾಷೆಯಲ್ಲೆ ಶಿಕ್ಷಣ ನೀಡುತ್ತಿವೆ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಆಂಗ್ಲೋ ಇಂಡಿಯನ್ ಶಾಲೆಗಳು ಮಾತ್ರ ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿವೆ.
ಯಾವ ಮಾಧ್ಯಮ ಬೇಕು ಎಂಬುದನ್ನು ಮಕ್ಕಳೇ ನಿರ್ಧರಿಸಲಿ. ಮಕ್ಕಳು ಮತ್ತು ಪೋಷಕರ ಹಕ್ಕಿಗೆ ಧಕ್ಕೆ ಆಗಬಾರದು. ಭಾಷಾ ಮಾಧ್ಯಮದ ಆಯ್ಕೆ ಪೋಷಕರಿಗೆ ಬಿಟ್ಟದ್ದು. ಇಂತಹ ಸೂಕ್ಷ್ಮ ವಿಷಯಗಳಲ್ಲಿ ಮಕ್ಕಳು, ಪೋಷಕರ ಅಭಿಪ್ರಾಯವೇ ಅಂತಿಮವಾಗಬೇಕು. ಶಾಲೆಗಳಿಗೆ ಮೊದಲು ಮೂಲಭೂತ ಸೌಲಭ್ಯ ಒದಗಿಸಿ ಎಂದರು.
ಗುರುವಾರ ಸಾಹಿತಿಗಳ ಪರ ವಕೀಲ ಕೆ.ಎನ್.ಭಟ್ ವಾದ ಮುಂದುವರಿಸುತ್ತಾರೆ. ನಂತರ ಖಾಸಗಿ ಶಾಲೆಗಳ ಪರ ವಕೀಲರು ವಾದ ಮಂಡಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.