26 ರಂದು ಶೋಧನಾ ಸಮಿತಿಯ ಸಭೆ: ಹಲವರ ಪೈಪೋಟಿ
ಮೈಸೂರು: ಮೈಸೂರನ್ನು ಕೇಂದ್ರ ಸ್ಥಾನವಾಗಿ ಹೊಂದಿರುವ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಎರಡೂವರೆ ತಿಂಗಳಿಂದ ಖಾಲಿ ಇದೆ. ನೂತನ ಕುಲಪತಿ ಆಯ್ಕೆಗೆ ಸರ್ಕಾರ ಶೋಧನಾ ಸಮಿತಿಯ ರಚನೆಗೆ ವಿಳಂಬ ಮಾಡಿದ್ದೇ ಇದಕ್ಕೆ ಕಾರಣ.
ಇದೀಗ ಖ್ಯಾತ ಪಿಟೀಲು ವಾದಕ ಎಲ್.ಸುಬ್ರಹ್ಮಣ್ಯಂ ಅವರ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ರಚಿಸಲಾಗಿದೆ. ಅವರು ಸರ್ಕಾರದ ಪ್ರತಿನಿಧಿ. ಬೆಂಗಳೂರಿನ ಮಲ್ಲೇಶ್ವರಂ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಪ್ರೊ.ಸತ್ಯವತಿ ಹಾಗೂ ಕೇರಳ ಕಲಾಮಂಡಳಂ ವಿವಿ ಕುಲಪತಿ ಪ್ರೊ.ಸುರೇಶ್ ಕ್ರಮವಾಗಿ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಪ್ರತಿನಿಧಿಗಳಾಗಿ, ಶೋಧನಾ ಸಮಿತಿಯ ಸದಸ್ಯರಾಗಿದ್ದಾರೆ. ಶೋಧನಾ ಸಮಿತಿ ಸಭೆಯು ಫೆ.26 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಸಮಿತಿಯು ಮೂವರ ಹೆಸರುಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಸರ್ಕಾರ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆದ ರಾಜ್ಯಪಾಲರಿಗೆ ಕಳುಹಿಸಿಕೊಡಲಿದ್ದು, ಯಾವುದೇ ವಿವಾದ ಇಲ್ಲದಿದ್ದಲ್ಲಿ ಮಾರ್ಚ್ ಮೊದಲ ವಾರ ನೂತನ ಕುಲಪತಿಯ ನೇಮಕ ಆಗಲಿದೆ.
ದೇಶದಲ್ಲಿಯೇ 2ನೇಯದು: ರಾಜ್ಯ ಸಂಗೀತ ವಿವಿ ಇಡೀ ದೇಶದಲ್ಲಿಯೇ ಎರಡನೇಯದು. ದಕ್ಷಿಣ ಭಾರತಕ್ಕೆ ಮೊದಲನೇಯದು. 2008ರ ಫೆ.13 ರಂದು ವಿಶೇಷಾಧಿಕಾರಿಯಾಗಿ ನೇಮಕಗೊಂಡ ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ಹನುಮಣ್ಣ ನಾಯಕ ದೊರೆ 2009ರ ಡಿ.9 ರಂದು ಮೊದಲ ಕುಲಪತಿಯಾಗಿ ನೇಮಕವಾಗಿದ್ದರು. ಅವರ ನಾಲ್ಕು ವರ್ಷಗಳ ಅವಧಿ 2013ರ ಡಿ.7ಕ್ಕೆ ಮುಕ್ತಾಯವಾಗಿತ್ತು. ಅಂದಿನಿಂದಲೂ ಕುಲಸಚಿವ ಪ್ರೊ.ಎಂ. ಬಸವಣ್ಣ ಅವರು ಪ್ರಭಾರ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗಳೂರು ವಿವಿ ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಜಯಶ್ರೀ, ಪ್ರಾಧ್ಯಾಪಕ ಕಾಮತ್, ಖ್ಯಾತ ಪಿಟೀಲು ವಾದಕ ಮೈಸೂರು ಎಂ.ಮಂಜುನಾಥ್, ಸರ್ವಮಂಗಳಾ ಪಾಟೀಲ್, ಡಾ. ಭಾಷ್ಯಂಸ್ವಾಮಿ ಮೊದಲಾದವರು ಸಂಗೀತ ವಿವಿಯ ಕುಲಪತಿಗಳಾಗುವ ಕಸರತ್ತು ನಡೆಸಿದ್ದಾರೆ. ಶೋಧನಾ ಸಮಿತಿಯು ಪ್ರಭಾರ ಕುಲಪತಿ ಪ್ರೊ.ಎಂ. ಬಸವಣ್ಣ ಅವರ ವಿವರವನ್ನು ಕೂಡ ತರಿಸಿಕೊಂಡಿದೆ. ಸಂಗೀತ ವಿವಿ ಕುಲಪತಿಯಾಗಿ ಸಂಗೀತಗಾರರನ್ನೇ ನೇಮಿಸಲಾಗುತ್ತದೆ. ಆದರೂ ಇತರರು ಪ್ರಯತ್ನ ನಡೆಸಿರುವುದು, ರಾಜ್ಯಪಾಲರು ಶೋಧನಾ ಸಮಿತಿಯ ಶಿಫಾರಸಿಗೆ ವಿರುದ್ಧವಾಗಿ ಧಾರವಾಡ ಹಾಗೂ ದಾವಣಗೆರೆ ವಿವಿಗಳಿಗೆ ನೇಮಕ ಮಾಡಿರುವುದರಿಂದ ಮುಂದಿನ ಕುಲಪತಿ ಯಾರಾಗಬಹುದು ಎಂಬ ಕುತೂಹಲ ಉಂಟಾಗಿದೆ.
ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

