ಭ್ರಮೆಯಿಂದ ಹೊರಬರುವ ಕಾಲ ನಿವೃತ್ತಿ
ಕ.ಪ್ರ.ವಾರ್ತೆ ಬೆಂಗಳೂರು ಜ.1
ನಾನು ನಿವೃತ್ತಿಯಾಗಲು ಬಯಸುವುದಿಲ್ಲ. ಐಎಎಸ್ ಅಥವಾ ಐಪಿಎಸ್ ಅಧಿಕಾರಿ ಪಾಲಿಗೆ ನಿವೃತ್ತಿ ಎಂದರೆ ಮನಸನ್ನು ಆವರಿಸಿದ ಭ್ರಮೆ ಎಂಬ ಗುಳ್ಳೆ ಒಡೆಯುವ ಪರ್ವಕಾಲ...
ನನಗೆ ಕರೆ ಮಾಡಿ ಒಂದು ನಿಮಿಷ ಮಾತನಾಡುವುದನ್ನಷ್ಟೇ ಹಂಬಲಿಸುತ್ತಿದ್ದ ವ್ಯಕ್ತಿಗಳು, ನಿವೃತ್ತಿಯಾದ ಕ್ಷಣದಿಂದ ನಮ್ಮ ಫೋನ್ ಕರೆ ಎಂದರೆ ಕಿರಿಕಿರಿ ಎಂದು ಭಾವಿಸುತ್ತಾರೆ. ಹೊಸ ವರ್ಷ, ದೀಪಾವಳಿ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಬರುವ ಶುಭಾಶಯ ಪತ್ರಗಳು, ಉಡುಗೊರೆಗಳು, ಸ್ವೀಟ್ ಬಾಕ್ಸ್ಗಳು ಕಡಿಮೆಯಾಗುತ್ತವೆ.
ನಾವು ಸಮಾಜಕ್ಕೆ ಬೇಡದ ವ್ಯಕ್ತಿಗಳಾದೆವೇ ಎಂಬ ಭಾವ ಕಾಡಲಾರಂಭಿಸುತ್ತದೆ.... ಸರ್ಕಾರಿ ಸೇವೆಯಿಂದ ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದ ಹಿರಿಯ ಮತ್ತು ರಾಜ್ಯ ಕಂಡ ದಕ್ಷ ಐಪಿಎಸ್ ಅಧಿಕಾರಿ ಗೋಪಾಲ್ ಬಿ. ಹೊಸೂರ್ ಅವರ ಅಭಿಪ್ರಾಯವಿದು. ಕನ್ನಡಪ್ರಭ'ದ ಜತೆಗೆ ಮಾತಿಗಿಳಿದ ಅವರು ಸೇವಾ ಅನುಭವದ ಸುರಳಿ ಬಿಚ್ಚಿಟ್ಟರು.
ಖಾಕಿ ಧರಿಸಿದ್ದೇ ಆಕಸ್ಮಿಕ
ನನಗೆ ಪೊಲೀಸ್ ಅಧಿಕಾರಿಯಾಗಬೇಕು ಎಂಬ ಆಸೆಯೇ ಇರಲಿಲ್ಲ. ಪಾಕಿಸ್ತಾನದ ಜತೆಗಿನ ಯುದ್ಧದ ನಂತರ ನಮ್ಮ ದೇಶದ ಸೇನಾಪಡೆಯಲ್ಲಿ ಕಮಿಷನ್ಡ್ ದರ್ಜೆ ಅಧಿಕಾರಿಗಳ ಕೊರತೆ ಇತ್ತು. ಹೀಗಾಗಿ ಚಿಕ್ಕಂದಿನಿಂದಲೇ ಬಾಲಕರನ್ನು ಸೇನಾಪಡೆಯತ್ತ ಸೆಳೆಯಲು ದೇಶಾದ್ಯಂತ ಸೈನಿಕ್ ಸ್ಕೂಲ್ಗಳನ್ನು ತರೆಯಲಾಗಿತ್ತು. ನಾನು ಸೇನೆ ಸೇರಬೇಕೆಂಬ ಉದ್ದೇಶದಿಂದಲೇ ಸೈನಿಕ ಶಾಲೆ ಸೇರಿದೆ. ಎರಡು ಬಾರಿ ದೈಹಿಕ ಮತ್ತು ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಗೊಂಡರೂ ವೈದ್ಯ ಪರೀಕ್ಷೆಯಲ್ಲಿ ಪಾಸಾಗಲಿಲ್ಲ. ಹೀಗಾಗಿ ಸೇನಾಪಡೆಯನ್ನು ಸೇರುವ ನನ್ನ ಕನಸು ಕನಸಾಗಿಯೇ ಉಳಿಯಿತು. ಹೀಗಾಗಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ದೂರಸಂಪರ್ಕ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಆಗಿ ನೇಮಕಗೊಂಡೆ. ಆಗ ಸ್ನೇಹಿತರೊಬ್ಬರು ಸ್ಪರ್ಧಾತ್ಮಕ ನಾಗರಿಕ ಸೇವಾ ಪರೀಕ್ಷೆ ಬಗ್ಗೆ ಹೇಳಿದರು. ಹೀಗಾಗಿ ಕೆಪಿಎಸ್ಸಿ ಪರೀಕ್ಷೆ ಬರೆದು ಡಿವೈಎಸ್ಪಿ ಹುದ್ದೆಗೆ ಆಯ್ಕೆಗೊಂಡೆ.
ನನ್ನ ಕಸುಬಿಗೆ ಹಸಬಿ ಆದರ್ಶ
ಒಬ್ಬ ಪೊಲೀಸ್ ಅಧಿಕಾರಿಯಾಗಿ ನನಗೆ ಎಸ್.ಎಸ್. ಹಸಬಿ ಅವರು ಆದರ್ಶ. ಸಬ್ಇನ್ಸ್ಪೆಕ್ಟರ್ ಆಗಿದ್ದ ಅವರು ನಂತರ ಐಪಿಎಸ್ ಅಧಿಕಾರಿಯಾಗಿ ಬಡ್ತಿ ಪಡೆದು ನಿವೃತ್ತರಾಗಿದ್ದಾರೆ. ಮೂಲತಃ ಜಮಖಂಡಿಯವರಾದ ಅವರ ಜನಪ್ರಿಯತೆ ಎಷ್ಟಿತ್ತೆಂದರೆ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಪೊಲೀಸ್ ಎಂಬ ಶಬ್ದಕ್ಕೆ ಅವರು ಅನ್ವರ್ಥಕ ಎಂಬ ಸ್ಥಿತಿ ಇತ್ತು. ಪೊಲೀಸ್ ಎಂದರೆ ಜನ ಹಸಬಿ ಫೌದರ್ ಎಂದು ಕರೆಯುತ್ತಿದ್ದರು. ಪ್ರಾಮಾಣಿಕತೆ ಮತ್ತು ಸಜ್ಜನಿಕೆ ಜತೆಗೆ ಅವರು ತನಿಖೆಯಲ್ಲಿ ಎತ್ತಿದ ಕೈ. ಅವರ ಆದರ್ಶಗಳನ್ನು ನಾನು ಪಾಲಿಸಿದ್ದರಿಂದಲೇ ಇಲಾಖೆಯಲ್ಲಿ ಇಷ್ಟು ಹೆಸರು ಮಾಡುವುದಕ್ಕೆ ಸಾಧ್ಯವಾಯ್ತು. ನಂತರ ಎಸ್.ಟಿ.ಎಫ್ ಸೇರುವುದಕ್ಕೆ ಮುನ್ನವೇ ಶಂಕರ ಬಿದರಿ ಅವರ ಜತೆ ಕೆಲಸ ಮಾಡಿದೆ. ಅವರ ಎದೆಗಾರಿಕೆ ನನಗೆ ಇಷ್ಟವಾಗುತ್ತಿತ್ತು. ನಂತರ ಬೆಂಗಳೂರು ಹಲಸೂರು ಗೇಟ್ ವಿಭಾಗದಲ್ಲಿ ಎಸಿಪಿಯಾಗಿ ಕೆಲಸ ಮಾಡಿ ಸೇವಾ ಬಡ್ತಿ ಪಡೆದು ಬೆಳಗಾವಿ ಜಿಲ್ಲೆಗೆ ಗುಪ್ತದಳ ಎಸ್ಪಿಯಾಗಿ ನಿಯೋಜನೆಗೊಂಡೆ. ಆ ಅವಧಿಯಲ್ಲಿ ನಾನು ಪೊಲೀಸ್ ಇಲಾಖೆಯಲ್ಲಿ ಗುಪ್ತ ಮಾಹಿತಿಯ ಮಹತ್ವವೆಷ್ಟು? ಎಂಬುದನ್ನು ಅರಿತುಕೊಂಡೆ. ಇದಾದ ನಂತರ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ನಾನು ಸ್ವಯಂಪ್ರೇರಣೆಯಿಂದ ಸೇರಿದೆ. ಹರಿಕೃಷ್ಣ, ಶಕೀಲ್ ಅಹ್ಮದ್ ಮೊದಲಾದವರ ಜತೆ ಕೆಲಸ ಮಾಡುವ ಅವಕಾಶ ದೊರಕಿತು. 1993ರಲ್ಲಿ ಬಿದರಿ ಅವರು ಎಸ್ಟಿಎಫ್ ಮುಖ್ಯಸ್ಥರಾದ ನಂತರ ಮತ್ತೆ ನನ್ನನ್ನು ಕರೆಸಿಕೊಂಡರು. ಆಗ ನಾನು ಮಾಡಿದ ಕೆಲಸ ಎಲ್ಲರಿಗೂ ಗೊತ್ತು. ವೀರಪ್ಪನ್ ತಂಡದ ದಾಳಿಗೆ ಸಿಲುಕಿ ಗಾಯಗೊಂಡಿದ್ದ ನನ್ನನ್ನು ಬದುಕಿಸಿದ ಸೇಂಟ್ ಜಾನ್ಸ್ ಆಸ್ಪತ್ರೆ ವೈದ್ಯ ಡಾ.ನಿತ್ಯಾನಂದ ಶೆಟ್ಟಿ ಅವರನ್ನು ನಾನು ಸದಾ ಸ್ಮರಿಸುತ್ತೇನೆ.
ಮೀನು ಬದುಕಿಸಿದ ಕೆಲಸವನ್ನು ಬಿಬಿಸಿ ವರದಿ ಮಾಡಿತ್ತು
ನಾನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ವಿಭಿನ್ನ ಅನುಭವಗಳು ದೊರೆತವು. ಮಟ್ಕಾ ದಂಧೆ, ಆನಂದಪುರ ರೌಡಿಗಳ ಹಾವಳಿ, ಕಿಡ್ನಾಪರ್ಗಳ ಕಾಟ ಸೇರಿದಂತೆ ಅಪರಾಧ ಜಗತ್ತಿನ ಹಲವು ಮುಖಗಳ ದರ್ಶನವಾದವು. ಆಗ ನಾನು ಮಾಡಿದ ಕೆಲಸಕ್ಕೆ ರಾಜ್ಯವ್ಯಾಪಿ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತವಾಯಿತು. ಆದರೆ ಆ ಸಂದರ್ಭದಲ್ಲಿ ಐಎಸ್ಆರ್ ಸಕ್ಕರೆ ಕಾರ್ಖಾನೆಗೆ ಸೇರಿದ ಕಾಕಂಬಿ ಟ್ಯಾಂಕರ್ ಒಡೆದು ತುಂಗಭದ್ರಾ ನದಿಯನ್ನು ಸೇರಿತು. ಲಕ್ಷಾಂತರ ಜಲಚರಗಳ ಮಾರಣ ಹೋಮವಾಯ್ತು. ಮತ್ಸೋದ್ಯಮವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ 2000 ಕುಟುಂಬಗಳು ಬೀದಿಗೆ ಬಂದವು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಾನು ಐಆರ್ಎಸ್ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿಕೊಂಡೆ. ಆದರೆ ಕಾಕಂಬಿ ನೀರಿನೊಳಗೆ ಸೇರಿದ್ದರಿಂದ ಅಲ್ಲಿ ಆಮ್ಲಜನಕದ ಕೊರತೆ ಸೃಷ್ಟಿಯಾಗಿ ಮೀನುಗಳು ಉಸಿರುಗಟ್ಟಿ ಮೇಲಕ್ಕೆ ಜಿಗಿದು ಬೀಳುತ್ತಿದ್ದವು. ಹೀಗಾಗಿ ಇಂಡಿಯಾ ಆಕ್ಸಿಜನ್ ಸಂಸ್ಥೆಗೆ ಮನವಿ ಮಾಡಿ ತುಂಗಭದ್ರಾ ನದಿಗೆ ಆಮ್ಲಜನಕವನ್ನು ಪೂರೈಕೆ ಮಾಡಿಸುವ ವ್ಯವಸ್ಥೆ ಮಾಡಿಸಿದೆ. ಆಗ ಈ ಬಗ್ಗೆ ಬಿಬಿಸಿಯಲ್ಲಿ ವರದಿ ಪ್ರಕಟವಾಗಿತ್ತು. ಇದು ನನಗೆ ನಿಜಕ್ಕೂ ಸಮಾಧಾನ ತಂದುಕೊಟ್ಟ ತನಿಖಾ ಪ್ರಕರಣ.
ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಲ್ಲ
ನಿಜ ಹೇಳಬೇಕೆಂದರೆ ಜೆ.ಎಚ್.ಪಟೇಲ್ ಅವರ ಕಾಲದಿಂದಲೇ ನನಗೆ ರಾಜಕಾರಣಿಗಳ ಜತೆಗೆ ನಿಕಟ ಸಂಪರ್ಕವಿದೆ. ಎಲ್ಲ ಪಕ್ಷದ ಮುಖಂಡರು ನನ್ನನ್ನು ಪ್ರೀತಿ, ಗೌರವದಿಂದ ಕಂಡಿದ್ದಾರೆ. ಬಿಜೆಪಿ ಸರ್ಕಾರದ ಕಾಲದಲ್ಲಿ ಮೂರು ಮುಖ್ಯಮಂತ್ರಿಗಳು ಬದಲಾದರೂ ನಾನು ಗುಪ್ತದಳದ ಮುಖ್ಯಸ್ಥನಾಗಿಯೇ ಇದ್ದೆ. ನಂತರ ಬಂದ ಸಿದ್ದರಾಮಯ್ಯನವರೂ ನನ್ನನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಸರ್ಕಾರ ನನಗೆ ಆಯಕಟ್ಟಿನ ಸ್ಥಾನ ನೀಡಿಲ್ಲ ಎಂದು ನಾನು ಸ್ವಯಂ ನಿವೃತ್ತಿ ಪಡೆದಿದ್ದೇನೆ ಎಂಬುದರಲ್ಲಿ ಹುರುಳಿಲ್ಲ ಎಂದ ಹೊಸೂರ್ ಅವರು, ನಾನು ರಾಜಕೀಯ ಪ್ರವೇಶವನ್ನು ಮಾಡುವ ಉದ್ದೇಶ ಹೊಂದಿಲ್ಲ. ನಿವೃತ್ತಿ ನಂತರ ಪತ್ನಿ ಪ್ರೇಮಲತಾ ಪುತ್ರರಾದ ಶ್ರೇಯಸ್ ಮತ್ತು ಸಮರ್ ಜತೆ ಹೆಚ್ಚು ಸಮಯ ಕಳೆಯಬೇಕೆಂದಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಎಡಪಂಥೀಯ ಮತ್ತು ಇಸ್ಲಾಮಿಕ್ ಉಗ್ರವಾದದ ಪ್ರಕರಣಗಳು ವರದಿಯಾಗುತ್ತಿವೆ. ನಾನು ಗುಪ್ತಚರ ವಿಭಾಗದ ಐಜಿಪಿಯಾಗಿದ್ದಾಗ ಮತ್ತು ಮಂಗಳೂರು ಐಜಿಪಿಯಾಗಿದ್ದ ಸಂದರ್ಭದಲ್ಲಿ ಇದರ ನಿಯಂತ್ರಣಕ್ಕೆ ಹಲವು ಕ್ರಮ ತೆಗೆದುಕೊಂಡಿದ್ದೇನೆ. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ.
ರಾಘವೇಂದ್ರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

