ಸಾಲ ಕೊಟ್ಟು ಶೂಲವೇರಿದ ಸಹಕಾರಿ ಬ್ಯಾಂಕ್ಗಳು
ಕೊಪ್ಪಳ: ಸಾಲ ಪಡೆದವರು ಶೂಲಕ್ಕೇರುವುದು ಈವರೆಗಿನ ದುರಂತ. ಬೆಳೆ ಕೈಕೊಟ್ಟು ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದುಂಟು. ಆದರೆ, ಸಾಲ ಕೊಟ್ಟ ಸಹಕಾರಿ ಸಂಸ್ಥೆಗಳಿಗೇ ಈಗ ಸರ್ಕಾರ ಮರಣಶಾಸನ ಬರೆದಿದೆ. ಜಿಲ್ಲಾ ಸಹಕಾರಿ ಬ್ಯಾಂಕ್ನ ಸುತ್ತೋಲೆ ಪ್ರಕಾರ ನಡೆದುಕೊಂಡರೆ, ಸಹಕಾರಿ ಬ್ಯಾಂಕ್ಗಳಿಗೆ ಬಾಗಿಲು ಹಾಕಬೇಕಾಗುತ್ತದೆ ಎಂಬ ಆತಂಕ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯನ್ನು ಕಾಡುತ್ತಿದೆ.
ಹಿಂದಿನ ಹಾಗೂ ಹಾಲಿ ಸರ್ಕಾರವೇ ಸಹಕಾರಿ ಸಂಸ್ಥೆಗಳ ಈ ಸಂಕಷ್ಟದ ಹೊಣೆ ಹೊರಬೇಕಿದೆ. ಸರ್ಕಾರದ ಆದೇಶದಂತೆ ಶೇ.4 ಬಡ್ಡಿ ದರದಲ್ಲಿ ಸ್ವಸಹಾಯ ಸಂಘಗಳಿಗೆ ನೀಡಿದ ಸಾಲದ ಬಡ್ಡಿ ಮರುಪಾವತಿ ಆಗಿಲ್ಲವಾದ್ದರಿಂದ ಇದರ ಹೊರೆ ಹೊರಲು ನಾವು ಸಿದ್ಧವಿಲ್ಲ. ಶೇ.11.5ರಂತೆ ಬಡ್ಡಿ ಪಾವತಿಸಿ ಎಂಬ ಜಿಲ್ಲಾ ಸಹಕಾರಿ ಬ್ಯಾಂಕ್ನ ಸುತ್ತೋಲೆ ಈಗ ಸಹಕಾರಿ ಬ್ಯಾಂಕುಗಳ ಕುತ್ತಿಗೆಗೆ ನೇಣು ಬಿಗಿದಿದೆ.
ಏನಿದು ಸಮಸ್ಯೆ?: 2008ರಲ್ಲಿ ಆಗಿನ ರಾಜ್ಯ ಸರ್ಕಾರ ಸ್ವಸಹಾಯ ಗುಂಪುಗಳಿಗೂ ಸಹಕಾರಿ ಬ್ಯಾಂಕಿನ ಮೂಲಕ ಶೇ.4ರ ಬಡ್ಡಿ ದರದಲ್ಲಿ ಸಾಲ ನೀಡುವಂತೆ ಆದೇಶ ಮಾಡಿತು. ಉಳಿದ ಬಡ್ಡಿಯನ್ನು ಸರ್ಕಾರ ಭರಿಸುತ್ತದೆ. ಜಿಲ್ಲಾ ಸಹಕಾರಿ ಬ್ಯಾಂಕಿಗೆ ಅಗತ್ಯ ಹಣವನ್ನು ಸಂದಾಯ ಮಾಡುತ್ತದೆ ಎಂದು ಹೇಳಿತ್ತು. ಸರ್ಕಾರದ ಆದೇಶದಂತೆ ಜಿಲ್ಲಾ ಸಹಕಾರಿ ಬ್ಯಾಂಕ್ ತನ್ನ ಅಧೀನದಲ್ಲಿರುವ ಸಹಕಾರಿ ಬ್ಯಾಂಕುಗಳಿಗೆ ಶೇ.2.5 ಬಡ್ಡಿ ದರದಲ್ಲಿ ಸಾಲ ನೀಡಿ, ಶೇ.4ರ ಬಡ್ಡಿಯಲ್ಲಿ ಸ್ವಸಹಾಯ ಸಂಘಗಳಿಗೆ ಸಾಲ ನೀಡುವಂತೆ ನಿರ್ದೇಶನ ನೀಡಿತು. 2008ರ ಬಳಿಕ ಸ್ವಸಹಾಯ ಸಂಘಗಳಿಗೆ ಶೇ.4ರ ಬಡ್ಡಿಯಲ್ಲೇ ಬ್ಯಾಂಕ್ಗಳು ಸಾಲ ನೀಡಿವೆ. ಇದರ ಮೊತ್ತ ರು. 50 ಕೋಟಿಗೂ ಅಧಿಕ. ಸರ್ಕಾರದ ಆದೇಶವಾದ ಮೇಲೆ ಒಂದೆರಡು ವರ್ಷ ಅಲ್ಪಸ್ವಲ್ಪ ಬಡ್ಡಿ ಹಣ ಬಂತು. ಬ್ಯಾಂಕ್ಗಳೂ ಹೇಗೋ ನಿರ್ವಹಣೆ ಮಾಡಿದವು. ಆದರೆ, ಮೂರು ವರ್ಷಗಳಿಂದ ಸರ್ಕಾರ ತನ್ನ ಪಾಲಿನ ಅನುದಾನವನ್ನೇ (ಬಡ್ಡಿಯನ್ನೇ) ನೀಡಿಲ್ಲ. ಹೀಗಾಗಿ, ತನಗೂ ಬಡ್ಡಿ ಹಣಕ್ಕೂ ಸಂಬಂಧವಿಲ್ಲ. ನೀವೇ ಭರಿಸಿಕೊಳ್ಳಿ ಎಂದು ಜಿಲ್ಲಾ ಸಹಕಾರಿ ಬ್ಯಾಂಕ್ ತನ್ನ ಅಧೀನ ಬ್ಯಾಂಕ್ಗಳಿಗೆ ಸುತ್ತೋಲೆ ಹೊರಡಿಸಿ, ಸಂಕಷ್ಟ ಸೃಷ್ಟಿಸಿದೆ.
ಇದರಿಂದಾಗಿ ರಾಜ್ಯಾದ್ಯಂತ ಸುಮಾರು 400 ಬ್ಯಾಂಕ್ಗಳು ಅಕ್ಷರಶಃ ಶೂಲಕ್ಕೇರಿ ನಿಂತಿವೆ. ಸ್ವಸಹಾಯ ಸಂಘಗಳಿಗೆ ಶೇ.4ರ ಬಡ್ಡಿಯಲ್ಲಿ ಸಾಲ ನೀಡಿ, ವಸೂಲಿ ಮಾಡಿವೆ. ಆದರೆ, ಜಿಲ್ಲಾ ಸಹಕಾರಿ ಬ್ಯಾಂಕ್, ತನಗೆ ಶೇ.11.5ರಂತೆ ಬಡ್ಡಿ ಪಾವತಿಸಲು ಸಹಕಾರಿ ಬ್ಯಾಂಕ್ಗಳಿಗೆ ಸೂಚಿಸಿದೆ. ಈ ಹಣ ಪಾವತಿಸಲು ಕೆಳ ಹಂತದ ಬ್ಯಾಂಕ್ಗಳು ಮುಂದಾಗಿದ್ದೇ ಆದರೆ, ಆ ಬ್ಯಾಂಕುಗಳು ದಿವಾಳಿಯಾಗುವುದು ನಿಶ್ಚಿತ. ಹೀಗಾಗಿ ನಮ್ಮನ್ನು ಉಳಿಸಿ ಎಂದು ಸಹಕಾರಿ ಬ್ಯಾಂಕ್ಗಳೀಗ ಸರ್ಕಾರಕ್ಕೆ ಮೊರೆಯಿಡುತ್ತಿವೆ.
ಸರ್ಕಾರ ಕೂಡಲೇ ತನ್ನ ಆದೇಶದಂತೆ ಬಾಕಿ ಇರುವ ಎಲ್ಲ ಬಡ್ಡಿ ಹಣವನ್ನು ಭರಿಸಿ, ಸಹಕಾರಿ ಬ್ಯಾಂಕ್ಗಳಿಗೆ ಪಾವತಿಸಬೇಕು. ಇಲ್ಲದಿದ್ದರೆ ಸಹಕಾರಿ ಕ್ಷೇತ್ರ ದಿವಾಳಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದೇ ಹೇಳಲಾಗುತ್ತದೆ. ತನ್ನ ತಪ್ಪಿನ ಅರಿವಾಗಿ, ರಾಜ್ಯ ಸರ್ಕಾರ ಈ ಬ್ಯಾಂಕ್ಗಳ ಕೈ ಹಿಡಿಯುವುದೇ ಎಂದು ಕಾದು ನೋಡಬೇಕಾಗಿದೆ.
ಸೋಮರಡ್ಡಿ ಅಳವಂಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

