ಪ್ರಧಾನ ಸುದ್ದಿ

ವೈದ್ಯ, ಎಂಜಿನಿಯರಿಂಗ್ ಶುಲ್ಕ, ಸೀಟು ಬದಲಿಲ್ಲ

Published On :

ಕ.ಪ್ರ.ವಾರ್ತೆ  ಬೆಂಗಳೂರು  ಫೆ. 21
ಲೋಕಸಭೆ ಚುನಾವಣೆ ಪ್ರಭಾವ ವೃತ್ತಿಪರ ಕೋರ್ಸ್‌ಗಳ ಕೌನ್ಸೆಲಿಂಗ್ ಮೇಲೆ ಪರಿಣಾಮ ಬೀರಿದ್ದು, ಶುಲ್ಕ ಹಾಗೂ ಸೀಟು ಹಂಚಿಕೆಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
2013-14ನೇ ಶೈಕ್ಷಣಿಕ ಸಾಲಿನಲ್ಲಿ ಎಂಜಿನಿಯರಿಂಗ್, ವೈದ್ಯ ಹಾಗೂ ದಂತವೈದ್ಯ ಕೋರ್ಸ್‌ಗಳಿಗೆ ರಾಜ್ಯ ಸರ್ಕಾರ ನಿಗದಿ ಮಾಡಿದ್ದ ಶುಲ್ಕ ಹಾಗೂ ಸೀಟು ಹಂಚಿಕೆ ಪ್ರಮಾಣವೇ ಮುಂದಿನ ಶೈಕ್ಷಣಿಕ ವರ್ಷಕ್ಕೂ ಮುಂದುವರಿಯಲಿದೆ. ಕಳೆದ 2006ರಿಂದ ನಡೆಯುತ್ತಿರುವ ಪ್ರಕ್ರಿಯೆಯಂತೆ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಲಾಗಿದೆ. ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ.
ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯಿದೆ-2006ನ್ನು ಜಾರಿಗೆ ತರಬೇಕು, ಇಲ್ಲವಾದಲ್ಲಿ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ. ರಾಜ್ಯ ಸರ್ಕಾರ ಒಪ್ಪದಿದ್ದರೆ ಸೀಟು ಹಂಚಿಕೆಯನ್ನೇ ಮಾಡುವುದಿಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಬೆದರಿಕೆ ಹಾಕಿತ್ತು. ಆದರೆ ಶುಕ್ರವಾರ ಸಂಜೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರನ್ನು ಮನವೊಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಫಲರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ, ವೈದ್ಯ ಶಿಕ್ಷಣ ರಾಜ್ಯ ಸಚಿವ ಶರಣಪ್ರಕಾಶ್ ಪಾಟೀಲ್, ಖಾಸಗಿ ಕಾಲೇಜುಗಳ ಮಾಲೀಕರು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಈ ನಿರ್ಣಯ ಹೊರಬಿದ್ದಿದೆ.
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಾಯಕ್ಕೆ ಸ್ಪಂದಿಸಿದ್ದೇವೆ. ಈ ಶೈಕ್ಷಣಿಕ ವರ್ಷದ ಮಟ್ಟಿಗೆ ನಮ್ಮ ಬೇಡಿಕೆಯಿಂದ ಹಿಂದೆ ಸರಿಯಲು ನಿರ್ಧರಿಸಲಾಗಿದೆ. ಆದರೆ ವಿದ್ಯಾರ್ಥಿ-ಶಿಕ್ಷಕರ ಅನುಪಾತವನ್ನು 20:1ಗೆ ಏರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ' ಎಂದು ಒಕ್ಕೂಟದ ಅಧ್ಯಕ್ಷ ಪಾಂಡುರಂಗ ಶೆಟ್ಟಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ತಿದ್ದುಪಡಿ ಕುರಿತಂತೆಯೂ ಚರ್ಚೆ:2006 ಕಾಯಿದೆಯ ಮೀಸಲು, ಪ್ರವೇಶ ಪರೀಕ್ಷೆ ಹಾಗೂ ಶುಲ್ಕಕ್ಕೆ ಸಂಬಂಧಿಸಿ ಕೆಲ ವಿಚಾರಗಳನ್ನು ತಿದ್ದುಪಡಿ ಮಾಡಲು ಸಭೆಯಲ್ಲಿ ಚರ್ಚಿಸಲಾಯಿತು. ಆದರೆ ಯಾವುದೇ ತೀರ್ಮಾನಕ್ಕೆಬಾರದ ಹಿನ್ನೆಲೆಯಲ್ಲಿ ಕಾಯಿದೆಯನ್ನು ಮತ್ತೆ ಅಮಾನತಿನಲ್ಲಿಯೇ ಉಳಿಸಿಕೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. 2014-15ನೇ ಶೈಕ್ಷಣಿಕ ವರ್ಷವೊಂದಕ್ಕೆ ಮತ್ತೆ ಒಪ್ಪಂದಕ್ಕೆ ಸಹಿ ಹಾಕುವಂತೆ ಮನವೊಲಿಸಲಾಗಿದೆ.

ಶುಲ್ಕ ಹಾಗೂ ಸೀಟು ಹಂಚಿಕೆ ವಿವರ
ಎಂಜಿನಿಯರಿಂಗ್     ಸೀಟು ಹಂಚಿಕೆ (ಶೇ)     ಶುಲ್ಕ(ಗಳಲ್ಲಿ)
                             ಸಿಇಟಿ     ಕಾಮೆಡ್-ಕೆ      ಸಿಇಟಿ     ಕಾಮೆಡ್-ಕೆ
ಸರ್ಕಾರಿ                       85      -     18,090     -
ಖಾಸಗಿ                       45     30     38,090- 41,590     1,37,500
ಅಲ್ಪಸಂಖ್ಯಾತ               40     30     38,090- 41,590     1,37,500
ಎಲ್ಲ ಕಾಲೇಜುಗಳಲ್ಲಿ ಶೇ.5ರಷ್ಟು ಸೂಪರ್ ನ್ಯೂಮರರಿ ಕೋಟಾ
ವೈದ್ಯ     ಸೀಟು ಹಂಚಿಕೆ(ಶೇ)    ಶುಲ್ಕ(ಗಳಲ್ಲಿ)
                ಸಿಇಟಿ       ಕಾಮೆಡ್-ಕೆ         ಸಿಇಟಿ               ಕಾಮೆಡ್-ಕೆ
ಸರ್ಕಾರಿ     85              -              16,700            -
ಖಾಸಗಿ    40              40              46,000          3,57,500
ಅಲ್ಪಸಂಖ್ಯಾತ    25              55              46,000          3,57,500

ದಂತವೈದ್ಯ         ಸೀಟು ಹಂಚಿಕೆ    (ಶೇ)          ಶುಲ್ಕ(ಗಳಲ್ಲಿ)
                         ಸಿಇಟಿ     ಕಾಮೆಡ್-ಕೆ               ಸಿಇಟಿ                   ಕಾಮೆಡ್-ಕೆ
ಸರ್ಕಾರಿ          85           -           14,400               -
ಖಾಸಗಿ                  35            45               35,000         2,53,000
ಅಲ್ಪಸಂಖ್ಯಾತ            25            55                35,000             2,53,000

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.