16 ಕೋಟಿ ಮೌಲ್ಯದ ಚಿನ್ನದ ಬಿಸ್ಕೆಟ್ ವಶ
ಕನ್ನಡಪ್ರಭ ವಾರ್ತೆ ಬೆಂಗಳೂರು ಫೆ.22
ಸೂಕ್ತ ದಾಖಲೆಗಳಿಲ್ಲದೆ ಕೋಲ್ಕತಾದಿಂದ ಕೊಯಮತ್ತೂರಿಗೆ ಜೆಟ್ ಏರ್ವೇಸ್ನಲ್ಲಿ ಸಾಗಿಸಲಾಗುತ್ತಿದ್ದ 16.5 ಕೋಟಿ ಮೌಲ್ಯದ 54 ಕೆ.ಜಿ ಚಿನ್ನದ ಬಿಸ್ಕೆಟ್ಗಳನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕೊಯಮತ್ತೂರು ಮೂಲದ 30 ವರ್ಷ ವಯೋವಾನದ ಬಾಲಸುಬ್ರಮಣ್ಯಂ, ಆರ್.ರವಿವರ್ಮ ಹಾಗೂ ಈಶ್ವರ್ ಮೂರ್ತಿ ಎಂಬುವರನ್ನು ಬಂಧಿಸಲಾಗಿದೆ.
ವಶಪಡಿಸಿಕೊಳ್ಳಲಾದ ಚಿನ್ನದ ಬಿಸ್ಕೆಟ್ಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಮಾಹಿತಿ ನೀಡಿದರು. 'ಕೋಲ್ಕತಾದಿಂದ ಬೆಂಗಳೂರು ಮಾರ್ಗವಾಗಿ ಕೊಯಮತ್ತೂರಿಗೆ ಹೋಗುತ್ತಿರುವ ಜೆಟ್ ಏರ್ವೇಸ್ ವಿಮಾನದಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನಾಭರಣ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಬಂತು. ಕೂಡಲೇ ಜಂಟಿ ಪೊಲೀಸ್ ಆಯುಕ್ತ ರವಿ, ಡಿಸಿಪಿ ಸುರೇಶ್, ಅಪರಾಧ ಡಿಸಿಪಿ ಅಭಿಷೇಕ್ ಗೋಯಲ್, ಎಸಿಪಿ ಜಯಪ್ರಕಾಶ್, ಇನ್ಸ್ಪೆಕ್ಟರ್ ಪಾಂಡುರಂಗ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು.
ವಿಮಾನ ಶನಿವಾರ ಸಂಜೆ 6 ಗಂಟೆಗೆ ಕೆಐಎಎಲ್ಗೆ ಲ್ಯಾಂಡ್ ಆಗಲಿದೆ ಎನ್ನುವ ಮಾಹಿತಿ ಇತ್ತು. ಅದೇ ಪ್ರಕಾರ ವಿಮಾನ ಕೆಐಎಎಲ್ಗೆ ಬರುತ್ತಿದ್ದಂತೆ ನಿಯಮಗಳನ್ನು ಪಾಲಿಸಿ ವಿಮಾನದ ಒಳಗೆ ತೆರಳಿದೆವು. ಅನುಮಾನಿತ ವ್ಯಕ್ತಿಗಳನ್ನು ವಿಚಾರಿಸಿ ಅವರು ಹೊಂದಿದ್ದ ಬ್ಯಾಗ್ಗಳನ್ನು ಪರಿಶೀಲಿಸಿದಾಗ ಮೂವರ ಬಳಿ ಇದ್ದ 3 ಹ್ಯಾಂಡ್ ಬ್ಯಾಗ್ಗಳಲ್ಲಿ 54 ಚಿನ್ನದ ಗಟ್ಟಿಗಳನ್ನು ಸಮಾನವಾಗಿ ತಲಾ 18 ಚಿನ್ನದಗಟ್ಟಿಗಳನ್ನು ಇರಿಸಲಾಗಿತ್ತು' ಎಂದು ಹೇಳಿದರು.
ಭಾರಿ ಪ್ರಮಾಣದ ಚಿನ್ನಾಭರಣ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಕೇಳಿದಾಗ ಅವರ ಬಳಿ ಕೇವಲ ಚಿನ್ನದ ಗಟ್ಟಿಗಳನ್ನು ತಲುಪಿಸುವ ಬಗೆಗಿನ ಡೆಲಿವರಿ ನೋಟ್ ಇತ್ತು. ಅದು ಕೂಡಾ ನಕಲು ಪ್ರತಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮೂವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, 'ಮುಂಬೈನಲ್ಲಿರುವ ಕೊಶಿಸ್ ಬ್ಯಾಂಕಿನ ಪ್ರಧಾನ ಶಾಖೆಯಲ್ಲಿ ಚಿನ್ನದ ಗಟ್ಟಿಗಳನ್ನು ಖರೀದಿಸಲಾಗಿತ್ತು. ಆದರೆ ಡೆಲಿವರಿ ಮಾತ್ರ ಕೊಲ್ಕತ್ತಾದಲ್ಲಿರುವ ಕೊಶಿಸ್ ಬ್ಯಾಂಕಿನ ಶಾಖೆಯಲ್ಲಿ ಮಾಡಿಕೊಂಡು ಕೊಯಮತ್ತೂರಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಚಿನ್ನಾಭರಣ ತಯಾರಿಕೆಗೆ ಇವುಗಳನ್ನು ಕೊಂಡುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಪೈಕಿ ಒರ್ವ ತಾನು ಜುವೆಲ್ಲರಿ ಹಿರಿಯ ಮಾರಾಟ ಪ್ರತಿನಿಧಿ ಎಂದು ಹೇಳಿದ್ದಾನೆ.
ಆದರೆ, ಕೊಶಿಸ್ ಬ್ಯಾಂಕ್ ಶಾಖೆಗಳು ಕೊಯಮತ್ತೂರಿನಲ್ಲಿ ಇರುವುದರಿಂದ ಅಲ್ಲಿಯೂ ಡೆಲಿವರಿ ಪಡೆದುಕೊಳ್ಳಬಹುದಾಗಿದೆ. ಅವರ ಬಳಿಯಿರುವ ದಾಖಲೆಗಳು ಸೂಕ್ತವಾಗಿಲ್ಲದ ಕಾರಣ ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ತಪಾಸಣೆ ಲೋಪ?: ಸಾಮಾನ್ಯವಾಗಿ ಯಾವುದೇ ವಸ್ತುಗಳನ್ನು ವಿಮಾನದೊಳಕ್ಕೆ ತೆಗೆದುಕೊಂಡು ಹೋಗುವ ಮುನ್ನ ಸಿಐಎಸ್ಎಫ್ ಸಿಬ್ಬಂದಿ ಸ್ಕ್ಯಾನಿಂಗ್ ಮಾಡುತ್ತಾರೆ. ಆದರೆ ಸೂಕ್ತ ದಾಖಲೆಗಳಲ್ಲಿದ ಅಪಾರ ಚಿನ್ನದ ಗಟ್ಟಿಗಳು ವಿಮಾನದೊಳಗೆ ಹೋಗುವ ಮುನ್ನ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ತಪಾಸಣೆಯಾಗಲಿಲ್ಲವೇ ಎನ್ನುವ ಅನುಮಾನ ಕಾಡತೊಡಗಿದೆ. ಈ ಹಿನ್ನೆಲೆಯಲ್ಲಿ ಸಿಐಎಸ್ಎಫ್ ಅಧಿಕಾರಿಗಳು, ಆರ್ಥಿಕ ಅಪರಾಧಗಳ ಘಟಕ, ಕಂದಾಯ ನಿರ್ದೇಶನಾಲಯ ಗುಪ್ತಚರ ದಳ (ಡಿಆರ್ಐ), ಸುಂಕ ಅಧಿಕಾರಿಗಳು, ಆದಾಯ ತೆರಿಗೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದ್ದು ಈ ಬಗ್ಗೆ ಎಲ್ಲಾ ಕೋನಗಳಲ್ಲೂ ತನಿಖೆ ನಡೆಯುತ್ತಿದೆ ಎಂದು ಆಯುಕ್ತ ಔರಾದ್ಕರ್ ಮಾಹಿತಿ ನೀಡಿದರು.
ಕೊಲ್ಕತ್ತಾದಲ್ಲೂ ಚಿನ್ನ ವಶ
ಈ ಸಂಬಂಧ ಬೆಂಗಳೂರು ಪೊಲೀಸರು ಕೋಲ್ಕತಾ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಮೂವರು ನೀಡಿದ ಸುಳಿವಿನ ಆಧಾರದ ಮೇಲೆ ಕೋಲ್ಕತಾ ಪೊಲೀಸರು ಕೋಲ್ಕತಾದಲ್ಲೂ ಒರ್ವನನ್ನು ಬಂಧಿಸಿ ಅಪಾರ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿಚಾರಣೆಗಾಗಿ ಕೋಲ್ಕತಾ ಪೊಲೀಸರ ತಂಡವೂ ಬೆಂಗಳೂರಿಗೆ ಬರಲಿದೆ ಎಂದು ಆಯುಕ್ತ ಔರಾದ್ಕರ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

