ಅಂಗವಿಕಲರ ಕೈ ಹಿಡಿದರೆ 50 ಸಾವಿರ ಠೇವಣಿ
ಧಾರವಾಡ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರನ್ನು ಓಲೈಸಲು ಕಸರತ್ತು ನಡೆಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ವಿಕಲಚೇತನರನ್ನು ಮದುವೆಯಾದವರಿಗೆ 50,000 ಠೇವಣಿ ಇಡುವ ಯೋಜನೆ ಜಾರಿಗೊಳಿಸಿದೆ.
ಪ್ರಸಕ್ತ ವರ್ಷದಿಂದಲೇ ಈ ಯೋಜನೆ ಅನುಷ್ಠಾನವಾಗಲಿದೆ. ಅದೃಷ್ಟವೆಂದರೆ ಇದಕ್ಕೆ ಜಾತಿ-ಮತ-ಪಂಗಡದ ಮಿತಿ ಇಲ್ಲ. ಮಾನವೀಯ ದೃಷ್ಟಿಯಿಂದ ವಿಕಲಚೇತನರನ್ನು ಮದುವೆಯಾದವರ ಹೆಸರಿನಲ್ಲಿ 50 ಸಾವಿರ ಹೂಡಿಕೆ ರೂಪದಲ್ಲಿ ಪ್ರೋತ್ಸಾಹಧನ ನೀಡಲಿದೆ. ಈ ಠೇವಣಿಯಿಂದ ಬರುವ ಬಡ್ಡಿ ರೂಪದ ಹಣ ಮಾಸಿಕವಾಗಿ ಅಂಗವಿಕರರನ್ನು ವರಿಸಿರುವ ದಂಪತಿಗೆ ಲಭಿಸಲಿದೆ.
ಅಂಗವಿಕಲರನ್ನು ಸಾಮಾನ್ಯ ಯುವಕ ಅಥವಾ ಯುವತಿ ಮದುವೆಯಾದರೆ ಆ ದಂಪತಿಯ ಹೆಸರಿನಲ್ಲಿ ಬ್ಯಾಂಕ್ನಲ್ಲಿ 50 ಸಾವಿರ ನಗದನ್ನು ಠೇವಣಿ ಇಡಲಾಗುತ್ತದೆ. ಐದು ವರ್ಷಗಳವರೆಗೆ ಇದನ್ನು ಪಡೆಯಲು ಬರುವುದಿಲ್ಲ. ಈ ಠೇವಣಿಯಿಂದ ಬರುವ ಬಡ್ಡಿ ಹಣವನ್ನು ಮಾತ್ರ ದಂಪತಿಗಳು ಮಾಸಿಕವಾಗಿ ಪಡೆಯಬಹುದು. ಐದು ವರ್ಷ ಪೂರ್ಣಗೊಂಡ ಬಳಿಕ ಈ ಹಣವನ್ನು ದಂಪತಿ ವಾಪಸ್ ಪಡೆಯಬಹುದು. ಇಲ್ಲವೇ ಠೇವಣಿಯಾಗಿಯೇ ಮುಂದುವರಿಸಬಹುದು.
ಷರತ್ತುಗಳೇನು?: ಯೋಜನೆಯ ದುರುಪಯೋಗ ತಡೆಯಲು ಕೆಲವು ಷರತ್ತು ಮತ್ತು ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದೆ. ವಿಕಲಚೇತನರು ಮತ್ತು ಸಾಮಾನ್ಯ ಜನರು ಕನಿಷ್ಠ 10 ವರ್ಷ ರಾಜ್ಯದಲ್ಲಿ ವಾಸಿಸಿರಬೇಕು. ವಿಕಲಚೇತನರನ್ನು ಮದುವೆಯಾಗುವ ಸಾಮಾನ್ಯ ವ್ಯಕ್ತಿಗೆ ಯಾವುದೇ ಆದಾಯದ ಮಿತಿ ನಿಗದಿಪಡಿಸಿಲ್ಲ. ಯೋಜನೆಯಡಿ ಸೌಲಭ್ಯ ಪಡೆಯುವವರು 2ನೇ ಮದುವೆ ಮಾಡಿಕೊಂಡಲ್ಲಿ ಈ ಸೌಲಭ್ಯಕ್ಕೆ ಅನರ್ಹರಾಗುತ್ತಾರೆ. ಯುವಕ-ಯುವತಿಯರ ಅಂಗವಿಕಲತೆಯ ಪ್ರಮಾಣ ಶೇ.40ಕ್ಕಿಂತ ಹೆಚ್ಚಿರಬೇಕು. ಬ್ಯಾಂಕ್ ಪಾಸ್ ಪುಸ್ತಕ (ಜಂಟಿ ಖಾತೆ), ಲಗ್ನ ಪತ್ರಿಕೆ, ಗಂಡ-ಹೆಂಡತಿ ಜತೆಗಿರುವ ಎರಡು ಭಾವಚಿತ್ರ, ವಾಸಸ್ಥಳದ ದೃಢೀಕರಣ ಪತ್ರ, ವಿವಾಹ ನೋಂದಣಾಧಿಕಾರಿಗಳಲ್ಲಿ ಕಡ್ಡಾಯವಾಗಿ ನೋಂದಾಯಿಸಿರಬೇಕು.
ಮಾಹಿತಿಗೆ 8884146468ಗೆ ಸಂಪರ್ಕಿಸಿ
ಅಂಗವಿಕಲರನ್ನು ಮದುವೆಯಾದವರಿಗೆ ಪ್ರೋತ್ಸಾಹಧನ ಯೋಜನೆ ಜತೆಗೆ ಮತ್ತಷ್ಟು ಅನುಕೂಲತೆಗಳನ್ನು ಇದೇ ಪ್ರಸಕ್ತ ವರ್ಷದಿಂದ ಸರ್ಕಾರ ಘೋಷಿಸಿದೆ. ಅಂಗವಿಕಲ ದಂಪತಿಗೆ ಹುಟ್ಟುವ ಎರಡು ಮಕ್ಕಳಿಗೆ 2 ವರ್ಷದವರೆಗೆ ಪ್ರತಿ ತಿಂಗಳು 2 ಸಾವಿರ ಸಹಾಯಧನದ ರೂಪದಲ್ಲಿ ನೆರವು ನೀಡಲಾಗುತ್ತದೆ. ಅಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೂ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡಲಿದೆ. ಎಸ್ಎಸ್ಎಲ್ಸಿ ನಂತರದ ವಿದ್ಯಾಭ್ಯಾಸದ ಶುಲ್ಕವನ್ನು ಸರ್ಕಾರದ ಮಾನದಂಡದ ಪ್ರಕಾರ ಮರು ಪಾವತಿ ಮಾಡಲಾಗುವುದು. ಈ ಬಗ್ಗೆ ಮತ್ತಷ್ಟು ಮಾಹಿತಿ ಅಗತ್ಯವಿದ್ದರೆ ಮೊ. 88841 46468 (ಅಂಗವಿಕಲರ ಕಲ್ಯಾಣಾಧಿಕಾರಿಗಳು) ಸಂಪರ್ಕಿಸಬಹುದು.
ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

