ಪ್ರವಾಸಿ ಗೈಡ್ ಆಗದ ಸಚಿವ ದೇಶಪಾಂಡೆ!

ವಿಶೇಷ ವರದಿ
ಬೆಂಗಳೂರು: ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ತಮ್ಮದೇ ಜಿಲ್ಲೆಯ ಪ್ರವಾಸಿ ತಾಣದ ಬಗ್ಗೆ ತಯಾರಿಸಿದ ಅತ್ಯುತ್ತಮ ಪುಸ್ತಕ ಬಿಡುಗಡೆ ಮಾಡಲು ಮತ್ತು ನೋಡಲೂ ಪುರುಸೊತ್ತಿಲ್ಲವಂತೆ! ಸಚಿವರೇ ಹೀಗಾದರೆ ಇನ್ನು ಅಧಿಕಾರಿಗಳಿಂದ ಏನನ್ನೂ ನಿರೀಕ್ಷಿಸುವಂತಿಲ್ಲ.
ಉತ್ತರ ಕನ್ನಡ ಜಿಲ್ಲೆ ಬಗ್ಗೆ ಪ್ರವಾಸೋದ್ಯಮ ಇಲಾಖೆ ಮಾಡಬೇಕಾದ ಕೆಲಸವನ್ನು ಇಲಾಖೆಗಿಂತ ಸಾವಿರಪಾಲು ಉತ್ತಮವಾಗಿ ಡಿಸ್ಕವರ್ ಕರ್ನಾಟಕ ತಂಡದವರು ರೂಪಿಸಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ಪುಸ್ತಕದ ಜತೆಗೆ, ಆಕರ್ಷಕವಾದ ಕಿರುಚಿತ್ರ ಕೂಡ ತಯಾರಿಸಿದ್ದಾರೆ. ಇದಕ್ಕಾಗಿ ಈಗಾಗಲೇ ಡಿಸ್ಕವರ್ ಕರ್ನಾಟಕ ತಂಡದವರು 25ಲಕ್ಷ ವೆಚ್ಚ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಉತ್ಸಾಹಿ ಯುವಕರೇ ಸೇರಿಕೊಂಡು ಇದನ್ನು ಮಾಡಿರುವುದರಿಂದ ಅವರ ಶ್ರಮದ ವೆಚ್ಚ ಇದರಲ್ಲಿ ಸೇರಿಲ್ಲ.
ಆದರೆ ಈ ಪುಸ್ತಕ ಬಿಡುಗಡೆಗೆ ಸಚಿವರಿಗೆ ಪುರುಸೊತ್ತಿಲ್ಲ. ಸಚಿವರ ಬಳಿಗೆ ಪುಸ್ತಕ ತೆಗೆದುಕೊಂಡು ಹೋದರೆ ಸಂಪೂರ್ಣನೋಡುವಷ್ಟು ಸಮಯವೂ ಅವರ ಬಳಿ ಇಲ್ಲ! ಡಿಸ್ಕವರ್ ಕರ್ನಾಟಕ ತಂಡದವರು 4 ತಿಂಗಳಿಂದ ಸಚಿವರ ಸಮ್ಮತಿಗಾಗಿ ಪುಸ್ತಕ ಸಿದ್ಧಪಡಿಸಿಕೊಂಡು ಕಾಯುತ್ತಿದ್ದಾರೆ.
ಯಥಾ ಸಚಿವ ತಥಾ ಅಧಿಕಾರಿ ಎಂಬಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೂ ವರ್ತಿಸಿದ್ದಾರೆ. ಡಿಸ್ಕವರ್ ಕರ್ನಾಟಕ ತಂಡದವರು ಪುಸ್ತಕ ತಯಾರಿಸಿಕೊಂಡು ಕೆಎಸ್ಟಿಡಿಸಿ (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ) ಕಚೇರಿಗೆ 3 ತಿಂಗಳು ಅಲೆದಾಡಿದ್ದಾರೆ. ಡಿಸ್ಕವರ್ ಕರ್ನಾಟಕ ತಂಡ ಕಚೇರಿಗೆ ಪ್ರವಾಸ ಮಾಡಿದ್ದು ಮಾತ್ರ. ಅಧಿಕಾರಿಗಳು ಇವರ ಕಡೆ ತಿರುಗಿಯೂ ನೋಡಿಲ್ಲ. ಇವರು ತಯಾರಿಸಿದ ಪುಸ್ತಕ ನೋಡೇ ಇಲ್ಲ ಅಂದಮೇಲೆ ಸಹಾಯ ಮಾಡುವ ಮಾತು ದೂರವೇ ಉಳಿಯಿತು.
ತಾತ್ಸಾರ: ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೇಳಿಮಾಡಿಸಿದಂತಿದೆ. ಬೆಟ್ಟ-ಗುಡ್ಡ, ಜಲಪಾತಗಳು, ಬಿಚ್ಗಳು, ದೇವಸ್ಥಾನ, ಅರಣ್ಯ ಹೀಗೆ ವೈವಿಧ್ಯಮಯ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ. ಆದರೆ ಇಂದಿಗೂ ಪ್ರವಾಸೋದ್ಯಮ ದೃಷ್ಟಿಯಿಂದ ಜಿಲ್ಲೆ ಹಿಂದುಳಿದಿದೆ. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೊರಟರೆ ಕೆಲವಕ್ಕೆ ಸರಿಯಾದ ರಸ್ತೆಗಳಿಲ್ಲ. ಇನ್ನು ಕೆಲವಕ್ಕೆ ದಾರಿತೋರುವ ಬೋರ್ಡ್ಗಳೂ ಇಲ್ಲ. ನೈಸರ್ಗಿಕವಾಗಿ ಶ್ರೀಮಂತವಾಗಿದ್ದೂ, ಜಿಲ್ಲೆ ಪ್ರವಾಸೋದ್ಯಮ ದೃಷ್ಟಿಯಿಂದ ಹಿಂದುಳಿದಿದೆ. ಇಂತಹ ಜಿಲ್ಲೆಯ ಬಗ್ಗೆ ಅಪರೂಪದ ಮಾಹಿತಿಗಳನ್ನು ಒಳಗೊಂಡ, ಹೆಚ್ಚು ಪ್ರಸಿದ್ಧಿಗೆ ಬಾರದ ಸ್ಥಳಗಳ ಸಮಗ್ರ ಮಾಹಿತಿ ಒಳಗೊಂಡ ಪುಸ್ತಕ ಮತ್ತು ಕಿರುಚಿತ್ರವನ್ನು ಡಿಸ್ಕವರ್ ಕರ್ನಾಟಕ ತಂಡ ಸಿದ್ಧಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


