ಅಧರ್ಮಕ್ಕೆ ಸರ್ಕಾರದ್ದೇ ಶ್ರೀರಕ್ಷೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ ಫೆ.21
ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಓಂಕಾರ ವಲಯ ಅರಣ್ಯದಲ್ಲಿ ಜಿಂಕೆ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಡಿವೈಎಸ್ಪಿ ಟಿ.ಕೆ. ಧರ್ಮೇಶ್ ಮತ್ತವರ ತಂಡವನ್ನು ಬಂಧಿಸಿ 22 ದಿನ ಕಳೆದರೂ ಇದುವರೆಗೂ ಧರ್ಮೇಶ್ ಅಮಾನತಾಗಿಲ್ಲ.
ಗುಂಡೇಟಿನಿಂದ ಜಿಂಕೆ ಮೃತಪಟ್ಟಿದೆ ಎಂದು ಶವಪರೀಕ್ಷೆ ವರದಿಯಲ್ಲಿ ಬಹಿರಂಗವಾಗಿದೆ. ಅಲ್ಲದೆ, ಧರ್ಮೇಶ್ ಅವರನ್ನು ಅಮಾನತು ಮಾಡುವಂತೆ ಅರಣ್ಯ ಇಲಾಖೆಯಿಂದ ಸಿಐಡಿ ವಿಭಾಗದ ಡಿಜಿಪಿ ಅವರಿಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಪತ್ರ ಬರೆದಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ನೋಡಿದರೆ ಸರ್ಕಾರವೇ ಪರೋಕ್ಷವಾಗಿ ಧರ್ಮೇಶ್ ಅವರ ಬೆಂಬಲಕ್ಕೆ ನಿಂತಿರುವ ಅನುಮಾನ ವ್ಯಕ್ತವಾಗಿದೆ.
ಧರ್ಮೇಶ್ ಜಿಂಕೆ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ, ಇದೀಗ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ಹೀಗಾಗಿ ಸಿಎಂ ಮತ್ತು ಪೊಲೀಸ್ ಇಲಾಖೆ ಧರ್ಮೇಶ್ ವಿಚಾರದಲ್ಲಿ ತೋರುತ್ತಿರುವ ಮೃದುಧೋರಣೆ ವನ್ಯಜೀವಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಆಸ್ಪತ್ರೆಯಲ್ಲಿ: ಧರ್ಮೇಶ್ಗೆ ಸಂಬಂಧಿಸಿದಂತೆ ಇಲಾಖೆ(ಸಿಐಡಿ)ಯಿಂದ ಯಾವುದೇ ಮಾಹಿತಿ ನೀಡಿಲ್ಲದಿರುವುದು ಹಾಗೂ ಪ್ರಕರಣ ನಡೆದ ದಿನದಿಂದಲೂ ಅನಾರೋಗ್ಯದ ನೆಪದಲ್ಲಿ ಧರ್ಮೇಶ್ ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತಿರುವುದರಿಂದ, ಈ ಪ್ರಕರಣದಿಂದ ಪಾರಾಗಲು ಬೇಕಾದ ತಂತ್ರ ಹೆಣೆಯಲು ಅವರು ಮುಂದಾಗಿದ್ದಾರೆ.
ಧರ್ಮೇಶ್ ಬಂಡೀಪುರ ರಾಷ್ಟೀಯ ಉದ್ಯಾನ ಸುತ್ತಮುತ್ತಲ ಪ್ರದೇಶದಲ್ಲಿ ಜಮೀನು ಹೊಂದಿದ್ದಾರೆ. ಬೇಟೆಯಾಡುವ ಸಲುವಾಗಿ ಸುತ್ತಮುತ್ತಲ ಜಮೀನಿನವರಾದ ಮೈಸೂರಿನ ಮಹಮದ್ ಅಮೀದ್, ಮೈಸೂರು ಜಿಲ್ಲೆಯ ರಾಯನಕೆರೆ ಅತಿಕ್ ಅಹಮದ್, ಫರೀದ್ ಅಲ್ಮೀಯ ಸೇರಿದಂತೆ ಕೂಲಿ ಕೆಲಸಕ್ಕೆ ಬರುತ್ತಿದ್ದ ಮಂಜಯ್ಯ ಮತ್ತು ರಘು ಅವರನ್ನು ಸೇರಿಸಿಕೊಂಡು ಬೇಟೆಗಾಗಿ ತಂಡ ಕಟ್ಟಿದ್ದರು ಎನ್ನಲಾಗಿದೆ.
ಜಿಂಕೆ ಬೇಟೆಯಾಡಿರುವುದು ಮತ್ತು ಬೇಟೆಗಾಗಿ ಹೊಂದಿದ್ದ ಆಯುಧಗಳನ್ನು ನೋಡಿದರೆ ಇವರೆಲ್ಲ ಅನುಭವಿ ಬೇಟೆಗಾರರೇ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆ: ಜಿಂಕೆ ಕೊಂದ ಪ್ರಕರಣ ಆರೋಪಿಗಳ ಪೈಕಿ ತಂದೆ-ಮಗ ಮಂಜಯ್ಯ ಹಾಗೂ ರಘುವನ್ನು ಸುಮಾರು 5 ಗಂಟೆ ಕಾಲ ವಿಚಾರಣೆ ನಡೆಸಿದ್ದಾರೆ. ನಂಜನಗೂಡಿನ ಅರಣ್ಯ ಇಲಾಖೆ ಕಚೇರಿಯಲ್ಲಿ ವಿಚಾರಣೆ ನಡೆಸಿ ಕೆಲ ಮಹತ್ವದ ವಿಷಯಗಳನ್ನು ಆರೋಪಿಗಳಿಂದ ಬಾಯಿ ಬಿಡಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೀಗ ಎರಡನೇ ಹಂತದಲ್ಲಿ ಮಹಮದ್ ಅಮೀದ್, ಅತಿಕ್ ಅಹಮದ್, ಫರೀದ್ ಅಲ್ಮೀಯ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಸಿದ್ಧತೆ ನಡೆದಿದೆ. ಅಲ್ಲದೆ ಪೊಲೀಸ್ ಇಲಾಖೆಯಿಂದ ಧರ್ಮೇಶ್ ಬಗ್ಗೆ ಮಾಹಿತಿ ದೊರೆತ ನಂತರ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುವುದು.
ಜಿಂಕೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಸಿಐಡಿ ಡಿವೈಎಸ್ಪಿ ಟಿ.ಕೆ. ಧರ್ಮೇಶ್ ಅವರನ್ನು ಅಮಾನತು ಮಾಡುವಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಮೂಲಕ ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೆ, ಅವರನ್ನು ಅಮಾನತು ಮಾಡಿರುವ ಸಂಬಂಧ ಇದುವರೆಗೆ ಯಾವುದೇ ಮಾಹಿತಿ ದೊರೆತಿಲ್ಲ. ಇದೀಗ ವಿಚಾರಣೆ ಆರಂಭಿಸಲಾಗಿದೆ. ಪೊಲೀಸ್ ಇಲಾಖೆ ಧರ್ಮೇಶ್ ಬಗ್ಗೆ ಮಾಹಿತಿ ನೀಡಿದ ತಕ್ಷಣ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು.
- ರವಿಶಂಕರ್, ತನಿಖಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಯಡಿಯಾಲ
ದೇವರಾಜು ಕಪ್ಪಸೋಗೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


